ನವದೆಹಲಿ (ಪಿಟಿಐ): ‘ಪರಮಾಣು ಭಯೋತ್ಪಾದನೆಯ ಭೂತವು ಅತ್ಯಂತ ಭಯಾನಕ ಸವಾಲು’ ಎಂಬುದನ್ನು ಪುನರುಚ್ಚರಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಪರಮಾಣು ಭದ್ರತೆಯನ್ನು ಸುಧಾರಿಸುವ ಜಾಗತಿಕ ಯತ್ನವನ್ನು ಬಲಪಡಿಸುವುದಕ್ಕೆ ಬೆಂಬಲ ಸೂಚಿಸಿರುವುದಲ್ಲದೆ, ಮುಂದಿನ ವರ್ಷ ಈ ಬಗ್ಗೆ ಶೃಂಗಸಭೆ ನಡೆಸುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪ್ರಯತ್ನವನ್ನು ಸ್ವಾಗತಿಸಿದ್ದಾರೆ.
ಪರಮಾಣು ಇಂಧನದ ಶಾಂತಿಯುತ ಬಳಕೆ ಮೇಲಿನ ಅಂತರರಾಷ್ಟ್ರೀಯ ಸಮ್ಮೇಳನವನ್ನು ಮಂಗಳವಾರ ಇಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತವು ಪರಮಾಣು ಪ್ರಸರಣ ನಿಷೇಧ ದಾಖಲೆ ಹೊಂದಿರುವುದಕ್ಕೆ ಹೆಮ್ಮೆ ಪಡುತ್ತಿದ್ದು ಎಲ್ಲ ಬಗೆಯ ಸಮೂಹ ನಾಶಕ ಶಸ್ತ್ರಾಸ್ತ್ರಗಳ ಪ್ರಸರಣ ತಡೆಯುವ ಜಾಗತಿಕ ಪ್ರಯತ್ನಕ್ಕೆ ಬದ್ಧವಾಗಿದೆ’ ಎಂದರು.
‘ಭಾರತವು ಆಧುನಿಕ, ಪರಿಣಾಮಕಾರಿ ಹಾಗೂ ಮಹತ್ವದ ರಫ್ತು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದ್ದು ಸೂಕ್ಷ್ಮ ತಂತ್ರಜ್ಞಾನ ಮತ್ತು ಸಾಧನಗಳನ್ನು ಇತರ (ಹೊಂದಲು ಅರ್ಹವಲ್ಲದ) ರಾಷ್ಟ್ರಗಳಿಗೆ ವರ್ಗಾಯಿಸದಿರುವ ನಿಲುವಿಗೆ ಕಟಬದ್ಧವಾಗಿದೆ’ ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಮಾಣು ಭಯೋತ್ಪಾದನೆಯ ಬೆದರಿಕೆ ತಡೆಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ನಿರ್ಣಯ ಮಂಡಿಸುವ ಪ್ರಯತ್ನಕ್ಕೆ ಚಾಲನೆ ನೀಡಿರುವ ಭಾರತ, ಪರಮಾಣು ಭದ್ರತೆ ಸುಧಾರಿಸುವ ಜಾಗತಿಕ ಯತ್ನ ಬಲಪಡಿಸಲು ಬೆಂಬಲ ಸೂಚಿಸಿರುವುದಾಗಿ ಅವರು ನುಡಿದರು.
ಅಣ್ವಸ್ತ್ರ ಪರೀಕ್ಷೆ ಮೇಲೆ ಸ್ವಯಂ, ಏಕಪಕ್ಷೀಯ ನಿಷೇಧ ಹೇರುವ ನಿಲುವಿಗೆ ಭಾರತ ಬದ್ಧವಾಗಿದ್ದು ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಮತ್ತು ಅಂತರರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯನಾಗಿ ನಿಶ್ಶಸ್ತ್ರೀಕರಣ ಒಪ್ಪಂದದ ಸಮಾಲೋಚನೆಯಲ್ಲಿ ರಚನಾತ್ಮಕ ದೃಷ್ಟಿಯಿಂದ ಭಾಗವಹಿಸುವುದು ಎಂದು ಅವರು ತಿಳಿಸಿದರು.
2050ರೊಳಗೆ 4,70,000 ಮೆವಾ ವಿದ್ಯುತ್ ಉತ್ಪಾದನೆ : ಪ್ರಧಾನಿ ಸಿಂಗ್
ನವದೆಹಲಿ (ಐಎಎನ್‌ಎಸ್): ನಾವು ನಮ್ಮ ಮೂರು ಹಂತದ ಪರಮಾಣು ಕಾರ್ಯಕ್ರಮಗಳನ್ನು ಉತ್ತಮವಾಗಿ ನಿರ್ವಹಿಸಿದಲ್ಲಿ ಭಾರತವು 2050ರೊಳಗಾಗಿ 4,70,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದೆಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಇಲ್ಲಿ ‘ಪರಮಾಣು ಇಂಧನದ ಶಾಂತಿಯುತ ಬಳಕೆ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಈ ಪರಮಾಣು ಕಾರ್ಯಕ್ರಮಗಳಿಂದ ಪಳೆಯುಳಿಕೆ ಇಂಧನದ ಅವಲಂಬನೆ ಕಡಿಮೆ ಮಾಡಬಹುದು ಮತ್ತು ಹವಾಮಾನ ಬದಲಾವಣೆಯ ಹೋರಾಟಕ್ಕೆ ಸಂಬಂಧಿಸಿದ ಜಾಗತಿಕ ಪ್ರಯತ್ನದಲ್ಲಿ ಮಹತ್ವದ ಕೊಡುಗೆ ನೀಡಲು ಸಾಧ್ಯವಿದೆ ಎಂದು ಅವರು ನುಡಿದರು.
ವಿಷಾದದ ಸಂಗತಿಯೆಂದರೆ, ಪರಮಾಣು ಪ್ರಸರಣವನ್ನು ತಡೆಯಲು ಜಾಗತಿಕ ಪ್ರಸರಣ ನಿಷೇಧ ಕಾರ್ಯಕ್ರಮ ವಿಫಲವಾಗಿರುವುದು. ಇದರಿಂದಾಗಿ ಇದರ ನ್ಯೂನತೆ ನಮ್ಮ ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. “ಜಾಗತಿಕ ಪ್ರಸರಣ ನಿಷೇಧ ಯಶಸ್ವಿಯಾಗಬೇಕಾದರೆ, ಅದು ಸಾರ್ವತ್ರಿಕ, ಮಹತ್ವಪೂರ್ಣ, ಪಕ್ಷಪಾತ ರಹಿತ ಹಾಗೂ ಸಂಪೂರ್ಣ ಪರಮಾಣು ನಿಶ್ಶಸ್ತ್ರೀಕರಣ ಗುರಿಗೆ ಸಂಬಂಧಿಸಿದ್ದಾಗಿರಬೇಕು. ಈ ಅಭಿಪ್ರಾಯಕ್ಕೆ ಅಂತರರಾಷ್ಟ್ರೀಯ ಸಹಮತ ಹೆಚ್ಚುತ್ತಿರುವ ನಂಬಿಕೆ ನಮ್ಮದಾಗಿದೆ” ಎಂದು ಅವರು ತಿಳಿಸಿದರು.
ಪರಮಾಣು ಸುರಕ್ಷತಾ ಕಾರ್ಯವಿಧಾನಕ್ಕೆ ಬದ್ಧರಾಗಿರಿ-ಐಎಇಎ ಎಚ್ಚರಿಕೆ
ನವದೆಹಲಿ (ಪಿಟಿಐ): ಪರಮಾಣು ಶಕ್ತಿ ವಲಯದಲ್ಲಿ ಏಷ್ಯಾ ಗಣನೀಯ ಅಭಿವೃದ್ಧಿ ಕಾಣಲಿದ್ದು, ಪರಮಾಣು ಸಾಮಗ್ರಿ ಪೂರೈಕೆ ದಿಸೆಯಲ್ಲಿ ದೇಶಗಳು ಸುರಕ್ಷತಾ ಕಾರ್ಯವಿಧಾನಕ್ಕೆ ಬದ್ಧವಾಗಿರಬೇಕೆಂದು ಮಂಗಳವಾರ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ) ಎಚ್ಚರಿಕೆ ನೀಡಿದೆ.
ಪ್ರತಿ ದೇಶಕ್ಕೂ ಪರಮಾಣು ಶಕ್ತಿಯನ್ನು ಶಾಂತಿಯುತವಾಗಿ ಬಳಸುವ ಹಕ್ಕು ಇದೆ. ಆದರೆ ಇದನ್ನು ಬೇರೆ ಉದ್ದೇಶಕ್ಕೆ ಬಳಸದಿರುವಂತೆ ನೋಡಿಕೊಳ್ಳಲು ದೇಶಗಳು ಬದ್ಧವಾಗಿರಬೇಕು ಎಂದು ಐಎಇಎ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಬರದೈ ಇಲ್ಲಿ ತಿಳಿಸಿದ್ದಾರೆ.
‘ಪರಮಾಣು ಶಕ್ತಿ ಶಾಂತಿಯುತ ಬಳಕೆ’ ವಿಷಯ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಅಣ್ವಸ್ತ್ರಗಳನ್ನು ವರ್ಜಿಸಬೇಕೆಂದು ಭಾರತವು 1988ರಲ್ಲಿ ಕರೆ ನೀಡಿದ್ದನ್ನು ಉಲ್ಲೇಖಿಸುತ್ತಾ, ‘ಭಾರತದ ಈ ಕಾಳಜಿಯು ಮುಂದುವರೆಯುತ್ತದೆ ಎಂಬ ನಂಬಿಕೆ ಇದೆ’ ಎಂದರು.
ಭಾರತವು ವಿಕಿರಣಗಳು, ವೈದ್ಯಕೀಯ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಪರಮಾಣು ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಇತರ ದೇಶಗಳಿಗೆ ಮಾದರಿಯಾಗಿದೆ.
ಐಎಇಎ ಜತೆ ಭಾರತದ ಸಹಕಾರ ಹೆಚ್ಚಲಿದೆ. ಅದರಲ್ಲೂ ವಿಶೇಷವಾಗಿ ಹಳೆಯದಾದ ಪರಮಾಣು ರಿಯಾಕ್ಟರ್‌ಗಳನ್ನು ವರ್ಜಿಸಿ ಅವುಗಳನ್ನು ಪುನರ್‌ನವೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಈ ಸಹಕಾರ ಮುಂದುವರೆಯಲಿದೆ ಎಂದರು.
ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, ದೇಶದ ಪರಮಾಣು ಕಾರ್ಯಕ್ರಮಗಳ ವಿಜ್ಞಾನಿ ಹೋಮಿಬಾಬಾ ನೆನಪಿನ ನಾಣ್ಯಗಳನ್ನು ಬಿಡುಗಡೆ ಮಾಡಿದರು.
ಜಾಗತಿಕ ಪರಮಾಣು ವಹಿವಾಟಿನಲ್ಲಿ ಮರುಪ್ರವೇಶ ಮಾಡಿದ ಬಳಿಕ ಭಾರತವು ಈ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಲು ಉದ್ದೇಶಿಸಿದೆ ಎಂದು ಪರಮಾಣು ಇಂಧನ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಹೇಳಿದರು.