ನವದೆಹಲಿ (ಪಿಟಿಐ): ಉತ್ತರ ದೆಹಲಿಯ ಪಿತಂಪುರದ ನಿವಾಸಿ ನರೇಶ್ ಜೈನ್ ಎಂಬಾತ ಇದು ವರೆಗೆ ಸುಮಾರು 5000 ಕೋಟಿ ರೂಪಾಯಿಯಷ್ಟು ಹವಾಲಾ ವ್ಯವಹಾರ ನಡೆಸಿ, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿರಬಹುದು ಎಂದು ಅಂದಾಜು ಮಾಡಲಾಗಿದೆ.
ಜೈನ್ ಮನೆಯ ಮೇಲೆ ದಾಳಿ ಮಾಡಿದಾಗ 60 ಲಕ್ಷ ರೂಪಾಯಿ ದೊರೆ ತಿದ್ದು, ಇದಕ್ಕೆ ಅಧಿಕೃತ ಲೆಕ್ಕವಿಟ್ಟಿಲ್ಲ ಎಂದು ಹೇಳಲಾಗಿದೆ.
ಜೈನ್‌ಗೆ ಸೇರಿದ ಎಂಟು ಕಟ್ಟಡಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿ ಶೋಧನೆ ನಡೆಸಲಾಗಿದೆ. ಈತನ ಸಹೋದರರಾದ ಬಿಮಲ್ ಮತ್ತು ಸತ್ಪಾಲ್ ಸಹ ಈ ವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಅಲ್-ಖೈದಾ ಸಂಘಟನೆ ಪರವಾಗಿ ಈ ಸಹೋದರರು ಹವಾಲಾ ವ್ಯವಹಾರ ನಡೆಸುತ್ತಿದ್ದರು. ಇವರ ಜಾಲ ನೈಜೀರಿಯಾ, ಇಟಲಿ, ಅಫ್ಘಾನಿಸ್ತಾನ, ಚೀನಾ, ಪಾಕಿಸ್ತಾನ, ಬೊಲಿವಿಯಾ, ಕಾಂಗೊ ಮತ್ತು ಕೂಕ್ಸ್ ದ್ವೀಪಕ್ಕೂ ಹರಡಿದೆ.
ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ಜೈನ್ ಹಣಕಾಸು ನೆರವು ನೀಡುತ್ತಿದ್ದ ಎಂದು ಆಪಾದಿಸಿದ್ದು ಆತನ ವಿರುದ್ಧ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.