ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ 31 ಸಚಿವರು ಶಿಬಿರದಲ್ಲಿ ಪಾಲ್ಗೊಂಡಿದ್ದು ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದೆ. ಉಳಿದ ಮೂವರು ಸಚಿವರು ಕೂಡ ಸಂಜೆಯ ವೇಳೆಗೆ ಸುತ್ತೂರಿಗೆ ಆಗಮಿಸುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಯಡಿಯೂರಪ್ಪ ಶಿಬಿರವನ್ನು ಉದ್ಘಾಟಿಸಿದರು. ನಂತರ ಮೊದಲ ಗೋಷ್ಠಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ‘ಉತ್ತಮ ಆಡಳಿತದ ಸೂತ್ರಗಳು’ ಎಂಬ ವಿಷಯ ಕುರಿತು ಸಚಿವರಿಗೆ ಪಾಠ ಮಾಡಿದರು.
ಸಚಿವರಲ್ಲದೆ ಇತರ ಯಾವುದೇ ವ್ಯಕ್ತಿಗಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಸುತ್ತೂರಿನ ಉಚಿತ ಶಾಲಾ ಕಟ್ಟಡದ ಎರಡನೇ ಮಹಡಿಯಲ್ಲಿನ ಸಭಾಂಗಣದಲ್ಲಿ ಶಿಬಿರ ನಡೆಯುತ್ತಿದ್ದು ಉದ್ಘಾಟನೆ ಸಹಿತ ಯಾವುದೇ ಕಾರ್ಯಕ್ರಮಗಳಿಗೆ ಮಾಧ್ಯಮದವರಿಗೂ ಪ್ರವೇಶವಿಲ್ಲ.
ಶಿಬಿರದ ಉದ್ಘಾಟನೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡ ಸಚಿವರಿಗೆ ಬೇರೆ ಬೇರೆ ವಿಷಯಗಳಲ್ಲಿ ಮಾರ್ಗದರ್ಶನ ನೀಡಲು ಶಿಬಿರ ನಡೆಸಲಾಗುತ್ತಿದೆ ಎಂದರು.
ಕಳೆದ 16 ತಿಂಗಳಿನಲ್ಲಿ ಸಚಿವರು ತಮ್ಮ ಇಲಾಖೆಯಲ್ಲಿ ಮಾಡಿರುವ ಸಾಧನೆ ಹಾಗೂ ಕೊರತೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಯಾವುದಾದರೂ ಕೊರತೆಗಳು ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವರಿಗೆ ಮಾರ್ಗದರ್ಶನ ಮಾಡಲಾಗುವುದು ಎಂದರು.
ಭ್ರಷ್ಟಾಚಾರ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಮುಕ್ತ ಚರ್ಚೆ ನಡೆಯಲಿದೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತವನ್ನು ನೀಡುತ್ತಿದ್ದು ಇನ್ನೂ ಯಶಸ್ವಿ ಆಡಳಿತ ನೀಡುವುದರ ಬಗ್ಗೆ ಚರ್ಚೆ ನಡೆಸಲಾಗುವುದು. ಬಿಚ್ಚು ಮನಸ್ಸಿನಿಂದ ಸಂವಾದ ನಡೆಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರಕ್ಕೆ ನರೇಂದ್ರ ಮೋದಿ ಅವರೇ ಮಾದರಿಯೇ ಎಂದು ಕೇಳಿದ್ದಕ್ಕೆ ‘ಹೌದು, ಅಭಿವೃದ್ಧಿಯ ದೃಷ್ಟಿಯಲ್ಲಿ ಅವರೇ ಮಾದರಿ’ ಎಂದು ಉತ್ತರಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಶಿಬಿರ ನಡೆಸುತ್ತಿರುವುದರ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಕೇಳಿದ್ದಕ್ಕೆ ‘ಅವರೂ ಕೂಡ ಇಂತಹ ಕ್ಷೇತ್ರದಲ್ಲಿ ಶಿಬಿರ ನಡೆಸಲಿ’ ಎಂದು ಸಲಹೆ ಮಾಡಿದರು.
ಜನರಲ್ಲಿ ಕೋಮುಭಾವನೆಯನ್ನು ಬಿತ್ತಲು ಶಿಬಿರ ನಡೆಸಲಾಗುತ್ತಿದೆ ಎಂಬ ಜೆಡಿಎಸ್ ಆರೋಪಕ್ಕೆ ನೇರ ಉತ್ತರ ನೀಡಲು ನಿರಾಕರಿಸಿದ ಅವರು ‘ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆಗಳು ನಡೆದಾಗ ಅದನ್ನು ತಕ್ಷಣದಲ್ಲಿಯೇ ಬಿಜೆಪಿ ಸರ್ಕಾರ ಹತ್ತಿಕ್ಕಿದೆ’ ಎಂದರು.
ಸಚಿವರ ಗೈರು: ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ತೋಟಗಾರಿಕೆ ಮತ್ತು ಬಂದೀಖಾನೆ ಸಚಿವ ಉಮೇಶ್ ಕತ್ತಿ, ಗ್ರಂಥಾಲಯ ಸಚಿವ ಶಿವನಗೌಡ ನಾಯಕ್ ಶಿಬಿರಕ್ಕೆ ಮಂಗಳವಾರ ಗೈರು ಹಾಜರಾಗಿದ್ದರು. ಈಶ್ವರಪ್ಪ ಸಂಬಂಧಿಯೊಬ್ಬರಿಗೆ ಅಪಘಾತವಾಗಿದ್ದರಿಂದ ಬಂದಿಲ್ಲ. ಉಮೇಶ್ ಕತ್ತಿ ಅವರ ತಾಯಿ ನಿಧನರಾಗಿದ್ದರಿಂದ ಬರುತ್ತಿಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಶಿವನಗೌಡ ನಾಯಕ್ ಇಂದು ಬಂದಿಲ್ಲ. ನಾಳೆ ಎಲ್ಲ ಸಚಿವರೂ ಹಾಜರಿರುತ್ತಾರೆಂದು ಸದಾನಂದಗೌಡ ತಿಳಿಸಿದರು.
ಶಿಬಿರದಲ್ಲಿ ಒಟ್ಟು 12 ಗೋಷ್ಠಿಗಳು ನಡೆಯಲಿದ್ದು ಮೊದಲ ಗೋಷ್ಠಿಯಲ್ಲಿ ‘ಉತ್ತಮ ಆಡಳಿತದ ಸೂತ್ರಗಳು’ ಕುರಿತಂತೆ ನರೇಂದ್ರ ಮೋದಿ ಪಾಠ ಮಾಡಿದರು. ಮೋದಿ ಪಾಠ ಉತ್ತಮವಾಗಿತ್ತು ಎಂದು ಸಚಿವರಾದ ಅರವಿಂದ ಲಿಂಬಾವಳಿ, ಶ್ರೀರಾಮುಲು ಮುಂತಾದವರು ತಿಳಿಸಿದರು. ಎರಡನೇ ಗೋಷ್ಠಿಯನ್ನೂ ನರೇಂದ್ರ ಮೋದಿ ಅವರೇ ಮುನ್ನೆಡಿಸಿದರು.
‘ವಿಕಾಸದ ಹೆಜ್ಜೆಗಳು’ ಕುರಿತಂತೆ ಮಾತನಾಡಿದ ಅವರು ಸಚಿವರೊಂದಿಗೆ ಮುಕ್ತ ಸಂವಾದ ನಡೆಸಿದರು.