ಬೆಂಗಳೂರು: ಸಚಿವರು, ಸಂಸದರು ಹಾಗೂ ಶಾಸಕರು ಈಗ ನಾಯಕನ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರ ಹೆಸರು ಮುಂಚೂಣಿಯಲ್ಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಅನಂತಕುಮಾರ್ ಇಬ್ಬರೂ ಈ ವಿಷಯದಲ್ಲಿ ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಚಿವ ಪದವಿ ಪಡೆಯಲು ಪ್ರಯತ್ನ ನಡೆಸಿ ವಿಫಲರಾಗಿರುವ ಶಾಸಕ ಸಿ.ಟಿ.ರವಿ ಈಗ ರಾಜ್ಯ ಬಿಜೆಪಿ ಅಧ್ಯಕ್ಷರಾಗುವ ಹಂಬಲದಲ್ಲಿ ಇದ್ದಾರೆ. ಈ ಕಾರಣದಿಂದಲೇ ಅವರು ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಂಡ ಸಂದರ್ಭದಲ್ಲಿ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದೇ ತಟಸ್ಥರಾಗಿ ಉಳಿದಿದ್ದರು ಎನ್ನಲಾಗಿದೆ.
ಇತ್ತೀಚೆಗಷ್ಟೇ ಸಂಪುಟದಿಂದ ಹೊರ ಬಂದಿರುವ ಶೋಭಾ ಕರಂದ್ಲಾಜೆ ಅವರ ಹೆಸರೂ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ತಾವು ಈ ಹುದ್ದೆಯನ್ನು ಸ್ವೀಕರಿಸಲು ಸಿದ್ಧರಿಲ್ಲ ಎಂದು ಸಚಿವರಾಗಿದ್ದ ಸಂದರ್ಭದಲ್ಲಿ ಅವರು ಹೇಳಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಂಸದ ಪ್ರಹ್ಲಾದ ಜೋಷಿ ಮತ್ತು ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಕೂಡಾ ರಾಜ್ಯ ಬಿಜೆಪಿಯ ನೇತೃತ್ವ ವಹಿಸಲು ಪೈಪೋಟಿ ನಡೆಸುತ್ತಿರುವವರಲ್ಲಿ ಸೇರಿದ್ದಾರೆ. ಸಚಿವ ಜಗದೀಶ ಶೆಟ್ಟರ್ ಅವರ ಬೆಂಬಲವೂ ಅವರಿಗಿದೆ ಎನ್ನಲಾಗಿದೆ.