‘ಇದ್ಯಾವ ಸಹಿ ರೀ, ಅರ್ಥವಾಗುವಂತೆ ಇಂಗ್ಲಿಷಿನಲ್ಲಿ ಸಹಿ ಮಾಡಿ’ ಎಂದು ಇಂಗ್ಲಿಷಿನಲ್ಲಿ ಗೊಣಗುತ್ತ ಚೆಕ್ ಹಾಳೆಯನ್ನು ತಿರುಗಿಸಿ ತಿರುಗಿಸಿ ನೋಡಿ ವಾಪಸು ಕೊಟ್ಟ ಬ್ಯಾಂಕಿನ ಗುಮಾಸ್ತ. ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕಚೇರಿಗೆ ಸಮೀಪ ಇದೆ ಎಂಬ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಯೊಂದರಲ್ಲಿ ತೆರೆದಿದ್ದ ಉಳಿತಾಯ ಖಾತೆಯಿಂದ ಹಣ ತೆಗೆಯಲು ಹೋದಾಗ ಬೆಳಿಗ್ಗೆ ಬೆಳಿಗ್ಗೆಯೇ ಮನಸ್ಸು ಕೆಡಿಸಿಕೊಳ್ಳುವಂತಹ ಗುಮಾಸ್ತೆಯ ವರ್ತನೆ. ಸಿಟ್ಟು ಬಂತು.
ಅದನ್ನು ತೋರಿಸಿಕೊಳ್ಳುವುದರಿಂದ ಪ್ರಯೋಜನವಿರಲಿಲ್ಲ. ಆದಷ್ಟೂ ವಿನಯದಿಂದ ‘ಸಹಿ ಅರ್ಥವಾಗಬೇಕಿಲ್ಲ. ಅದು ನನ್ನದೇ ಸಹಿಯಾ ಅಂತ ನೀವು ನೋಡಬೇಕಷ್ಟೆ..’ ಎಂದರೂ ಕನ್ನಡ ಗೊತ್ತಿಲ್ಲದ ಆ ಗುಮಾಸ್ತ ‘ಚೂಡಂಡಿ,. ಏಮೋ ತೆಲಿಸಲೇದು.. ಸಿಗ್ನೇಚರ್..’ ಎಂದು ತೆಲುಗಿನಲ್ಲಿ ಹೇಳುತ್ತ ತನ್ನ ಪಕ್ಕದಲ್ಲೇ ಕುಳಿತಿದ್ದ ನಡುವಯಸ್ಸಿನ ಮಹಿಳೆಗೆ ತೋರಿಸಿದ. ಉಳಿತಾಯ ಖಾತೆಯ ಉಸ್ತುವಾರಿ ಹೊತ್ತ ಅಧಿಕಾರಿಯಾಗಿದ್ದ ಆ ಮಹಿಳೆ ತನ್ನದೇ ಭಾಷೆಯಲ್ಲಿ ಏನನ್ನೋ ಗೊಣಗುತ್ತ ಎದ್ದು ಖಾತೆದಾರರ ಮಾದರಿ ಸಹಿಗಳಿದ್ದ ಪೆಟ್ಟಿಗೆಯನ್ನು ತೆರೆದು ಉಳಿತಾಯ ಖಾತೆಯ ಸಂಖ್ಯೆಯನ್ನು ಅರಸುತ್ತ ಒಂದೆರಡು ನಿಮಿಷಗಳಲ್ಲಿ ಮೂಲ ಸಹಿಯನ್ನು ತಾಳೆ ನೋಡಿ ಚೆಕ್ ಅನ್ನು ಸ್ವೀಕರಿಸಿ ಹಣ ಪಡೆಯುವ ಟೋಕನ್ ನೀಡುವಂತೆ ಇಂಗ್ಲಿಷಿನಲ್ಲಿ ಆದೇಶಿಸಿದಳು.
ಹುಬ್ಬಳ್ಳಿಯಂತಹ ಅಚ್ಚಗನ್ನಡ ಪ್ರದೇಶದಲ್ಲಿ ಚೆಕ್ ಸಲ್ಲಿಸಿ ಹಣ ಪಡೆಯಲು ಹೋದವನಿಗೆ ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ ಇಂಗ್ಲಿಷಿನಲ್ಲಿ ವ್ಯವಹರಿಸುತ್ತ ಸಹಿ ಕುರಿತಾಗಿ ಎತ್ತಿದ ಅನವಶ್ಯಕ ತಕರಾರು ಅಂದು ಬೆಳಗಿನ ಮನಸ್ಥಿತಿಯನ್ನು ಕೆಡಿಸುವಷ್ಟು ಕಿರಿಕಿರಿಗೆ ಕಾರಣವಾಗಿದ್ದು ಕನ್ನಡದಲ್ಲಿ ಮಾಡಿದ್ದ ಸಹಿ. ‘ಸಹಿ ಎಂಬುದು ವೈಯಕ್ತಿಕ ಗುರುತಿನ ಮುದ್ರೆ, ಅದು ಯಾವ ಭಾಷೆಯ ಲಿಪಿಯಲ್ಲಿದ್ದರೂ ತಪ್ಪಿಲ್ಲ’ ಎಂದುಕೊಂಡಿದ್ದವನಿಗೆ ಬ್ಯಾಂಕ್ ಗುಮಾಸ್ತೆ ಮಾಡಿದ ಕಿರಿಕಿರಿಯಿಂದ ಸ್ವಲ್ಪ ಹೊತ್ತು ಅಸಮಾಧಾನವಾಗಿತ್ತು. ಕನ್ನಡದಲ್ಲಿ ಸಹಿ ಮಾಡಿದ್ದಕ್ಕೆ ಹಾಗೆ ಆಕ್ಷೇಪಿಸಬಹುದೇ ಎಂದು ಈಚೆಗೊಮ್ಮೆ ಪ್ರಸ್ತಾಪಿಸಿದಾಗ ‘ಹಾಗೆ ಬ್ಯಾಂಕ್ ಗುಮಾಸ್ತೆ ಹೇಳಿದ್ದರೆ ಅದು ಅವನ ಅಜ್ಞಾನದ ಪರಮಾವಧಿ. ಸಹಿ ವ್ಯಕ್ತಿಯ ವೈಯಕ್ತಿಕ ಮುದ್ರೆಯಷ್ಟೆ. ಸಹಿ ಎಂದು ಒಂದು ಗೀಟು ಹಾಕಬಹುದು. ಆದರೆ ಖಾತೆ ತೆರೆಯುವಾಗ ಮಾಡಿದ ಸಹಿ ಹೇಗಿದೆಯೋ ಹಾಗೆಯೇ ಮಾಡಬೇಕಷ್ಟೆ. ಇಂಥದ್ದೇ ಭಾಷೆಯಲ್ಲಿ ಮಾಡಬೇಕು ಎಂಬ ನಿಯಮ ಎಲ್ಲಿಯೂ ಇಲ್ಲ. ಅಷ್ಟೇ ಅಲ್ಲ, ಚೆಕ್‌ನಲ್ಲಿ, ಚಲಾವಣೆಯಲ್ಲಿರುವ ಯಾವುದೇ ಭಾಷೆಯ ಲಿಪಿಯಲ್ಲಿ ಹೆಸರು, ಹಣದ ಮೊತ್ತ ಬರೆದರೂ, ಖಾತೆಯಲ್ಲಿ ಹಣವಿದ್ದು ಸಹಿ ತಾಳೆಯಾದರೆ ಬ್ಯಾಂಕ್ ಕೊಡಲೇಬೇಕು.. ಕನ್ನಡದಲ್ಲಿ ಸಹಿ ಮಾಡಿದ ಮಾತ್ರಕ್ಕೆ ಯಾರೂ ತಕರಾರು ಎತ್ತುವಂತಿಲ್ಲ..’ ಎಂದು ಇನ್ನೊಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮೇನೇಜರ್ ಆಗಿರುವ ಬಾಲ್ಯದ ಗೆಳೆಯ ತಿಮ್ಮಪ್ಪ ಹೇಳಿದ್ದು ಸಹಿ ಕುರಿತಾಗಿ ಹಿಂದೆ ಆಗಿದ್ದ ಕಿರಿಕಿರಿಯ ನೆನಪನ್ನು ಅಳಿಸಿ ಹಾಕಿತ್ತು.
ಅಕ್ಷರ ಕಲಿತು ಸ್ವಂತ ಬರವಣಿಗೆ ಮಾಡುವಷ್ಟು ಕಲಿಕೆ ಮುಂದುವರಿದ ಬಾಲ್ಯಾವಸ್ಥೆಯಲ್ಲಿ ಸಹಿ ಹಾಕುವ ಪ್ರಸಂಗ ಬಂದಾಗ ಮೊದಲ ಆಯ್ಕೆ ಇಂಗ್ಲಿಷ್ ಲಿಪಿಯೇ. ಇದು ನಗರ ಪ್ರದೇಶಗಳ ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದ ಶಿಕ್ಷಣ ಆರಂಭಿಸಿದವರಿಗೆ ಸೀಮಿತವಾದ ಮನೋಭಾವವಲ್ಲ. ಕುಗ್ರಾಮದ ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದರೂ ಸಹಿ ಮಾಡುವಾಗ ಇಂಗ್ಲಿಷನ್ನೇ ಆಯ್ಕೆ ಮಾಡಿಕೊಳ್ಳುವುದು ವಸಾಹತುಶಾಹಿ ಆಳ್ವಿಕೆಯ ಕಾಲದಿಂದಲೇ ಅತ್ಯಂತ ಸಹಜವೆಂಬಂತೆ ರೂಢಿಯಾಗಿ ಹೋಗಿರುವ ಅಭ್ಯಾಸಬಲ. ಬಾಲ್ಯದಲ್ಲಿ ಕಲಿಕೆಯ ಅವಕಾಶ ವಂಚಿತರಾಗಿದ್ದು ಎಷ್ಟೋ ವರ್ಷಗಳ ನಂತರ ವಯಸ್ಕರ ಶಿಕ್ಷಣ ಪದ್ಧತಿಯಲ್ಲಿ ಕಲಿತ ನವಸಾಕ್ಷರರು ಕೂಡ ಸಹಿ ಮಾಡುವಾಗ ಇಂಗ್ಲಿಷ್ ಲಿಪಿಯ ಮೊರೆ ಹೋಗುವುದು ಇಂತದ್ದೇ ಅಭ್ಯಾಸ ಬಲದ ‘ಪ್ರಕ್ರಿಯೆ’ಯೇ. ಇಂಗ್ಲಿಷ್ ಲಿಪಿಯಲ್ಲಿ ತಮ್ಮ ಪೂರ್ತಿ ಹೆಸರನ್ನು ಬರೆಯಲಾಗದಿದ್ದರೂ ಹುಟ್ಟೂರು, ತಂದೆಯ ಹೆಸರನ್ನು ಸೂಚಿಸುವ ಸಂಕೇತಾಕ್ಷರಗಳಿಗೆ ಇಂಗ್ಲಿಷನ್ನೇ ಮೊರೆ ಹೋಗಿರುತ್ತಾರೆ. ಕನ್ನಡದಲ್ಲಿ ಸಹಿ ಹಾಕುವವರೆಂದರೆ ಕನ್ನಡ ಸಾಹಿತಿ- ಬರಹಗಾರರು ಮಾತ್ರ. ಕೆಲವು ಚಿತ್ರನಟರನ್ನೂ ಈ ಸಾಲಿಗೆ ಸೇರಿಸಬಹುದು. ತಮ್ಮ ಹಸ್ತಾಕ್ಷರ ಕೋರಿ ಬಂದ ಅಭಿಮಾನಿಗಳಿಗೆ ಕನ್ನಡದಲ್ಲಿ ಹಸ್ತಾಕ್ಷರ ಹಾಕುವುದಷ್ಟೆ; ತಮ್ಮೆಲ್ಲ ವ್ಯವಹಾರಗಳಲ್ಲಿ ಅವರು ಕನ್ನಡದಲ್ಲಿಯೇ ಸಹಿ ಮಾಡುತ್ತಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಇದ್ದರೂ ಅಂಥವರ ಸಂಖ್ಯೆ ಹೆಚ್ಚಿಲ್ಲ. ಅಧಿಕಾರಸ್ಥ ರಾಜಕಾರಣಿಗಳಲ್ಲಿ ಕನ್ನಡದಲ್ಲಿ ಸಹಿ ಮಾಡುವವರ ಸಂಖ್ಯೆಯೂ ಹೆಚ್ಚಿಲ್ಲ ಎಂಬುದು ಸರ್ಕಾರದ ಜಾಹೀರಾತುಗಳಲ್ಲಿಯೇ ಅನಾವರಣವಾಗುತ್ತದೆ.
ಈಚೆಗೆ ಭೇಟಿಯಾದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಕನ್ನಡದಲ್ಲಿ ಸಹಿ ಮಾಡುವುದನ್ನು ಅಭ್ಯಾಸ ಮಾಡುತ್ತಿರುವುದು ಗಮನಕ್ಕೆ ಬಂದಿತು. ವರ್ಷಕ್ಕೆ ಎರಡು- ಮೂರು ಸಲ ಪ್ರಾಜೆಕ್ಟ್ ಹೆಸರಿನಲ್ಲಿ ಹೊರದೇಶಗಳಿಗೆ ಹೋಗಿ ಬರುವ ಇಂಜಿನಿಯರ್‌ಗೆ ಈಗ ಕನ್ನಡ ಸಹಿಗೆ ಮನಸ್ಸು ಮಾಡಲು ಯಾವ ಪ್ರೇರಣೆಯೋ ಎಂದು ಕುತೂಹಲವಾಯಿತು. ಅದನ್ನು ಆತ ಪ್ರೇರಣೆ ಎಂದೇನೂ ಒಪ್ಪಿಕೊಳ್ಳಲಿಲ್ಲ. ಬದಲಾಗಿ ತನ್ನ ನೇಮಕ ಪತ್ರದ ನೆರಳಚ್ಚು ಪ್ರತಿಯೊಂದನ್ನು ಹುಡುಕಿ ಎದುರು ಹಿಡಿದ. ‘ನೋಡಿ. ನಮ್ಮ ಕಂಪೆನಿ ಕೇಂದ್ರ ಕಚೇರಿ ದಕ್ಷಿಣ ಕೊರಿಯಾದ ಸುವಾಂಗ್ ಎಂಬಲ್ಲಿದೆ. ಅದರ ವ್ಯವಸ್ಥಾಪಕ ನಿರ್ದೇಶಕ ಈ ನೇಮಕ ಪತ್ರಕ್ಕೆ ಸಹಿ ಹಾಕಿದ್ದಾನೆ. ನೂರಾರು ಕೋಟಿ ವಹಿವಾಟಿನ, ಜಗತ್ತಿನ ಎಲ್ಲ ದೊಡ್ಡ ದೇಶಗಳಲ್ಲಿ ನೆಲೆಗಳು ಇರುವ ಕಂಪೆನಿಯ ಧಣಿ. ತನ್ನ ಸಹಿಯನ್ನು ಕೊರಿಯ ಭಾಷೆಯಲ್ಲಿ ಮಾಡಿದ್ದಾನೆ. ಅದನ್ನು ನೋಡಿದ ಮೇಲೆ ಛೇ, ನಮ್ಮದೇ ಭಾಷೆಯಲ್ಲಿ ಸಹಿ ಮಾಡುವುದಕ್ಕೂ ಹಿಂಜರಿಯುತ್ತೇವಲ್ಲ ಎಂದು ಅನಿಸಿತು..’ ಎಂದ.
ವಸ್ತುಸ್ಥಿತಿ ಎಂದರೆ ಅವನು ತನ್ನ ಸಹಿಯನ್ನು ಈಗ ಕನ್ನಡಕ್ಕೆ ಬದಲಾಯಿಸಿಕೊಳ್ಳಲು ಆಗಲಿಲ್ಲವಂತೆ. ಅದಕ್ಕೆ ಕಾರಣ: ಬ್ಯಾಂಕ್ ಖಾತೆಗಳು, ಷೇರು ದಾಖಲೆಗಳು, ಇನ್ನಿತರ ಹೂಡಿಕೆಗಳ ದಾಖಲೆಗಳಲ್ಲೆಲ್ಲ ಸಹಿ ಬದಲಾವಣೆಯನ್ನು ಅಧಿಕೃತಗೊಳಿಸಲು ಹಿಡಿಯುವ ಸಮಯ. ‘ಆದ್ದರಿಂದ ನನ್ನ ಹೈಸ್ಕೂಲು ದಿನಗಳಲ್ಲಿ ಆರಂಭಿಸಿದ್ದ ಇಂಗ್ಲಿಷ್ ಸಹಿಯನ್ನೇ ಇಟ್ಟುಕೊಂಡಿದ್ದೇನೆ; ಪರಕೀಯರ ಆಳ್ವಿಕೆ ತೊಲಗಿದರೂ ಅದರ ಪ್ರಭಾವ ದಶಕಗಳಾದರೂ ಉಳಿದುಕೊಂಡಿರುವುದರ ಸಂಕೇತದಂತೆ’ ಎಂದು ವಿಷಣ್ಣತೆಯಿಂದ ಬಣ್ಣಿಸಿದ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬಂಥ ಘೋಷಣೆಗಳೇನೋ ಆಕರ್ಷಕವಾಗಿವೆ. ಆದರೆ ಅದನ್ನು ಸರ್ಕಾರವೇ ಮಾಡಬೇಕೆಂಬುದು ಹೆಚ್ಚಿನವರ ನಿರೀಕ್ಷೆ. ‘ಕರ್ನಾಟಕವೆಂಬುದೇನು ಬರಿಯ ಮಣ್ಣೆ ಕಣ್ಣಿಗೆ; ಮಂತ್ರ ಕಣಾ, ಶಕ್ತಿ ಕಣಾ’ ಎಂಬ ಮಾತುಗಳು ಕವಿವಾಣಿಯಾಗಿ ಭಾಷಣಗಳಲ್ಲಷ್ಟೆ ಪ್ರಸ್ತಾವಿತವಾದರೆ ಪ್ರಯೋಜನವಿಲ್ಲ. ಶಕ್ತಿ ತುಂಬುವ ಕೆಲಸದಲ್ಲಿ ಶ್ರೀಸಾಮಾನ್ಯರೂ ಹಿಂದೇಕೆ ಬೀಳಬೇಕು? ಈಗಂತೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಮಾತಾಡಿದರೆ ಸಿಬ್ಬಂದಿಯೇ ಕೇಳಿಸಿಕೊಳ್ಳುವುದಿಲ್ಲ, ಅದಕ್ಕಾಗಿ ಜೋರು ಮಾಡಿದರೆ ಜಗಳವಾಗುತ್ತದೆ. ಇಂಗ್ಲಿಷಿನಲ್ಲಿ ಕೇಳಿದರೆ ಉತ್ತರವಾದರೂ ಸಿಗುತ್ತದೆ (ಕೆಲಸ ಮಾಡಿಸಿಕೊಳ್ಳಲು ಸಂವಹನವಷ್ಟೇ ಸಾಲುವುದಿಲ್ಲ). ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸುವುದು ಶೀಘ್ರ ಪರಿಣಾಮಕಾರಿಯಲ್ಲ. ನಿತ್ಯದ ವ್ಯವಹಾರದಲ್ಲಿ ಶುದ್ಧ ಕನ್ನಡವನ್ನು ಬಳಸಿದರೆ ಹೆಚ್ಚಿನವರಿಗೆ ಅರ್ಥವೂ ಆಗುವುದಿಲ್ಲ. ಅಷ್ಟರಮಟ್ಟಿಗೆ ಇಂಗ್ಲಿಷ್ ಪದಗಳು ಬಳಕೆಯಲ್ಲಿ ಸೇರಿಹೋಗಿ ಕಂಗ್ಲಿಷ್ ಎಂಬ ಹೊಸ ಅವತಾರವನ್ನು ಪರಿಚಯಿಸುತ್ತವೆ. ಉಳಿದ ಭಾಷಿಕರ ಜೊತೆ ಹೋಲಿಸಿ ‘ನಾವು ನಿರಭಿಮಾನಿಗಳು’ ಎಂದು ಹತಾಶೆಯಿಂದ ಕೈ ಚೆಲ್ಲುವುದು ಪರಿಹಾರವಲ್ಲ. ಭಾಷೆಯ ಅಭಿಮಾನ ಕಲಿಸುವುದರಿಂದಲೂ ಬರುವಂಥದ್ದಲ್ಲ. ಅದು ಅಂತರಂಗದ ಧ್ವನಿಯಾಗಿ ಹೊಮ್ಮುವಂಥದ್ದು. ನಮ್ಮ ಸಂವಹನ ಚಟುವಟಿಕೆಯನ್ನು ರೂಪಿಸುವಂಥದ್ದು, ಅಂತೆಯೇ ವೈಯಕ್ತಿಕ ಅಭಿವ್ಯಕ್ತಿಯಾದ ಸಹಿ ಕೂಡ.