ನವದೆಹಲಿ: ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಿಂದೆಯೇ ಈ ಬುದ್ಧಿವಾದ ಹೇಳಿದ್ದರಂತೆ! ಅದೂ ಇಬ್ಬರೇ ಖಾಸಗಿಯಾಗಿ ಇದ್ದಾಗಲ್ಲ. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಪ್ರತಿ ಪಕ್ಷದ ನಾಯಕನ ಸ್ಥಾನದಲ್ಲಿ ನಿಂತು ಎಚ್ಚರಿಕೆ ಕೊಟ್ಟಿದ್ದರಂತೆ!!
‘ಯಡಿಯೂರಪ್ಪನವರೇ ಹಣ- ತೋಳ್ಬಲದ ಮೇಲೆ ಅಧಿಕಾರಿಕ್ಕೆ ಬಂದಿದ್ದೀರಿ. ಹಣವಂತರಿಗೆ ಅಧಿಕಾರ ಕೊಡುತ್ತಿ್ದದೀರಿ. ಮುಂದೊಂದು ದಿನ ಅವರು ನಿಮ್ಮನ್ನೇ ಮುಗಿಸುತ್ತಾರೆ. ಶ್ರೆಮಂತರಿಗೆ ನೀತಿ- ತತ್ವಗಳ ಬಗ್ಗೆ ಬದ್ಧತೆ ಇಲ್ಲ. ಇದರೊಟ್ಟಿಗೆ ಅಧಿಕಾರವೂ ಸೇರಿದರೆ ಸರ್ವಾಧಿಕಾರಿಯಾಗುತ್ತಾರೆ’ ಎಂದು ಖರ್ಗೆ ಭವಿಷ್ಯ ನುಡಿದಿದ್ದರಂತೆ.
‘ಮುಖ್ಯಮಂತ್ರಿಗೆ ಈಗ ಇದೇ ಪರಿಸ್ಥಿತಿ ಬಂದಿದೆ’ ಎಂದು ಖರ್ಗೆ ವಿಶ್ಲೇಷಣೆ ಮಾಡಿದರು. ಯಡಿಯೂರಪ್ಪ ಬಿಜೆಪಿಗೆ ಸೇರಿದವರು. ಕಾರ್ಮಿಕ ಸಚಿವರು ಕಾಂಗ್ರೆಸ್ ನಾಯಕರು. ಅವರ ಮಾತಿನಲ್ಲಿ ಪಕ್ಷಭೇದ ಕಾಣಲಿಲ್ಲ. ‘ಅಯ್ಯೆ ಪಾಪ!’ ಎಂಬ ಮರುಕವಿತ್ತು. ‘ಹಣದ ಆಸೆ-ಅಧಿಕಾರದ ಆಸೆ ಇದ್ದವರು ಎಂಥ ರಾಜಿಗೂ ಸಿದ್ಧವಿರುತ್ತಾರೆ. ಮುಖ್ಯಮಂತ್ರಿ ವಿಷಯದಲ್ಲೂ ಆಗಿದ್ದೂ ಇದೆ.
ನಂಬಿದವರನ್ನು ಕೈಬಿಟ್ಟರು. ಬಳ್ಳಾರಿಯಿಂದ ವರ್ಗವಾಗಿದ್ದ ಎಲ್ಲ ಅಧಿಕಾರಿಗಳನ್ನು ಮರು ನೇಮಕ ಮಾಡಿ ಅರಣ್ಯ- ಖನಿಜ ಸಂಪತ್ತು ಲೂಟಿ ನಡೆಯುತ್ತಿದೆ ಎಂದು ಮಾತನಾಡುತ್ತಿದ್ದಾರೆ. ಆಗಲೇ ಆಲೋಚನೆ ಮಾಡಿ ಅಧಿಕಾರ ಕೊಡದಿದ್ದರೆ ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕುವ ಸ್ಥಿತಿ ಬರುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ರಾಜಿ- ಸಂಧಾನದ ಬಳಿಕವೂ ಮುಖ್ಯಮಂತ್ರಿ- ರೆಡ್ಡಿಗಳ ನಡುವೆ ವಿಶ್ವಾಸ ಮೂಡಿದಂತೆ ಕಾಣಿಸೋದಿಲ್ಲ. ಒಡೆದ ಮನಸು- ಒಡೆದ ಕನ್ನಡಿ ಎರಡನ್ನೂ ಮೊದಲಿನ ಸ್ಥಿತಿಗೆ ಬರುವುದಿಲ್ಲ. ಇವರ ಸಂಬಂಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಗಂಡ- ಹೆಂಡತಿಯಂತೆ. ಅರ್ಜಿ ವಾಪಸ್ ಪಡೆದರೆ ಹಳಸಿದ ಸಂಬಂಧ ಸರಿ ಆಗುವುದೇ?’ ಎಂದು ಖರ್ಗೆ ಪ್ರಶ್ನಿಸಿದರು.
‘ಅರಣ್ಯ ಸಂಪತ್ತು ಲೂಟಿ ನಡೆಯುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಯಡಿಯೂರಪ್ಪ ತುಳಿತಕ್ಕೊಳಗಾದವರು, ಅಸಹಾಯಕರನ್ನು ಹೇಗೆ ರಕ್ಷಣೆ ಮಾಡುತ್ತಾರೆ?’ ಎಂಬ ಅನುಮಾನವನ್ನು ಕೇಂದ್ರ ಸಚಿವರು ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಿಂದೆ ತಮಗೆ ಹೇಳಿದ್ದ ಹಿತ ವಚನವನ್ನು ಮಲ್ಲಿಕಾರ್ಜುನ ಖರ್ಗೆ ನೆನಪು ಮಾಡಿಕೊಂಡರು.
‘ನಾನು ಹೈದರಾಬಾದ್-ಕರ್ನಾಟಕ ಭಾಗದ ಹಣವಂತರೊಬ್ಬರನ್ನು ಅರಸರ ಬಳಿ ಕರೆದೊಯ್ದು ವಿಧಾನಸಭೆ ಟಿಕೆಟ್ ಕೊಡುವಂತೆ ಮನವಿ ಮಾಡಿದೆ’. ಜತೆಯಲ್ಲಿದ್ದವರನ್ನು ಹೊರ ಕಳುಹಿಸಿ ಅವರು ನನಗೆ ಕೆಲವು ಮಾತುಗಳನ್ನು ಹೇಳಿದರು.
‘ಖರ್ಗೆ ನೀನು ಇನ್ನೂ ಚಿಕ್ಕವನು. ತಿಳುವಳಿಕೆ ಕಮ್ಮಿ. ವಿಧಾನಸಭೆಗೆ ಆರಿಸಿ ಬಂದ 3 ವರ್ಷದಲ್ಲೇ ರಾಜ್ಯ ಸಚಿವನಾದೆ. 8 ವರ್ಷದಲ್ಲಿ ಕ್ಯಾಬಿನೆಟ್ ಮಂತ್ರಿಯಾದೆ. ತುಂಬಾ ಅದೃಷ್ಟವಂತ. ನಾನು ಮುಖ್ಯಮಂತ್ರಿಯಾಗಲು 30 ವರ್ಷ ಬೇಕಾಯಿತು. ರಾಜಕೀಯ ಅಧಿಕಾರ ಇದೆ ಅಂಥ ಅದನ್ನು ಬೇಕಾಬಿಟ್ಟಿ ಬಳಸಬಾರದು. ಅಧಿಕಾರ ಇದ್ದಾಗ ಹಣವಂತರು ನಮ್ಮ ಹತ್ರ ಬರ್‍ತಾರೆ. ಅಧಿಕಾರ ಹೋದ್ರೆ ಯಾರು ಕೇಳ್ತಾರೆ’.
‘ಹಣವಂತರಿಗೆ ಅಧಿಕಾರ ಕೊಟ್ಟರೆ ನೀತಿ- ತತ್ವಗಳ ಅನುಷ್ಠಾನ ಆಗುವುದಿಲ್ಲ. ಭೂ ಸುಧಾರಣೆ, ಋಣ ಪರಿಹಾರ, ನ್ಯಾಯಬೆಲೆ ಅಂಗಡಿಗಳಂಥ ಜನಪರ ಕಾರ್ಯಕ್ರಮ ಕೊಡೋದಿಲ್ಲ. ಇನ್ಮುಂದೆ ಗುತ್ತಿಗೆದಾರರು, ಶ್ರೆಮಂತರನ್ನು ಕರೆತರಬೇಡ. ಬಡವರು, ಹಿಂದುಳಿದವರು, ಪರಿಶಿಷ್ಟರು, ನಿರ್ಗತಿಕರನ್ನು ಕರೆದುಕೊಂಡು ಬಾ’ ಎಂದು ಕಿವಿ ಮಾತು ಹೇಳಿದರಂತೆ. ಅರಸು ಹೇಳಿದ ಮಾತನ್ನು ಖರ್ಗೆ ಪತ್ರಕರ್ತರ ಮುಂದೆ ನೆನಪು ಮಾಡಿಕೊಂಡರು. ಅವರ ಮಾತುಗಳನ್ನು ಯಡಿಯೂರಪ್ಪ ಅವರಿಗೆ ಹೇಳಿದ್ದೆ. ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಖರ್ಗೆ ಎಲ್ಲವನ್ನು ಬಿಡಿಸಿಟ್ಟರು.