ನವದೆಹಲಿ: ಖ್ಯಾತ ವೈಣಿಕ ಹಾಗೂ ವಾಗ್ಗೇಯಕಾರ ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವವನ್ನು ’ದೆಹಲಿ ಕನ್ನಡಿಗ ಪತ್ರಿಕೆ’ಯ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿ ಆಚರಿಸಲಾಯಿತು.
ಶತಮಾನೋತ್ಸವ ಉದ್ಘಾಟಿಸಿದ ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾ. ಸಾಮಗ ಅವರು ರಾಜಾರಾಯರು ಬೆಂಗಳೂರು, ಮೈಸೂರು, ಚೆನ್ನೈ, ತಿರುಚಿ, ಮುಂಬೈ, ಪುಣೆ ಹಾಗೂ ಇತರ ಕಡೆಗಳಲ್ಲಿ ವೀಣಾ ಮತ್ತು ಗಾಯನ ಕಚೇರಿ ನಡೆಸಿದರು. ಸರಳ ಶೈಲಿಯಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಕೃತಿಗಳನ್ನು ಬರೆದರು. ಅವರ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಿಸಿ ಪ್ರಕಟಿಸಬೇಕು ಎಂದರು.
ವೀಣಾ ಕಲಾವಿದೆ ರಾಜೇಶ್ವರಿ ಪಿ. ಭಟ್ ರಾಯರು ರಂಜನೆಗಿಂತ ಶುದ್ಧತೆಯ ಕಡೆಗೆ ಹೆಚ್ಚಿನ ಗಮನ ನೀಡಿದರು. ಸಂಗೀತದ ಪ್ರಚಾರಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದರು. ರಾಯರು ‘ಪುರುಷೋತ್ತಮ’ ಎಂಬ ಅಂಕಿತದಲ್ಲಿ ಸ್ವರ, ಜತಿ, ವರ್ಣ, ಕೀರ್ತನೆ ಮತ್ತು ತಿಲ್ಲಾನ ರಚಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿಯ ಉಪನಿರ್ದೇಶಕ ಡಾ.ಕೆ. ವಾಗೀಶ್ ಅವರು ರಾಜ್ಯ ಸರ್ಕಾರ ಹೊರನಾಡಿನ ಕನ್ನಡ ಸಂಘ ಸಂಸ್ಥೆಗಳಿಗೆ, ಸಂಗೀತ ಕೇಂದ್ರಗಳಿಗೆ ರಾಜಾರಾಯರ ಕೃತಿಗಳ ಸಿಡಿ ಉಚಿತವಾಗಿ ಒದಗಿಸಬೇಕು ಎಂದು ಅವರು ಹೇಳಿದರು.
ಶ್ರದ್ಧಾಂಜಲಿ: ಉಡುಪಿಯ ಅದಮಾರು ಮಠದ ವಿಬುಧೇಶ ತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ‘ದೆಹಲಿ ಕನ್ನಡಿಗ’ ಪತ್ರಿಕೆಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು.
ಬಾ. ಸಾಮಗ ಅವರು ಮಾತನಾಡಿ ಸ್ವಾಮೀಜಿ ದೆಹಲಿ, ಮುಂಬೈ ಸೇರಿದಂತೆ ಹಲವೆಡೆ 27 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡಿಗರಿಗೆ ಕೀರ್ತಿ ತಂದರು. ಪತ್ರಿಕೆ ಏರ್ಪಸಿದ 5ನೇ ರಾಷ್ಟ್ರೀಯ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದ್ದರು ಎಂದು ಹೇಳಿದರು.
ದೆಹಲಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕಿ ಲಕ್ಷ್ಮಿ ಜಂಬೋಲ್ಕರ್ ಅವರು ಸ್ವಾಮೀಜಿ ವಿಜ್ಞಾನ, ತಂತ್ರಜ್ಞಾನದ ಜತೆಗೆ ನೈತಿಕ ಶಿಕ್ಷಣಕ್ಕೂ ಆದ್ಯತೆ ನೀಡಿದರು. ಬದುಕಿನ ಬಹುಭಾಗವನ್ನು ಶಿಕ್ಷಣ ಸಂಸ್ಥೆಗಳಿಗಾಗಿಯೇ ಮೀಸಲಾಗಿಟ್ಟಿದ್ದರು ಎಂದರು.