ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಮಾಂತ್ರಿಕಳ ರೆಸಿಪಿ ಪುಸ್ತಕ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಅಡುಗೆ ರುಚಿ ಚಪ್ಪರಿಸುವುದಷ್ಟೇ ಅಲ್ಲ , ಅದನ್ನು ಸವಿಸವಿಯಾಗಿ ತಯಾರಿಸಿ ಇನ್ನೊಬ್ಬರಿಗೆ ಉಣಬಡಿಸುವುದರಲ್ಲಿಯೂ ಖುಷಿ ಕಂಡವರು ಶೆಫ್‌ ಶಾಜಿಯಾ ಖಾನ್‌. ಅಜ್ಜಿ, ಅಮ್ಮ ಮಾಡಿದ ಅಡುಗೆ ಸವಿಯುತ್ತಾ ತಾನೂ ಹೊಸ ಹೊಸ ರೆಸಿಪಿಗಳನ್ನು ಪ್ರಯೋಗಿಸುತ್ತಾ ಅಡುಗೆ ಕ್ಷೇತ್ರದಲ್ಲಿ ಅವರು ಮನೆಮಾತಾಗಿದ್ದಾರೆ.

‘ಮಾಸ್ಟರ್‌ ಶೆಫ್‌ ಸೀಸನ್‌–2’ದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಡುಗೆ ಜಗತ್ತಿಗೆ ತರೆದುಕೊಂಡ ಅವರು ಇದೀಗ ‘ವಾಟ್ಸ್‌ ಆನ್‌ ದಿ ಮೆನು’ ಎನ್ನುವ ಪುಸ್ತಕ ಬರೆದಿದ್ದಾರೆ. ಆ ಮೂಲಕ ನೂರಾರು ರೆಸಿಪಿಗಳನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ವಾಟ್ಸ್‌ ಆನ್‌ ದಿ ಮೆನು...
‘ಮಾಸ್ಟರ್‌ ಶೆಫ್‌ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪುಸ್ತಕ ಬರೆಯುವ ಕನಸು ಕಂಡೆ. ಕೆಲಸದ ಒತ್ತಡದಲ್ಲಿ ಅದು ಸಾಧ್ಯವಾಗಿರಲಿಲ್ಲ. ಆರು ತಿಂಗಳ ನಿರಂತರ ಪ್ರಯತ್ನದಿಂದ ಪುಸ್ತಕ ಹೊರತಂದಿದ್ದೇನೆ. ನಾನು ಮಾಡುವ ಅಡುಗೆ ಎಲ್ಲರಿಗೂ ರುಚಿಸುತ್ತದೆ, ನನಗೂ ಸಾಕಷ್ಟು ರೆಸಿಪಿಗಳು ಗೊತ್ತು. ಹೀಗಾಗಿ ಥಟ್ಟನೆ ಪುಸ್ತಕ ಬರೆದುಬಿಡಬಹುದು ಎಂದುಕೊಂಡಿದ್ದೆ. ಬರೆಯಲು ಪ್ರಾರಂಭಿಸಿದ ಮೇಲೆಯೇ ಬರವಣಿಗೆ ಎಷ್ಟು ಕಷ್ಟ ಎಂದು ಅರಿವಾದದ್ದು.

ಅಂತರರಾಷ್ಟ್ರೀಯ ಖ್ಯಾತಿಯ ಸುಮಾರು 100ಕ್ಕೂ ಹೆಚ್ಚು ರೆಸಿಪಿಗಳ ಬಗ್ಗೆ, ಅವುಗಳನ್ನು ಮಾಡುವ ವಿಧಾನಗಳ ಬಗ್ಗೆ ಈ ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಎಲ್ಲಕ್ಕೂ ಮುಖ್ಯವಾಗಿ ಪ್ರತಿ ರೆಸಿಪಿಯ ಸುಂದರವಾದ ಚಿತ್ರಗಳೂ ಪುಸ್ತಕದಲ್ಲಿವೆ. ನನ್ನ ಅಜ್ಜಿ, ಅಮ್ಮ ಮುಂತಾದವರು ಮಾಡುವ ಸಾಂಪ್ರದಾಯಿಕ ಅಡುಗೆ, ನನ್ನ ಸಿಗ್ನೇಚರ್‌ ಅಡುಗೆ, ಪ್ರಯೋಗಗಳ ಮೂಲಕ ಮಾಡಿದ ಹೊಸರುಚಿಯ ರೆಸಿಪಿಗಳ ಮಾಹಿತಿ ಇಲ್ಲಿವೆ.

ಗೃಹಿಣಿ ಇರಲಿ ಅಥವಾ ವೃತ್ತಿಪರ ಬಾಣಸಿಗರೇ ಇರಲಿ, ಈ ಪುಸ್ತಕ ತೆರೆದರೆ ಅವರಿಗೆ ಸಂಪೂರ್ಣ ಮಾಹಿತಿ ಸಿಗಬೇಕು ಎಂಬ ಮುಂಜಾಗರೂಕತೆಯಿಂದ ಬರೆದಿದ್ದೇನೆ. ಸುಲಭವಾಗಿ ಸಿಗಬಹುದಾದ ಇನ್‌ಗ್ರೇಡಿಯೆಂಟ್ಸ್‌ ಯಾವುವು ಎಂಬುದನ್ನೂ ಗಮನದಲ್ಲಿಟ್ಟುಕೊಂಡು ಮಾಹಿತಿ ನೀಡಿದ್ದೇನೆ.

ಅಡುಗೆ ಬಗ್ಗೆ ನನಗಿರುವ ಪ್ರೀತಿ ಹಾಗೂ ರೆಸಿಪಿಗಳ ಮೂಲಕ ನನ್ನ ಬದುಕಿನ ಕಥಾನಕವನ್ನೂ ಜನರ ಮುಂದಿಡುವ ಪ್ರಯತ್ನ ಇದು. ದೆಹಲಿಯ ಓಂ ಪಬ್ಲಿಕೇಶನ್‌, ಆಹಾರ ಛಾಯಾಗ್ರಾಹಕಿ ಸೈನಾ ಜಯಪಾಲ್‌, ಫುಡ್‌ ಸ್ಟೈಲಿಸ್ಟ್‌ ಫಾರುಕ್‌  ಮುಂತಾದವರು ಪುಸ್ತಕ ರಚನೆಯಲ್ಲಿ ಸಹಕರಿಸಿದ್ದಾರೆ.
ಅಂದಹಾಗೆ ಮುಸ್ಲಿಂ ವಿಶೇಷ ಭೋಜನಕ್ಕೆ ಸಂಬಂಧಿಸಿದ ಪುಸ್ತಕ ರಚನೆಯನ್ನೂ ಮಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಎಲ್ಲಾ ಬಗೆಯ ಮುಸ್ಲಿಂ ಪ್ರಿಯ ರೆಸಿಪಿಗಳು ಈ ಸಂಶೋಧನಾತ್ಮಕ ಪುಸ್ತಕದಲ್ಲಿ ಇರುತ್ತವೆ.

ಶೆಫ್‌ಗಳ ಬರವಣಿಗೆ ನಡೆ...
ಇತ್ತೀಚೆಗೆ ಅನೇಕ ಶೆಫ್‌ಗಳು ಲೇಖಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಪುಸ್ತಕ ರಚಿಸುವುದು ಅವರ ಮುಖ್ಯ ಆದ್ಯತೆಯಾಗುತ್ತಿರುವುದು ನಿಜ. ಪುಸ್ತಕ ರಚನೆ ಸಾಧನೆಯ ನೆನಪನ್ನು ಚಿರವಾಗಿಸುತ್ತದೆ ಎಂಬುದೇ ಅನೇಕರು ಬರವಣಿಗೆ ದಾರಿಯನ್ನು ಹಿಡಿಯುತ್ತಿರುವುದಕ್ಕೆ ಕಾರಣ. ಎಲ್ಲ ಬಗೆಯ ತಿನಿಸುಗಳ ಕುರಿತಾಗಿ ಅಂತರ್ಜಾಲದಲ್ಲಿ ಮಾಹಿತಿ ಪಡೆಯಬಹುದು. ಆದರೆ ಪುಸ್ತಕ ಮನಸು ಬಯಸಿದಾಗಲೆಲ್ಲಾ ತೆರೆದುಕೊಳ್ಳುವ ಸುಲಭ ಮಾಧ್ಯಮ. ಶೆಫ್‌ಗಳು ಎಷ್ಟೇ ಟೀವಿ ಕಾರ್ಯಕ್ರಮಗಳನ್ನು ಮಾಡಿ, ಅಂತರ್ಜಾಲದಲ್ಲಿ ಮಾಹಿತಿ ನೀಡಿದರೂ ಆಹಾರ ಪ್ರಿಯರಿಗೆ ಹೆಚ್ಉ ಹೆಚ್ಚು ಹತ್ತಿರವಾಗುವುದು ಅವರು ಬರೆದ ಪುಸ್ತಕವೇ.

ದೇಶ ಸುತ್ತುವುದರಲ್ಲೂ ಪ್ರೀತಿ ಬೆಳೆಸಿಕೊಂಡಿರುವ ನಾನು ಎಲ್ಲೇ ಹೋದರೂ ಅಡುಗೆಗೆ ಸಂಬಂಧಿಸಿದ ಒಂದಿಷ್ಟು ಪುಸ್ತಕಗಳನ್ನು ಹೊತ್ತು ತರುತ್ತೇನೆ. ಆ ರೆಸಿಪಿಗಳನ್ನು ಪ್ರಯತ್ನಿಸುವುದು, ಅದರಲ್ಲಿಯೇ ಹೊಸ ಪ್ರಯೋಗಗಳನ್ನು ಮಾಡುವ ನನ್ನಲ್ಲಿ ಅಡುಗೆ ಪುಸ್ತಕಗಳ ಭಂಡಾರವೇ ಇದೆ.

ದೇವರು ಕೊಟ್ಟ ವರ
ವಿವಿಧ ಕೆಲಸಗಳನ್ನು ಏಕಕಾಲಕ್ಕೆ ನಿಭಾಯಿಸುವ ಶಕ್ತಿಯನ್ನು ದೇವರು ಮಹಿಳೆಯರಿಗೆ ನೀಡಿದ್ದಾನೆ. ಪದವಿ ಮುಗಿಯುತ್ತಿದ್ದಂತೆ ಮದುವೆಯ ಬಂಧಕ್ಕೆ ಬಿದ್ದ ನಾನು ಕೌಟುಂಬಿಕ ಬ್ಯುಸಿನೆಸ್‌ ಆದ ಶಿಕ್ಷಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದೇನೆ. ಹೊಸ ಹೊಸ ರೆಸಿಪಿ ಪ್ರಯೋಗಿಸುವುದು, ಟೀವಿ ಷೋ ನಡೆಸಿಕೊಡುವುದು, ಕಾರ್ಯಾಗಾರ, ಪ್ರಾತ್ಯಕ್ಷಿಕೆ ನಡೆಸಿಕೊಡುವುದರಲ್ಲಿ ಸದಾ ಬ್ಯುಸಿ ಆಗಿರುತ್ತೇನೆ. ಆದರೆ ಈ ಬಗ್ಗೆ ನನಗೆ ಪ್ಯಾಷನ್‌ ಇರುವುದರಿಂದ ನಿಭಾಯಿಸುವುದು ಕಷ್ಟವಾಗಿಲ್ಲ.

ಪ್ರತಿ ಮಹಿಳೆಗೂ ಅವರದ್ದೇ ಆದ ವಿಶೇಷ ಆಸಕ್ತಿ ಹಾಗೂ ಪ್ರತಿಭೆ ಇರುತ್ತದೆ. ಹೀಗಾಗಿ ಎಲ್ಲರೂ ಹಣಕ್ಕಾಗಿ ಅಲ್ಲ, ಇನ್ನೊಬ್ಬರ ಸಂತೋಷಕ್ಕಾಗಿ ಅಲ್ಲ, ಮನಸ್ಸಿನ ತೃಪ್ತಿಗಾಗಿ ತಮ್ಮಿಷ್ಟದ ಕೆಲಸದಲ್ಲಿ ನಿರಂತರವಾಗಿ ಖುಷಿಯಿಂದ ತೊಡಗಿಕೊಳ್ಳಬೇಕು ಎನ್ನುವುದು ನನ್ನ ಅನುಭವ.

ಏನೇ ಮಾಡಲಿ ಅದನ್ನು ನಿಷ್ಠೆಯಿಂದ ಚೆನ್ನಾಗಿ ಮಾಡಬಲ್ಲವರು ಮಹಿಳೆಯರೇ. ಬಾಣಸಿಗ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಮನೆಮಂದಿಗೇ ಆಗಲಿ ಅಥವಾ ಯಾರಿಗೇ ಅಡುಗೆ ಮಾಡಿದರೂ ಆಕೆ ತುಂಬ ಪ್ರೀತಿಯಿಂದ ಕಷ್ಟಪಟ್ಟು ರುಚಿರುಚಿಯಾದ ಅಡುಗೆ ಮಾಡುತ್ತಾಳೆ. ಅಮ್ಮ ಮಾಡಿದ ಅಡುಗೆಯೇ ಈ ಪ್ರಪಂಚದಲ್ಲಿ ಉತ್ತಮ ಅಡುಗೆ. ಆದರೆ ಇತ್ತೀಚೆಗೆ ಬಾಣಸಿಗ ಕ್ಷೇತ್ರದಲ್ಲಿ ಪುರುಷ ಪಾರಮ್ಯವಿದೆ. ಹೆಚ್ಚೆ ಹೆಚ್ಚು ದೈಹಿಕ ಶ್ರಮ ಹಾಗೂ ಸಮಯವನ್ನು ಬೇಡುವ ಕ್ಷೇತ್ರ ಇದಾಗಿರುವುದರಿಂದ ಪುರುಷರೇ ಇಲ್ಲಿ ಸಲ್ಲುತ್ತಿದ್ದಾರೆ. ಆದರೆ ಈಗ ಮತ್ತೆ ಮಹಿಳೆಯರು ನಿಧಾನವಾಗಿ ಈ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸುತ್ತಿದ್ದಾರೆ.

ಅಡುಗೆ ಒಂದು ಸ್ಟೈಲಿಶ್‌ ಟ್ರೆಂಡ್‌
ಟೀವಿಯಲ್ಲಿ ಷೋಗಳು ಸ್ಥಾನ ಪಡೆದ ಮೇಲೆ ನಮ್ಮ ದೇಶದಲ್ಲಿ ಅಡುಗೆ ಮಾಡುವುದು ಒಂದು ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಇತ್ತೀಚೆಗೆ ಎಲ್ಲಾ ಬಗೆಯ ಆಹಾರ ನೀಡುವ ರೆಸ್ಟೊರೆಂಟ್‌ಗಳು ಹುಟ್ಟಿಕೊಂಡಿವೆ. ಜನರೂ ವಿವಿಧ ರೆಸಿಪಿಗಳನ್ನು ಮನೆಯಲ್ಲೇ ಮಾಡುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಆಹಾರಕ್ಕೆ ಸಂಬಂಧಿಸಿದ ಬ್ಲಾಗ್‌ಗಳು ಹೆಚ್ಚಿವೆ. ಮನೆಯಲ್ಲೇ ಬೇಕಿಂಗ್‌ ಸೆಂಟರ್‌ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಡುಗೆಗೆ ಸಂಬಂಧಿಸಿದ ಸ್ಪರ್ಧೆಗಳೂ ಹೆಚ್ಚುತ್ತಿವೆ.

ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಬಾಣಸಿಗ ಕ್ಷೇತ್ರ ಇಂದು ವೃತ್ತಿ ಬದುಕಿನಲ್ಲೂ ಅತ್ಯಂತ ಮುಖ್ಯವಾಗುತ್ತಿದೆ.  ಅಲ್ಲದೆ ಪ್ರಾದೇಶಿಕ ತಿಂಡಿಗಳ ಬಗ್ಗೆ ಅನೇಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.  ಹೀಗಾಗಿಯೇ ರೆಸ್ಟೊರೆಂಟ್‌ಗಳಲ್ಲೂ ವಿವಿಧ ಬಗೆಯ ಹೊಸ ಹೊಸ ಆಹಾರಗಳನ್ನು ಜನರಿಗೆ ಪರಿಚಯಿಸುವ ಬಗ್ಗೆ ಶೆಫ್‌ಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಹೊಸ ಅಧ್ಯಾಯದ  ಫುಡ್‌ ಫೋಟೊಗ್ರಫಿ
ಆಹಾರ ಛಾಯಾಚಿತ್ರವೂ ಈ ಕ್ಷೇತ್ರ ಜನಪ್ರಿಯಗೊಳ್ಳುವುದರಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸಿದೆ. ಏನೇ ಇರಲಿ ಮೊದಲು ಕಣ್ಣಿಗೆ ಅದು ರುಚಿಸಬೇಕು. ಕಣ್ಣು ಇಷ್ಟಪಟ್ಟದ್ದನ್ನು ಮನಸ್ಸು ಆಸ್ವಾದಿಸುವಂತೆ ಪ್ರೇರೇಪಿಸುತ್ತದೆ.  ಹೀಗಾಗಿ ಇಂದು ಫುಡ್‌ ಫೋಟೊಗ್ರಫಿಗೆ ಮೊದಲ ಆದ್ಯತೆ.

ಬೆಂಗಳೂರಿನಲ್ಲಿರುವಷ್ಟು ಆಹಾರ ಪ್ರಿಯರು ಬೇರೆಲ್ಲೂ ಸಿಗಲಾರರು. ಭಾರತೀಯ ಆಹಾರಕ್ಕೂ ಅಷ್ಟೇ; ಎಲ್ಲಾ ದೇಶದಲ್ಲೂ ಎಲ್ಲ ಕಾಲದಲ್ಲೂ ಬೇಡಿಕೆ ಇದೆ. ಆದರೆ ಅಲ್ಲಿಯ ಜನರ ಇಷ್ಟಗಳಿಗೆ ತಕ್ಕಂತೆ ತುಸು ಬದಲಾವಣೆ ಮಾಡಿಕೊಳ್ಳುತ್ತಾರೆ. ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದು ಆಹಾರ. ಹೀಗಾಗಿ ಬೇಡಿಕೆಯ ಉತ್ತುಂಗದಲ್ಲಿ ಈ ಕ್ಷೇತ್ರ ಎಂದಿಗೂ ಮೆರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT