ಅಹಮದಾಬಾದ್ (ಪಿಟಿಐ): ಗುಜರಾತಿನಲ್ಲಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ನಿಂದ ಐದು ಸ್ಥಾನಗಳನ್ನು ಕಿತ್ತುಕೊಂಡು, ಒಂದು ಸ್ಥಾನವನ್ನು ಕಾಂಗ್ರೆಸ್ಗೆ ಒಪ್ಪಿಸಿತು.
ಕಾಂಗ್ರೆಸ್ ಒಂದು ಸ್ಥಾನವನ್ನು ಬಿಜೆಪಿಯಿಂದ ಕಿತ್ತುಕೊಂಡು ಇನ್ನೊಂದು ಸ್ಥಾನವನ್ನು ಉಳಿಸಿಕೊಂಡಿತು.
ಸೆಪ್ಟೆಂಬರ್ 10ರಂದು ಏಳು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ 6 ಸ್ಥಾನಗಳನ್ನು ಕಾಂಗ್ರೆಸ್ ಹೊಂದಿದ್ದರೆ, ಒಂದು ಸ್ಥಾನ ಬಿಜೆಪಿ ಕೈಯಲ್ಲಿ ಇತ್ತು.
ಬಿಜೆಪಿಯು ಜಸ್ದನ್, ಚೋಟಿಲಾ, ದೆಹಗಮ್, ಡಾಂಟ ಮತ್ತು ಸಮೀ ಹರಿಝಾ್ ಸ್ಥಾನಗಳನ್ನು ಕಾಂಗ್ರೆಸ್ನಿಂದ ವಶಪಡಿಸಿಕೊಂಡಿತು.
ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಕೊದ್ನೀರ್ ಕ್ಷೇತ್ರವನ್ನು ಗೆದ್ದಿದ್ದ ಬಿಜೆಪಿ ಉಪಚುನಾವಣೆಯಲ್ಲಿ ಅದನ್ನು ಕಾಂಗ್ರೆಸ್ಗೆ ಒಪ್ಪಿಸಿತು. ಇದರ ಜೊತೆಗೆ, ವಿರೋಧಿ ಕಾಂಗ್ರೆಸ್ ಪಕ್ಷವು ಧೊರ್ಜಿ ಕ್ಷೇತ್ರವನ್ನು ಉಳಿಸಿಕೊಂಡಿತು.
ಇತ್ತೀಚಿನ ಲೋಕಸಭಾ ಚುನಾವಣೆ ಮತ್ತು ಜುನಾಗಢ ಮಹಾನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಸಾಧನೆ ಸಮಾಧಾನಕರವಾಗಿ ಇಲ್ಲದೇ ಇದ್ದ ಪರಿಣಾಮವಾಗಿ ಸ್ವಲ್ಪ ಮಟ್ಟಿಗೆ ಕಳೆಗುಂದಿದ್ದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಉಪಚುನಾವಣಾ ಫಲಿತಾಂಶ ಸ್ವಲ್ಪ ಮಟ್ಟಿನ ಸಮಾಧಾನವನ್ನು ತಂದಿದೆ.