ಮುಧುರೈ/ಚೆನ್ನೈ(ಪಿಟಿಐ): ಸಿಪಿಐ(ಎಂ)ನ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಅವರು ಮಧುರೈ ಸಮೀಪದ ಹಳ್ಳಿಯೊಂದಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ.
ಮಧುರೈ ಸಮೀಪದ ಉತ್ತಪುರಂ ಹಳ್ಳಿಯಲ್ಲಿ ಕಳೆದ ವರ್ಷ ಸವರ್ಣಿಯರು ಹಾಗೂ ದಲಿತರ ಮಧ್ಯೆ ಘರ್ಷಣೆ ಸಂಭವಿಸಿ, ಗೋಲಿಬಾರ್ ನಲ್ಲಿ ದಲಿತನೊರ್ವ ಸಾವನ್ನಪ್ಪಿದ್ದ. ಈ ಹಳ್ಳಿಗೆ ಹೋಗದಂತೆ ಪೊಲೀಸರು ಬೃಂದಾ ಅವರನ್ನು ನಿರ್ಬಂಧಿಸಿದರು. ಬೃಂದಾ ಅವರು ಅಲ್ಲಿಗೆ ಹೋಗುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂದು ಪೊಲೀಸರು ಅವರ ಕಾರನ್ನು ತಡೆದರು. ತಕ್ಷಣವೇ ಅವರು ರಸ್ತೆಯಲ್ಲಿ ಪ್ರತಿಭಟನೆಗೆ ತೊಡಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಬೃಂದಾ ಅವರು ವಿನಾಕಾರಣ ತಮ್ಮನ್ನು ತಡೆದು ಕೆಲವು ಗಂಟೆಗಳ ಕಾಲ ವಶದಲ್ಲಿಟ್ಟಿದ್ದರು ಎಂದು ತಿಳಿಸಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ. ರಾಧಾಕೃಷ್ಣನ್ 'ಸ್ಥಳೀಯ ಪೊಲೀಸರು ಬೃಂದಾರನ್ನು ಈಗ ಉತ್ತಪುರಂಗೆ ಭೇಟಿ ನೀಡಬೇಡಿ ವಿನಂತಿಸಿದ್ದಾರೆಯೇ ಹೊರತು ಬಂಧಿಸಿಲ್ಲ' ಎಂದಿದ್ದಾರೆ.