ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಮತ್ತು ವಾಸ್ತವಗಳ ಮುಖಾಮುಖಿ

ವಿಮರ್ಶೆ
Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮಹಾ ಯಾನ (ಕಾದಂಬರಿ)
ಲೇ:
ಜಾಣಗೆರೆ ವೆಂಕಟರಾಮಯ್ಯ
ಪ್ರ: ಜಾಣಗೆರೆ ಪತ್ರಿಕೆ ಪ್ರಕಾಶನ, ಬೆಂಗಳೂರು– 52

ಪುರಾಣ ಕಾಲದ ಹರಿಶ್ಚಂದ್ರ ಗಾಂಧೀಜಿಗೆ ಆದರ್ಶವಾಗಿದ್ದರೆ ಸ್ವಾತಂತ್ರ್ಯಹೋರಾಟದ ಸಂದರ್ಭ ಮತ್ತು ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕೆಲವರಿಗೆ ಗಾಂಧೀಜಿ ಆದರ್ಶವಾಗಿದ್ದರು. ಒಬ್ಬರಿಗೆ ಆದರ್ಶವಾದದ್ದು ಮತ್ತೊಬ್ಬರಿಗೆ ಅನಾದರ್ಶವಾಗುವ ವಾಸ್ತವವನ್ನೂ ತಳ್ಳಿಹಾಕುವಂತಿಲ್ಲ. ಇತಿಹಾಸ ವಾಸ್ತವವನ್ನು ಅನಾವರಣಗೊಳಿಸಬೇಕು ಎಂಬುದು ನಿರೀಕ್ಷೆ. ಆ ವಾಸ್ತವಕ್ಕೆ ಬಣ್ಣದ ಮೆರುಗು ಹಾಕಿ, ಕುತೂಹಲ ಹುಟ್ಟಿಸಿ, ಇತಿಹಾಸವನ್ನು ಪ್ರಿಯಗೊಳಿಸುವುದು ಸೃಜನಾತ್ಮಕ ಪ್ರಕ್ರಿಯೆ. ಇದರಲ್ಲಿ ಪದ್ಯಕ್ಕಿಂತ ಗದ್ಯದ ಪಾತ್ರ ಹೆಚ್ಚಿನದು. ರಾವಬಹದ್ದೂರರ ‘ಗ್ರಾಮಾಯಣ’ ಅಂತಹ ಕೆಲಸವನ್ನು ಮಾಡಿತ್ತು. ಈಗ ಆ ಸಾಲಿಗೆ ಜಾಣಗೆರೆಯವರ ‘ಮಹಾ ಯಾನ’ವೂ ಸೇರುತ್ತದೆ.

ಕಾದಂಬರಿಯ ವಸ್ತು ಮತ್ತು ವಿನ್ಯಾಸಗಳು ಸರಳ ರೇಖಾತ್ಮಕವಾಗಿರುವುದರಿಂದ ಎಲ್ಲೂ ಹೆಚ್ಚಿನ ವಿವರಗಳನ್ನು ಅಪೇಕ್ಷಿಸುವುದಿಲ್ಲ. ಕಥೆಗೆ ಓದಿಸಿಕೊಳ್ಳುವ ಗುಣವಿದೆ. ಇದು ‘ಮಹಾ ಯಾನ’ದ ಸಾರ್ಥಕತೆ. ಗಾಂಧೀಜಿ ಕನಸು ಕಂಡಿದ್ದ ಗ್ರಾಮರಾಜ್ಯವನ್ನು ರಾಜಕೀಯವಾಗಿ ಸತ್ಯ ಮಾಡಿರುವ ವರ್ತಮಾನ ಜಾಗತಿಕವೆಂಬ ಹೆಸರಿನ ಮಾರುಕಟ್ಟೆಯ ಪ್ರಪಂಚದ ಕಡೆಗೆ ಮುಖ ಮಾಡಿದೆ ಎನ್ನುವುದು ವಾಸ್ತವ. ಗ್ರಾಮೀಣ ಬದುಕಿನ ಕೂಡುಕುಟುಂಬಗಳು, ಜಾತಿಯನ್ನು ಜಾತಿಗಾಗಿ ಮುಖ್ಯ ಮಾಡಿಕೊಳ್ಳದ ಸಹಕಾರದ ಬದುಕು, ಸಾಂಸ್ಕೃತಿಕ ಕಾಳಜಿ, ಕಾಯಕ ತತ್ತ್ವಕ್ಕೆ ದೊರೆತಿದ್ದ ಆದ್ಯತೆ, ಪರಸ್ಪರ ಇದ್ದ ನಂಬುಗೆ ಮತ್ತು ವಿಶ್ವಾಸಗಳಿಗೆ ರಾಜಕಾರಣ ಕೊಡಲಿ ಪೆಟ್ಟು ನೀಡಿರುವುದನ್ನು, ಗ್ರಾಮೀಣ ಸಂಸ್ಕೃತಿಯನ್ನು ಒಪ್ಪಿಕೊಂಡಿರುವ ಗ್ರಾಮೀಣರು ಬಲ್ಲರು.

‘ಮಹಾ ಯಾನ’ದ ಕಥಾವಸ್ತು ಸರಳ ಎನಿಸಿದರೂ ಸಂಕೀರ್ಣ. ಆದರ್ಶದ ಬೆನ್ನುಹತ್ತಿದ ಯಾರೂ ಕೆಂಡಗಣ್ಣಪ್ಪನಾಗುವ ಸಾಧ್ಯತೆ ಇರುವ ‘ಮಹಾ ಯಾನ’ ಭಾರತದ ಯಾವುದೇ ಸ್ಥಳದಲ್ಲಿ ನಡೆದಿರಬಹುದು. ಇಲ್ಲಿ ಹೆಸರಿಗಷ್ಟೇ ಹೊಸವೂರು, ಹಳೆಯೂರು, ಪುರ ಮತ್ತು ರಾಜಧಾನಿ. ಸ್ವಾತಂತ್ರ್ಯ ಬಂದ ಹೊಸದರಲ್ಲಿ, ಸ್ವಾತಂತ್ರ್ಯ ಹೋರಾಟದ ಜೊತೆಗಿದ್ದ ಕೆಲವರು ಸಕ್ರಿಯ ರಾಜಕಾರಣಕ್ಕೆ ಬಂದರಾದರೂ, ಅವರಿಗೆ ಅಧಿಕಾರಕ್ಕಿಂತ ದೇಶದ ಹಿತ ಮುಖ್ಯವಾಗಿತ್ತು ಎನ್ನುವುದನ್ನು ಇತಿಹಾಸದ ಪಠ್ಯದಿಂದ ತಿಳಿಯಲಾಗಿದೆ. ಕಥಾವಸ್ತು ಮತ್ತು ಕಥನ ಕೌಶಲಗಳು ಕಾದಂಬರಿಯ ಓದನ್ನು ಸುಲಭ ಮಾಡಿವೆ. ಜಾಡು ತಪ್ಪದ ಕಥಾ ಸಂವಿಧಾನವು ಕೃತಿಯ ಧನಾತ್ಮಕ ವಿಚಾರ.

ರೊಟ್ಟಿ (ಹೊಟ್ಟೆ), ಅಂಗಿ ಮತ್ತು ಪಂಚೆ (ಬಟ್ಟೆ) ಮತ್ತು ಒಪ್ಪಾರ (ಮನೆ)ಗಳು ಕಥೆಯ ಆರಂಭದಲ್ಲೇ ಮನುಷ್ಯನ ಅತ್ಯವಶ್ಯಕತೆಗಳ ನೆನಪು ಮಾಡುತ್ತವೆ. ಇವುಗಳ ಈಡೇರಿಕೆಗಾಗಿ ನಿರಂತರ ಕಾಯಕ ನಡೆಯುತ್ತಿರಬೇಕು. ಕಾಯಕನಿಷ್ಠೆಯ ಕೆಂಡಗಣ್ಣಪ್ಪ ಸ್ವಂತಕ್ಕಿಂತ ಪರಚಿಂತನೆಗೆ ತೆರೆದುಕೊಂಡವನು ಮತ್ತು ತೊಡಗಿಕೊಂಡವನು. ಇದು ಸ್ವಂತ ಬದುಕಿನ ಮೇಲೆ ಬೀರುವ ಪರಿಣಾಮವೇ ಇಡೀ ಕಾದಂಬರಿಯ ನೆಲೆಗಟ್ಟು. ಉಳುಮೆ ಮಾಡಲು ಸ್ವಂತಕ್ಕೆ ಭೂಮಿ ಇಲ್ಲದ ವೀರಪ್ಪ, ಜೀತದಿಂದ ಬದುಕು ನಡೆಸುತ್ತಲೇ ಸ್ವಂತ ಜಮೀನಿನ ಕನಸು ಕಂಡು, ಗಾಂಧೀ ಸೇವಾಶ್ರಮದ ಲಿಂಗಪ್ಪ ಸ್ವಾಮಿಗಳ ಸಲಹೆಯಂತೆ ‘ಮಾರಾಜ’ರನ್ನು ಕಂಡು ಐದೆಕರೆ ಭೂಮಿಯನ್ನು ದಾನವಾಗಿ ಪಡೆದು, ಆ ಕಾಲದ ಆಡಳಿತ ಯಂತ್ರದ ತಂಟೆ, ತಕರಾರುಗಳ ನಡುವೆಯೂ, ತಂತ್ರಗಾರಿಕೆಯಿಂದ ಭೂಮಿಯನ್ನು ತನ್ನದಾಗಿಸಿಕೊಂಡು,

ಉತ್ತು, ಬಿತ್ತು, ಬೆಳೆದು ಹಲವರಿಗೆ ಆಶ್ರಯ ನೀಡಿದವನು. ಅವನ ಮಗ ಕೆಂಡಗಣ್ಣಪ್ಪ ತಂದೆ ಗಳಿಸಿದ್ದನ್ನು ಉಳಿಸಿದ ಮತ್ತು ಬೆಳೆಸಿದ ಸಂದರ್ಭದಲ್ಲಿ ಜೊತೆಗಿದ್ದವರು ತಾಯಿ ಮತ್ತು ತಮ್ಮಂದಿರು. ಶಿವಾನಂದಪ್ಪ ಕೆಂಡಗಣ್ಣಪ್ಪನ ಕಾಲದಲ್ಲಿ ಗಾಂಧಿ ಸೇವಾಶ್ರಮದ ಜವಾಬ್ದಾರಿ ಹೊತ್ತವನು. ಅವನಲ್ಲೂ ಗಾಂಧಿಯ ಆದರ್ಶ ಉಳಿದಿದೆ. ನಂತರದ ನಾಗರಾಜನ ಕಾಲಕ್ಕೆ ಮೌಲ್ಯಗಳ ಕುಸಿತವನ್ನು ಕಾಣಬಹುದು. ಒಂದು ಕಾಲಕ್ಕೆ ಗಾಂಧಿಯ ಪ್ರಭಾವದಿಂದ ಗಾಂಧೀ ಸೇವಾಶ್ರಮಕ್ಕೆ ಜಮೀನು ಕೊಟ್ಟಿದ್ದ ಕಳಸೀಪುರದ ಶಿವಪ್ಪಗೌಡ ಕ್ರಮೇಣ ಗಾಂಧೀ ತತ್ತ್ವಗಳಿಂದ ಸ್ವಲ್ಪಸ್ವಲ್ಪವೇ ದೂರ ಸರಿದು, ತನ್ನ ಜಮೀನಿನಲ್ಲಿ ನಿರ್ಮಿಸಿಕೊಂಡಿದ್ದ ಕೆರೆಯ ನೀರನ್ನು ಹಳ್ಳಿಯ ಇತರ ಕೃಷಿಕರ ಜಮೀನಿಗೆ ಬಿಡದಿದ್ದಾಗ ಎದುರಾಗಿದ್ದ ಸಮಸ್ಯೆಯನ್ನು ಪರಿಹರಿಸುವ ಸಂದರ್ಭವೂ ‘ಮಹಾ ಯಾನ’ದಲ್ಲಿದೆ.

ಮೊದಲಿಗೆ ತಮ್ಮ ಊರಿನಲ್ಲಿ ಬೇರೆಯವರು ತಮ್ಮತಮ್ಮ ಕೃಷಿ ಜಮೀನಿಗೆ ಹೋಗುವುದಕ್ಕೆ ಅಡ್ಡಿ ಮಾಡುತ್ತಿದ್ದ ಸ್ಥಳೀಯ ಗೌಡನನ್ನು ಒಳ್ಳೆಯ ಮಾತಿನಿಂದ ಮಣಿಸುವ ರೀತಿ ಗಾಂಧಿತತ್ತ್ವದ ಫಲವಾಗಿದೆ. ಸ್ವಾತಂತ್ರ್ಯಾನಂತರ ಭಾರತೀಯ ಜೀವನ ಮೌಲ್ಯಗಳಲ್ಲಿ ಆಗಿರುವ ಮತ್ತು ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಆ ಬದಲಾವಣೆಗಳನ್ನು ಕಾದಂಬರಿಯ ರೂಪದಲ್ಲಿ ದಾಖಲಿಸುವ ಸುಲಭವಲ್ಲದ ಕ್ರಮವನ್ನು ಕಾದಂಬರಿಕಾರರು ಸುಲಭ ಮಾಡಿಕೊಂಡಿದ್ದಾರೆ. ಕೂಡುಕುಟುಂಬದ ಉಲ್ಲಾಸಕರ ಸನ್ನಿವೇಶಗಳು, ಅಲ್ಲಿನ ಒಗ್ಗಟ್ಟು, ಸೌಹಾರ್ದ ಸಂಬಂಧಗಳು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲೂ ಪೂರ್ತಿ ಮರೆಯಾಗಿರಲಿಲ್ಲ. ಈಗ ಅವೆಲ್ಲವೂ ಇತಿಹಾಸದ ಭಾಗವಾಗಿವೆ. ಕುಟುಂಬದ ಹಿರಿಯನು ಕುಟುಂಬದ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸನ್ನಿವೇಶಗಳಿಗೆ ಸಾಕ್ಷಿಯಾಗಿರುತ್ತಿದ್ದ.

ತಪ್ಪುಗಳು ಘಟಿಸದಂತೆ ಎಚ್ಚರ ವಹಿಸುತ್ತಿದ್ದ. ಈಗ ಕೂಡುಕುಟುಂಬವೂ ಒಂದು ಆದರ್ಶದಂತಾಗಿರುವುದು ವಿಪರ್ಯಾಸ. ಜಗತ್ತೇ ಒಂದು ಸಣ್ಣ ಹಳ್ಳಿಯಂತಾಗುತ್ತಿದೆ ಎಂಬ ಹೇಳಿಕೆಯು ವ್ಯಂಗ್ಯವಲ್ಲವಾದರೂ, ಅದು ಜಾಗತೀಕರಣ, ಉದಾರೀಕರಣ ಮತ್ತು ಅದಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣದ ಸಂಕೇತವಾಗುತ್ತಿರುವುದು ವಾಸ್ತವ. ಇದನ್ನು ನಿಜ ಮಾಡಲು ಅಧಿಕಾರ ಬೇಕು. ಜೊತೆಗೆ ರಾಜಕಾರಣವೂ ಬೆರೆತರೆ ಮತ್ತಷ್ಟು ಸುಲಭ. ಬದಲಾವಣೆ ಬೇಕು. ಅದು ಒಳ್ಳೆಯದಾಗಿರಬೇಕು ಮತ್ತು ಪ್ರಗತಿಪಥದಲ್ಲಿ ಮುನ್ನಡೆಸಬೇಕು. ‘ಮಹಾ ಯಾನ’ ವನ್ನು ಓದಿ ಮುಗಿಸಿದ ಮೇಲೆ ಯಾವುದೇ ಸಹೃದಯ ಓದುಗನಿಗೆ ಹಾಗೆನಿಸಬಹುದು.

ಕೂಡುಕುಟುಂಬದಂತೆಯೇ ಗ್ರಾಮಗಳ ಒಗ್ಗಟ್ಟು ಮತ್ತು ಸೌಹಾರ್ದತೆಯೂ ವಾಸ್ತವ ಎನಿಸಿದ್ದ ದಿನಗಳನ್ನು ಕಾದಂಬರಿಕಾರರು ನೆನಪು ಮಾಡಿಕೊಂಡಿದ್ದಾರೆ. ಕೆಂಡಗಣ್ಣಪ್ಪನ ಆಪ್ತ ವಲಯದ ಕಾಶಿನಾಥಯ್ಯ, ಗಂಗಬಸಪ್ಪ, ನಾರಾಯಣಪ್ಪ, ಕೆಂಚಣ್ಣ ಮತ್ತು ಕಾಸಿಂಸಾಬ್ ಅವರ ಹೆಸರುಗಳೇ ಸಾಂಕೇತಿಕ. ಅವರಲ್ಲಿ ಯಾರ ಜಾತಿಯನ್ನೂ ಕಾದಂಬರಿಕಾರರು ಪ್ರಸ್ತಾಪಿಸುವುದಿಲ್ಲ. ಇದು ಹಿಂದಿನ ಹಳ್ಳಿಗಳ ಧನಾತ್ಮಕ ಅಂಶ. ಮನೆಯ ಮಟ್ಟಿಗೆ ಜಾತಿ. ಊರ ವಿಷಯಕ್ಕೆ, ಅದರಲ್ಲೂ ಒಳಿತಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಜಾತಿ ಮುಖ್ಯವಾಗುತ್ತಿರಲಿಲ್ಲ. ಆಗ ಅದು ಒಂದು ವಾಸ್ತವ; ಈಗ ಆದರ್ಶ ಎನ್ನುವುದನ್ನು ವಾಸ್ತವವಾದಿಗಳು ಬಲ್ಲರು. ಕಳಸೀಪುರದ ನೀರಿನ ಸಮಸ್ಯೆಯು ಕೆರೆಗಳೇ ಇಲ್ಲವಾಗುತ್ತಿರುವ ಹೊತ್ತಿನಲ್ಲಿ ಅವಾಸ್ತವ ಎನಿಸಿಬಿಡಬಹುದು.

ಆದರೆ ಕೆರೆಗಳಿದ್ದ ಕಾಲಕ್ಕೆ ವಾಸ್ತವ ಮತ್ತು ಖಾಸಗಿ ಸ್ವರೂಪದ ಕೆರೆಗಳ ನೀರನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವ ಸಂದರ್ಭಗಳಿದ್ದವು. ಯಾರದೇ ಜಮೀನಿನಲ್ಲಿರಲಿ, ಯಾರದೇ ಖರ್ಚಿನಲ್ಲಿ ಕೆರೆ ನಿರ್ಮಾಣವಾಗಿರಲಿ. ಕೆರೆ ಸಾರ್ವಜನಿಕರ ಸ್ವತ್ತು ಎಂಬ ಮನೋಭಾವದ ದಿನಗಳನ್ನು ನೆನಪಿಗೆ ತರುವ ಕಳಸೀಪುರದ ಕೆರೆಯ ನೀರಿನ ಸಮಸ್ಯೆಗೆ ಸ್ವಂತ ಪ್ರಯತ್ನಗಳ ಜೊತೆಗೇ ನುರಿತವರೆಂದು ಭಾವಿಸುವ ರಾಜಕೀಯ ಪ್ರಮುಖರ ಮಾರ್ಗದರ್ಶನವನ್ನೂ ಪಡೆದು ಸಮಸ್ಯೆಯನ್ನು ಸರ್ಕಾರದ ಅರಿವಿಗೆ ತಂದು, ಪರಿಹಾರ ಕಂಡುಕೊಂಡ ಕೆಂಡಗಣ್ಣಪ್ಪ ಮತ್ತು ಗೆಳೆಯರು, ಆ ಕಾರಣದಿಂದಾಗಿಯೇ ರಾಜಕೀಯಕ್ಕೆ ಧುಮುಕಬೇಕಾಗಿ ಬಂದದ್ದು ವಿಪರ್ಯಾಸ. ಕಾದಂಬರಿಯ ಸ್ಥಾಯಿ ಭಾವವನ್ನು ಕೆಂಡಗಣ್ಣಪ್ಪನ ಒಂದು ಸ್ವಗತವು ವಾಚ್ಯವಾಗಿಸಿದೆ. ‘ಮೊದಮೊದಲು ಪ್ರಾಮಾಣಿಕರಾಗಿದ್ದ ರಾಜಕಾರಣಿಗಳು, ಅಧಿಕಾರಿಗಳು ಇತ್ತಿತ್ತ ಸ್ವಾರ್ಥಿಗಳಾಗುತ್ತಿದ್ದಾರೆ. ಜನಸಾಮಾನ್ಯರ ನೋವು, ಕಷ್ಟ, ಸಮಸ್ಯೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳುತ್ತಿದ್ದಾರೆ.

ಉಳ್ಳವರು ಕೂಡಾ ತಮ್ಮ ನೆರೆಹೊರೆಯಲ್ಲಿರುವ ಬಡಪಾಯಿಗಳ ಬಗ್ಗೆ ಮಾನವೀಯತೆ ತೋರುವುದರಲ್ಲಿ ಹಿಂದೆಬೀಳುತ್ತಿದಾರೆ’ (ಪು.44). ಈ ಅಭಿಪ್ರಾಯ ಸಾರ್ವಕಾಲಿಕ ಎನಿಸಬಹುದಾದರೂ, ವರ್ತಮಾನದಲ್ಲಿ ಬದುಕಿರುವವರಿಗೆ ಸಂಗತ ಮತ್ತು ಪ್ರಸ್ತುತ. ಇದನ್ನು ರೋಷದಿಂದ ಪ್ರತಿಭಟಿಸುವ ಜನರೇ ಒಂದು ಹಂತದಲ್ಲಿ ಸ್ವಾರ್ಥದ ಕಾರಣದಿಂದ ರೋಷದ ಜಾಡನ್ನು ಬದಲಿಸಿಕೊಳ್ಳುವುದು ಒಂದು ದುರಂತ ಮತ್ತು ವ್ಯಂಗ್ಯ. ಇದಕ್ಕೆ ಕೆಂಡಗಣ್ಣಪ್ಪನ ಪಾತ್ರಗಳೇ ಸಾಕ್ಷಿಯಾಗುತ್ತವೆ. ಮನೆಯ ಆಳಾಗಿ ಬಂದ ಅನಾಥ ಈರಣ್ಣ, ದಣಿಯನ್ನು ಕಾಪಾಡುವ ಮತ್ತು ಅನಾಥನಂತಾದ ದಣಿಯ ಮಗನನ್ನು ಸಾಕುವ ಜವಾಬ್ದಾರಿ ಹೊರುವುದು ಸಾಮಾಜಿಕ ಮತ್ತು ಕೌಟುಂಬಿಕ ಕಾಳಜಿ ಇರುವುದು ನೋವನ್ನು ಬಲ್ಲವರಿಗೆ ಮಾತ್ರ ಎಂದು ಸಾಬೀತು ಮಾಡುತ್ತದೆ.

ಆಕಸ್ಮಿಕವಾಗಿ, ಒತ್ತಾಯದಿಂದ ರಾಜಕಾರಣಕ್ಕೆ ಪ್ರವೇಶಿಸಿ, ಅಲ್ಲಿಯೂ ತನ್ನ ಪ್ರಾಮಾಣಿಕತೆ ಮತ್ತು ಜನಪರ ಕಾರ್ಯಗಳಿಂದ ಯಶಸ್ಸು ಪಡೆದ ಕೆಂಡಗಣ್ಣಪ್ಪ, ನಂತರ ಅದೇ ರಾಜಕಾರಣದ ಬಲಿಪಶುವಾಗಿ ಕುತಂತ್ರದಿಂದ ಅಪರಾಧಿಯ ಸ್ಥಾನದಲ್ಲಿ ನಿಂತು ಶಿಕ್ಷೆಯನ್ನು ಅನುಭವಿಸುವುದೂ ಸಹ ಸಾಮಾಜಿಕ ದುರಂತಕ್ಕೊಂದು ಸಾಕ್ಷಿಯಂತಿದೆ. ಗ್ರಾಮೀಣ ಬದುಕಿನ ಸೊಗಡನ್ನು ಕಟ್ಟಿಕೊಡುವುದರಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಮಂತ್ರಿಯಾದಾಗಲೂ ಹಳ್ಳಿಯ ಸಂಪರ್ಕವನ್ನು ಉಳಿಸಿಕೊಳ್ಳುವ ಮತ್ತು ಅನಿವಾರ್ಯ ಎನಿಸುವ ಸಂದರ್ಭಗಳ ವಿನಹ ನಗರದಿಂದ ದೂರವೇ ಉಳಿಯುವ ಕೆಂಡಗಣ್ಣಪ್ಪ ಆದರ್ಶಕ್ಕೊಂದು ಮಾದರಿಯಾಗುವಂತೆ, ಅವನ ಹೆಂಡತಿಯಾಗುವ ಶಾರದ, ಇಷ್ಟಪಟ್ಟು ಮದುವೆಯಾಗಿಯೂ ಸೋದರ ಮಾವನ ಮಾತಿನಿಂದ ಗಂಡನನ್ನು ದೂರ ಮಾಡಿಕೊಂಡು, ಕಷ್ಟಗಳಿಗೆ ಗುರಿಯಾದ ಲಲಿತ ವಾಸ್ತವ ಬದುಕಿನ ಮಾದರಿಗಳಾಗಿದ್ದಾರೆ.

ತನ್ನದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಕೆಂಡಗಣ್ಣಪ್ಪನ ಪಾತ್ರ  ವರ್ತಮಾನದ ಯಾವುದೇ ಭಾರತೀಯನನ್ನು ಪ್ರತಿನಿಧಿಸುತ್ತದೆ. ಕಳೆದ ಶತಮಾನದ ಅರವತ್ತರ ದಶಕದ ಉತ್ತರಾರ್ಧ ಮತ್ತು ಎಪ್ಪತ್ತರ ದಶಕದ ಪೂರ್ವಾರ್ಧದಲ್ಲಿನ ದಕ್ಷಿಣ ಕರ್ನಾಟಕದ ಯಾವುದೇ ಗ್ರಾಮವನ್ನು ‘ಮಹಾ ಯಾನ’ ಸಂಕೇತವಾಗಿಸುತ್ತದೆ. ಇದು ಕೆಂಡಗಣ್ಣಪ್ಪನ ‘ಮಹಾ ಯಾನ’. ತನ್ನ ಇತಿಮಿತಿಗಳಲ್ಲಿ ಗ್ರಾಮೀಣ ಬದುಕನ್ನು ಹಸನು ಮಾಡುವ ಕೆಂಡಗಣ್ಣಪ್ಪ, ರಾಜಕೀಯವಾಗಿಯೂ ಅದೇ ದಾರಿಯಲ್ಲಿ ನಡೆಯುವಾಗ, ಸ್ವಾರ್ಥದ ಮತ್ತು ಅಧಿಕಾರಾಪೇಕ್ಷಿ ರಾಜಕಾರಣವು ಆದರ್ಶವನ್ನು ವಾಸ್ತವದ ಎದುರು ಸೋಲುವುದನ್ನು ಜಾಣಗೆರೆಯವರ ‘ಮಹಾ ಯಾನ’ ಸಾಂಕೇತಿಕವಾಗಿ ಸೂಚಿಸುತ್ತದೆ ಎನ್ನುವುದನ್ನು ಮಿತಿ ಎಂದು ತಿಳಿಯದಿದ್ದರೆ, ಈ ಕಥೆಯು ಯಾವ ಕಾಲಕ್ಕಾದರೂ ಯಾವ ಪ್ರದೇಶಕ್ಕಾದರೂ ಅನ್ವಯವಾಗುತ್ತದೆ.

ಗ್ರಾಮೀಣ ಬದುಕಿನ ಹೊರ–ಒಳಗುಗಳನ್ನು ತಿಳಿಯದವರಿಗೆ ಇಲ್ಲಿನ ಗ್ರಾಮೀಣ ಬದುಕು ಒಂದು ವಿಸ್ಮಯ ಎನಿಸಿದರೆ ಆಶ್ವರ್ಯವಿಲ್ಲ. ಗ್ರಾಮೀಣ ಬದುಕನ್ನು ತಿಳಿದವರಿಗೆ ಇದು ವಾಸ್ತವ. ಸಮಾಜ ಸೇವೆಯು ಒಂದು ಆದರ್ಶ ಎನ್ನುವುದಾದರೆ, ವರ್ತಮಾನದ ರಾಜಕಾರಣವು ವಾಸ್ತವದ ಸಂಕೇತ. ಇವೆರಡರ ನಡುವಿನ ಸಂಘರ್ಷವನ್ನು ಅರ್ಥ ಮಾಡಿಸುವಲ್ಲಿ ಜಾಣಗೆರೆ ಸಫಲರಾಗಿದ್ದಾರೆ. ಇತ್ತೀಚಿನ ಒಳ್ಳೆಯ ಸೃಜನಾತ್ಮಕ ಕೃತಿಗಳ ಸಾಲಿಗೆ, ಜಾಣಗೆರೆ ವೆಂಕಟರಾಮಯ್ಯನವರ ‘ಮಹಾ ಯಾನ’ವು ಒಂದು ಒಳ್ಳೆಯ ಸೇರ್ಪಡೆ. ಇದು ಕಾದಂಬರಿಯಾದರೂ, ವರ್ತಮಾನದ ಸಮಾಜವನ್ನು ಮುಂದಿನ ಪೀಳಿಗೆಗೆ ಇತಿಹಾಸದ ಖಚಿತ ದಾಖಲೆಯಾಗಿ ಅಲ್ಲವಾದರೂ, ಸೃಜನಾತ್ಮಕ ದಾಖಲೆಯಾಗಿ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸೂಚನೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT