ನವದೆಹಲಿ(ಐಎಎನ್‌ಎಸ್): ರೈತರ ಪ್ರತಿಭಟನೆ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಸಂಬಂಧ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿದೆ. ಅಲ್ಲದೆ, ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸುವುದಾಗಿ ಹೇಳಿದೆ.
ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶುಕ್ರವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ತಿದ್ದುಪಡಿಯಾದ ಹೊಸ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿಯೂ ಸರ್ಕಾರ ತಿಳಿಸಿತು.
ಸಭೆಯ ನಂತರ ವರದಿಗಾರರ ಜತೆ ಮಾತನಾಡಿದ ರಾಷ್ಟ್ರೀಯ ಲೋಕದಳ ನಾಯಕ ಅಜಿತ್ ಸಿಂಗ್, ರಾಜ್ಯ ಸರ್ಕಾರಗಳು ಕಬ್ಬಿನ ಬೆಲೆ ಪ್ರಕಟಿಸುವ ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲಾಗುವುದು ಎಂದು ಹೇಳಿದರು. ರೈತರ ಪ್ರತಿಭಟನೆ ಮುಕ್ತಾಯಗೊಂಡಿದ್ದು, ಸೋಮವಾರದಿಂದ ಲೋಕಸಭೆ ಕಲಾಪ ಸುಗಮವಾಗಿ ಸಾಗಲಿದೆ ಎಂದು ಭರವಸೆ ನೀಡಿದರು.
ಕಲಾಪ ಮುಂದಕ್ಕೆ: ಕಬ್ಬಿನ ಬೆಲೆ ನಿಗದಿಗೆ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ರೈತ ವಿರೋಧಿಯಾದ ಈ ಕರಾಳ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಬಿಜೆಪಿ, ರಾಷ್ಟ್ರೀಯ ಲೋಕದಳ ಇತ್ಯಾದಿ ಪಕ್ಷಗಳು ಎಬ್ಬಿಸಿದ ಗದ್ದಲದಿಂದಾಗಿ ಸತತ ಎರಡನೇ ದಿನ ಶುಕ್ರವಾರ ಸಂಸತ್ತಿನ ಉಭಯ ಬಣಗಳಲ್ಲಿ ಕಲಾಪವನ್ನು ಮುಂದೂಡಬೇಕಾಯಿತು. ಅಕ್ಟೋಬರ್ 21ರಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ 2009-10ನೇ ಸಾಲಿನ ಕಬ್ಬು ಅರೆಯುವ ಋತುವಿನಲ್ಲಿ ಒಂದು ಕ್ವಿಂಟಲ್ ಕಬ್ಬಿಗೆ ರೂ. 129.85 ಬೆಲೆ ನಿಗದಿಪಡಿಸಿತ್ತು.
ರಾಜ್ಯ ಸರ್ಕಾರಗಳು ಇದಕ್ಕಿಂತ ಹೆಚ್ಚಿನ ಬೆಲೆ ನಿಗದಿಪಡಿಸಿದಲ್ಲಿ ಆ ವ್ಯತ್ಯಾಸವನ್ನು ಅವುಗಳೇ ತುಂಬಿಕೊಳ್ಳಬೇಕು ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿತ್ತು. ಮೊದಲಿದ್ದ ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರಗಳು ಪ್ರಕಟಿಸುವ ಬೆಲೆ ವ್ಯತ್ಯಾಸವನ್ನು ಸಕ್ಕರೆ ಕಾರ್ಖಾನೆಗಳೇ ತುಂಬಿಕೊಳ್ಳಬೇಕಿತ್ತು.
ಕೆರಳಿದ ರೈತರು: ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆಯಲ್ಲಿ ಶೇ 40ರಷ್ಟು ಉತ್ತರ ಪ್ರದೇಶದಲ್ಲಿ ಆಗುತ್ತಿದ್ದು, ಅಲ್ಲಿನ ರೈತರು ಹೊಸ ಆದೇಶದಿಂದ ಕೆರಳಿದ್ದರು. ಉತ್ತರ ಪ್ರದೇಶ ಸರ್ಕಾರ ಕ್ವಿಂಟಲ್ ಕಬ್ಬಿನ ಬೆಲೆಯನ್ನು ರೂ. 165ರಿಂದ ರೂ. 170ಕ್ಕೆ ನಿಗದಿಪಡಿಸಿತ್ತು. ಕೇಂದ್ರ ಸರ್ಕಾರ ಪ್ರಕಟಿಸಿರುವ ಬೆಲೆಯಿಂದ ಕ್ವಿಂಟಲ್ ಕಬ್ಬಿನ ದರ ಒಮ್ಮೆಲೇ 35 ರೂಪಾಯಿಗಳಷ್ಟು ಕುಸಿದಿತ್ತು.
ಸಕ್ಕರೆ ಬೆಲೆ ಹೆಚ್ಚಿರುವುದರಿಂದ ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಲಾಭ ಮಾಡಿಕೊಳ್ಳುತ್ತಿವೆ. ಉತ್ತರ ಪ್ರದೇಶದಲ್ಲಿ ಬಹುತೇಕ ರೈತರು ನೀರಾವರಿಗಾಗಿ ಡೀಸೆಲ್ ಪಂಪ್ ಅವಲಂಬಿಸಿದ್ದಾರೆ. ಡೀಸೆಲ್ ಬೆಲೆ ಹೆಚ್ಚಿರುವುದರಿಂದ ಅದು ಸಹ ತಮಗೆ ಹೊಡೆತ ನೀಡಲಿದೆ ಎಂದು ರಾಷ್ಟ್ರೀಯ ಲೋಕದಳ ನಾಯಕ ಅಜಿತ್ ಸಿಂಗ್ ನೇತೃತ್ವದಲ್ಲಿ ಸಾವಿರಾರು ರೈತರು ಶುಕ್ರವಾರ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಸ್ವಾಗತ: ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಕಬ್ಬಿಗೆ ರಾಜ್ಯ ಸರ್ಕಾರಗಳು ನಿಗದಿಪಡಿಸುವ ಬೆಲೆಯನ್ನೇ ಮುಂದುವರಿಸುವುದಾಗಿ ಸರ್ಕಾರ ಹೇಳಿದೆ. ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವುದು ತಪ್ಪಿದೆ ಎಂದು ಹೇಳಿದರು.
ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿ ವಿವಾದಾತ್ಮಕ ನಿಯಮಾವಳಿ ರದ್ದಾಗಲು ರೈತರು ಕಾರಣರಾಗಿದ್ದಾರೆ. ಅವರ ಹೋರಾಟಕ್ಕೆ ಜಯ ಲಭಿಸಿದೆ ಎಂದೂ ಸುಷ್ಮಾ ಹೇಳಿದರು.
ಯುಪಿಎ ಸರ್ಕಾರ ರೈತರ ಪರವಾಗಿದೆ. ಯುಪಿಎ ನಾಯಕರು ಬೆಳಿಗ್ಗೆ ಸಭೆ ಸೇರಿ ಸುಗ್ರೀವಾಜ್ಞೆಯಲ್ಲಿ ವಿವಾದಾತ್ಮಕ ನಿಯಮಾವಳಿ ತೆಗೆದುಹಾಕಲು ನಿರ್ಧರಿಸಿದರು ಎಂದು ಮಮತಾ ಬ್ಯಾನರ್ಜಿ ಹೇಳಿದರು.