ಬೆಂಗಳೂರು : ನಗರದಲ್ಲಿ ಸೋಮವಾರ ನಡೆದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರದ ವೈಫಲ್ಯ ಮುಂದುವರಿದರೆ ನಮ್ಮ ಕಾರ್ಯಕರ್ತರು ನೆರೆಪೀಡಿತ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಪರಿಹಾರ ಕಾರ್ಯದ ಮೇಲೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು. ‘ಕಾಂಗ್ರೆಸ್ ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ಆ ಪಕ್ಷದ ಮುಖಂಡರು ಬಿಜೆಪಿ ನಾಯಕರ ಜೊತೆ ನಿಕಟ ಬಾಂಧವ್ಯ ಹೊಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಕಾಂಗ್ರೆಸ್ ಪಕ್ಷವೇ ಹೊಣೆ’ ಎಂದು ಟೀಕಿಸಿದರು.
‘ನನ್ನ ಹಿರಿಯಣ್ಣ’: ‘ಸಿಂಧ್ಯ ಅವರು ನನ್ನ ಹಿರಿಯಣ್ಣನಿದ್ದಂತೆ. ಅವರು ಪಕ್ಷವನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಕಾರಣಾಂತರಗಳಿಂದ ನಾವು ದೂರವಾಗಿದ್ದೆವು. ಆದರೆ ಭವಿಷ್ಯದ ದಿನಗಳಲ್ಲಿ ಇಂತಹ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ಒಂದೇ ಕುಟುಂಬದ ಸದಸ್ಯರಂತೆ ಮುನ್ನಡೆಯುತ್ತೇವೆ’ ಎಂದು ಕುಮಾರಸ್ವಾಮಿ ಹೇಳಿದರು.
ನೋವಿನ ರಾಜಕಾರಣ ಗೊತ್ತು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಾತನಾಡಿ, ‘ನಮ್ಮ ಕುಟುಂಬಕ್ಕೆ ಸೇಡಿನ ರಾಜಕಾರಣ ಗೊತ್ತಿಲ್ಲ. ನೋವಿನ ರಾಜಕಾರಣ ಮಾತ್ರ ಗೊತ್ತು.
ನಾವು ಜನರಿಗಾಗಿಯೇ ಸವಾಲು ಸ್ವೀಕರಿಸುತ್ತೇವೆ. ಈ ಕಾರಣಕ್ಕಾಗಿಯೇ ಪದೇ ಪದೇ ನೋವು ಅನುಭವಿಸಿದ್ದೇವೆ’ ಎಂದರು.
‘ಸಿಂಧ್ಯ, ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರ ನಡುವೆ ಭಿನ್ನಾಭಿಪ್ರಾಯ ಮೂಡಲು ನಾನು ಬದುಕಿರುವವರೆಗೆ ಬಿಡುವುದಿಲ್ಲ. ಅವರೆಲ್ಲ ಒಗ್ಗೂಡಿ ವಿಧಾನಸೌಧದ ಎದುರು ಮತ್ತೆ ಅಧಿಕಾರ ಸ್ವೀಕರಿಸುವುದನ್ನು ನೋಡಬೇಕು ಎಂಬುದು ನನ್ನ ಮಹದಾಸೆ’ ಎಂದು ಇಂಗಿತ ವ್ಯಕ್ತಪಡಿಸಿದರು.
‘ಕ್ಯಾಪ್ಟನ್ ಆಗಲ್ಲ’: ‘ನಾನು ಯಾವುದೇ ಅಧಿಕಾರದ ಹಪಹಪಿಯಿಂದ ಜೆಡಿಎಸ್‌ಗೆ ಮರಳಿಲ್ಲ. ಪಕ್ಷದ ನಾಯಕತ್ವವೂ ಬೇಡ. ಕುಮಾರಸ್ವಾಮಿ ಅವರೇ ರಾಜ್ಯ ಘಟಕದ ನಾಯಕರು’ ಎಂದರು.