ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಔಷಧ ನಿಷೇಧ ಸರಿ

ಮಾಹಿತಿ ಜನಸಾಮಾನ್ಯರಿಗೂ ತಿಳಿಯಲಿ: ತಜ್ಞರು
Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರವೇನೋ ಇದ್ದಕ್ಕಿದ್ದಂತೆ ಕೆಲ ಔಷಧಗಳನ್ನು ನಿಷೇಧಿಸಿರುವುದಾಗಿ ಪ್ರಕಟಿಸುತ್ತದೆ. ಆದರೆ ಈ ಬಗ್ಗೆ  ಮಾಹಿತಿ ಮಾತ್ರ ತಕ್ಷಣಕ್ಕೆ ದೊರೆಯುವುದಿಲ್ಲ. ಇದರಿಂದ ನಿಷೇಧಿತ  ಔಷಧಗಳು ಮಾರಾಟವಾಗುತ್ತಲೇ ಇರುತ್ತವೆ ಎಂಬ ಆತಂಕವನ್ನು ಹಲವು ವೈದ್ಯರು ವ್ಯಕ್ತಪಡಿಸುತ್ತಾರೆ.

ನಿಷೇಧಿತ ಔಷಧಗಳ ಬಗ್ಗೆ  ರೋಗಿಗಳು, ವೈದ್ಯರು ಮತ್ತು ಔಷಧ ಮಾರಾಟಗಾರರಿಗೆ ಅರಿವು ಅಗತ್ಯ ಎನ್ನುತ್ತಾರೆ ತಜ್ಞ ವೈದ್ಯರು.
‘ಕ್ಲಿನಿಕಲ್‌ ಟ್ರಯಲ್‌ನಿಂದ ಹಿಡಿದು ಮಾರಾಟದವರೆಗೆ ಭಾರತದಲ್ಲಿನ ವ್ಯವಸ್ಥೆ ಮುಂದುವರಿದ ದೇಶಗಳಿಗಿಂತ ವಿಭಿನ್ನ. ನಮ್ಮಲ್ಲಿ ಎಲ್ಲವೂ ಲಿಬರಲ್‌. ಯಾರು ಹೇಗೆ ಔಷಧ ತಯಾರಿಸುತ್ತಾರೆ? ಯಾವ ಸಂಯೋಜನೆಗಳನ್ನು ಬಳಸುತ್ತಾರೆ ಎಂಬ ಬಗ್ಗೆ ತಿಳಿಯುವುದೇ ಇಲ್ಲ’ ಎನ್ನುತ್ತಾರೆ ಬೆಂಗಳೂರಿನ ಸಾಕ್ರ ವರ್ಲ್ಡ್‌ ಹಾಸ್ಪಿಟಲ್‌ನ  ಹೃದಯ ಶಸ್ತ್ರಚಿಕಿತ್ಸಕ ಡಾ. ಆದಿಲ್ ಸಾಧಿಕ್‌.

‘ನಮ್ಮ ದೇಶದಲ್ಲಿ ಕಡಿಮೆ ವೆಚ್ಚಕ್ಕೆ ಎಲ್ಲವೂ ಸಿಗಬೇಕು. ಅದು ಔಷಧವಾಗಿರಬಹುದು, ತರಕಾರಿಯಾಗಿರಬಹುದು. ಅಮೂಲ್ಯವಾದ ಮನುಷ್ಯನ ಆರೋಗ್ಯ ಕಾಪಾಡುವ ಕಡಿಮೆ ದರ್ಜೆ ಔಷಧವನ್ನು ಹತ್ತಾರು ವರ್ಷ ತಿಂದರೆ ಅದರಿಂದ ದೇಹಕ್ಕೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ನಿಷೇಧಿತ ಔಷಧಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು’ ಎನ್ನುತ್ತಾರೆ ಇವರು.

‘ಆಗಾಗ ಆರೋಗ್ಯ ಸಚಿವಾಲಯ ನಿಷೇಧಿತ ಔಷಧಗಳ ಪಟ್ಟಿ ಪ್ರಕಟಿಸುತ್ತದೆ.  ಅದರರ್ಥ ಈ ಎಲ್ಲ ಔಷಧಗಳ ಬಗ್ಗೆ ಸರಿಯಾದ ಸಂಶೋಧನೆ, ಪ್ರಯೋಗ ಆಗಿರುವುದೇ ಇಲ್ಲ. ವಾಮಮಾರ್ಗದ ಮೂಲಕ ಮಾರುಕಟ್ಟೆಗೆ ಬರುವ ಔಷಧಗಳಿಂದ ಮನುಷ್ಯರ ಜೀವಕ್ಕೆ ಎರವಾಗುತ್ತದೆ. ಸರ್ಕಾರ ನಿಷೇಧ ಹೇರಿ ಔಷಧಗಳನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದರೆ ಒಳ್ಳೆಯದು. ಜೀವ ಕಾಪಾಡುವ ಔಷಧಗಳೇ ಪ್ರಾಣಕ್ಕೆ ಕುತ್ತು ತರಬಾರದು’ ಎಂಬ ಅಭಿಪ್ರಾಯ ಇವರದು.

ಮಾಹಿತಿ ನೀಡಬೇಕು: ‘ನಿಷೇಧಿತ ಔಷಧ ಗಳನ್ನು ಮಾರುಕಟ್ಟೆಯಿಂದ ರಾತ್ರೋರಾತ್ರಿ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ಇದೆಲ್ಲ ತಿಳಿಯುವುದೂ ಇಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಮಾಧ್ಯಮಗಳು ಯಾವ ಔಷಧಗಳು ನಿಷೇಧಕ್ಕೊಳಗಾಗಿವೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ವೈದ್ಯರೂ ತಿಳಿದುಕೊಂಡು ಅವುಗಳನ್ನು ಬರೆದುಕೊಡಬಾರದು’ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಸುಧೀಂದ್ರ.

‘ನಿಷೇಧಿತ ಔಷಧಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯಾರೂ ಹಮ್ಮಿಕೊಳ್ಳುವುದಿಲ್ಲ. ಹಳ್ಳಿಯ ಜನ ಕಾಯಿಲೆ ವಾಸಿಯಾದರೆ ಸಾಕು ಎಂಬ ಅವಸರದಲ್ಲಿ ಯಾವ ಔಷಧ ಬರೆದುಕೊಟ್ಟರೂ ತೆಗೆದುಕೊಳ್ಳುತ್ತಾರೆ. ಆದರೆ ಸ್ವತಃ ವೈದ್ಯರಿಗೆ ಮಾಹಿತಿ ಇರಬೇಕು’ ಎನ್ನುತ್ತಾರೆ ಇವರು.

‘ವೈದ್ಯರ ಸಲಹೆ ಚೀಟಿ ಇಲ್ಲವೇ ಮೆಡಿಕಲ್‌ ಶಾಪ್‌ಗಳಲ್ಲಿ ಔಷಧಗಳನ್ನು ತೆಗೆದುಕೊಳ್ಳುವ ಪ್ರವೃತ್ತಿ ನಿಲ್ಲಬೇಕು. ಅನಧಿಕೃತ ಔಷಧಗಳನ್ನು ಲಾಭಕ್ಕಾಗಿ ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟವಾಗುವುದು ತಿಳಿದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಬೆಂಗಳೂರಿನ ಅಪೊಲೊ ಆಸ್ಪತ್ರೆಯ ತುರ್ತು ನಿಗಾ ಘಟಕದ ವೈದ್ಯ ಡಾ. ಹರೀಶ್‌ ನಾಯಕ್‌.

‘ಯಾವ ಔಷಧ ಅಪಾಯಕಾರಿ. ಯಾವುದು ಅಲ್ಲ ಎಂಬ ಬಗ್ಗೆ ಔಷಧ ಮಾರಾಟಗಾರರು ತಿಳಿದಿರಬೇಕು’ಎನ್ನುತ್ತಾರೆ ಇವರು. ‘ತಪ್ಪು ತಪ್ಪು ಸಂಯೋಜನೆ ಔಷಧಗಳನ್ನು ನಿಷೇಧ ಮಾಡುವ ಸರ್ಕಾರದ ತೀರ್ಮಾನ ಸರಿ’ಎನ್ನುತ್ತಾರೆ ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಯ ಸಮುದಾಯ ವೈದ್ಯಕೀಯ ಕೇಂದ್ರದ ಡಾ.  ಚಿತ್ರಾ ನಾಗರಾಜ್‌.

ಕೋರೆಕ್ಸ್‌ ನಿಷೇಧಕ್ಕೆ ಕೋರ್ಟ್ ತಡೆ
ನವದೆಹಲಿ (ಪಿಟಿಐ):
ಫಿಜರ್‌ ಔಷಧ ಕಂಪೆನಿಯ ‘ಕೋರೆಕ್ಸ್‌’ ಕೆಮ್ಮಿನ ಔಷಧ ಮಾರಾಟ ನಿಷೇಧಿಸಿದ್ದ ಅಧಿಸೂಚನೆಗೆ ದೆಹಲಿ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಇದೇ ವೇಳೆ ಕಂಪೆನಿಯ ವಿರುದ್ಧ  ಯಾವುದೇ ಒತ್ತಾಯದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ದೇಶನ ನೀಡಿದೆ.

ಮುಂಬೈ ವರದಿ:  ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವವರ ವಿರುದ್ಧ  ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಆನ್‌ಲೈನ್‌ನಲ್ಲಿ ಔಷಧಗಳ ಮಾರಾಟಕ್ಕೆ ಸರ್ಕಾರವೇ ಅನುಮತಿ ನೀಡಿಲ್ಲ ಎಂದು ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗಿರೀಶ್‌  ಬಾಪಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT