 |
|
ಮಾವೋವಾದಿ ಬೆಂಬಲಿತ ಪಿಸಿಪಿಎ ಸಶಸ್ತ್ರ ಕಾರ್ಯಕರ್ತರು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಮಂಗಳವಾರ ತಡೆಹಿಡಿದಿದ್ದ ಭುವನೇಶ್ವರ- ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು.
- ಪಿಟಿಐ ಚಿತ್ರ
|
ಮಿಡ್ನಾಪುರ (ಪ.ಬ.): ಮಾವೋವಾದಿ ಬೆಂಬಲಿತ ಪಿಸಿಪಿಎ (ಪೊಲೀಸ್ ದೌರ್ಜನ್ಯದ ವಿರುದ್ಧದ ಜನರ ಸಮಿತಿ) ಸಶಸ್ತ್ರ ಕಾರ್ಯಕರ್ತರು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭುವನೇಶ್ವರ- ದೆಹಲಿ ರಾಜಧಾನಿ ರೈಲನ್ನು ತಡೆಹಿಡಿದು ನಿಲ್ಲಿಸಿದ್ದು ಆತಂಕಕ್ಕೆ ಕಾರಣವಾಯಿತು.
ರೈಲನ್ನು ತಡೆಹಿಡಿದ ಪಿಸಿಪಿಎ ಕಾರ್ಯಕರ್ತರು ಇಬ್ಬರು ಚಾಲಕರನ್ನು ವಶದಲ್ಲಿಟ್ಟುಕೊಂಡಿದ್ದರು. ಕೇಂದ್ರ ಮೀಸಲು ಪಡೆ ಪೊಲೀಸರು ಸ್ಥಳಕ್ಕೆ ಧಾವಿಸಿದ ನಂತರ ಸಶಸ್ತ್ರ ಕಾರ್ಯಕರ್ತರು ಪರಾರಿಯಾದರು. ಈ ಒತ್ತೆಯಾಳು ಮಾದರಿ ಪ್ರಕರಣ ಐದು ಗಂಟೆ ನಡೆದು ಉದ್ವಿಗ್ನ ಪರಿಸ್ಥಿತಿಯಿತ್ತು. ರೈಲಿನಲ್ಲಿ 1,200 ಪ್ರಯಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಗೃಹಸಚಿವ ಚಿದಂಬರಂ ತಿಳಿಸಿದ್ದಾರೆ.
ಈ ರೈಲು ಭುವನೇಶ್ವರದಿಂದ ಬೆಳಿಗ್ಗೆ 9 ಗಂಟೆಗೆ ಹೊರಟಿತ್ತು. ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಜಾರ್‌ಗ್ರಾಮ್ ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿರುವ ಬನ್ಸ್ತಾಲಾ ಎಂಬಲ್ಲಿ ಹಳಿಗೆ ಅಡ್ಡಲಾಗಿ ಮರ ಬಿದ್ದಿದ್ದು ಕಂಡ ಚಾಲಕ ಅನಂತ್ ರಾವ್ ರೈಲು ನಿಲ್ಲಿಸಿದ. ಆಗ ರೈಲಿನ ಬಳಿ ಬಂದ 400ಕ್ಕೂ ಹೆಚ್ಚು ಕಾರ್ಯಕರ್ತರು ರೈಲಿನಿಂದ ಇಳಿಯುವಂತೆ ಹಾಗೂ ಅದನ್ನು ಮುಂದಕ್ಕೆ ಒಯ್ಯದಂತೆ ಚಾಲಕರಿಗೆ ಆದೇಶಿಸಿದರು. ಕೊಡಲಿ, ಖಡ್ಗ, ಬಿಲ್ಲು, ಬಾಣ ಹಿಡಿದಿದ್ದ ಕಾರ್ಯಕರ್ತರು ಹವಾನಿಯಂತ್ರಿತ ಬೋಗಿಗಳ ಗಾಜು ಒಡೆದು ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದರು ಎನ್ನಲಾಗಿದೆ.
ಚಾಲಕರನ್ನು ಅಪಹರಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದ್ದವು. ಅವರು ಸಹ ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಜೈಲಿನಲ್ಲಿ ಇಟ್ಟಿರುವ ತಮ್ಮ ನಾಯಕ ಛಾತ್ರದಾರ್ ಮಹತೊನನ್ನು ಬಿಡುಗಡೆ ಮಾಡಬೇಕು ಎಂದು ಪಿಸಿಪಿಎ ಕಾರ್ಯಕರ್ತರು ಬೇಡಿಕೆ ಮುಂದಿಟ್ಟಿದ್ದರು. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದರು.