ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ‘ಬ್ಲಾಕ್ ಬೆರ್ರಿ’ ಸಾಧನದಲ್ಲಿ ಪ್ರಕರಣ ದಾಖಲಿಸಲಿರುವ ಪೊಲೀಸರು ಪೇಪರ್ ನೋಟಿಸ್ ಬಳಸದಿರಲು ನಿರ್ಧರಿಸಿದ್ದಾರೆ.
‘ಇನ್ನು ಮುಂದೆ ಯಾವುದೇ ವಾಹನ ಸವಾರ ಸಂಚಾರ ನಿಯಮ ಉಲ್ಲಂಘಿಸಿದರೆ ಆ ಪ್ರಕರಣವನ್ನು ಬ್ಲಾಕ್ ಬೆರ್ರಿ ಮೂಲಕ ದಾಖಲಿಸಲಾಗುತ್ತದೆ. ಕಾಗದದ ನೋಟಿಸನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘‘ಬಿ’ ಟ್ರಾಕ್ ಯೋಜನೆಗೆ ಸರ್ಕಾರ ರೂ 40 ಕೋಟಿ ನೀಡಿದೆ. ಈ ಹಣವನ್ನು ಬಳಕೆ ಮಾಡಿಕೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಈಗ 280 ಬ್ಲಾಕ್ ಬೆರ್ರಿ ಸಾಧನಗಳಿವೆ ಇನ್ನೂ 400 ಬ್ಲಾಕ್ ಬೆರ್ರಿ ಖರೀದಿಸಿ ಎಎಸ್‌ಐ ಮತ್ತು ಅದಕ್ಕಿಂತ ಹೆಚ್ಚಿನ ದರ್ಜೆಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಆದ್ದರಿಂದ ಯಾವುದೇ ಪ್ರಕರಣ ದಾಖಲಾದರೂ ಪೇಪರ್ ನೋಟಿಸ್ ನೀಡುವುದಿಲ್ಲ. ರಸೀದಿ ಮಾತ್ರ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಸಂಚಾರ ತರಬೇತಿ ಮತ್ತು ಸುರಕ್ಷತಾ ಸಂಸ್ಥೆ: ‘ಸಂಚಾರ ತರಬೇತಿ ಮತ್ತು ಸುರಕ್ಷತಾ ಸಂಸ್ಥೆಯ ನೂತನ ಕಟ್ಟಡ ವನ್ನು ನಗರದ ಹೊರ ವಲಯದ ಥಣಿ ಸಂದ್ರದಲ್ಲಿ ನಿರ್ಮಿಸಲಾಗುತ್ತದೆ. ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಕಟ್ಟಡದಲ್ಲಿ ಎಲ್ಲಾ ರೀತಿಯ ಸಲಕರಣೆಗಳು ಮತ್ತು ವ್ಯವಸ್ಥೆ ಇರಲಿದೆ. ರಾಜ್ಯ ಪೊಲೀಸ್ ನಿಗಮ ಈ ಕಟ್ಟಡ ನಿರ್ಮಾಣ ಮಾಡಲಿದೆ’ ಎಂದರು.
‘ವಿದ್ಯಾರ್ಥಿಗಳು, ಚಾಲಕರು ಮತ್ತು ಸಾರ್ವಜನಿಕರು ಸಂಚಾರದ ಬಗ್ಗೆ ತರಬೇತಿ ಪಡೆಯಬಹುದು. ವಾಹನ ಸವಾರರು ಮತ್ತು ಪಾದಚಾರಿಗಳಲ್ಲಿ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಲು ತರಬೇತಿ ಸಂಸ್ಥೆ ಸಹಕಾರಿ ಯಾಗಲಿದೆ’ ಎಂದು ಬಿದರಿ ಮಾಹಿತಿ ನೀಡಿದರು.
ಬಿಡಗಡೆಯಾಗಿರುವ ಹಣದಲ್ಲಿ ನಗರದ 50 ಟ್ರಾಫಿಕ್ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಝೀಬ್ರಾ ಲೈನ್, ಸಂಚಾರ ದೀಪ ಅಳವಡಿಕೆ ಮತ್ತು ಮಾರ್ಪಾಡು ಮಾಡಲಾಗುತ್ತದೆ. ಅಗತ್ಯ ಇರುವ ಕಡೆ ವಿಭಜಕಗಳನ್ನು ಅಳವಡಿಸಲಾಗುತ್ತದೆ. ಸೂಚನಾ ಫಲಕಗಳನ್ನೂ ಹಾಕಲಾಗುತ್ತದೆ.