ವಾಷಿಂಗ್ಟನ್: ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾನುವಾರ ಮಧ್ಯಾಹ್ನ ಇಲ್ಲಿ ಬಂದಿಳಿಯುತ್ತಿದ್ದಂತೆಯೇ ಇಂತಹ ನಿರೀಕ್ಷೆ ಗರಿಗೆದರಿದೆ. ಸಿಂಗ್ ಅವರು ದ್ವಿಪಕ್ಷೀಯ ಮಾತುಕತೆ ಮತ್ತು ಅಧ್ಯಕ್ಷರ ಪ್ರಥಮ ಅಧಿಕೃತ ಅತಿಥಿಯಾಗುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದಾರೆ.
ಹನ್ನೊಂದು ದಿನಗಳ ಕೋಪನ್ ಹೇಗನ್ ಸಮಾವೇಶ ಡಿಸೆಂಬರ್ 7ರಂದು ಆರಂಭವಾಗಲಿದೆ. ಈ ಸಮಾವೇಶದಲ್ಲಿ ಜಾಗತಿಕ ಹವಾಮಾನ ಬದಲಾವಣೆ ತಡೆಯುವ ನಿಟ್ಟಿನಲ್ಲಿ ಮಹತ್ವದ ಫಲಿತಾಂಶವನ್ನು ಭಾರತ ಹಾಗೂ ಅಮೆರಿಕ ನಿರೀಕ್ಷಿಸಿವೆ.
ಈ ನಿಟ್ಟಿನಲ್ಲಿ ಎರಡೂ ದೇಶಗಳು ಈ ಹಿಂದೆ ವಿಭಿನ್ನ ಅಭಿಪ್ರಾಯ ಹೊಂದಿದ್ದು, ಏಕಾಭಿಪ್ರಾಯ ಹೊಂದುವ ಸಲುವಾಗಿ ಹಲವಾರು ಸುತ್ತಿನ ಮಾತುಕತೆ ನಡೆದಿದೆ. ಹಾಗಾಗಿ ಪ್ರಸ್ತುತದ ಜಾಗತಿಕ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಅಮೆರಿಕದೊಂದಿಗೆ ಸಂಘಟಿತ ಯತ್ನ ಮಾಡಿದರೆ ಉತ್ತಮ ಫಲಿತಾಂಶ ಹೊರ ಹೊಮ್ಮಬಹುದು ಎನ್ನುವುದು ಭಾರತದ ಲೆಕ್ಕಾಚಾರವಾಗಿದೆ.
ಇಂಗಾಲ ಹೊರ ಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೋಪನ್ ಹೇಗನ್ ಸಮಾವೇಶದಲ್ಲಿ ಒಂದು ನಿರ್ಣಾಯಕ ಒಪ್ಪಂದಕ್ಕೆ ಬರಬಹುದು ಎಂದು ಒಬಾಮ ಆಡಳಿತವೂ ಆಸಕ್ತಿ ವಹಿಸಿದ್ದು, ಇದಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಭಿನ್ನ ನಿಲುವು ಹೊಂದಿರುವ ಭಾರತ, ಈ ಬಗ್ಗೆ ಅನೇಕ ಚರ್ಚೆಗಳನ್ನು ನಡೆಸಿದ್ದು, ಅದರಲ್ಲಿ ಭಾರತದ ಅಭಿಪ್ರಾಯವನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಭಾರತೀಯ ಪಾಳೆಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಮತ್ತು ಇಂಧನ ಸುರಕ್ಷತೆಯ ನಡುವಿನ ಕೊಂಡಿಯ ಬಗ್ಗೆಯೂ ಈಗಾಗಲೇ ಮನವಿಕೆ ಮಾಡಿಕೊಡಲಾಗಿದೆ. ಬುಷ್ ಆಡಳಿತದೊಂದಿಗೆ ಭಾರತ ಮಾಡಿಕೊಂಡಿರುವ ನಾಗರಿಕ ಪರಮಾಣು ಒಪ್ಪಂದವು ಹವಾಮಾನ ಬದಲಾವಣೆ ಮತ್ತು ಇಂಧನ ಭದ್ರತೆಯೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನೂ ಈ ಅಧಿಕಾರಿಗಳು ಹೇಳುತ್ತಾರೆ.
ಈ ಬೆಳವಣಿಗೆಯಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪರಿಸರ ಮಾಲಿನ್ಯ ತಡೆಗಟ್ಟುವಂತಹ ‘ತಂತ್ರಜ್ಞಾನಗಳನ್ನು’ ನೀಡುವ ವಿಷಯದಲ್ಲಿ ಮತ್ತಷ್ಟು ಉದಾರತೆ ಪ್ರದರ್ಶಿಸುವ ಸಾಧ್ಯತೆ ಇದೆ.
ಏತನ್ಮಧ್ಯೆ ಮರುಬಳಕೆ ಇಂಧನ ಮತ್ತು ಹಸಿರು ಮನೆ ಇಂಧನ ಕ್ಷೇತ್ರವನ್ನು ವಿಸ್ತರಿಸುವ ಸಲುವಾಗಿ ಎರಡು ದೇಶಗಳು ಇದೇ ಸಂದರ್ಭದಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಬಹುದೆಂದು ನಿರೀಕ್ಷಿಸಲಾಗಿದೆ.
ಮಾತುಕತೆಯಲ್ಲಿ ಹಸಿರು ತಂತ್ರಜ್ಞಾನ ಮತ್ತು ಪರಿಸರ ಕಟ್ಟಡಗಳು ಹಾಗೂ ಸೌರಶಕ್ತಿ ಮತ್ತು ಜೀವದ್ರವ್ಯ ಬಳಸಿಕೊಂಡು ಸಿದ್ಧಪಡಿಸಬಹುದಾದ ಇಂಧನ ಹಾಗೂ ಮರುಬಳಕೆ ಇಂಧನಗಳ ಮೂಲಗಳನ್ನು ಉಭಯದೇಶಗಳ ಸಹಕಾರದೊಂದಿಗೆ ಅನುಷ್ಠಾನಗೊಳಿಸುವ ಸಾಧ್ಯತೆ ಕುರಿತು ಚರ್ಚಿಸಲಾಗತ್ತದೆ.
ಇದೇ ಸಂದರ್ಭದಲ್ಲಿ ಎರಡು ದೇಶಗಳ ಸಹಭಾಗಿತ್ವದಲ್ಲಿ ಮೂರು ಯೋಜನೆಗಳನ್ನು ಘೋಷಿಸವ ಸಾಧ್ಯತೆ ಇರುವುದಾಗಿ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.