ನವದೆಹಲಿ: ಅಣೆಕಟ್ಟೆಗಳ ಸುರಕ್ಷತೆ, ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಾದರಿ ಕಾನೂನು ರೂಪಿಸಿ ಎಲ್ಲ ರಾಜ್ಯಗಳಿಗೂ ಕಳುಹಿಸಲಾಗುವುದು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಲ್ ತಿಳಿಸಿದರು.
ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರ ‘ಅನ್ಲೀಶಿಂಗ್ ಇಂಡಿಯಾ ವಾಟರ್ ಎಲಿಕ್ಸಿರ್ ಆಫ್ ಲೈಫ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನೀರಿನ ಸಂಗ್ರಹಗಾರಗಳ ರಿಪೇರಿ, ನಿರ್ವಹಣೆ ಹಾಗೂ ಸಂಗ್ರಹಣೆ ಸಂಬಂಧಿಸಿದ ಯೋಜನೆಗಳನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ‘ಜಲ ಸಂಪನ್ಮೂಲ ನಿರ್ವಹಣೆ ಹಣಕಾಸು ನಿಗಮ’ ಸ್ಥಾಪಿಸಿತು. 100ಕೋಟಿ ಆರಂಭಿಕ ಬಂಡವಾಳದೊಂದಿಗೆ ಆರಂಭವಾದ ನಿಗಮದ ಸ್ಥಾಪನೆ ಉದ್ದೇಶ ಸಫಲವಾಗಲಿಲ್ಲ ಎಂದು ಸಚಿವರು ವಿಷಾದಿಸಿದರು.
ಕೃತಿ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ನೀರು ದೇಶದೊಳಗೆ ಹಾಗೂ ಹೊರಗೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮಿತಿಮೀರಿದ ಅಂತರ್ಜಲ ಶೋಷಣೆ ಮುಂಬರುವ ವರ್ಷಗಳಲ್ಲಿ ಸಂಕಷ್ಟ ಸೃಷ್ಟಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೀರಿನ ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುವ ಸಂದರ್ಭದಲ್ಲಿ ತಾಪಮಾನದಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನು ಗಮನದಲ್ಲಿಡಬೇಕು ಎಂದು ಉಪ ರಾಷ್ಟ್ರಪತಿ ಸಲಹೆ ಮಾಡಿದರು.
ಹಿರಿಯ ಪತ್ರಕರ್ತ ಎಂ.ಕೆ. ವೇಣುಗೋಪಾಲ್ ಮಾತನಾಡಿ, ಚಂದ್ರನಲ್ಲಿ ನೀರಿನ ಅಂಶಗಳಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಆದರೆ, ಭೂಮಿಯಲ್ಲಿನ ನೀರಿನ ಸಂಪನ್ಮೂಲವನ್ನು ಕಳೆದು ಕೊಳ್ಳುತ್ತಿದ್ದೇವೆ. ಸಾಂಪ್ರಾದಾಯಿಕ ಜ್ಞಾನ ಕಣ್ಮರೆ ಆಗುತ್ತಿರುವುದು ಇದಕ್ಕೆ ಕಾರಣ. ಈ ಜ್ಞಾನವನ್ನು ಪುನರುಜ್ಜೀವನಗೊಳಿಸಬೇಕು ಎಂದು ಸಲಹೆ ಮಾಡಿದರು.
ನೀರಿನ ಸಂಪನ್ಮೂಲ ಹಾಗೂ ನಿರ್ವಹಣೆಯನ್ನು ವಿಕೇಂದ್ರೀಕರಣಗೊಳಿಸಬೇಕು. ದೊಡ್ಡ ಅಣೆಕಟ್ಟೆ ಹಾಗೂ ಕಾಲುವೆಗಳ ನಿರ್ವಹಣೆಗೆ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿದೆ. ಇದರ ಬದಲಾಗಿ ಸಣ್ಣಪುಟ್ಟ ಯೋಜನೆಗಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಕೃತಿಯ ಲೇಖಕ ವೀರಪ್ಪ ಮೊಯಿಲಿ ಮಾತನಾಡಿ, ದೇಶದ ನದಿಗಳ ಜೋಡಣೆ ಪರಿಸರ, ಸಾಮಾಜಿಕ- ಆರ್ಥಿಕ ಸಮಸ್ಯೆಗಳನ್ನು ಹುಟ್ಟುಹಾಕಲಿದೆ. ಇದಕ್ಕೆ ಬದಲಾಗಿ ಪ್ರಾದೇಶಿಕ ಮಟ್ಟದಲ್ಲಿ ಇಂಥ ಯೋಜನೆ ಮಾಡುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಕೇಂದ್ರ ಸಚಿವ ಯೋಗೇಂದ್ರ ಕೆ. ಅಲಗ್ ಮಾತನಾಡಿದರು.