ADVERTISEMENT

ಮೋದಿ ಸುಳ್ಳಿನ ಕಾರ್ಖಾನೆ ಸದಾ ಯಶಸ್ವಿಯಾಗಲ್ಲ: ಖರ್ಗೆ

ಪ್ರಧಾನಿಯನ್ನು ‘ಸುಳ್ಳುಗಾರರ ಸರದಾರ’ ಎಂದು ಟೀಕಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 27 ಏಪ್ರಿಲ್ 2024, 14:38 IST
Last Updated 27 ಏಪ್ರಿಲ್ 2024, 14:38 IST
<div class="paragraphs"><p>ಗುವಾಹಟಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಸ್ಸಾಂನ ಪಾರಂಪರಿಕ ಟೋಪಿ ನೀಡಿ ಗೌರವಿಸಲಾಯಿತು.</p></div>

ಗುವಾಹಟಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಸ್ಸಾಂನ ಪಾರಂಪರಿಕ ಟೋಪಿ ನೀಡಿ ಗೌರವಿಸಲಾಯಿತು.

   

ಪಿಟಿಐ ಚಿತ್ರ

ಬಾರ್ಪೆಟಾ/ಗುವಾಹಟಿ (ಅಸ್ಸಾಂ): ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮುಸ್ಲಿಂ ಲೀಗ್‌ನ ಪ್ರತಿರೂಪದಂತಿದೆ ಎನ್ನುವ ಬಿಜೆಪಿ ಆರೋಪವನ್ನು ನಿರಾಕರಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನರೇಂದ್ರ ಮೋದಿ ಅವರ ಸುಳ್ಳಿನ ಕಾರ್ಖಾನೆ ಸದಾ ಯಶಸ್ವಿಯಾಗಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಅಸ್ಸಾಂನ ಬಾರ್ಪೆಟಾ ಜಿಲ್ಲೆಯ ಕಾಯಕುಚಿಯ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು, ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಶೇ 65ರಷ್ಟು ಯುವಜನತೆಗೆ ಉದ್ಯೋಗವಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಅವರನ್ನು ‘ಸುಳ್ಳುಗಾರರ ಸರದಾರ’ ಎಂದು ಕರೆದ ಖರ್ಗೆ, ‘ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದು, ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರಿಗೂ ₹15 ಲಕ್ಷ ಕೊಡುತ್ತೇನೆ ಎಂದಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದು ಎಲ್ಲವೂ ಸುಳ್ಳು’ ಎಂದು ಟೀಕಿಸಿದರು. 

‘ಬಿಜೆಪಿಯು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದು, ಅದನ್ನು ಶ್ರೀಮಂತರಿಗೆ ಕೊಡುತ್ತಿದೆ. ಪ್ರಧಾನಿ ಮೋದಿ, ಅವರ ಕೆಲವು ಶ್ರೀಮಂತ ಸ್ನೇಹಿತರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು’ ಎಂದು ಆರೋಪಿಸಿದರು. ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು 'ಭಾರತ್ ಜೋಡೊ ಯಾತ್ರೆ’ಯ ಮೂಲಕ ದೇಶವನ್ನು ಸುತ್ತಿದರೆ, ಮೋದಿ ಅವರು ಭಾರತ್ ‘ತೋಡೊ’ (ದೇಶ ವಿಭಜನೆ)ಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

‘ಅಧಿಕಾರ ಕಳೆದುಕೊಳ್ಳುವ ಭಯದಲ್ಲಿರುವ ಮೋದಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದಾರೆ. ಬಡವರ ನೋವಿನ ಅನುಭವ ಇಲ್ಲದವರಿಗೆ ಅಧಿಕಾರದಲ್ಲಿರುವ ಹಕ್ಕಿಲ್ಲ’ ಎಂದು ಅಭಿಪ್ರಾಯಪಟ್ಟರು.

ನಂತರ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಭ್ರಷ್ಟರನ್ನು ಜೈಲಿನಲ್ಲಿಡಬೇಕು ಎಂದು ಬಿಜೆಪಿ ಹೇಳುತ್ತದೆ. ಭ್ರಷ್ಟಾಚಾರದ ಆರೋಪ ಹೊತ್ತ ನಾಯಕರು ಕೇಸರಿ ಪಕ್ಷವನ್ನು ಸೇರಿದರೆ, ಅವರನ್ನು ತೊಡೆಯ ಮೇಲೆ ಕೂರಿಸಿಕೊಳ್ಳಲಾಗುತ್ತದೆ ಮತ್ತು ರಾಜ್ಯಸಭೆಗೆ ಅಥವಾ ವಿಧಾನಸಭೆಗೆ ಕಳಿಸಲಾಗುತ್ತದೆ’ ಎಂದು ಆರೋಪಿಸಿದರು.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು..

  • ಮೋದಿ ಅವರ ಮಾತುಗಳು ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಅವರು ದೇಶವನ್ನು ಧ್ರುವೀಕರಣಗೊಳಿಸಲು ಯತ್ನಿಸುತ್ತಿದ್ದಾರೆ.

  • 10 ವರ್ಷ ಪ್ರಧಾನಿ ಆಗಿದ್ದ ಮನಮೋಹನ್‌ಸಿಂಗ್ ಎಂದಾದರೂ ಯಾರದಾದರೂ ‘ಮಂಗಳಸೂತ್ರ’ ಕಸಿಯುವ ಬಗ್ಗೆ ಮಾತನಾಡಿದ್ದರೇ? ಯಾರ ಬಗ್ಗೆಯಾದರೂ ಕೆಟ್ಟ ಮಾತು ಆಡಿದ್ದರೇ?

  • ಕಾಂಗ್ರೆಸ್ ಹರಿಯುವ ನದ್ದಿ ಇದ್ದಂತೆ. ಕೆಲವರು ಪಕ್ಷ ಬಿಡುವುದರಿಂದ ಯಾವುದೇ ಪ‍ರಿಣಾಮ ಆಗುವುದಿಲ್ಲ. ಇದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಕೊಟ್ಟ ಪಕ್ಷ. ಭಾರತದಲ್ಲಿ ಸಂವಿಧಾನ ಉಳಿದಿರುವುದೇ ಕಾಂಗ್ರೆಸ್‌ನಿಂದ ಎಂದು ನಾವು ತೋರಿಸಿಕೊಟ್ಟಿದ್ದೇವೆ.

  • ಬಿಜೆಪಿಯ ಯಾರೊಬ್ಬರೂ ಸ್ವಾತಂತ್ರ್ಯಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಹೋರಾಡಲಿಲ್ಲ. ಅವರು ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ ಮತ್ತು ನೆಹರೂ, ಇಂದಿರಾ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ್‍ಯಾರೂ ತಮ್ಮ ಮುಂದೆ ಏನೂ ಅಲ್ಲ ಎಂಬಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

  • ಬಿಜೆಪಿಯವರಿಗೆ ಮೋದಿಯೇ ಸರ್ವಸ್ವ. ಅವರ ಪ್ರಕಾರ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ. 

  • ಸರ್ಕಾರದಲ್ಲಿರುವವರು, ಮುಖ್ಯವಾಗಿ ಮೋದಿ, ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎನ್ನುತ್ತಾರೆ. ಆದರೆ, ಆಗಿದ್ದು ‘ಸಬ್‌ಕಾ ಸತ್ಯಾನಾಶ್’.

  • ನಷ್ಟದಲ್ಲಿರುವ ಕಂಪನಿಗಳು ಬಿಜೆಪಿಗೆ ₹500–1000 ಕೋಟಿ ದೇಣಿಗೆ ನೀಡಿವೆ. ಅದು ‘ಚಂದಾ ಕೊಡಿ, ಗುತ್ತಿಗೆ ಪಡೆಯಿರಿ’ ನೀತಿಯಾಗಿತ್ತು.

‘ಬಿಜೆಪಿ ಬಂದರೆ ಸಂವಿಧಾನ ಬದಲಿಸುತ್ತದೆ’
ಬಿಜೆಪಿಯ ಹಿರಿಯ ನಾಯಕರು ಈಗ ತೋರಿಕೆಗೆ ನಿರಾಕರಿಸುತ್ತಿದ್ದರೂ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದರು. ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಆದಿವಾಸಿ ಪ್ರಾಬಲ್ಯದ ಧರ್ಮಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನಂತ್ ಪಟೇಲ್ ‍ಪರ ಸಾರ್ವಜನಿಕ ಸಭೆ ನಡೆಸಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಹಣದುಬ್ಬರ ಏರಿಕೆಯನ್ನು ಪ್ರಸ್ತಾಪಿಸಿದ ಅವರು ‘ಪ್ರಧಾನಿ ಮೋದಿ ಅವರು ವೇದಿಕೆಗಳನ್ನು ‘ಸೂಪರ್ ಮ್ಯಾನ್’ ರೀತಿ ಪ್ರವೇಶಿಸುತ್ತಾರೆ. ಅವರನ್ನು (ಮೋದಿ) ‘ದುಬಾರಿ ಮನುಷ್ಯ’ ಎಂದೇ ನೆನಪಿಟ್ಟುಕೊಳ್ಳಿ’ ಎಂದು ಜನರಿಗೆ ಹೇಳಿದರು. ‘ಪ್ರಧಾನಿ ಮೋದಿ ಎಂದೂ ಶಿಕ್ಷಣ ಆರೋಗ್ಯ ಹಣದುಬ್ಬರದ ಬಗ್ಗೆ ಮಾತನಾಡುವುದಿಲ್ಲ. ಇದನ್ನು ಜನ ಮತ್ತೆ ಐದು ವರ್ಷ ಸಹಿಸಿಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರು ಕೇವಲ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಜಗತ್ತು ಸುತ್ತುತ್ತಾರೆ. ಈಗ ಜನ ಸಾಧನೆಯ ಪಟ್ಟಿ ಕೇಳುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಹಾಗಾಗಿಯೇ ಅವರು ಹಿಂದೂ ಮುಸ್ಲಿಂ ವಿಚಾರ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಹೇಳಿದರು. ಬಿಜೆಪಿಯ ಹಿರಿಯ ನಾಯಕರು ಈಗ ತೋರಿಕೆಗೆ ನಿರಾಕರಿಸುತ್ತಿದ್ದರೂ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದರು. ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಆದಿವಾಸಿ ಪ್ರಾಬಲ್ಯದ ಧರ್ಮಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನಂತ್ ಪಟೇಲ್ ‍ಪರ ಸಾರ್ವಜನಿಕ ಸಭೆ ನಡೆಸಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಹಣದುಬ್ಬರ ಏರಿಕೆಯನ್ನು ಪ್ರಸ್ತಾಪಿಸಿದ ಅವರು ‘ಪ್ರಧಾನಿ ಮೋದಿ ಅವರು ವೇದಿಕೆಗಳನ್ನು ‘ಸೂಪರ್ ಮ್ಯಾನ್’ ರೀತಿ ಪ್ರವೇಶಿಸುತ್ತಾರೆ. ಅವರನ್ನು (ಮೋದಿ) ‘ದುಬಾರಿ ಮನುಷ್ಯ’ ಎಂದೇ ನೆನಪಿಟ್ಟುಕೊಳ್ಳಿ’ ಎಂದು ಜನರಿಗೆ ಹೇಳಿದರು. ‘ಪ್ರಧಾನಿ ಮೋದಿ ಎಂದೂ ಶಿಕ್ಷಣ ಆರೋಗ್ಯ ಹಣದುಬ್ಬರದ ಬಗ್ಗೆ ಮಾತನಾಡುವುದಿಲ್ಲ. ಇದನ್ನು ಜನ ಮತ್ತೆ ಐದು ವರ್ಷ ಸಹಿಸಿಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರು ಕೇವಲ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಜಗತ್ತು ಸುತ್ತುತ್ತಾರೆ. ಈಗ ಜನ ಸಾಧನೆಯ ಪಟ್ಟಿ ಕೇಳುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಹಾಗಾಗಿಯೇ ಅವರು ಹಿಂದೂ ಮುಸ್ಲಿಂ ವಿಚಾರ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.