ಗುಲ್ಬರ್ಗ: ಆಚಾರ ಮತ್ತು ವಿಚಾರ ಒಂದಾಗಿದ್ದ ಬಸವಾದಿ ಶರಣರ ಪರಂಪರೆಯನ್ನು ಕೇವಲ ಪ್ರಚಾರ, ಪ್ರಸಾರ ಮಾಡುವುದಕ್ಕಷ್ಟೇ ಸೀಮಿತಗೊಳಿಸದೆ ಅವರ ತತ್ವಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.
ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಗಳಂಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರ, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠ ಹಾಗೂ ಬಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ಶಿವಶರಣರ ಪರಂಪರೆ ಹಾಗೂ ಅವರ ಇತಿವೃತ್ತ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಜಿ.ಎಸ್. ಸಿದ್ಧಲಿಂಗಯ್ಯ ಮಾತನಾಡಿ, ಸಮಾಜದ ಉದ್ಧಾರದ ಜೊತೆಗೆ ಭಾಷಾ ಕ್ರಾಂತಿಯನ್ನು ಉಂಟು ಮಾಡಿದ ವಚನಕಾರರು, ಹಿಂದಿನಿಂದ ಚಾಲ್ತಿಯಲ್ಲಿದ್ದ ಹಲವಾರು ಕಟ್ಟುಪಾಡುಗಳನ್ನು ಮುರಿದು ಹೊಸ ಪರಂಪರೆಯನ್ನು ಹುಟ್ಟು ಹಾಕಿದರು ಎಂದು ಹೇಳಿದರು."
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಜಿ. ಮೂಲಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿ ಜಿಲ್ಲಾಧ್ಯಕ್ಷೆ ವಿಲಾಸವತಿ ಖೂಬಾ ವೇದಿಕೆಯಲ್ಲಿ ಇದ್ದರು. ಡಾ. ಈಶ್ವರಯ್ಯ ಮಠ ಕಾರ್ಯಕ್ರಮ ನಿರೂಪಿಸಿದರು.