ಬೆಂಗಳೂರು:ಅಲ್ಲೊಂದು ಮದುವೆಯ ಮಂಟಪ ಅದ್ಧೂರಿಯಾಗಿ ಸಿಂಗಾರಗೊಂಡಿತ್ತು. ಪಂಚತಾರಾ ಅಶೋಕ ಹೋಟೆಲ್‌ನ ಮಗಧ್ ಸಭಾಂಗಣ. ಒಳಪ್ರವೇಶಿಸಿದರೆ, ಇಂದ್ರ ಲೋಕ ಧರೆಗಿಳಿದಂತಹ ಅನುಭವ!
‘ಏಷ್ಯಾ ವೆಡ್ಡಿಂಗ್ ಫೇರ್’ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಂಡಿದ್ದು, ಸ್ವರ್ಗವೇ ಧರೆಗೆ ಇಳಿದಂತಿದೆ.
‘ಒಂದೇ ಸೂರಿನಲ್ಲಿ ಮದುವೆಯ ದಿನಕ್ಕೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಯಾವುದೇ ಗೊಂದಲವಿಲ್ಲದೇ ವಸ್ತುಗಳನ್ನು ಖರೀದಿಸಬಹುದು’ ಮುಂಬೈ ಇಂಟ್ರಡಕ್ಷನ್ ಟ್ರೇಡ್ ಶೋಸ್ ಸಂಸ್ಥೆಯ ಕಾರ್ಯಕ್ರಮ ಆಯೋಜಕ ಜೀವೇಶ್ ಸಚ್‌ದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಾಂಪ್ರದಾಯಿಕ ಮತ್ತು ಆಧುನಿಕ ಎರಡು ಬಗೆಯ ಜನರಿಗೆ ಇಷ್ಟವಾಗುವ ರೀತಿಯ ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರ, ಹೀಗೆ ಎಲ್ಲ ರೀತಿಯ ಆಭರಣಗಳು ಮತ್ತು ಕಾಂಜೀವರಂ ಸೀರೆಗಳು ಒಳಗೊಂಡಂತೆ ವಿವಿಧ ಬಗೆಯ ಉಡುಪುಗಳನ್ನು ಪ್ರದರ್ಶಿಸಲಾಗಿದೆ. ಪ್ರದರ್ಶನವು ಇದೇ ತಿಂಗಳು 20ರವರೆಗೆ ನಡೆಯಲಿದೆ’ ಎಂದು ಹೇಳಿದರು.