ನವದೆಹಲಿ: ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ ‘ಕಭಿ ಕುಶಿ ಕಭಿ ಘಮ್’ ಚಲನಚಿತ್ರದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಆರೋಕ್ಕಾಗಿ ಅಪರಾಧ ಪ್ರಕರಣ ಎದುರಿಸುತ್ತಿದ್ದು ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈ ಪ್ರಕರಣದ ಸಂಬಂಧ ಕಳೆದ ಏಳು ದಿನಗಳಿಂದ ವಿಚಾರಣೆಗಾಗಿ ಕಾದಿರುವ ಉತ್ತರಪ್ರದೇಶದ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಜೋಹರ್ ಅವರಿಗೆ ನ್ಯಾಯಮೂರ್ತಿಗಳಾದ ಸುದರ್ಶನ್ ರೆಡ್ಡಿ ಮತ್ತು ಜೆ.ಎಂ. ಪಾಂಚಲ್ ನಿರ್ದೇಶನ ನೀಡಿದರು. ಜೊತೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಯಾವುದೇ ವಿನಾಯಿತಿ ನೀಡಲು ಸಹ ನ್ಯಾಯಪೀಠ ನಿರಾಕರಿಸಿತು.
ಇದಕ್ಕೂ ಮುನ್ನ, ತಮ್ಮ ವಿರುದ್ಧ ದಾಖಲಿಸಿರುವ ಈ ಮೊಕದ್ದಮೆಯನ್ನು ರದ್ದುಪಡಿಸಲು ಕೋರಿ ಜೋಹರ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸಹ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಜೋಹರ್ ಸುಪ್ರೀಂಕೋರ್ಟ್ ಮೊರೆ ಹೋದರು.
ಆದರೆ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಿರುವ ಲಖನೌ ವಿಚಾರಣಾ ನ್ಯಾಯಾಧೀಶರ ಮುಂದೆ ಹಾಜರಾಗಲು ಜೋಹರ್‌ಗೆ ಸುಪ್ರೀಂಕೋರ್ಟ್ ಈ ಮೊದಲು ಕೂಡಾ ಸೂಚಿಸಿತ್ತು. ಆದರೂ ಅನಾರೋಗ್ಯ ಮತ್ತು ಭದ್ರತಾ ಬೆದರಿಕೆಯ ಕಾರಣವೊಡ್ಡಿ (ಸಾರ್ವಜನಿಕ ವ್ಯಕ್ತಿಯೆಂದು) ಜೋಹರ್ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು.