ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಸೃಷ್ಟಿಸಿದ ಇತಿಹಾಸ ಪ್ರೀತಿ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಅದು ಪುಲಿಗೆರೆಯ ಸೋಮನಾಥನಿಗೆ ಅಕ್ಷರಶಃ ಪಾಳು ದೇಗುಲದ ವಾಸದ ಸ್ಥಿತಿ. ಕಸ–ಕಡ್ಡಿಗಳ ರಾಶಿಯಾದ ದೇವಾ
ಲಯದ ಸಮುಚ್ಚಯ,  ಕುಸಿದ ಗೋಡೆಗಳು, ಮಣ್ಣಿನ ರಾಶಿಯಲ್ಲಿ  ಆಳೆತ್ತರ ಬೆಳೆದು ನಿಂತ ಹುಲ್ಲು, ಗಿಡಗಂಟೆಗಳು, ದನ ಕರುಗಳನ್ನು ಕಟ್ಟುವ ಕೊಟ್ಟಿಗೆಯಾಗಿದ್ದ ಆವರಣ...

ಇತಿಹಾಸ ಪ್ರಸಿದ್ಧ, ಜೈನ ಧಾರ್ಮಿಕ ಕ್ಷೇತ್ರ ಎನಿಸಿದ, ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೋಮನಾಥೇಶ್ವರನ ದೇವಾಲಯದ ಇದುವೇ? ಎಂದು ಕೇಳುವಂತಾಗಿತ್ತು.  ದೇಗುಲ ಸಂಕೀರ್ಣದಲ್ಲಿರುವ 30ಕ್ಕೂ ಹೆಚ್ಚು ಉಪ ದೇವಾಲಯಗಳಲ್ಲಿ ಹಲವಾರು ಕುಟುಂಬಗಳು ವಾಸವಾಗಿದ್ದವು. 

ಹಿಂಭಾಗದಲ್ಲಿರುವ ಅಂದಾಜು 150 ಅಡಿ ಆಳದ ಬಾವಿಯು ತ್ಯಾಜ್ಯದ ಗುಂಡಿಯಾಗಿ ದುರ್ನಾತ ಬೀರುತ್ತಿತ್ತು. ಸ್ವತಃ ಸೋಮನಾಥನ ಗುಡಿಯ ಮಂಟಪದ ಕೆಳಗೆ ಒರಳುಕಲ್ಲು (ರುಬ್ಬುಕಲ್ಲು) ಹಾಕಿಕೊಂಡವರಿದ್ದರು! ಮಣ್ಣಿನ ರಾಶಿಯಲ್ಲಿ ಕಳಾಹೀನವಾಗಿದ್ದ ಅದೊಂದು ಐತಿಹಾಸಿಕ ಮಹತ್ವದ ದೇವಾಲಯ ಎಂಬುದನ್ನು ಅಲ್ಲಿನವರು ಮರೆತಾಗಿತ್ತು.

ರಾಜ್ಯ ಪುರಾತತ್ವ ಇಲಾಖೆ ಕೆಲ ವರ್ಷಗಳ ಹಿಂದೆ ದೇವಾಲಯದ ಕೆಲಭಾಗಗಳನ್ನು ಜೀರ್ಣೋದ್ಧಾರ ಮಾಡಿ, ಅಲ್ಲಿ ನೆಲೆಸಿದ್ದ ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿತು. ದನಕರುಗಳನ್ನು ಹೊರ ಹಾಕಿ, ರಾಶಿ ಮಾಡಿದ್ದ ಕುಳ್ಳು–ಕಟ್ಟಿಗೆಗಳನ್ನು ಖಾಲಿ ಮಾಡಿಸಿತು. ಇನ್ನುಳಿದಂತೆ ಹೆಚ್ಚಿನ ಬದಲಾವಣೆಗಳೇನೂ ಕಾಣಲಿಲ್ಲ. ಮಣ್ಣಿನ ರಾಶಿಯಡಿ ಶಿಥಿಲಾವಸ್ಥೆಗೆ ಸಿಲುಕಿದ್ದ ದೇಗುಲ, ಎಣ್ಣೆ ಜಿಡ್ಡಿನಿಂದ ಮೂಲರೂಪವನ್ನು ಕಳೆದುಕೊಂಡಿದ್ದ ಕೆತ್ತನೆಗಳು,  ಮಲಿನವಾದ ಬಾವಿ, ಎಲ್ಲೆಂದರಲ್ಲಿ ಬಿದ್ದಿದ್ದ ಶಾಸನಗಳು... ಯಥಾಸ್ಥಿತಿಯಲ್ಲಿಯೇ ಉಳಿದವು.

ಆದರೆ ಇದೆಲ್ಲದಕ್ಕೂ ಕೊನೆ ಹಾಡುವ ಸಮಯ ಬಂದೀತು ಎಂದು ಸ್ವತಃ ಸೋಮನಾಥನೂ ಅಂದುಕೊಂಡಿರಲಿಲ್ಲವೇನೋ! ಅಂಥದೊಂದು ಗಳಿಗೆ ಕೂಡಿ ಬಂದಿದ್ದು ಮೂರು ವರ್ಷಗಳ ಹಿಂದೆ. ಸದಾ ಕಲಿಕಾರ್ಥಿಯಾಗಿ, ಹೊಸತನಕ್ಕೆ ತುಡಿಯುವ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ಸುಧಾ ಮೂರ್ತಿ ಅವರು ದೇವಾಲಯದ ಜೀರ್ಣೋದ್ಧಾರಕ್ಕೆ ಮನಸ್ಸು ಮಾಡಿದರು. ಪುರಾತತ್ವ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದು, ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

2012 ನವೆಂಬರ್‌ನಲ್ಲಿ ದೇಗುಲದ ಸಂಕೀರ್ಣದ ಜೀರ್ಣೋದ್ಧಾರಕ್ಕೆ ಸಜ್ಜಾಗಿದ್ದೇ ತಡ,  ಇತಿಹಾಸ, ಶಾಸನಗಳ ಮೇಲಿನ ಪ್ರೀತಿ ಕಾಳಜಿ ಅವರಿಂದ ಮತ್ತೊಂದು ಇತಿಹಾಸವನ್ನೇ ಬರೆಸಿತು. ಪ್ರವಾಸಿಗರಾರೂ ಹೊರಳಿ ನೋಡದಂತಾಗಿದ್ದ ಸೋಮೇಶ್ವರನ ತಾಣ ನೋಡನೋಡುತ್ತಿದ್ದಂತೆಯೇ ಬೆರಗು ಮೂಡಿಸುವಂತೆ ಬದಲಾಯಿತು. ಅಂದಾಜು ಐದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಗತವೈಭವ ಪಡೆದ ದೇಗುಲ, ಕಳೆದ ಡಿಸೆಂಬರ್ ಅಂತ್ಯದಲ್ಲಿ ಉದ್ಘಾಟನೆಗೊಂಡಿತು. ಆ ನಂತರದ ಎರಡೂವರೆ ತಿಂಗಳಲ್ಲಿ ಅಲ್ಲಿಗೆ ನಿತ್ಯ ಕನಿಷ್ಠ 300 ಪ್ರವಾಸಿಗರು ಭೇಟಿ ನೀಡಿದ್ದಾರೆ!

ಬದಲಾಗಿದ್ದು ಏನು?: ಮುಖ್ಯವಾಗಿ ಊರವರ ಮನಸ್ಸು. ದೇವಾಲಯದ ಜೀರ್ಣೋದ್ಧಾರ ನಡೆದಾಗಿನಿಂದಲೇ ಅವರಲ್ಲಿ ನಾಡು–ನುಡಿ, ಕಲೆ ಬಗೆಗಿನ ಪ್ರಜ್ಞೆಯನ್ನು ಎಚ್ಚರವಾಗಿಸಿದ್ದು; ಆ ಬಳಿಕ ಬೆರಗಿನ ಬದಲಾವಣೆ ಕಂಡ ದೇಗುಲ. ಗೋಪುರ ಸೇರಿದಂತೆ ಸಂಪೂರ್ಣ ದೇವಾಲಯವನ್ನು ಕೈಯಿಂದಲೇ ಸ್ವಚ್ಛಗೊಳಿಸಲಾಗಿದ್ದು, ಮಣ್ಣು ಮೆತ್ತಿದ್ದ, ಎಣ್ಣೆ ಬತ್ತಿಗಳ ಜಿಡ್ಡಿನಿಂದ ಕಾಣದಂತಾಗಿದ್ದ ನಾಜೂಕಿನ ಕೆತ್ತನೆಗಳು ನಿಚ್ಚಳವಾಗಿ ಕಾಣುತ್ತಿವೆ. ಹಿಂಭಾಗದಲ್ಲಿ ದೊಡ್ಡ ಬಾವಿ ಇದ್ದು, ಇದನ್ನು ಗೌರಲೆ ಎಂಬ ನೃತ್ಯಗಾತಿ ಕಟ್ಟಿಸಿದಳೆಂದು ಶಾಸನವೊಂದು ಹೇಳುತ್ತದೆ. ಈ ಬಾವಿ ಮಲಿನಗೊಂಡು ನಿರುಪಯುಕ್ತವಾಗಿತ್ತು.


ಅಲ್ಲಿ ವಿಸರ್ಜನೆಗೊಂಡ ಗಣೇಶ ವಿಗ್ರಹಗಳಿಂದ ತುಂಬಿದ ಹೂಳು, ಅಪಾರ ತ್ಯಾಜ್ಯವನ್ನೆಲ್ಲ ತೆಗೆದು ಸ್ವಚ್ಛಗೊಳಿಸಲಾಗಿದೆ. ಬಾವಿ ಕಟಾಂಜನವನ್ನು ಕಂಡಿದೆ. ಶುಭ್ರ ನೀರಿದೆ. ಇದರ ಹಿಂದೆಯೇ ಉದ್ಯಾನವೊಂದು ನಿರ್ಮಾಣವಾಗಿದೆ. ಮುಕ್ಕಾಗಿದ್ದ ಉಪ ದೇವಾಲಯಗಳು ದುರಸ್ತಿಗೊಂಡು, ಸ್ವಚ್ಛವಾಗಿವೆ. ಹೆಜ್ಜೆ ಇಡಲೂ ಆಗದ ಸ್ಥಿತಿಯಲ್ಲಿದ್ದ ಆವರಣ ಹಸನಾಗಿದೆ. ಮೂರೂ ಪ್ರವೇಶ ದ್ವಾರಗಳ ಮೂಲಕ ಆವರಣಕ್ಕೆ ನುಗ್ಗುತ್ತಿದ್ದ ಬಿಡಾಡಿ ದನಗಳ ಹಾವಳಿ ಈಗಿಲ್ಲ. ಹುಲ್ಲು ಕಾಣುವುದಿಲ್ಲ.  ಆವರಣವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವವರೂ ಬರುವುದನ್ನು ನಿಲ್ಲಿಸಿದ್ದಾರೆ. ನೋಡನೋಡುತ್ತಿದ್ದಂತೆಯೇ ಆದ ಈ ಬದಲಾವಣೆಗೆ ಊರೇ ಅಚ್ಚರಿಪಟ್ಟಿದೆ.

ಅಲ್ಲಲ್ಲಿ ಮಣ್ಣಿನಡಿ ಹೂತು ಹೋಗಿದ್ದ, ಚೆಲ್ಲಾಪಿಲ್ಲಿಯಾಗಿದ್ದ ಶಿಲಾಶಾಸನಗಳನ್ನು ಸಾಲಾಗಿ ಜೋಡಿಸಿಟ್ಟಿದ್ದು ಇತಿಹಾಸದ ವಿದ್ಯಾರ್ಥಿಗಳಿಗೆ ನಿಧಿ ಸಿಕ್ಕಂತಾಗಿದೆ. ದೇವಾಲಯದ ಮೊದಲಿನ ಸ್ಥಿತಿ ಕಂಡವರು ಈಗ ಭೇಟಿ ನೀಡಿದರೆ ಆಗಿರುವ ಬದಲಾವಣೆಯ ಮಹತ್ವ ಅರಿವಾಗುತ್ತದೆ. ಭಕ್ತರೊಬ್ಬರ ಸೇವಾರ್ಥ ಗರ್ಭಗುಡಿಯಲ್ಲಿ ಟೈಲ್ಸ್ ಹಾಕಿಸಿದ್ದನ್ನು ಹೊರತುಪಡಿಸಿ ದೇವಾಲಯವನ್ನು ಸಾಧ್ಯವಾದಷ್ಟು ಮೂಲರೂಪದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಇದರಿಂದ ದೇಗುಲದ ಅಂದಕ್ಕೆ ಧಕ್ಕೆ ಆಗಿದ್ದು, ಮುಂಚಿನಂತೆಯೇ ಇರಿಸಿಕೊಳ್ಳುವ ಯತ್ನ ಆಗಬೇಕಿದೆ.
ಬಾವಿಯಲ್ಲಿ ಸಿಕ್ಕ ಲಜ್ಜಾಗೌರಿ!

ಜೀರ್ಣೋದ್ಧಾರದ ಸಂದರ್ಭ ಬಾವಿ ಸ್ವಚ್ಛಗೊಳಿಸುವಾಗ ಅಲ್ಲಿನ ಹಲವು ಬಗೆಯ ತ್ಯಾಜ್ಯಗಳ ಜೊತೆ ಸಿಕ್ಕಿದ್ದು ‘ಲಜ್ಜಾಗೌರಿ’ಯ ಶಿಲ್ಪ! ಅಂದಾಜು 9ನೇ ಶತಮಾನಕ್ಕೆ ಸೇರಿದೆ ಎನ್ನಲಾದ ನಗ್ನಶಿಲ್ಪವನ್ನು ದೇವಾಲಯ ಸಂಕೀರ್ಣದ ಪುಟ್ಟದಾದ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿನ ಗರ್ಭಗುಡಿಯಲ್ಲಿ ನಿಚ್ಚಳ ಬೆಳಕಿದೆ. ಯಾಕೆಂದರೆ ಈ ಹಿಂದೆ ಅಲ್ಲಿ ವಾಸವಾಗಿದ್ದ ಕುಟುಂಬ ಅದನ್ನು ಅಡುಗೆ ಮನೆ ಮಾಡಿಕೊಂಡಿತ್ತಂತೆ!

ಯಾವುದೀ ಸೆಳೆತ?: ಇತಿಹಾಸದ್ದು. ಆದಯ್ಯನು ಸೌರಾಷ್ಟ್ರದಿಂದ ತಂದು ಪುಲಿಗೆರೆಯಲ್ಲಿ ಪ್ರತಿಷ್ಠಾಪಿಸಿದ ಎನ್ನಲಾದ ಪಾರ್ವತೀಸಹಿತ ನಂದಿವಾಹನನಾದ ಸೋಮೇಶ್ವರನದು. ಚಾಲುಕ್ಯ ಶಿಲ್ಪ ಕಲೆಯ ಸೌಂದರ್ಯದ ಸೆಳೆತವದು. ಇಂಥ ದೇಗುಲ ಜೀರ್ಣಾವಸ್ಥೆಯಲ್ಲಿದೆ ಎಂದು ತಿಳಿದು ಚಡಪಡಿಸಿದವರು ಸುಧಾ ಮೂರ್ತಿ. ಆ ಚಡಪಡಿಕೆ, ಅವರ ಆಸ್ಥೆಯ ಫಲವೇ ಜೀರ್ಣೋದ್ಧಾರಗೊಂಡ ಈ ಸೋಮನಾಥನ ದೇವಾಲಯ. ಅವರ ಒತ್ತಾಸೆಗೆ ಬೆಂಬಲವಾಗಿ ನಿಂತು, ಈ ಕಾರ್ಯದ ರೂವಾರಿ ಎನಿಸಿದವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಎಸ್.ವಿ. ವೆಂಕಟೇಶಯ್ಯ.
ಈ ಸಂದರ್ಭದಲ್ಲಿಯೇ  ಇನ್ಫೊಸಿಸ್ ಪ್ರತಿಷ್ಠಾನವು ತಜ್ಞ

ಡಾ. ದೇವರಕೊಂಡಾರೆಡ್ಡಿ ಹಾಗೂ ಡಾ.ಕೆ.ಆರ್. ಗಣೇಶ ಅವರ ಸಂಪಾದಕತ್ವದಲ್ಲಿ ‘ಲಕ್ಷ್ಮೇಶ್ವರದ ಶಾಸನಗಳು’ ಎಂಬ ಕೃತಿಯನ್ನು ಕೂಡ ಹೊರತಂದಿದೆ. ಹೀಗೆ ಪುನರುತ್ಥಾನ ಕಂಡ ದೇವಾಲಯದ ಆವರಣ ಇದೇ 12,13 ಮತ್ತು 14ರಂದು ‘ಇನ್ಫೊಸಿಸ್ ಪ್ರತಿಷ್ಠಾನ– ಲಕ್ಷ್ಮೇಶ್ವರ ಉತ್ಸವ’ದ ಸಂಗೀತ, ನೃತ್ಯ ಹಾಗೂ ಚಿತ್ರ ಸಂಭ್ರಮಕ್ಕೆ ವೇದಿಕೆಯಾಗಿ ಸಾವಿರಾರು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

‘ನಮ್ಮ ನೆಲದ ಅರಿವು ನಮಗಿಲ್ಲದೇ ಹೋದರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ದೇವಾಲಯ ನಿಂತಿತ್ತು. ನವೀಕರಿಸಿ ಅದರ ಮಹತ್ತನ್ನು ಸುಧಾ ಮೂರ್ತಿ ಅವರು ಮತ್ತೆ ತೋರಿಸಿಕೊಟ್ಟಿದ್ದಾರೆ. ಊರವರು ಇನ್ನು  ಆ ವಿಷಯವಾಗಿ ಸದಾ ಎಚ್ಚರದಿಂದ ಇರುತ್ತಾರೆ’ ಎಂದು ಭರವಸೆ ನೀಡುತ್ತಾರೆ ಹಿರಿಯರಾದ ಶಿವಾನಂದ ನೆಲವಿಗೆ.

ಹೊಸ ದೇವಾಲಯಗಳನ್ನು ಕಟ್ಟುವುದಕ್ಕಿಂತ ನಮ್ಮ ಸುತ್ತಮುತ್ತಲಲ್ಲೇ ಇರುವ ಐತಿಹಾಸಿಕ ಗುಡಿಗೋಪುರಗಳನ್ನು ಜೀರ್ಣೋದ್ಧಾರ ಮಾಡಬೇಕೆಂಬ ತಮ್ಮ ಅಭಿಲಾಷೆಯನ್ನು ಸುಧಾ ಮೂರ್ತಿ ಅವರು ಕಾರ್ಯರೂಪಕ್ಕೆ ಇಳಿಸಿ, ಮಾದರಿ ಹಾಕಿಕೊಟ್ಟಿದ್ದಾರೆ. ಲಕ್ಷ್ಮೇಶ್ವರ ಮಾತ್ರವಲ್ಲದೇ ಪ್ರಾಚೀನ ದೇವಾಲಯಗಳಿರುವ ಪ್ರತಿಊರಿನ ಜನರಿಗೂ ಅವುಗಳ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ.

ಸೌರಾಷ್ಟ್ರದ ಸೋಮನಾಥ: ಜೈನಕಾಶಿ ಎನಿಸಿದ್ದ ಇಲ್ಲಿ ಸೌರಾಷ್ಟ್ರದ ಸೋಮನಾಥೇಶ್ವರ ಪ್ರತಿಷ್ಠಾಪನೆಯಾದ ಬಗ್ಗೆ ಐತಿಹ್ಯವೊಂದಿದೆ.  ಅದು ಜೈನ ಹಾಗೂ ವೀರಶೈವ ಧರ್ಮದ ನಡುವಿನ ಘರ್ಷಣೆಯನ್ನು ಹೇಳುತ್ತದೆ.  ಸೌರಾಷ್ಟ್ರ ಪ್ರಾಂತ್ಯದ ಆದಯ್ಯ ಎಂಬ ಶಿವಭಕ್ತ ಇಲ್ಲಿಗೆ ಬಂದು ಜೈನಧರ್ಮದ ಪದ್ಮಾವತಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ.

ಶಿವಭಕ್ತರಿಗಾಗಿ ಮಾಡಿದ ಪ್ರಸಾದವನ್ನು ಆಕೆಯ ತಾಯಿ ಜೈನಮುನಿಗಳಿಗೆ ಬಡಿಸಿದ್ದನ್ನು ಕೇಳಿ ಕಿಡಿಯಾಗಿ, ಸೌರಾಷ್ಟ್ರದ ಸೋಮನಾಥನನ್ನು ತರಲು ಹೋದ. ಅಲ್ಲದೇ ಇಲ್ಲಿ ಸೋಮನಾಥನನ್ನು ಪ್ರತಿಷ್ಠಾಪಿಸಿಯೇ ತೀರುವುದಾಗಿ ಪ್ರತಿಜ್ಞೆ ಮಾಡಿದ. ಹೀಗೆ ಹೊರಟ ಆತನಿಗೆ ದಾರಿಯಲ್ಲಿ ಶಿವ ಪ್ರತ್ಯಕ್ಷನಾಗಿ,  ತಾನೇ ಪುಲಿಗೆರೆಯ ಬಸದಿಗೆ ಬಂದು ನಿಲ್ಲುವುದಾಗಿ ಹೇಳುತ್ತಾನೆ. ಆ ಪ್ರಕಾರ ಆದಯ್ಯ ಬಂದು ನೋಡಿದಾಗ ಇಲ್ಲಿನ ಸುರಹೊನ್ನೆ ಬಸದಿಯಲ್ಲಿ ಸೋಮನಾಥೇಶ್ವರ ನಿಂತಿದ್ದನಂತೆ.

ಸೋಮನಾಥೇಶ್ವರ ದೇವಾಲಯದಲ್ಲಿ ಗರ್ಭಗುಡಿ, ಅರ್ಧಮಂಟಪ, ನವರಂಗ, ಮುಖಮಂಟಪಗಳಿವೆ. ಮೇ ಕೊನೆ ವಾರದ 5 ದಿನಗಳ ಬೆಳಗಿನ ಸೂರ್ಯರಶ್ಮಿ ಈ ಎಲ್ಲ ಮಂಟಪ ದ್ವಾರಗಳನ್ನು ದಾಟಿ ಗರ್ಭಗುಡಿಯ ಶಿವಪಾರ್ವತಿಯರ ಮೇಲೆ ಬೀಳುತ್ತಿದ್ದು, ಅದನ್ನು ನೋಡಲು ಜನಸಾಗರವೇ ಸೇರಿರುತ್ತದೆ.

ಮೂರ್ತಿ ವೈಶಿಷ್ಟ್ಯ: ಎದ್ದುನಿಂತ ನಂದಿಯ ಮೇಲೆ ಪಾರ್ವತೀಸಹಿತ ಆಸೀನನಾಗಿರುವ ಶಿವನೇ ಈ ಸೋಮೇಶ್ವರ. ಸಾಮಾನ್ಯವಾಗಿ ಗರ್ಭಗುಡಿಯಲ್ಲಿ ಶಿವನು ಲಿಂಗರೂಪಿಯಾಗಿ,  ಎದುರಾಗಿ ಮಂಟಪದಲ್ಲಿ  ನಂದಿ ಇರುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಮಾತ್ರ ಎದ್ದು ನಿಂತ ನಂದಿಯ ಮೇಲೆ ಕುಳಿತ ಶಿವನ ಮೂರ್ತಿ ಇದೆ. ಅದರ ಹಿಂದೆ ಪಾರ್ವತಿಯ ಮೂರ್ತಿ ಇದ್ದು, ಲೋಕಸಂಚಾರಕ್ಕೆ ಹೊರಟುನಿಂತಂತೆ ಇದೆ.  ಈ ಬಗ್ಗೆ ಉಪಲಬ್ಧವಾದ ಬಹುತೇಕ ಶಾಸನಗಳು ಲಕ್ಷ್ಮೇಶ್ವರದ ಸೋಮನಾಥನನ್ನು ‘ಸ್ವಯಂಭೂ ಸೋಮನಾಥ’ ಎಂದು ಬಣ್ಣಿಸಿದ್ದಾಗಿ ಇತಿಹಾಸ ತಜ್ಞರು ಹೇಳುತ್ತಾರೆ.

ಲಕ್ಷ್ಮೇಶ್ವರದ ದೇವಾಲಯ ಮತ್ತು  ಬಸದಿಗಳು
ವ್ಯಾಪಾರೀ ಕೇಂದ್ರವಾಗಿ ಗುರುತಿಸಿಕೊಂಡಿರುವ ಗದಗದ ಲಕ್ಷ್ಮೇಶ್ವರವು ದೇವಾಲಯಗಳ, ಬಸದಿಗಳ ನಾಡು. ಪುಲಿಗೆರೆ ವ್ಯಾಪ್ತಿಯಲ್ಲಿ 771 ಬಸದಿಗಳು, 771 ಬಾವಿಗಳು ಇದ್ದವು ಎನ್ನಲಾಗುತ್ತದೆ. ಆದರೆ ಈಗ ಕೆಲವಷ್ಟೇ ಪ್ರಮುಖ ದೇವಾಲಯಗಳು, ಬಸದಿಗಳು ಇದ್ದು, ಸಾಕಷ್ಟು ರೂಪಾಂತರ ಪಡೆದಿವೆ.  ದೂದ್ನಾನಾ ದರ್ಗಾ, ಜುಮಾ ಮಸೀದಿ ಸೇರಿದಂತೆ ಆದಿಲ್ ಶಾಹಿಗಳ ಕಾಲದ ಮಸೀದಿಗಳೂ ಇವೆ. ಮೊದಲು ಊರ ಹೊರಗಿದ್ದ ಸೋಮನಾಥ ದೇವಾಲಯಕ್ಕೆ ಮೂರು ಪ್ರವೇಶ ದ್ವಾರಗಳಿದ್ದು,  ಇದೀಗ ಊರ ಒಳಗೇ ಇದೆ.

ಜೇಷ್ಠ ಲಿಂಗ, ರಾಮೇಶ್ವರ, ಹೋಬೇಶ್ವರ, ಸಿಂಧೇಶ್ವರ, ಭಟಾರಿ, ಬಳಬೇಶ್ವರ, ಚರ್ಮಕಾರ ದೇವಗೃಹ, ಅಗಸ್ತೇಶ್ವರ, ಗಣಿಕೇಶ್ವರ, ಕೇದಾರೇಶ್ಚರ, ರೆಂಮೇಶ್ವರ, ಕರ್ಮಟೇಶ್ವರ ದೇವಗೃಹ, ಸ್ವಯಂ ಸೋಮೇಶ್ವರ, ಮುದ್ದೇಶ್ವರ, ಕೇದಾರೇಶ್ವರ ದೇವಾಲಯಗಳು  ಇದ್ದವು ಎಂದು ಶಾಸನಗಳಲ್ಲಿ ಉಲ್ಲೇಖವಾಗಿವೆ. ಅವುಗಳಲ್ಲಿ ಕೆಲವು ಮಾತ್ರ ಈಗ ಉಳಿದಿವೆ.

ಶಂಖ ಬಸದಿ, ಮುಕ್ಕರ ಬಸದಿ, ಶ್ರೀವಿಜಯ ವಸತಿ, ಧವಳ ಜಿನಾಲಯ, ಗೊಗ್ಗಿಯ ಬಸದಿ, ಶಾಂತಿನಾಥ ಬಸದಿ, ಮಲ್ಲಿಸೆಟ್ಟಿ ಬಸದಿ ಸೇರಿದಂತೆ ಹಲವು ಬಸದಿಗಳಿವೆ. ಮಹಾಕವಿ ಪಂಪ ಇಲ್ಲಿನ ಶಂಖ ಬಸದಿಯಲ್ಲಿಯೇ ಆದಿ ಪುರಾಣವನ್ನು ಬರೆದನೆಂದು ಹೇಳಲಾಗುತ್ತದೆ.

*****
ಇತಿಹಾಸವೇ ಪ್ರೇರಣೆ
ದೇವಾಲಯ ಜೀರ್ಣೋದ್ಧಾರ ಮಾಡಿಸಲು ಪ್ರೇರಣೆ ನಾಡಿನ ಇತಿಹಾಸ. ನನ್ನ ತಂದೆಯವರೂ ಇತಿಹಾಸದ ಮೇಷ್ಟ್ರು ಆಗಿದ್ದರು. ಅಷ್ಟಕ್ಕೂ ಹುಬ್ಬಳ್ಳಿಯವಳಾದ ನನಗೆ ಲಕ್ಷ್ಮೇಶ್ವರ ದೂರದ್ದಲ್ಲ.  ಅಲ್ಲಿನ ಸೋಮನಾಥ ದೇವಾಲಯದ ಜೀರ್ಣೋದ್ಧಾರದ ಸಂದರ್ಭದಲ್ಲಿ ತುಂಬ ಬೇಸರವಾದ ಸಂಗತಿ ಎಂದರೆ ಅಂಥ ಐತಿಹಾಸಿಕ ತಾಣದ ಆವರಣವನ್ನೆಲ್ಲ ಜನರು ಅಷ್ಟೊಂದು ಗಲೀಜು ಮಾಡಿದ್ದು. ಈಗ ಪರಿಸ್ಥಿತಿ ಬದಲಾಗಿದೆ. ಸ್ಥಳೀಯರೇ ಒಂದು ಸಮಿತಿ ಮಾಡಿಕೊಂಡಿದ್ದಾರೆ. ಪುರಾತತ್ವ ಇಲಾಖೆಯು ಚೌಕಿದಾರರನ್ನು ನೇಮಿಸಿದೆ.
– ಸುಧಾ ಮೂರ್ತಿ
ಅಧ್ಯಕ್ಷರು, ಇನ್ಫೊಸಿಸ್ ಪ್ರತಿಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT