ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್‌ ಎಫ್‌ಬಿಐ ಸಂಘರ್ಷ

Last Updated 8 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಇದು ಮೂರು ತಿಂಗಳ ಹಿಂದೆ ಅಂದರೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಘಟನೆ. ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊದಲ್ಲಿನ ಅಂಗವಿಕಲರ ಕೇಂದ್ರದಲ್ಲಿ ಕ್ರಿಸ್‌ಮಸ್‌ ಸಂತೋಷಕೂಟ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಒಳನುಗ್ಗಿದ ಬಂದೂಕುಧಾರಿ ದಂಪತಿ ಮನಬಂದಂತೆ  ಗುಂಡಿನ ದಾಳಿ ನಡೆಸಿ14 ಮಂದಿಯನ್ನು ಹತ್ಯೆಗೈದಿದ್ದರು. 17ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಅಮೆರಿಕದಲ್ಲಿ 2012ರ ಬಳಿಕ ನಡೆದ ಭೀಕರ ಗುಂಡಿನ ದಾಳಿ ಇದಾಗಿತ್ತು.

ಈ ಘಟನೆ ಬೆನ್ನಲ್ಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದಾಳಿಕೋರರನ್ನು ಹೊಡೆದುರುಳಿಸಿದ್ದರು. ಸ್ಯಾನ್ ಬರ್ನಾರ್ಡಿನೊ  ಪ್ರಕರಣದ ತನಿಖೆ  ಪ್ರಾರಂಭಿಸಿದ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ಸ್ (ಎಫ್‌ಬಿಐ), ದಾಳಿ ನಡೆಸಿದವರನ್ನು ಪಾಕ್‌ ಮೂಲದ  ತಶ್ಫೀನ್‌ ಮಲಿಕ್‌(27) ಮತ್ತು   ಸಯ್ಯದ್‌ ಫಾರೂಕ್‌ (28) ಎಂದು  ಗುರುತಿಸಿತು. ಅಷ್ಟೇ ಅಲ್ಲ, ದಾಳಿ ನಡೆಸಿದವರಲ್ಲಿ ಸಯ್ಯದ್‌ ಫಾರೂಕ್‌ ಬಳಸುತ್ತಿದ್ದ ಐಫೋನ್‌ ತೆರೆದು ನೋಡಲು (ತನಿಖೆ ಉದ್ದೇಶಕ್ಕೆ ದತ್ತಾಂಶ ಬಳಸಿಕೊಳ್ಳಲು)  ಅವಕಾಶ ನೀಡಬೇಕೆಂದು ಕೋರಿ ಎಫ್‌ಬಿಐ ಅಮೆರಿಕದ ನ್ಯಾಯಾಲಯ ಮೊರೆ ಹೋಯಿತು.

ಐಫೋನ್‌ ತೆರೆದು ನೋಡಲು ‘ಎಫ್‌ಬಿಐ’ಗೆ ತಾಂತ್ರಿಕ ನೆರವು ನೀಡುವಂತೆ ಕೋರ್ಟ್‌, ಆ್ಯಪಲ್‌ ಕಂಪೆನಿಗೆ ಸೂಚಿಸಿತು. ಆದರೆ, ಬಳಕೆದಾರನ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಗೂಢಲಿಪಿಯಲ್ಲಿರುವ ಐಫೋನ್‌ ದತ್ತಾಂಶ ತೆರೆದು ನೋಡಲು ತನಿಖಾ ಸಂಸ್ಥೆಗಳಿಗೆ ಅವಕಾಶ ಕೊಡಬಾರದು ಎಂಬ ಕೂಗು ಬಳಕೆದಾರರ ಕಡೆಯಿಂದ ಬಲವಾಗಿ ಕೇಳಿಬಂತು. ಆ್ಯಪಲ್‌ ಕಂಪೆನಿ ಕೂಡ ಗ್ರಾಹಕರ ಪರವಾಗಿ ನಿಂತಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರಿ ಚರ್ಚೆಗಳು ನಡೆದವು. ಇದು ಕಂಪೆನಿಯ ‘ಖಾಸಗೀತನ ಮತ್ತು ಸಾರ್ವಜನಿಕ ಭದ್ರತೆ’ ನೀತಿಗೆ ವಿರುದ್ಧವಾಗಿದೆ, ಗ್ರಾಹಕರ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ  ದತ್ತಾಂಶವನ್ನು ರಹಸ್ಯವಾಗಿ ಕಾಪಾಡಲಾಗುತ್ತದೆ, ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಆ್ಯಪಲ್‌ ಸ್ಪಷ್ಟಪಡಿಸಿತು.

ಆ್ಯಪಲ್‌ ತೆಗೆದುಕೊಂಡ ನಿಲುವಿಗೆ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಮಾಜಿ ಗುತ್ತಿಗೆದಾರ ಎಡ್ವರ್ಡ್‌ ಸ್ನೊಡೆನ್‌ ಸೇರಿದಂತೆ ಅನೇಕರು ಟ್ವಿಟರ್‌ನಲ್ಲಿ ಭಾರಿ ಬೆಂಬಲ ವ್ಯಕ್ತಪಡಿಸಿದರು. ಲಾಸ್‌ ಏಂಜಲೀಸ್‌ನ ಫೆಡರಲ್ ನ್ಯಾಯಾಲಯವು, ‘ಎಫ್‌ಬಿಐ’ಗೆ ‘ತಾರ್ಕಿಕ ತಾಂತ್ರಿಕ ನೆರವು’ ನೀಡುವಂತೆ  ಕಂಪೆನಿಗೆ ಸೂಚಿಸಿದರೂ, ಆ್ಯಪಲ್‌ ತನ್ನ ನಿಲುವು ಸಡಿಲಿಸದೆ ಧೃಡವಾಗಿ ನಿಂತಿತು. ಕೋರ್ಟ್‌ನ ಆದೇಶ ‘ಅಪಾಯಕಾರಿ ಪೂರ್ವ ನಿರ್ದೇಶನ’ ಎಂದು ಬಣ್ಣಿಸಿದ ಆ್ಯಪಲ್‌ ಮುಖ್ಯಸ್ಥ ಟಿಮ್‌ ಕುಕ್‌, ಈ ಆದೇಶವನ್ನು ಪ್ರಶ್ನಿಸುವುದಾಗಿ ಆ್ಯಪಲ್ ವೆಬ್‌ಸೈಟ್‌ನಲ್ಲಿ ಬರೆದುಕೊಂಡರು. ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚೈ ಕೂಡ ಆ್ಯಪಲ್‌ಗೆ ಬೆಂಬಲ ಸೂಚಿಸಿದರು.

‘ಸ್ಯಾನ್ ಬರ್ನಾರ್ಡಿನೊ  ಪ್ರಕರಣದಲ್ಲಿ ಅಮೆರಿಕದ ನ್ಯಾಯ ಇಲಾಖೆಯು ಸುಮಾರು 227 ವರ್ಷಗಳಷ್ಟು ಹಳೆಯ ಕಾನೂನು ಬಳಸಿಕೊಂಡು,  ಐಫೋನ್‌ ದತ್ತಾಂಶ ಬಳಸಿಕೊಳ್ಳಲು ಎಫ್‌ಬಿಐಗೆ ನೆರವು ನೀಡುವಂತೆ ಆ್ಯಪಲ್‌ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು  ಕಾನೂನು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಕಂಪ್ಯೂಟರ್‌ ಕಾಲಕ್ಕಿಂತಲೂ ಹಿಂದೆ ಅಂದರೆ 1789ರಲ್ಲಿ ಜಾರಿಗೆ ಬಂದ ‘ಆಲ್‌ ರಿಸ್ಟ್‌ ಆ್ಯಕ್ಟ್‌’ ಬಳಸಿಕೊಂಡು ಸರ್ಕಾರ ಈಗ ಆ್ಯಪಲ್‌ ಮೇಲೆ ಒತ್ತಡ ಹೇರುತ್ತಿದೆ. ಐಫೋನ್‌ನಂತಹ ಗೂಢಲಿಪಿ ತಂತ್ರಜ್ಞಾನ ಹೊಂದಿರುವ ಫೋನ್‌ನಿಂದ ದತ್ತಾಂಶವನ್ನು ಮತ್ತೆ ಪಡೆಯಲು ತನಿಖಾ ಸಂಸ್ಥೆಗಳಿಗೆ ಈ ಕಾನೂನಲ್ಲಿ ಅವಕಾಶ  ಇದೆ ಎಂದು ಅವರು ಹೇಳಿದ್ದಾರೆ. 

ಒಟ್ಟಿನಲ್ಲಿ ಈ ಪ್ರಕರಣ ಆ್ಯಪಲ್‌ ಕಂಪೆನಿ ಮತ್ತು ಅಮೆರಿಕ ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ‘ಆ್ಯಪಲ್‌ ಮಾತ್ರ ಸಾರ್ವಜನಿಕರ ವಿಚಾರದಲ್ಲಿ ಅತ್ಯಂತ ಕಾಳಜಿ ಹೊಂದಿದೆ’ ಎನ್ನುವಂತೆ ಈ ಪ್ರಕರಣದಲ್ಲಿ ವರ್ತಿಸುತ್ತಿದೆ ಎಂದು ಎಫ್‌ಬಿಐ ದೂರಿದೆ. ಆದರೆ, ಖಾಸಗಿತನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಎಲ್ಲ ದೇಶಗಳು ಕಠಿಣಗೊಳಿಸುತ್ತಿರುವ ಈ ಕಾಲದಲ್ಲಿ ಆ್ಯಪಲ್‌ ಇದಕ್ಕೆ ಅವಕಾಶ ನೀಡಿದರೆ ಮುಂದೆ ಭಾರಿ ದಂಡ ತೆತ್ತಬೇಕಾಗುತ್ತದೆ ಎಂದು ಕಾನೂನು ತಜ್ಞರು ಎಚ್ಚರಿಸಿದ್ದಾರೆ.  ಐಫೋನ್‌ ವಿಚಾರದಲ್ಲಿ ಆ್ಯಪಲ್‌–ಎಫ್‌ಬಿಐ ಸಂಘರ್ಷ ಮುಂದುವರಿದಂತೆ  ಸಾಮಾಜಿಕ ಜಾಲತಾಣಗಳಲ್ಲಿ ‘ಡಿಜಿಟಲ್‌  ಖಾಸಗಿತನದ ಹಕ್ಕುಗಳು ಮತ್ತು ರಾಷ್ಟ್ರೀಯ ಭದ್ರತೆ’ ಎನ್ನುವ ವಿಚಾರವಾಗಿ ಜಾಗತಿಕ ಮಟ್ಟದ ಚರ್ಚೆಗಳು ನಡೆಯುತ್ತಿವೆ.

‘ಎಫ್‌ಬಿಐ’ಗೆ ತಲೆನೋವು
ಬರ್ನಾರ್ಡಿನೊ ದಾಳಿಕೋರ ಸಯ್ಯದ್‌ ಫಾರೂಕ್‌ ಬಳಸುತ್ತಿದ್ದ ಐಫೋನ್‌ 5 ಸಿ ಹ್ಯಾಂಡ್‌ಸೆಟ್‌ನ ಪಿನ್‌ ನಂಬರ್‌ ಭೇದಿಸಲು ‘ಎಫ್‌ಬಿಐ’ಗೆ ಇನ್ನೂ ಸಾಧ್ಯವಾಗಿಲ್ಲ.  ಬೇರೆ ಬೇರೆ ಪಿನ್‌ ನಂಬರ್‌ಗಳನ್ನು ಪ್ರಯತ್ನಿಸಿದರೆ, ಐಫೋನ್‌ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ.  ಐಫೋನ್‌ನ ಇತರೆ ಮಾದರಿಗಳಲ್ಲಿ ‘ಟಚ್‌ ಐಡಿ ಫೀಚರ್‌’ ಅಥವಾ ಬಳಕೆದಾರನ ಬೆರಳಚ್ಚಿನ ಮೂಲಕ ಪಾಸ್‌ವರ್ಡ್‌ ಭೇದಿಸುವ ತಂತ್ರಜ್ಞಾನ ಇದೆ. ಆದರೆ, 5ಸಿ ಮಾದರಿಯಲ್ಲಿ ಈ ತಂತ್ರಜ್ಞಾನ ಇಲ್ಲ. ಹೀಗಾಗಿ ಇದು ಎಫ್‌ಬಿಐಗೆ ಇನ್ನಷ್ಟು ತಲೆನೋವು ತಂದಿದೆ.

ಐಫೋನ್‌ ಭದ್ರತೆ ಮುರಿಯಲು ಅವಕಾಶ ನೀಡದಿದ್ದರೂ, ತನಿಖಾ ಉದ್ದೇಶಕ್ಕಾಗಿ ಗೂಢಲಿಪಿಯಲ್ಲಿರುವ ಐಫೋನ್‌ ದತ್ತಾಂಶವನ್ನು ಹ್ಯಾಕ್‌ ಮಾಡಲು ಸಹಾಯಕವಾಗುವಂತಹ ವಿಶೇಷ ತಂತ್ರಾಂಶವೊಂದನ್ನು  ಅಥವಾ ‘ಮಾಸ್ಟರ್‌ ಕೀ’ ಅಭಿವೃದ್ಧಿಪಡಿಸಿ ಕೊಡುವಂತೆ ‘ಎಫ್‌ಬಿಐ’ ಆ್ಯಪಲ್‌ಗೆ ಮನವಿ ಮಾಡಿದೆ.  ತನಿಖೆ ಉದ್ದೇಶಕ್ಕಾಗಿ ಎಫ್‌ಬಿಐಗೆ ಸಹಾಯ ಮಾಡಲು ತಾಂತ್ರಿಕವಾಗಿ  ಸಾಧ್ಯವಿದೆ. ಆದರೆ, ಈ ಪ್ರಕರಣದಲ್ಲಿ ಇದನ್ನು ಐಫೋನ್‌ ಗ್ರಾಹಕರೇ ನಿರ್ಧರಿಸಬೇಕು ಎಂದು ಆ್ಯಪಲ್‌ ವಕೀಲರೊಬ್ಬರು ಹೇಳಿದ್ದಾರೆ.

ಹಿಂಬಾಗಿಲ ಪ್ರವೇಶ ಬೇಡ
‘ಹ್ಯಾಕಿಂಗ್‌ ಅವಕಾಶ ಮಾಡಿಕೊಡುವಂತೆ ಕಂಪೆನಿಗಳನ್ನು ಒತ್ತಾಯಿಸುವುದು ಬಳಕೆದಾರನ ಖಾಸಗಿತನದ ಜತೆ ರಾಜಿ ಮಾಡಿಕೊಂಡಂತೆ ಎಂದು ಗೂಗಲ್‌ನ ಸಿಇಒ ಸುಂದರ್‌ ಪಿಚೈ  ಬಣ್ಣಿಸಿದ್ದಾರೆ.   ಕೋರ್ಟ್‌ ಆದೇಶ ನೀಡಿದ ಪ್ರಕರಣಗಳಲ್ಲಿ ಗೂಗಲ್‌ನ ದತ್ತಾಂಶವನ್ನು ಬಳಸಿಕೊಳ್ಳಲು ತನಿಖಾ ಸಂಸ್ಥೆಗಳಿಗೆ ಅವಕಾಶವಿದೆ. ಆದರೆ, ಬಳಕೆದಾರನ ಖಾಸಗಿತನ ಹ್ಯಾಕ್‌ ಮಾಡಲು ಹಿಂಬಾಗಿಲಿನ ಮೂಲಕ ಪ್ರವೇಶಕ್ಕೆ ಅವಕಾಶ ನೀಡುವ ವಿಚಾರವೇ ಬೇರೆ’ ಎಂದು ಅವರು ಹೇಳಿದ್ದಾರೆ.

ಆ್ಯಪಲ್‌ ಏನಾದರೂ ಎಫ್‌ಬಿಐಗೆ ತಾಂತ್ರಿಕ ನೆರವು ನೀಡಿದರೆ ಅದು ‘ಸರ್ಕಾರಕ್ಕೆ ಅತ್ಯಂತ ಅಪಾಯಕಾರಿ ಅಧಿಕಾರ ನೀಡಿದಂತೆ’ ಎಂದು ಕ್ಯಾಲಿಫೋರ್ನಿಯಾ ಮೂಲದ ಕಪರ್ಟಿನೊ ಕಂಪೆನಿ ಹೇಳಿದೆ. ಇವೆಲ್ಲ ಸರ್ಕಾರದ ಕಾರ್ಯಸಾಧನೆಯ ತಂತ್ರಗಳು, ‘ಗೂಢಲಿಪಿ’ ತಂತ್ರಜ್ಞಾನ ಇರುವುದೇ ಗ್ರಾಹಕನ ಖಾಸಗಿತನ ರಕ್ಷಣೆಗಾಗಿ. ಇದನ್ನು ಭೇದಿಸಲು ಸಾಧ್ಯವಾಗುವಂತ ತಂತ್ರಜ್ಞಾನ ಒದಗಿಸುವುದು ಅಥವಾ ಹಿಂಬಾಗಿಲಿನಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಕೂಡ ಬಳಕೆದಾರನ ಖಾಸಗಿತನದ ಜತೆ ರಾಜಿ ಮಾಡಿಕೊಂಡಂತೆ ಎಂದು ಈ ಕಂಪೆನಿ ಹೇಳಿದೆ.

ಡಿಜಿಟಲ್‌ ಖಾಸಗಿತನವನ್ನು ರಕ್ಷಿಸಿಕೊಳ್ಳಲು ಬಳಕೆದಾರರು  ಆ್ಯಪಲ್‌ ಐಫೋನನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯನ್ನು ‘ಎಫ್‌ಬಿಐ’ ತಾನಾಗಿಯೇ ಸೃಷ್ಟಿಸುತ್ತಿದೆ ಎಂಬ ಅಭಿಪ್ರಾಯಗಳೂ ಟ್ವಿಟರ್‌ನಲ್ಲಿ ವ್ಯಕ್ತವಾಗಿವೆ. ಆ್ಯಪಲ್‌–ಎಫ್‌ಬಿಐ ಸಂಘರ್ಷದಲ್ಲಿ, ಆ್ಯಪಲ್‌ ಪರವಾಗಿ ಕೋರ್ಟ್‌ನಲ್ಲಿ ವಾದ ಮಂಡಿಸಲು ಫೇಸ್‌ಬುಕ್‌, ಮೈಕ್ರೊಸಾಫ್ಟ್‌, ಗೂಗಲ್‌, ಟ್ವಿಟರ್‌ನಂತಹ ದೈತ್ಯ ಕಂಪೆನಿಗಳೂ ಕೈಜೋಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT