ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ... ರಾಜಕೀಯ ಹೊಂಚು ಹಾಕುತ್ತಿದೆ

ಮೀಸಲಾತಿ ಹೋರಾಟ
Last Updated 5 ಮಾರ್ಚ್ 2016, 8:12 IST
ಅಕ್ಷರ ಗಾತ್ರ

ಭಾರತದಲ್ಲಿ ಈಗ ಮೀಸಲಾತಿಯ ಚರ್ಚೆ ಮತ್ತು ಹೋರಾಟಗಳೆರಡೂ ಒಂದು ಹೊಸ ತಿರುವನ್ನು ಪ್ರವೇಶಿಸಿವೆ. ಮೀಸಲಾತಿಯ ವಲಯವನ್ನು ಪ್ರವೇಶಿಸಲು ಜಾತಿ ಶ್ರೇಣಿಯಲ್ಲಿ ಮೇಲಿನ ಸ್ತರಗಳಲ್ಲಿರುವ ಜಾತಿಗಳು ಆಗಾಗ್ಗೆ ಪ್ರಯತ್ನಗಳನ್ನು ನಡೆಸಿರುವುದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ರಾಜಕೀಯ ಪಕ್ಷಗಳ, ಆ ಜಾತಿ ಪ್ರಮುಖರ ಬೆಂಬಲವನ್ನು ಪಡೆಯಲು ಹಾಗೂ ಸಾರ್ವಜನಿಕ ಭಾವನೆಗಳನ್ನು ಬಡಿದೆಬ್ಬಿಸಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರ್ಯತಂತ್ರಗಳನ್ನು ರೂಪಿಸಿರುವುದು ಇವ್ಯಾವೂ ಇಂದು ನಿನ್ನೆಯೇನೂ ಪ್ರಾರಂಭವಾಗಿಲ್ಲ.

ಆದರೆ ಕಳೆದ ಕೆಲವು ದಿನಗಳಿಂದ ಈ ಹೋರಾಟ ಒಂದು ನಿಶ್ಚಿತ ಸ್ವರೂಪವನ್ನು ಪಡೆಯುತ್ತಿದ್ದು ಹರಿಯಾಣದಲ್ಲಿ ಜಾಟರಾಗಲಿ, ಮಹಾರಾಷ್ಟ್ರದಲ್ಲಿ ಮರಾಠರಾಗಲಿ, ಆಂಧ್ರದಲ್ಲಿ ಕಾಪುಗಳಾಗಲಿ, ಗುಜರಾತಿನಲ್ಲಿ ಪಟೇಲರಾಗಲಿ ಇಂದು ನೇರವಾಗಿ ಹೋರಾಟಕ್ಕಿಳಿದಿರುವುದು ಮೀಸಲಾತಿ ವಿಷಯದ ವಿಶ್ಲೇಷಣೆಗೆ ಒಂದು ಹೊಸ ಆಯಾಮವನ್ನು ತಂದಿದೆ. ಅಷ್ಟೇ ಅಲ್ಲ, ಜಾತಿಗಳ ಧ್ರುವೀಕರಣ ಕೂಡ ಒಂದು ಅಪಾಯಕಾರಿ ವಲಯವನ್ನು ಪ್ರವೇಶಿಸಲು ಸನ್ನದ್ಧವಾಗಿದೆ.

ಸಮಾಜದ ಸಂಪನ್ಮೂಲಗಳ ಅಸಮಾನ ಹಂಚಿಕೆಯನ್ನು ಸರಿಪಡಿಸಿ, ಸಾಮಾಜಿಕ ನ್ಯಾಯವನ್ನು ಎಲ್ಲ ಜಾತಿ, ವರ್ಗಗಳಿಗೆ ಒದಗಿಸಬೇಕೆಂಬ ಆಶಯವನ್ನು ಹೊಂದಿ ಅಸ್ತಿತ್ವಕ್ಕೆ ಬಂದ ಮೀಸಲಾತಿ ನೀತಿ ಸಹಜವಾಗಿಯೇ ಸಮಾಜದಲ್ಲಿ ಕೆಲ ಬದಲಾವಣೆಗಳನ್ನು  ತಂದಿತು.

ಶತಮಾನಗಳ ಕಾಲ ಸಾಮಾಜಿಕ, ಆರ್ಥಿಕ ಅನುಕೂಲಗಳನ್ನು ತಮ್ಮದಾಗಿಸಿಕೊಂಡಿದ್ದ ಜಾತಿಗಳಿಗೆ, ವಿಶೇಷವಾಗಿ ಸರ್ಕಾರಿ ವಲಯದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಾ ಹೋದಾಗ, ಬದಲಾಗುತ್ತಿರುವ ಭೂ ಸಂಬಂಧಗಳು ಹಾಗೂ ಕಳೆದು ಹೋಗುತ್ತಿರುವ ಕೃಷಿ ಭೂಮಿಯ ಕಾರಣದಿಂದಾಗಿ ಸಾಂಪ್ರದಾಯಿಕ ಆಸ್ತಿ ಮೂಲಗಳು ಕ್ಷೀಣಿಸುತ್ತಾ ಹೋದಾಗ ತಾವು ‘ವಂಚಿತರು’ ಎಂಬ ಭಾವನೆ ಜಾಗೃತವಾಗುತ್ತಾ ಹೋಯಿತು. ಹಿಂದುಳಿದ ವರ್ಗಗಳಿಗೆ ಸೇರ್ಪಡೆಯಾಗಲು ಈಗ ಕೆಲ ಜಾತಿಗಳು ನಡೆಸುತ್ತಿರುವ ಈ ಹೋರಾಟ ಈ ವಂಚಿತ ಭಾವನೆಯ ನೇರ ಫಲವೆಂದರೆ ಉತ್ಪ್ರೇಕ್ಷೆಯಾಗಲಾರದು.

ಹುಟ್ಟಿನಿಂದ ವ್ಯಕ್ತಿಯ ಸಾಮಾಜಿಕ ‘ಪ್ರಗತಿಗಿರುವ’ ಅಥವಾ ‘ಇಲ್ಲದಿರುವ’ ಅವಕಾಶಗಳು ನಿರ್ಧಾರಿತವಾಗುವ ಈ ವ್ಯವಸ್ಥೆಯಲ್ಲಿ, ಈ ಅಸಮಾನತೆಯನ್ನು ಸರಿದೂಗಿಸಿ, ಅವಕಾಶಗಳ ಹಂಚಿಕೆಯಲ್ಲಿ ‘ಸಮತೆ’ಯನ್ನು ಸಾಧಿಸುವ ಪ್ರಯತ್ನವಾಗಿಯೇ ಸಂವಿಧಾನ ಇಡೀ ವಿಶ್ವದಲ್ಲಿಯೇ ಅಗ್ರಮಾನ್ಯವೆನಿಸುವಂಥ ಮೀಸಲಾತಿ ನೀತಿಯನ್ನು ಜಾರಿಗೆ ತಂದದ್ದು. ದೇಶದ ಎಲ್ಲ ಪ್ರಜೆಗಳಿಗೂ ಸಮಾನ ಆಯ್ಕೆಯ ಅವಕಾಶಗಳಿದ್ದರೂ, ಈ ಅವಕಾಶಗಳ ಬಳಕೆಯಲ್ಲಿ ಸಮಾನತೆ ಇಲ್ಲವೆಂಬುದು ಸರ್ವವಿದಿತ.

ಒಂದರ್ಥದಲ್ಲಿ, ಸಮಾನತೆಗಾಗಿ ನಡೆಯುವ ಸಂಘರ್ಷ ಅಸಮಾನರ ನಡುವೆ ನಡೆಯುವ ಹೋರಾಟವೇ ಹೊರತು, ಸಮಾನ ಸ್ಥಿತಿಗಳಲ್ಲಿ ಬದುಕನ್ನು ನಡೆಸುವವರ ನಡುವೆ ನಡೆಯುವ ಹೋರಾಟವಲ್ಲ. ಪರಿಸ್ಥಿತಿ ಹೀಗಿರುವಾಗ ಶತಮಾನಗಳ ಇತಿಹಾಸವನ್ನು ಹೊಂದಿರುವ ಅಸಮಾನತೆಯನ್ನು ಅನುಭವಿಸುತ್ತಿರುವ ಜಾತಿಗಳಿಗೆ, ಸ್ವತಂತ್ರ ಭಾರತದಲ್ಲಿ ಮೇಲ್ಮುಖ ಸಾಮಾಜಿಕ ಚಲನೆಯನ್ನು ಸಾಧಿಸಲು ಒಂದು ವಿಶೇಷವಾದ ಅವಕಾಶವನ್ನು ಕಲ್ಪಿಸುವುದು ಸಂವಿಧಾನದ ಆಶಯವಾಗಿತ್ತು.

ಇದನ್ನು ಸಾಕಾರವಾಗಿಸುವ ನಿಟ್ಟಿನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ- ಈ ಮೂರು ಕ್ಷೇತ್ರಗಳಲ್ಲಿ ಸಾಮಾಜಿಕ ಶ್ರೇಣಿಯಲ್ಲಿ ಕೆಳ ಸ್ತರಗಳಲ್ಲಿ ಇರಿಸಲಾಗಿದ್ದ ಜಾತಿಗಳಿಗೆ ಮೀಸಲಾತಿಯನ್ನು ನೀಡುವಂಥ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು.

ಮೀಸಲಾತಿಯ ವಿಚಾರಕ್ಕೆ ಬಂದಾಗ ಭಾರತದಲ್ಲಿ ಸಂದಿಗ್ಧಗಳಿಗೆ ಎಡೆಮಾಡಿ ಕೊಟ್ಟಿರುವುದು ‘ಇತರ ಹಿಂದುಳಿದ ವರ್ಗಗಳು’ ಎಂಬ ಜಾತಿಗಳನ್ನೊಳಗೊಂಡ ಒಂದು ವರ್ಗ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜೊತೆಗೆ ಇತರ ಹಿಂದುಳಿದ ವರ್ಗಗಳೆಂದು ಗುರುತಿಸಲಾದ ಜಾತಿಗಳಿಗೂ ಮೀಸಲಾತಿಯ ಸೌಲಭ್ಯಗಳನ್ನು ಕೇಂದ್ರೀಯ ಮತ್ತು ರಾಜ್ಯ ಸರ್ಕಾರಿ ವಲಯಗಳಲ್ಲಿ ಕಲ್ಪಿಸಲಾಗಿದೆ.

ಸಂವಿಧಾನದ 340ನೇ ವಿಧಿಯ ಅನ್ವಯ ಇತರ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ಪರಿಶೀಲಿಸಿ ಅವರ ಪ್ರಗತಿಗೆ ಪೂರಕವಾದ ಕ್ರಮಗಳನ್ನು ಸೃಷ್ಟಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. 1980ರ ಮಂಡಲ್ ಆಯೋಗದ ವರದಿಯ ಪ್ರಕಾರ ದೇಶದಲ್ಲಿ ಇತರ ಹಿಂದುಳಿದ ವರ್ಗಗಳ ಪ್ರಮಾಣ ಶೇಕಡ 52ರಷ್ಟಿದ್ದರೆ, 2006ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆ ಈ ಪ್ರಮಾಣ ಶೇಕಡ 41ಕ್ಕೆ ಇಳಿದಿದೆ ಎಂದು ತಿಳಿಸಿತು. ಇತರ ಹಿಂದುಳಿದ ವರ್ಗಗಳು ಎಂಬ ಗುಂಪಿನಲ್ಲಿ ಜಾತಿಗಳ ‘ಸೇರ್ಪಡೆ’ ಅಥವಾ ‘ಹೊರತೆಗೆಯುವಿಕೆ’ ನಡೆಯುತ್ತಲೇ ಬಂದಿರುವಂಥ ಪ್ರಕ್ರಿಯೆ.

2015ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಒಂದು ಮಾಹಿತಿ ಮೂಲದ ಪ್ರಕಾರ, ಸಾರ್ವಜನಿಕ ವಲಯದಲ್ಲಿ ಶೇಕಡ 27ರಷ್ಟು ಮೀಸಲಾತಿ ಹಿಂದುಳಿದ ವರ್ಗಗಳಿಗೆ ನಿಗದಿಯಾಗಿದ್ದರೂ, ಕೆಲ ಹುದ್ದೆಗಳಲ್ಲಿ ಇವರ ಪ್ರಮಾಣ ಶೇಕಡ 12 ಅಥವಾ 10ಕ್ಕಿಂತಲೂ ಕಡಿಮೆಯಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ವಿಭಾಗಗಳಲ್ಲಿ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಿಗದಿತವಾದ ಹಣದ ಉಪಯೋಗ ಸೂಕ್ತವಾಗಿ ಆಗುತ್ತಿಲ್ಲ. ಈ ಪರಿಸ್ಥಿತಿ ಕೂಡ ಈ ಹೊತ್ತು ದೇಶದ ನಾನಾ ಭಾಗಗಳಲ್ಲಿ ಭುಗಿಲೇಳುತ್ತಿರುವ ಕೆಲ ಇತರ ಹಿಂದುಳಿದ ಜಾತಿಗಳ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಇತರ ಹಿಂದುಳಿದ ವರ್ಗಗಳು ಎನ್ನುವುದು ಸಮರೂಪವಾದ ವರ್ಗವಲ್ಲ. ಈ ವರ್ಗಕ್ಕೆ ಸೇರಿದವೆಂದು ಗುರುತಿಸಲಾಗುವ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಭಾಗವಹಿಸುವಿಕೆಯ ಪ್ರಮಾಣ ಏಕಪ್ರಕಾರವಾಗಿಲ್ಲ. ಇತರ ಹಿಂದುಳಿದ ಜಾತಿಗಳ ಅನೇಕ ಸದಸ್ಯರು ಪ್ರಾರಂಭಿಕ ಅನನುಕೂಲಗಳನ್ನು ಮೆಟ್ಟಿ ಸಮಾಜದ ಅನುಕೂಲಗಳನ್ನು ಪಡೆದಂಥ ಸ್ಥಿತಿಗೆ ತಲುಪಿರುವುದರಿಂದ ಅವರನ್ನು ‘ಕೆನೆ ಪದರ’ವೆಂದು ಪರಿಗಣಿಸಿ ಮೀಸಲಾತಿಯ ಅನುಕೂಲದಿಂದ ಹೊರತೆಗೆಯಬೇಕು ಎಂಬ ವಾದ ನ್ಯಾಯಾಲಯಗಳಿಂದ ಹಿಡಿದು, ಸಾರ್ವಜನಿಕ ವಲಯದವರೆಗೆ ಅನೇಕ ವೇದಿಕೆಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ; ಪ್ರತಿಭಟನೆಗಳಿಗೂ ಎಡೆಮಾಡಿದೆ.

ಪ್ರಸಕ್ತ ಹರಿಯಾಣದ ಜಾಟ್ ಪ್ರತಿಭಟನೆ ಕೂಡ ಈ ನಿಟ್ಟಿನಲ್ಲೇ ಸಾಗಿದೆ. ಈ ಸಮುದಾಯಕ್ಕೆ ಸಂದಿದ್ದ ಮೀಸಲಾತಿ ರದ್ದಾದದ್ದು, ರಾಜ್ಯದ ರಾಜಕೀಯ ವಲಯದಲ್ಲಿ ಅವರ ಪ್ರಭಾವ ಇಳಿಮುಖವಾಗತೊಡಗಿದ್ದು, ಇತರ ಜಾತಿಗಳು ಮತ್ತು ಜಾಟರ ನಡುವೆ ಹೆಚ್ಚುತ್ತಿರುವ ಅನುಮಾನಗಳು, ಅವರಿಗೆ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಬೇಕೆಂಬ ಬೇಡಿಕೆ ಹಿಂಸಾತ್ಮಕ ಸ್ವರೂಪವನ್ನು ತಳೆದದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಒಳಗಾದದ್ದು, ಜಾಟರ ಬೇಡಿಕೆಯನ್ನು ವಿರೋಧಿಸಲೆಂದೇ 35 ಜಾತಿಗಳನ್ನೊಳಗೊಂಡ ಒಕ್ಕೂಟವೊಂದು ಸೃಷ್ಟಿಯಾಗಿರುವುದು ಜಾತಿ ಜಾತಿಗಳ ನಡುವೆ ಸಮರ ಸ್ಥಿತಿ ನಿರ್ಮಾಣವಾಗಲು ಕಾರಣವಾಗುತ್ತಿವೆ.

ಇನ್ನು ಗುಜರಾತಿನಲ್ಲಿ ಪಟೇಲ್ ಸಮುದಾಯ ಮೀಸಲಾತಿಯ ಸೌಲಭ್ಯವನ್ನು ತಮಗೆ ಕಲ್ಪಿಸಬೇಕೆಂದು ನಡೆಸುತ್ತಿರುವ ಹೋರಾಟ ಕೂಡ ಅನುಕೂಲಕರ ಪರಿಸ್ಥಿತಿಯಲ್ಲಿರುವ ಒಂದು ವರ್ಗ ತನಗೆ ದಕ್ಕಬೇಕಾದ ಅವಕಾಶಗಳು ದೊರೆತಿಲ್ಲ ಎಂದು ಮಂಡಿಸಿರುವ ವಾದವಾಗಿದೆ. ಈ ಹೋರಾಟ ಕೂಡ ಹಿಂಸಾತ್ಮಕ ಸ್ವರೂಪವನ್ನು ತಳೆದಿದ್ದು ಮೀಸಲಾತಿ ಚರ್ಚೆಯ ಸುತ್ತ ಹೊಸ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ. ಪಟೇಲರ ಹೋರಾಟ ಮೀಸಲಾತಿಯ ಒಳಗಡೆ ಸೇರ್ಪಡೆಯಾಗಲು ನಡೆಯುತ್ತಿರುವ ಹೋರಾಟವೋ ಅಥವಾ ಮೀಸಲಾತಿಯ ವಿರೋಧಿಯೋ ಎನ್ನುವ ಪ್ರಶ್ನೆ ಕೂಡ ಎದ್ದಿದೆ.

ಇನ್ನು ರಾಜಸ್ತಾನದಲ್ಲಿ ನಡೆಯುತ್ತಿರುವ ಗುಜ್ಜರ್ ಪ್ರತಿಭಟನೆಯ ಸ್ವರೂಪ ಮೀಸಲಾತಿ ಪರವಾದರೂ ಸ್ವಲ್ಪ ಭಿನ್ನವಾದದ್ದು. ಈಗಾಗಲೇ ಇತರ ಹಿಂದುಳಿದ ವರ್ಗವೆಂದು ಪರಿಗಣಿತವಾಗಿರುವ ಗುಜ್ಜರ್‌ ಸಮುದಾಯ ಕೇಳುತ್ತಿರುವುದು ಪರಿಶಿಷ್ಟ ಪಂಗಡವೆಂಬ ಸ್ಥಾನವನ್ನು. ಈ ಪ್ರತಿಭಟನೆ ಕೂಡ ರಾಜಸ್ತಾನ ಮತ್ತು ನೆರೆ ರಾಜ್ಯಗಳಲ್ಲಿ ಹಿಂಸಾತ್ಮಕ ಪರಿಸ್ಥಿತಿ ಸೃಷ್ಟಿ ಮಾಡುವ ಹಂತವನ್ನು ತಲುಪಿದೆ. ಆಸ್ತಿ ಹಾಗೂ ಜೀವ ಹಾನಿಗೆ ಕಾರಣವಾಗಿದೆ. ಇವೆಲ್ಲವೂ ದೇಶದಲ್ಲಿ ಪ್ರಜಾಸತ್ತಾತ್ಮಕ ತಲ್ಲಣಗಳನ್ನು ಉಂಟುಮಾಡುತ್ತಿವೆ.

ಹಿಂದುಳಿದಿರುವಿಕೆ ಎಂದರೆ ಅದು ಒಂದು ವರ್ಗವನ್ನು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಅವಕಾಶಗಳಿಂದ ‘ಹೊರಗಿಡತಕ್ಕಂಥ’ ಒಂದು ಪರಿಸ್ಥಿತಿ. ಈ ಪರಿಸ್ಥಿತಿ ಸುಧಾರಿಸಬೇಕೆಂದರೆ ‘ಒಳಗೊಳ್ಳುವಿಕೆ’ಯ ಒಂದು ದೊಡ್ಡ ಆಂದೋಲನವೇ ನಡೆಯಬೇಕು.

ಆದರೆ ‘ಯಾರನ್ನು’ ‘ಎಲ್ಲಿ’ ‘ಎಷ್ಟರಮಟ್ಟಿಗೆ’ ‘ಯಾವ ಸ್ವರೂಪ’ದಲ್ಲಿ ಹೊರಗಿಡಲಾಗಿದೆ, ಮೀಸಲಾತಿಯ ಪ್ರಯೋಜನ ಯಾವ ಗುಂಪಿಗೆ ಎಷ್ಟು ತಲುಪಿದೆ, ಒಂದೇ ವರ್ಗ/ ಜಾತಿಯಲ್ಲಿರುವ ವ್ಯಕ್ತಿಗಳಲ್ಲಿ ಯಾರಿಗೆ ಸಾಮಾಜಿಕ, ಆರ್ಥಿಕ ಅನನುಕೂಲಗಳನ್ನು ಮೆಟ್ಟಿ ನಿಲ್ಲುವಂಥ ಶಕ್ತಿಯನ್ನು ಮೀಸಲಾತಿ ನೀಡಿದೆ ಅಥವಾ ಮೀಸಲಾತಿಯ ಸೌಲಭ್ಯವಿದ್ದೂ ಯಾವುದೇ ಬದಲಾವಣೆಯನ್ನು ಕಾಣದಂಥ ಸ್ಥಿತಿಯಲ್ಲಿ ಇರುವವರು ಯಾರು ಮತ್ತು ಅವರು ಏಕೆ ಹಾಗೆಯೇ ಇದ್ದಾರೆ- ಇವೇ ಮುಂತಾದ ಪ್ರಶ್ನೆಗಳು ಬಹು ಮುಕ್ತವಾಗಿ, ಮಾಹಿತಿ ಆಧಾರಿತವಾಗಿ ಚರ್ಚೆಗೆ, ಅಧ್ಯಯನಕ್ಕೆ ಒಳಗಾಗಬೇಕು.

ಇಂದು ದೇಶದಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮನ್ನು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಬುಡಕಟ್ಟುಗಳ ವ್ಯಾಪ್ತಿಗೆ ಸೇರಿಸಬೇಕೆಂಬ ಬೇಡಿಕೆ ಹೆಚ್ಚುತ್ತಾ ಹೋಗುತ್ತಿದೆ. ಇದನ್ನು ಒಬ್ಬ ಸಮಾಜ ವಿಜ್ಞಾನಿ ‘ಹಿಂದುಳಿದಿರುವಿಕೆಯ ಹಂಬಲ’ ಎಂದು ಕರೆಯುತ್ತಾರೆ.

ಬರಬರುತ್ತಾ ‘ನಾವು ವಂಚಿತರು’ ‘ಇತರರು ನಮ್ಮದಾಗಬೇಕಿದ್ದನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂಬ ‘ಬಲಿಪಶು ಮನಸ್ಥಿತಿ’ಗೆ ಅನೇಕ ಗುಂಪುಗಳು, ವ್ಯಕ್ತಿಗಳು ಒಳಗಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯನ್ನು ಪೋಷಿಸಿ ತಮ್ಮ ವೈಯಕ್ತಿಕ ಅಥವಾ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳನ್ನು ಪೋಷಿಸಿಕೊಳ್ಳುತ್ತಿರುವ ರಾಜಕೀಯ ವಲಯ ಮೀಸಲಾತಿ ಬೇಡಿಕೆಗಳಿಗೆ ಸೊಪ್ಪು ಹಾಕುತ್ತಿದೆ. ಸದ್ಯದ ಹಿಂಸೆಯಿಂದ ತಪ್ಪಿಸಿಕೊಳ್ಳಲು ಇಲ್ಲದ ಆಸೆಗಳನ್ನು ಹೊಸ ಮೀಸಲಾತಿ ಬೇಡಿಕೆಗಳನ್ನಿಡುತ್ತಿರುವವರಲ್ಲಿ ಸೃಷ್ಟಿಸುತ್ತಿದೆ.

ಅನೇಕ ಸಂದರ್ಭಗಳಲ್ಲಿ ಇವರ ಈ ಕ್ರಮ ನ್ಯಾಯಾಲಯಗಳು ಈಗಾಗಲೇ ನೀಡಿರುವ ತೀರ್ಪುಗಳಿಗೆ ತದ್ವಿರುದ್ಧವಾಗಿದೆ. ಆದರೆ ಇದೊಂದು ಅಪಾಯಕಾರಿ ಹೆಜ್ಜೆ. ಏಕೆಂದರೆ ಮುಂಬರುವ ದಿನಗಳಲ್ಲಿ ಈ ಹೋರಾಟಗಳು ಹೊಸ ಹೊಸ ಅಂತರ್ ರಾಜ್ಯ, ಅಂತರ್ ಗುಂಪು ಸಂಬಂಧಗಳನ್ನು ಹುಟ್ಟು ಹಾಕಲು ಸಜ್ಜಾಗಿವೆ. ಈಗಾಗಲೇ ಅಸಹನೆ, ಅಪನಂಬಿಕೆ, ಅಸಂತುಷ್ಟಿಗಳಿಂದ ಆವೃತವಾಗುತ್ತಿರುವ ಸಮಾಜದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿ
ಯಾಗುತ್ತದೆ. ಸ್ಫೋಟಕಾರಿ ಸಂದರ್ಭಗಳು ಸಮಾಜದ ನೆಮ್ಮದಿಯನ್ನು ಒತ್ತೆಯಿಡುವ ಮುನ್ನ ಸಂಬಂಧಪಟ್ಟವರೆಲ್ಲ ಎಚ್ಚೆತ್ತುಕೊಳ್ಳುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT