ಹೈದರಾಬಾದ್: ಕರ್ನಾಟಕದ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ತನಿಖೆ ನಡೆಸಲು ಆಂಧ್ರಪ್ರದೇಶ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ತನಿಖಾ ಸಮಿತಿಗಳನ್ನು ನೇಮಿಸಿದೆ.
ಅನಂತಪುರ ಜಿಲ್ಲೆಯಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಕಾಯ್ದೆಗಳನ್ನು ಉಲ್ಲಂಘಿಸಿ ಈ ಕಂಪೆನಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಂಧ್ರ ಪ್ರದೇಶದ ವಿರೋಧ ಪಕ್ಷಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಕೆ.ರೋಸಯ್ಯ ಮಂಗಳವಾರ ಅರಣ್ಯ ಮತ್ತು ಕೈಗಾರಿಕಾ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. 10 ದಿನಗಳ ಒಳಗಾಗಿ ಈ ಸಮಿತಿಗಳು ತಮಗೆ ಪೂರ್ಣ ವರದಿ ಸಲ್ಲಿಸಬೇಕೆಂದೂ ಅವರು ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಎರಡೂ ಸಮಿತಿಗಳು ತಲಾ ಮೂವರು ಸದಸ್ಯರನ್ನು ಒಳಗೊಂಡಿರುತ್ತವೆ. ಈಗಾಗಲೇ ಅರಣ್ಯ ಸಚಿವಾಲಯದ ಅಧಿಕಾರಿಗಳು ಈ ಸಂಬಂಧ ತನಿಖೆಯನ್ನು ಆರಂಭಿಸಿದ್ದಾರೆ. ಕೈಗಾರಿಕಾ ಖಾತೆಯ ಅಧಿಕಾರಿಗಳೂ ಕೂಡಾ ತಕ್ಷಣದಲ್ಲೇ ತನಿಖೆ ಕೈಗೊಳ್ಳಲಿದ್ದಾರೆ. ಭದ್ರತೆಯ ಕಾರಣಗಳಿಗಾಗಿ ಈ ತನಿಖಾ ಸಮಿತಿಯ ಅಧಿಕಾರಿಗಳ ಹೆಸರನ್ನು ರಹಸ್ಯವಾಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ತೆಲುಗುದೇಶಂ ಪಕ್ಷವು ಕರ್ನಾಟಕ ಮತ್ತು ಆಂಧ್ರದಲ್ಲಿ ರಾಜಕಾರಣವನ್ನು ನಿಯಂತ್ರಿಸುತ್ತಿರುವ ‘ಗಣಿ ಮಾಫಿಯ’ಕ್ಕೆ ಕಡಿವಾಣ ಹಾಖಬೇಕು ಎಂದು ಆಗ್ರಹಪಡಿಸಿದೆ.
ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಮಾತನಾಡಿ, ವಿವಿಧ ರಾಜ್ಯ ಸರ್ಕಾರಿ ಸ್ವಾಮ್ಯದ ಗಣಿಗಳನ್ನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈ ಮಾಫಿಯ ತಿಂದು ಹಾಕುತ್ತಿದೆ. ಈ ಮಾಫಿಯಾಗೆ ಮತ್ತಷ್ಟು ಗಣಿ ಗುತ್ತಿಗೆ ದೊರೆತರೆ ಅವು ಆಥಿಕವಾಗಿ ಮತ್ತಷ್ಟು ಬಲಶಾಲಿಯಾಗುವದರಿಂದ ಅವನ್ನು ನಿಯಂತ್ರಿಸಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.
ಖಾಸಗಿಯವರಿಗೆ ಗಣಿ ಗುತ್ತಿಗೆ ನೀಡುವ ಉದ್ದೇಶದಿಂದ ಸಿದ್ಧಪಡಿಸಿರುವ ಗಣಿ ನಿಯಂತ್ರಣ ಮಸೂದೆಯನ್ನು ಸಿಪಿಐ ವಿರೋಧಿಸಲಿದೆ ಎಂದರು.
ಅಕ್ರಮ ಗಣಿಗಾರಿಕೆ ಸಾಧ್ಯತೆಗಳಿಲ್ಲ: ಈ ನಡುವೆ, ಓಎಂಸಿಯು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದು ಕೇಂದ್ರ ಉಕ್ಕು ಖಾತೆ ರಾಜ್ಯ ಸಚಿವ ಎ.ಸಾಯಿ ಪ್ರತಾಪ್ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳ ಭೇಟಿಯ ನಂತರ ವರದಿಗಾರರೊಂದಿಗೆ ಮಾತನಾಡಿ ಅವರು ಈ ವಿಷಯ ತಿಳಿಸಿದರು.
‘ಇದರ ಅರ್ಥ ನಾನು ಓಬಳಾಪುರಂ ಮೈನಿಂಗ್ ಕಂಪೆನಿಗೆ ಕ್ಲೀನ್ ಚಿಟ್ ನೀಡುತ್ತಿದ್ದೇನೆ ಎಂದು ಎಂದಲ್ಲ. ಓಎಂಸಿಯ ಗಣಿಗಾರಿಕೆಯ ಎಲ್ಲ ಕೆಲಸಗಳೂ ಒಪ್ಪಂದದ ಅನುಸಾರವೇ ನಡೆಯುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.