ಕೋಯಿಕ್ಕೊಡ್ (ಪಿಟಿಐ): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಂಡಿ ತಿಂದು, ಕಾಫಿ ಕುಡಿದಿದ್ದ ರಸ್ತೆ ಪಕ್ಕದ ಹೋಟೆಲ್‌ವೊಂದನ್ನು ಸ್ವಚ್ಛತೆ ಕೊರತೆಯ ಕಾರಣಕ್ಕೆ ಒಂದು ವಾರ ಕಾಲ ಮುಚ್ಚಿಸಲಾಗಿದೆ.
ಅಕ್ಟೋಬರ್ 7ರಂದು ರಾಹುಲ್ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಲವನ್ನಾದಲ್ಲಿಯ ರಸ್ತೆಪಕ್ಕದ ಹೋಟೆಲ್‌ನಲ್ಲಿ ಕಾಫಿ ಕುಡಿದಿದ್ದರು. ಈ ಹೋಟೆಲ್ ಮಾಲೀಕ ಅಬ್ದುಲ್ ಅಜೀಜ್‌ಗೆ ಆರೋಗ್ಯ ನಿರೀಕ್ಷಕ ಶ್ರೀಜಾ ನೊಬಲ್, ಕಲುಷಿತ ನೀರು ಬಳಸಿ ಆಹಾರ ತಯಾರಿಸುತ್ತಿರುವ ಕಾರಣ ನೀಡಿ ನೋಟಿಸ್ ನೀಡಿದ್ದಲ್ಲದೆ ಹೋಟೆಲ್ ಮುಚ್ಚಿಸಿದ್ದಾರೆ.
ಸಹಾಯಕ ಪೊಲೀಸ ಕಮಿಷನರ್ ಸಿ.ಎಂ.ಪ್ರದೀಪ್ ಕುಮಾರ್ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಅಜೀಜ್ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯಿತ್ ಮೇಲೆ ನಿಯಂತ್ರಣ ಹೊಂದಿರುವ ಸಿಪಿಐ ಸೇಡಿನ ಕ್ರಮವಾಗಿ ಅಜಿಜ್ ಹೋಟೆಲ್ ಬಂದ್ ಮಾಡಿದೆ ಎಂದು ಹೇಳಲಾಗಿದೆ. ರಾಹುಲ್ ಗಾಂಧಿ ಭೇಟಿಯ ಮಾರನೆಯ ದಿನ ಕೆಲವು ವ್ಯಕ್ತಿಗಳು ಹೋಟೆಲ್‌ಗೆ ಬಂದು ಅಶುದ್ಧ ನೀರು ಬಳಸಲಾಗುತ್ತಿದೆ ಎಂದು ಆಪಾದಿಸಿದ್ದರು.
ಆದ್ದರಿಂದ ರಾಜಕೀಯ ಉದ್ದೇಶಕ್ಕಾಗಿಯೇ ಈ ಕ್ರಮ ತೆಗೆದುಕೊಂಡಿರಬಹುದು ಎಂದು ಅಜಿಜ್ ಹೇಳಿದ್ದಾರೆ.