ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆಯಿಂದ ಸಿಡಿದ ಕಿಡಿ

Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ರಾಮಾಯಣ, ಮಹಾಭಾರತವನ್ನು ದಲಿತರು, ಬಂಡಾಯದವರು, ವಿಚಾರವಾದಿಗಳು ಸೈದ್ಧಾಂತಿಕ ದೃಷ್ಟಿಯಿಂದ ನೋಡಬಾರದು ಎಂದು ‘ಪರ್ವ–ಭಾರತ’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಎಸ್‌.ಎಲ್‌. ಭೈರಪ್ಪ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಮಾರ್ಚ್‌ 7). ಈ ಎಡ ಪಂಥೀಯರ ಚಿಂತನೆ, ವೈಚಾರಿಕ ದೃಷ್ಟಿಯನ್ನು ಸಿದ್ಧಾಂತಗಳೆಂದು ಒಪ್ಪಿ ಅದನ್ನು ಅಲ್ಲಗಳೆದಿರುವ ಭೈರಪ್ಪನವರು, ‘ನಾನು ಯಾವುದೇ ಐಡಿಯಾಲಜಿ ಇಟ್ಟುಕೊಂಡು ಬರೆಯುವುದಿಲ್ಲ. ನಮ್ಮ ಪರಂಪರೆ, ಮೌಲ್ಯಗಳನ್ನು ಸ್ವೀಕರಿಸುತ್ತೇನೆ ಮತ್ತು ಅವುಗಳನ್ನು ವಿಶ್ಲೇಷಿಸುತ್ತೇನೆ’ ಎಂದಿದ್ದಾರೆ.

ಈ ಹೇಳಿಕೆಯನ್ನು ಹಿಂಜುತ್ತಾ ಹೋದರೆ ನಾವು ಕಾಣುವುದು ಪ್ರಾಚೀನ ವೈದಿಕಮತದ ಮುಖ್ಯ ಲಕ್ಷಣಗಳಾದ ವರ್ಣಾಶ್ರಮ– ಅವುಗಳಿಂದಾದ ಅಸಮತೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ, ಪ್ರಭುತ್ವ ಮತ್ತು ಪುರೋಹಿತಶಾಹಿ ಕೂಡಿ ಬೆಸೆದ ಅಸಂಖ್ಯಾತ ಕಂದಾಚಾರಗಳು ಮತ್ತು ಮೂಢನಂಬಿಕೆಗಳೇ ತಥಾಕಥಿತ ಭೈರಪ್ಪನವರು ಸ್ವೀಕರಿಸುತ್ತೇನೆಂದು ಹೇಳುವ ‘ಮೌಲ್ಯ–ಪರಂಪರೆಗಳು’.  ಇವೂ ಬಲಪಂಥೀಯ ವಿಚಾರಗಳಿಂದ ಕೂಡಿದ ಸೈದ್ಧಾಂತಿಕ ದೃಷ್ಟಿಕೋನವೇ. ತಮ್ಮ ಕೃತಿಗಳಲ್ಲಿ ಈ ಮೌಲ್ಯಗಳ ವಿಶ್ಲೇಷಣೆ ಯಾವ ವರ್ಗದ ಹಿತಾಸಕ್ತಿಗೆ ಪೂರಕವಾದ ಜಾಡು ಹಿಡಿಯುತ್ತದೆಂಬುದು ಇವರ ಕಾದಂಬರಿಗಳನ್ನು ಓದಿರುವ ಎಲ್ಲರಿಗೂ ಗೊತ್ತಿರುವ ವಿಷಯವೇ.

ರಾಮಾಯಣ, ಮಹಾಭಾರತಗಳು ನಮ್ಮ ದೇಶದ ಪ್ರಾಚೀನ ಕಾಲದ ಜನಜೀವನ, ಐತಿಹ್ಯಗಳನ್ನು ಒರೆಯುವ ಅಮೂಲ್ಯ ಗ್ರಂಥಗಳೆನ್ನುವ ಬಗ್ಗೆ ಎರಡು ಮಾತಿಲ್ಲ. ಯಾವ ಧಾರ್ಮಿಕ ಗ್ರಂಥವನ್ನಾಗಲಿ, ಪುರಾಣವನ್ನಾಗಲಿ ಕಾಲಾನುಕಾಲಕ್ಕೆ ಮರುಚಿಂತನೆಗೆ ಒಳಪಡಿಸಿ ಚಲನಶೀಲವನ್ನಾಗಿಸುವುದು, ಅದರ ಶಾಶ್ವತ ಇರುವಿಕೆಗೆ ಅವಶ್ಯಕ. ಏಕೆಂದರೆ ಇಂದು ನಮ್ಮ ಸಮಾಜವನ್ನು ಕಾಡುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳ ಮೂಲ ಬೇರು ಅಲ್ಲಿದೆ.  ಪ್ರಾಚೀನವಾದ ಈ ಪುರಾಣ ಗ್ರಂಥಗಳನ್ನು ಎಲ್ಲರೂ ಒಪ್ಪಿ ಸ್ವೀಕರಿಸಬೇಕಾದರೆ ಅವುಗಳಲ್ಲಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಮಾನವೀಯ ಮೌಲ್ಯ– ಸಿದ್ಧಾಂತಗಳಿರಬೇಕು. ಆಗಲೇ ಅವು ಜನರಿಗೆ ಉಪಯುಕ್ತವೂ ಮಾರ್ಗದರ್ಶಿಯೂ ಆಗಬಲ್ಲವು.

ಒಂದು ಕಡೆ ಕುಮಾರವ್ಯಾಸನ ಔಚಿತ್ಯ ಮೀರಿದ ಕೃಷ್ಣನ ವರ್ಣನೆಯನ್ನು ಟೀಕಿಸುತ್ತಾ, ಅವನಿಗಿಂತ ವೇದವ್ಯಾಸರೇ ವಾಸ್ತವವಾದಿ, ಅವನ ಭಾರತದ ಮೇಲಿನ ಅಸಮಾಧಾನದಿಂದಲೇ ‘ಪರ್ವ’ವನ್ನು ರಚಿಸಿದೆ ಎನ್ನುವ ಭೈರಪ್ಪ, ಪಂಪನೊಂದಿಗೆ ಕುಮಾರವ್ಯಾಸನನ್ನು ಹೋಲಿಸುತ್ತಾ, ‘ಪಂಡಿತರು ಪಂಪ ದೊಡ್ಡ ಕವಿ ಎನ್ನುತ್ತಾರೆ. ದೊಡ್ಡ ಪದಗಳನ್ನು ಹಾಕಿ ಪದ್ಯ ಬರೆದರೆ ದೊಡ್ಡ ಕವಿ ಎನಿಸಿಕೊಳ್ಳಲಾರ. ನನ್ನ ಪ್ರಕಾರ ಕುಮಾರವ್ಯಾಸನೇ ದೊಡ್ಡ ಕವಿ’ (ಕೃಷ್ಣನ ಕುರಿತ ಅವನ ಅತಿಯಾದ  ವರ್ಣನೆ– ಅವನ ಭಾರತದ ಬಗ್ಗೆ ಅಸಮಾಧಾನವಿದ್ದರೂ) ಎಂಬ ಅವರ ದ್ವಂದ್ವ ನಿಲುವು ಅರ್ಥವಿಲ್ಲದ್ದು. ಬಹುಶಃ  ಅವನು ಬ್ರಾಹ್ಮಣ ಜಾತಿಯನ್ನು ತೊರೆದು ಜೈನಮತವನ್ನು ಅವಲಂಬಿಸಿದ ಕಾರಣಕ್ಕಾಗಿಯೋ ಏನೋ. ‘ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪ
ನಾವಗಂ’ ಎಂಬ ಮಾತು ಇಂದಿಗೂ ಎಂದೆಂದಿಗೂ ನಿಜವಾಗಿರುವಾಗ ಅವನ ಪ್ರತಿಭೆ ಪಾಂಡಿತ್ಯದ ಬಗ್ಗೆ ಭೈರಪ್ಪನವರ ಟೀಕೆ ಅಸಹಿಷ್ಣುತೆಯ ಕುಲಮೆಯಿಂದ ಸಿಡಿದ ಕಿಡಿ ಎನ್ನದೆ ನಿರ್ವಾಹವಿಲ್ಲ.

ತನ್ನ ಭಾರತವನ್ನು ಕೃಷ್ಣ ಕಥೆ ಎನ್ನುವ ಕುಮಾರವ್ಯಾಸನ ಕೃಷ್ಣನ ಹೊಗಳಿಕೆಗೆ ಅಸಮಾಧಾನ ವ್ಯಕ್ತಪಡಿಸುವ ಭೈರಪ್ಪನವರು ನಮ್ಮ ದೇಶ ಉಳಿಯಬೇಕಾದರೆ ಆಗಾಗ್ಗೆ ಸುಳ್ಳು ಹೇಳುವ ಕೃಷ್ಣನಂಥ ರಾಜಕಾರಣಿಗಳು ಬೇಕು ಎಂದಿದ್ದಾರೆ. ನಮ್ಮ ದೇಶದ ರಾಜಕಾರಣದಲ್ಲಿ ಇಂಥ ಸುಳ್ಳು ಹೇಳುವ– ಜನರ ದಿಕ್ಕು ತಪ್ಪಿಸುವ ಕೃಷ್ಣನಂಥ ಚಾಣಾಕ್ಯ ರಾಜಕಾರಣಿಗಳೇ ತುಂಬಿರುವಾಗ ಹೊಸದಾಗಿ ಆಶಿಸುವಂಥ ಅಗತ್ಯ ಇಲ್ಲ. ವೈಯಕ್ತಿಕ ಹಿತಾಸಕ್ತಿ ಆಗಲಿ, ಇಷ್ಟಜನರನ್ನು ಅಧಿಕಾರಕ್ಕೇರಿಸುವ ಹಿತಾಸಕ್ತಿಯಾಗಲಿ ಎರಡೂ ಸ್ವಾರ್ಥ ಎನಿಸಿಕೊಳ್ಳುತ್ತವೆಯೇ ಹೊರತು ನಿರ್ಲಿಪ್ತತೆಯಾಗುವುದಿಲ್ಲ. ನಿರ್ಲಿಪ್ತನು ಎಂದರೆ, ಯಾರು ಗೆಲ್ಲಲಿ– ಸೋಲಲಿ ಯಾರ ಬಗ್ಗೆಯೂ ಆಸಕ್ತಿ ಇಲ್ಲದವನು ಎಂಬುದು. ಆದರೆ ಕೃಷ್ಣ ಪಾಂಡವರ ಪಕ್ಷಪಾತಿಯಾಗಿ, ಅವರ ಗೆಲುವಿಗಾಗಿ ಮೊದಲಿನಿಂದಲೂ ಕಡೇವರೆಗೂ ಹರಸಾಹಸ ಪಡುತ್ತಾನೆ.

ಭೈರಪ್ಪನವರು ಇದರ ಮಧ್ಯೆ ಇನ್ನೊಂದು  ಸಂಗತಿ ಉಲ್ಲೇಖಿಸಿದ್ದಾರೆ. ‘ಕನ್ನಡದಲ್ಲಿ ಸಾಹಿತಿಯೊಬ್ಬರು ನಾಟಕ ಬರೆದಿದ್ದಾರೆ. ಅದರಲ್ಲಿ ಸೀತೆಯ ಬಾಯಿಂದ ರಾವಣ ನಿಜವಾದ ಗಂಡಸು. ಈ ರಾಮನಿಂದ ನನಗೆ ಒಂದು ಮಗುವೂ ಜನಿಸಿಲ್ಲ ಎಂದು ಹೇಳಿಸುತ್ತಾರೆ’ ಎಂದಿದ್ದಾರೆ. ಈ ಸಂಗತಿಯನ್ನೊಳಗೊಂಡ ನಾಟಕವನ್ನು ಕನ್ನಡ ಕವಿ ಪ್ರಕಟಿಸಿದ್ದಾರೆಂದ ಮೇಲೆ, ಭೈರಪ್ಪನವರಿಗೆ ಅದನ್ನು ಬರೆದ ಕವಿ–ನಾಟಕದ ಹೆಸರು ಹೇಳಲು ಅಭ್ಯಂತರವೇನಿತ್ತು?
ಮತ್ತೊಂದು ಅದ್ಭುತ ಸಂಶೋಧನೆಯನ್ನು ವಸಂತ ಭಾರದ್ವಾಜ್‌  ಬಯಲುಗೊಳಿಸಿದ್ದಾರೆ. ಅವರ ಪ್ರಕಾರ ‘ಧೃತರಾಷ್ಟ್ರ– ಗಾಂಧಾರಿಯರಿಗೆ ಕೇವಲ 15 ಮಂದಿ ಮಕ್ಕಳು, ಉಳಿದವರೆಲ್ಲಾ ಶೂದ್ರ ಸ್ತ್ರೀಗೆ ಹುಟ್ಟಿದವರು. ಹಸ್ತಿನಾವತಿಯ ಅರಮನೆಯಲ್ಲಿ ಶೂದ್ರರೇ ಅಧಿಕ ಸಂಖ್ಯೆಯಲ್ಲಿದ್ದರು’. ಇದಕ್ಕೆ ಆಧಾರ ಯಾವುದೊ ಗೊತ್ತಿಲ್ಲ.  ಅರ್ಜುನನ ಮತ್ಸರ, ಬೇಡನಾದ ಏಕಲವ್ಯನಿಗೆ ವಿದ್ಯೆ ಹೇಳಿಕೊಡಲು ನಿರಾಕರಿಸಿದ ದ್ರೋಣನು ವಿಲನ್‌ ಆಗಿರುವುದು, ಏಕಲವ್ಯನ ಬಗ್ಗೆ ವ್ಯಕ್ತವಾಗುವ ಸಹಾನುಭೂತಿ ಇವೆಲ್ಲವುಗಳಿಂದ ಅವರಿಗೆ ಬೇಸರವಂತೆ. ಹೀಗೆ ಚಿತ್ರಿಸಿರುವುದರಿಂದ ಬ್ರಾಹ್ಮಣ ಕುಲವನ್ನು ದೂಷಿಸುವ ಪ್ರವೃತ್ತಿ ಬೆಳೆದಿದೆಯಂತೆ. ಅವರ ಬೇಸರಕ್ಕೆ ನಿಜವಾದ ಕಾರಣ ಇದೇ ಇರಬಹುದೇ?
-ಪ್ರೊ.ಎನ್‌.ವಿ. ಅಂಬಾಮಣಿ ಮೂರ್ತಿ,
ಬೆಂಗಳೂರು
*
ಕ್ರಿಯಾಶೀಲತೆಗೆ ಧಕ್ಕೆ
ರಾಮಾಯಣ ಮತ್ತು  ಮಹಾಭಾರತವನ್ನು ಸೈದ್ಧಾಂತಿಕ ದೃಷ್ಟಿಯಿಂದ ಓದಬಾರದು ಎಂದು  ಸಾಹಿತಿ ಎಸ್.ಎಲ್. ಭೈರಪ್ಪ ಸಲಹೆ ನೀಡಿದ್ದಾರೆ. ಕುಮಾರವ್ಯಾಸನ ಮೇಲೆ ‘ಅಸಮಾಧಾನ’ಗೊಂಡು ಮಹಾಭಾರತದ ಮೂಲದಲ್ಲಿರುವ ಪುರಾಣ ಮತ್ತು ಸಂಕೇತಗಳನ್ನು  ಪ್ರಜ್ಞಾಪೂರ್ವಕವಾಗಿ ವರ್ಜಿಸಿ ‘ಪರ್ವ’ ಎನ್ನುವ ರಿಯಲಿಸ್ಟಿಕ್ ಕಾದಂಬರಿಯನ್ನು ರಚಿಸಿದವರು ಅವರು. ಯಾವುದೇ ನಿರ್ದಿಷ್ಟ ರೀತಿಯಲ್ಲಿ ‘ಓದಿರಿ’ ಎನ್ನುವುದು ಇಲ್ಲವೇ  ‘ಓದಬೇಡಿರಿ’ ಎಂದು ಹೇಳುವುದು ಕ್ರಿಯಾಶೀಲತೆಯನ್ನು ಚಿವುಟಲು ಬಳಸಬಹುದಾದ ಮೊದಲ ಆಯುಧ ಎನ್ನುವುದನ್ನು ಭೈರಪ್ಪನವರಂತಹವರು ಮರೆಯಬಾರದು. ಇಂತಹ ಬೆಳವಣಿಗೆಯಿಂದ ಮುಂದೆ ‘ಪರ್ವ’ದಂತಹ ಕಾದಂಬರಿ ಬರುವುದೂ ಅಸಾಧ್ಯವಾಗಬಹುದು. ‘ಪರ್ವ’ ಕೂಡ ವ್ಯಾಸ ಭಾರತದ ‘ಓದು’ಗಳನ್ನು ಒಡೆದು ಭೈರಪ್ಪನವರಿಗೆ ಹೊಂದುವ ಸೈದ್ಧಾಂತಿಕ ರೀತ್ಯ ಬರೆದಿರುವ ಕಾದಂಬರಿ ಎನ್ನುವ ಅರಿವಿದ್ದರೆ ಸಾಕು.
- ಡಾ.ಕೆ.ಸುಂದರ ರಾಜ್,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT