ADVERTISEMENT

ಬೆಂಗಳೂರು |SSLC ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಮೂವರಿಗೆ ಚಾಕು ಇರಿತ

ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ – ಐವರು ಬಾಲಕರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:07 IST
Last Updated 28 ಮಾರ್ಚ್ 2024, 15:07 IST
<div class="paragraphs"><p>(ಪ್ರಾತಿನಿಧಿಕ ಚಿತ್ರ)</p></div>

(ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮುಗಿಸಿ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಬ್ಯಾಗ್‌ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಚಾಕು ಇರಿತದಿಂದ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

‘ರಾಗಿಗುಡ್ಡ ಹಾಗೂ ಸಾರಕ್ಕಿ ಶಾಲೆ ವಿದ್ಯಾರ್ಥಿಗಳ ನಡುವೆ ಮಾರ್ಚ್ 27ರಂದು ಗಲಾಟೆ ನಡೆದಿದೆ. ಇದೇ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿಯಲಾಗಿದೆ. ಕೃತ್ಯ ಎಸಗಿದ್ದ ಆರೋಪದಡಿ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಜೆ.ಪಿ.ನಗರ ಠಾಣೆಯ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ರಾಗಿಗುಡ್ಡದ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಿದೆ. ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಾರಕ್ಕಿ ಶಾಲೆಯ ವಿದ್ಯಾರ್ಥಿಗಳು ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆಗೂ ಮುನ್ನ ಒಂದೇ ಜಾಗದಲ್ಲಿ ಎಲ್ಲರೂ ಬ್ಯಾಗ್ ಇರಿಸಿ ಕೊಠಡಿಯೊಳಗೆ ಹೋಗಿದ್ದರು.’

‘ಪರೀಕ್ಷೆ ಮುಗಿದ ನಂತರ ಕೊಠಡಿಯಿಂದ ಹೊರಬಂದಿದ್ದ ವಿದ್ಯಾರ್ಥಿಗಳು, ಬ್ಯಾಗ್ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಇದೇ ಸಂದರ್ಭದಲ್ಲಿ ಪರಸ್ಪರ ತಳ್ಳಾಟ ಉಂಟಾಗಿತ್ತು. ರಾಗಿಗುಡ್ಡ ಹಾಗೂ ಸಾರಕ್ಕಿ ಶಾಲೆ ವಿದ್ಯಾರ್ಥಿಗಳ ನಡುವೆ ಜಗಳ ಶುರುವಾಗಿತ್ತು. ಸ್ಥಳದಲ್ಲಿದ್ದ ಕೆಲವರು, ಜಗಳ ಬಿಡಿಸಿ ಕಳುಹಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಕಬ್ಬಿನ ಹಾಲು ಮಳಿಗೆಯಲ್ಲಿದ್ದ ಚಾಕು: ‘ಸಾರಕ್ಕಿ ಶಾಲೆ ವಿದ್ಯಾರ್ಥಿಗಳು, ಕೇಂದ್ರದಿಂದ ಮನೆಯತ್ತ ನಡೆದುಕೊಂಡು ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ರಾಗಿಗುಡ್ಡದ ವಿದ್ಯಾರ್ಥಿಗಳು, ಪುನಃ ಜಗಳ ತೆಗೆದಿದ್ದರು. ರಸ್ತೆ ಪಕ್ಕದಲ್ಲಿದ್ದ ಕಬ್ಬಿನ ಹಾಲು ಮಳಿಗೆಯಲ್ಲಿದ್ದ ಚಾಕು ತೆಗೆದುಕೊಂಡು, ಮೂವರು ವಿದ್ಯಾರ್ಥಿಗಳಿಗೆ ಇರಿದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಲಾಯಿತು. ಗಾಯಾಳು ವಿದ್ಯಾರ್ಥಿಗಳಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರೂ ಬಾಲಕರಾಗಿರುವುದರಿಂದ, ಹೆಸರು ಬಹಿರಂಗಪಡಿಸಲಾಗದು’ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಹೊಡೆದಾಟದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೊವನ್ನು ಹಲವರು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.