ಬೆಂಗಳೂರು: ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಕಾರು ಚಾಲಕ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿಯುಸಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಘಟನೆ ರಾಜಾನುಕುಂಟೆಯಲ್ಲಿ ಗುರುವಾರ ನಡೆದಿದೆ.
ಕಡತಮಲೈ ಗ್ರಾಮದ ನವೀನ್ (18) ಮತ್ತು ದೊಡ್ಡತುಮಕೂರಿನ ಚಂದ್ರಶೇಖರ್ (20) ಮೃತಪಟ್ಟವರು. ನವೀನ್, ಚಂದ್ರಶೇಖರ್ ಮತ್ತು ಶಿವಕುಮಾರ್ ಎಂಬುವರು ಒಂದೇ ಬೈಕ್‌ನಲ್ಲಿ ದೊಡ್ಡಬಳ್ಳಾಪುರದ ಕಡೆ ಹೋಗುತ್ತಿದ್ದರು. ಸಂಜೆ ಆರು ಗಂಟೆ ಸುಮಾರಿಗೆ ಮಳೆ ಸುರಿದ ಕಾರಣ ಸಿಲ್ವರ್ ಓಕ್ ರೆಸಾರ್ಟ್ ಸಮೀಪ ಬೈಕ್ ನಿಲ್ಲಿಸಿ ಮರವೊಂದರ ಕೆಳಗೆ ನಿಂತಿದ್ದರು.
ದೊಡ್ಡಬಳ್ಳಾಪುರದ ಕಡೆ ಹೋಗುತ್ತಿದ್ದ ಕಾರು ವೇಗವಾಗಿ ಬಂದು ಮರದ ಕೆಳಗೆ ನಿಂತಿದ್ದವರಿಗೆ ಡಿಕ್ಕಿ ಹೊಡೆಯಿತು. ನವೀನ್ ಮತ್ತು ಚಂದ್ರಶೇಖರ್ ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
‘ನವೀನ್ ದೊಡ್ಡಬಳ್ಳಾಪುರದ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದ. ಚಂದ್ರಶೇಖರ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ’ ಎಂದು ಎಸ್‌ಐ ವಿಜಯ್‌ಕುಮಾರ್ ತಿಳಿಸಿದ್ದಾರೆ.