ಬೆಂಗಳೂರು: ಸಾಮೂಹಿಕ ವಿವಾಹ ನಡೆಸುವಾಗ ಅಪ್ರಾಪ್ತ ವಯಸ್ಕರ ಮದುವೆ ಕೂಡ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇಲ್ಲಿಯವರೆಗೆ ಇಂತಹ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೋಮವಾರ ನಿರ್ದೇಶಿಸಿದೆ.
ಇಂತಹ ಕೃತ್ಯಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅಪ್ರಾಪ್ತ ವಯಸ್ಕರ ವಿವಾಹ ಮಾಡಿಸಿದ ಸಂಘ ಸಂಸ್ಥೆಗಳ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನೂ ಸರ್ಕಾರದಿಂದ ಬಯಸಿದೆ.
ಸಾಮೂಹಿಕ ವಿವಾಹಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಅಳವಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ 2006ರಲ್ಲಿ ಮುತ್ತಮ್ಮ ದೇವಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
ಆದರ್ಶ ವಿವಾಹ ಯೋಜನೆ: ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2007ರ ಆಗಸ್ಟ್ 2ರಂದು ಸರ್ಕಾರ ಜಾರಿಗೆ ತಂದಿರುವ ‘ಆದರ್ಶ ವಿವಾಹ ಯೋಜನೆ’ಯಿಂದಾಗಿ ಅಪ್ರಾಪ್ತರ ವಿವಾಹ ಹೆಚ್ಚುತ್ತಿದೆ ಎಂದು ಅರ್ಜಿದಾರರ ಪರ ವಕೀಲೆ ಶೀಲಾ ರಾಮನಾಥನ್ ಪೀಠಕ್ಕೆ ತಿಳಿಸಿದರು.
‘ಈ ಯೋಜನೆಯ ಸವಲತ್ತು ಪಡೆದುಕೊಳ್ಳಬೇಕಿದ್ದಲ್ಲಿ, ಕನಿಷ್ಠ 25 ಜೋಡಿಗಳ ವಿವಾಹ ನೆರವೇರಬೇಕು. ಇಂತಹ ವಿವಾಹ ನಡೆದರೆ 10ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಎರಡು ವರ್ಷಗಳ ಅವಧಿಗೆ ಪ್ರತಿ ದಂಪತಿಯ ಹೆಸರಿನಲ್ಲಿ ಸರ್ಕಾರ ಠೇವಣಿ ಇರಿಸುತ್ತದೆ.
ಈ ಹಣ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು 25 ಜೋಡಿ ಹೊಂದಿಸಲು ಮುಂದಾಗುತ್ತಿವೆ. ಇಷ್ಟು ಜೋಡಿಗಳು ಸಿಗದೇ ಹೋದಾಗ ಅಪ್ರಾಪ್ತರ ವಿವಾಹ ಕೂಡ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದರು. ಅನೇಕ ಸಂದರ್ಭಗಳಲ್ಲಿ ಗಣ್ಯರ ಎದುರೇ ಅಪ್ರಾಪ್ತ ವಯಸ್ಕರ ವಿವಾಹ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಕುರಿತು ಅವರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಇದನ್ನು ಗಮನಿಸಿದ ಪೀಠ, ತೀವ್ರ ಅಚ್ಚರಿ ವ್ಯಕ್ತಪಡಿಸಿತು. ‘ಇದು ಬಹಳ ದುರದೃಷ್ಟಕರ ಸಂಗತಿ. ಒಮ್ಮೆ ವಿವಾಹವಾದರೆ ಅದನ್ನು ಅನೂರ್ಜಿತಗೊಳಿಸಲಾಗದು. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಹೇಗೆ ಕಣ್ಮುಚ್ಚಿ ಕುಳಿತುಕೊಂಡಿದೆ’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಇಂತಹ ವಿವಾಹ ಮಾಡಿಸುವ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದ ಪೀಠ, ತನ್ನ ಆದೇಶದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.