|
ನಿಗದಿತ ಅವಧಿಯಲ್ಲಿ ಪೂರ್ಣ: ಯಶವಂತ್
|
| ಅನಿಲ್ ಕುಂಬ್ಳೆ ವೃತ್ತದಲ್ಲಿ ಮೆಟ್ರೊ ಕಾಮಗಾರಿಯನ್ನು 10 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು. ಅರ್ಧ ಭಾಗದಷ್ಟು ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಉಳಿದರ್ಧ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ತಿಳಿಸಿದರು. |
*ಮೆಟ್ರೊ ಕಾಮಗಾರಿಗೆ ಮುಂದುವರೆದ ಮರಗಳ ಕಡಿತ *ಎಂ.ಜಿ ರಸ್ತೆಯಲ್ಲಿ ತಾತ್ಕಾಲಿಕ ತಡೆಗೋಡೆ *ವಾಹನ ಸವಾರರಿಗೆ ಪೊಲೀಸರ ಮನವಿ
ಬೆಂಗಳೂರು: ವಾಹನ ಸವಾರರು ಸಂಚಾರ ನಿಯಮ ಪಾಲಿಸಿದೆ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ ಪರಿಣಾಮ ಮತ್ತು ಕೆಪಿಎಲ್ ಪಂದ್ಯಗಳ ಆರಂಭ ಸಮಾರಂಭಕ್ಕೆ ಸಾವಿರಾರು ಜನರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದ ಕಾರಣ ಎಂ.ಜಿ ರಸ್ತೆ ಸುತ್ತಮುತ್ತ ಬುಧವಾರ ಮಧ್ಯಾಹ್ನ ವಾಹನಗಳು ತೆವಳಬೇಕಾಯಿತು.
‘ಮೆಟ್ರೊ’ ರೈಲು ಕಾಮಗಾರಿ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಬಿಆರ್‌ವಿ ವೃತ್ತದ ಕಡೆ ಹೋಗುವ ಮಾರ್ಗವನ್ನು ಬಂದ್ ಮಾಡಲಾಗಿದೆ. ಇದರಿಂದ ಉಂಟಾಗಬಹುದಾದ ದಟ್ಟಣೆ ಮತ್ತು ಟ್ರಾಫಿಕ್ ಜಾಮ್ ನಿವಾರಿಸಲು ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಎಂ.ಜಿ ರಸ್ತೆಯಲ್ಲಿ ತಾತ್ಕಾಲಿಕ ತಡೆಗೋಡೆ ಹಾಕಲಾಗಿದೆ (ಬ್ಯಾರಿಕೇಡ್) ಮತ್ತು ಪೊಲೀಸರೇ ಸಂಚಾರ ನಿಯಂತ್ರಿಸುತ್ತಿದ್ದಾರೆ. ಆದರೆ ವಾಹನ ಸವಾರರು ಪೊಲೀಸರ ಸೂಚನೆಗಳನ್ನು ಪಾಲಿಸದೇ ಮನಸೋಇಚ್ಛೆ ಚಾಲನೆ ಮಾಡಿದ್ದು ವಾಹನಗಳು ಸಾಲುಗಟ್ಟುವಂತೆ ಮಾಡಿತು. ನಿಲ್ಲಲು ಪೊಲೀಸರು ಸೂಚನೆ ನೀಡಿದರೂ ಬೈಕ್ ಸವಾರರು ನುಗ್ಗುತ್ತಿದ್ದದ್ದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತು. ಕೆಲವರಂತೂ ತಾತ್ಕಾಲಿಕ ತಡೆಗೋಡೆಯನ್ನು ದಾಟಿ ಏಕ ಮುಖ ಸಂಚಾರದಲ್ಲಿ ವಾಹನ ಚಾಲನೆ ಮಾಡಿದರು.
ಕೆಪಿಎಲ್ ಎಫೆಕ್ಟ್: ಕೆಪಿಎಲ್ ಪಂದ್ಯಗಳ ಆರಂಭ ಸಮಾರಂಭಕ್ಕೆ ಮಧ್ಯಾಹ್ನ ಸಾವಿರಾರು ಮಂದಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದರು. ಕ್ರಿಕೆಟ್ ಆಟಗಾರರು ಬಸ್‌ಗಳಲ್ಲಿ ಬಂದ ಕಾರಣ ಕ್ರೀಡಾಂಗಣದೊಳಗೆ ತಿರುವು ಪಡೆಯುತ್ತಿದ್ದ ವೇಳೆ ವಾಹನಗಳ ಸಂಚಾರಕೆ ಅಡಚಣೆ ಆಯಿತು. ನೂರಾರು ಮಂದಿ ಕಾರುಗಳಲ್ಲಿ ಕ್ರೀಡಾಂಗಣಕ್ಕೆ ಬಂದಾಗ ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತ ಆಯಿತು. ಸಂಜೆ ವೇಳೆಗೆ ಮತ್ತೆ ವಾಹನ ಸಂಚಾರ ಸುಗಮವಾಯಿತು. ಆದರೆ ರಾತ್ರಿ ಅನಿಲ್ ಕುಂಬ್ಳೆ ವೃತ್ತ, ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ತೀವ್ರ ತೊಂದರೆ ಆಯಿತು.
‘ಮೆಟ್ರೊ’ ಕಾಮಗಾರಿ ಮುಗಿಯುವವರೆಗೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆದ್ದರಿಂದ ವಾಹನ ಸವಾರರು ಸಂಚಾರ ಸಿಬ್ಬಂದಿಗೆ ಸಹಕಾರ ನೀಡಬೇಕು. ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
‘ಡಿಸಿಪಿ ಮತ್ತು ನಾನು ಖುದ್ದಾಗಿ ಸಂಚಾರ ನಿರ್ವಹಣೆಯ ಮಾಡುತ್ತಿದ್ದೇವೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೆಚ್ಚಿನ ವಾಹನ ಮತ್ತು ಜನರು ಬಂದ ಕಾರಣ ಸ್ವಲ್ಪ ತೊಂದರೆ ಆಯಿತು’ ಎಂದು ಸೆಂಟ್ರಲ್ ಸಂಚಾರ ವಿಭಾಗದ ಎಸಿಪಿ ಎ.ನಾಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.