ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ತ್ಯಜಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸೇರಿದಂತೆ ಪಕ್ಷದ ವಲಯದಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿರುವ ಆಡ್ವಾಣಿ ರಾಜಕೀಯದಿಂದ ನಿವೃತ್ತರಾಗುವ ಬಯಕೆಯನ್ನು ಉಡುಪಿ ಪೇಜಾವರ ಶ್ರೀಗಳ ಬಳಿ ವ್ಯಕ್ತಪಡಿಸಿದ್ದಾರೆ.
ಆಡ್ವಾಣಿ ರಾಜಕೀಯದಿಂದ ನಿವೃತ್ತರಾಗುವ ಇಂಗಿತ ವ್ಯಕ್ತ ಮಾಡಿದರೂ ಯಾವಾಗ ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಆದರೆ, ಬಿಜೆಪಿ ಅದರಲ್ಲೂ ದೇಶದ ರಾಜಕಾರಣಕ್ಕೆ ನಿಮ್ಮಂಥ ಹಿರಿಯ ರಾಜಕಾರಣಿಗಳ ಮಾರ್ಗದರ್ಶನದ ಅಗತ್ಯವಿರುವುದರಿಂದ ರಾಜಕೀಯದಿಂದ ದೂರ ಸರಿಯಬೇಡಿ ಎಂದು ಪೇಜಾವರ ಶ್ರೀಗಳು ಆಡ್ವಾಣಿ ಅವರಿಗೆ ಹೇಳಿದ್ದಾರೆ.
ರಾಜಕಾರಣದಲ್ಲಿ ಇದ್ದುಕೊಂಡೇ ಕಿರಿಯರಿಗೆ ಮಾರ್ಗದರ್ಶನ ಮಾಡುವ ಕೆಲಸ ಮುಂದುವರಿಸಿ ಎಂದೂ ಶ್ರೀಗಳು ತಿಳಿಸಿದ್ದಾರೆ. ವಿಜಯದಶಮಿ ಅಂಗವಾಗಿ ಆಡ್ವಾಣಿ ತಮ್ಮ ಪತ್ನಿ ಕಮಲಾ ಅವರ ಜತೆ ಶ್ರೀಗಳನ್ನು ಭೇಟಿ ಮಾಡಿದ್ದ ವೇಳೆ ರಾಜಕೀಯ ತ್ಯಜಿಸುವ ಮಾತನಾಡಿದ್ದಾರೆ.
ಅನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾನಾಡಿದ ಆಡ್ವಾಣಿ, ತುರ್ತು ಪರಿಸ್ಥಿತಿ ದಿನದಿಂದಲೂ ತಾವು ಶ್ರೆಗಳ ಜತೆ ಬಾಂಧವ್ಯ ಹೊಂದಿರುವುದಾಗಿ ವಿವರಿಸಿದರು. ವಿಜಯದಶಮಿ ಅಂಗವಾಗಿ ಆಶೀರ್ವಾದ ಪಡೆಯಲು ಬಂದಿದ್ದೆ. ಈ ಭೇಟಿ ಸಂತಸ ತಂದಿದೆ ಎಂದರು.
ಬಿಜೆಪಿ ನಾಯಕರು ಸಾಧು- ಸಂತರನ್ನು ಭೇಟಿ ಮಾಡಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುವ ಪರಂಪರೆ ಹೊಸದಲ್ಲ. ಈ ಹಿನ್ನೆಲೆಯಲ್ಲಿ ಆಡ್ವಾಣಿ ಮತ್ತು ಸ್ವಾಮೀಜಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಸ್ವಾಮೀಜಿ ಅವರ ಹೇಳಿಕೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಆಡ್ವಾಣಿ ರಾಜಕೀಯದಿಂದ ನಿವೃತ್ತರಾಗುವ ಪ್ರಸ್ತಾಪ ಪಕ್ಷದ ಒಳಗೆ ಹಾಗೂ ಹೊರಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಡ್ವಾಣಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕಿರಿಯರಿಗೆ ಸ್ಥಾನ ಬಿಟ್ಟುಕೊಡಬೇಕು ಎಂಬ ಅಭಿಪ್ರಾಯವನ್ನು ಕೆಲವು ದಿನಗಳ ಹಿಂದೆ ವ್ಯಕ್ತಪಡಿಸಿದ ಆರ್ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಈ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷವೇ ಕೈಗೊಳ್ಳಬೇಕು ಎಂದು ಹೇಳಿದ್ದನ್ನು ಸ್ಮರಿಸಬಹುದು.