ಬೆಂಗಳೂರು:ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಭಾರಿ ಪ್ರಮಾಣದ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿ ಮಾಡಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇದೇ 23ರಂದು ಜೆಡಿಎಸ್ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ವಕ್ತಾರ ವೈ.ಎಸ್.ವಿ.ದತ್ತ ತಿಳಿಸಿದರು.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಯಾವುದೇ ಸಂದರ್ಭದಲ್ಲಿ ಈ ರೀತಿ ಅಸಮರ್ಪಕ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಯಾಗಿರಲಿಲ್ಲ. ಬಿಜೆಪಿ ಸರ್ಕಾರದ ಅವೈಜ್ಞಾನಿಕ ನೀತಿಯ ಪರಿಣಾಮವಾಗಿ ಗ್ರಾಮೀಣ ಕರ್ನಾಟಕ ಕಗ್ಗತ್ತಲಿನಲ್ಲಿ ಮುಳುಗಿದೆ’ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ನಿರ್ವಹಣಾ ವೈಫಲ್ಯದ ಪರಿಣಾಮವಾಗಿ ವಿದ್ಯುತ್ ಕೊರತೆಯ ಪ್ರಮಾಣ ಶೇಕಡ 26ಕ್ಕೆ ತಲುಪಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ಪ್ರಮಾಣ ಕಡಿಮೆಯಾಗಿತ್ತು. ಮಳೆಗಾಲ ಮತ್ತು ಚಳಿಗಾಲದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡುವ ಪ್ರಮೇಯ ಉದ್ಭವಿಸಿರಲಿಲ್ಲ ಎಂದರು.