ಬೆಂಗಳೂರು: ಸೈಬರ್ ಅಪರಾಧ ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಬಂಧನಕ್ಕೆ ಕಾರಣವಾಗಿರುವ ಆರೋಪ ಹೊತ್ತ ‘ಭಾರ್ತಿ ಏರ್‌ಟೆಲ್’ ಕಂಪೆನಿ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಸೇರಿದಂತೆ ಇತರರಿಗೆ ಸಮನ್ಸ್ ಜಾರಿ ಮಾಡಿ, ನಗರದ 6ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ನಗರದ ಕೋಡಿಹಳ್ಳಿ ನಿವಾಸಿ ಕೆ.ಲಕ್ಷ್ಮಣ್ ಕೈಲಾಶ್ ಅವರ ಬಂಧನಕ್ಕೆ ಕಾರಣವಾಗಿರುವ ಆರೋಪ ಹೊತ್ತ ಸುನಿಲ್, ಕಂಪೆನಿಯ ಉಪಾಧ್ಯಕ್ಷರಾದ ರಾಜೇಶ್ ಭಾರ್ತಿ ಮಿತ್ತಲ್, ರಂಜನಿ ಭಾರತಿ ಮಿತ್ತಲ್ ಸೇರಿದಂತೆ ಇತರ ಅಧಿಕಾರಿಗಳಿಗೆ ಸಮನ್ಸ್ ಜಾರಿಗೆ ಆದೇಶಿಸಲಾಗಿದ್ದು, ಬರುವ ಜ.21ರಂದು ಅವರ ಖುದ್ದು ಹಾಜರಿಗೆ ನಿರ್ದೇಶಿಸಲಾಗಿದೆ.
ಲಕ್ಷ್ಮಣ್ ಅವರು ಭಾರ್ತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೌಲಭ್ಯ ಪಡೆದಿದ್ದರು. ಈ ಸಂಪರ್ಕಕ್ಕೆ ನೀಡಿದ್ದ ಐಪಿ ವಿಳಾಸದಿಂದ ಲಕ್ಷ್ಮಣ್ ಅವರು, ಛತ್ರಪತಿ ಶಿವಾಜಿ ಅವರ ಕುರಿತು ಆರ್ಕುಟ್‌ನಲ್ಲಿ ಅವಹೇಳನಕಾರಿ ಭಾವಚಿತ್ರ ಪ್ರಕಟಿಸಿದ್ದಾರೆ ಎಂದು ಕಂಪೆನಿ ತಪ್ಪು ಮಾಹಿತಿ ನೀಡಿ, ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಲಕ್ಷ್ಮಣ್ ಅವರನ್ನು ಬಂಧಿಸಿದ್ದರು.
ಅವರನ್ನು ಪುಣೆಯ ಯರವಾಡಾ ಜೈಲಿನಲ್ಲಿ ಇಡಲಾಗಿತ್ತು. ಅವರು 50 ದಿನಗಳ ಕಾಲ ಜೈಲಿನಲ್ಲಿದ್ದರು. ನಂತರ ಮಹಾರಾಷ್ಟ್ರದ ಮಾನವ ಹಕ್ಕುಗಳ ಆಯೋಗ ಈ ಬಗ್ಗೆ ವಿಚಾರಣೆ ನಡೆಸಿದಾಗ, ಭಾವಚಿತ್ರ ಪ್ರಕಟಿಸಿದ್ದು ಬೇರೆ ವ್ಯಕ್ತಿಗಳು ಎಂಬುದು ಬಹಿರಂಗಗೊಂಡಿತು. ಈ ಹಿನ್ನೆಲೆಯಲ್ಲಿ ಬಂಧಮುಕ್ತಗೊಂಡ ಲಕ್ಷ್ಮಣ್ ಕಂಪೆನಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ.