ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಶೋ ಧ್ಯಾನ ಕೇಂದ್ರ

ಮಾನವ ನಿರ್ಮಿತ ದೃಶ್ಯಕಾವ್ಯ
Last Updated 15 ಫೆಬ್ರುವರಿ 2016, 19:55 IST
ಅಕ್ಷರ ಗಾತ್ರ

ತುಂಬಾ ಬೇಸರವಾದಾಗ, ಅತಿಯಾದ ಒತ್ತಡದಿಂದ ಬಳಲಿದಾಗ ಪ್ರಶಾಂತವಾದ ಪರಿಸರಕ್ಕೋ, ಗಿರಿಧಾಮಗಳಿಗೋ, ದೇವಸ್ಥಾನಗಳಿಗೋ ಅಥವಾ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು ಸಹಜ. ಬೇಸರವಾದಾಗ ಮನಸ್ಸು ಪ್ರಶಾಂತತೆಯನ್ನು ಬಯಸುತ್ತದೆ.

ಅಂಥ ಪ್ರಶಾಂತವಾದ ಒಂದು ಸ್ಥಳವೇ ಸಾಕ್ಷಿ ರಿಟ್ರೀಟ್ ಓಶೋ ಧ್ಯಾನ ಕೇಂದ್ರ.  ತುಮಕೂರಿನಿಂದ ಶಿರಾ ದಾರಿಯಲ್ಲಿ ಸುಮಾರು 15 ಕಿ.ಮೀ ಸಾಗಿದಾಗ ಸಿಗುವ ಬೆಳ್ಳಾವಿ ಕ್ರಾಸ್‌ ಬಳಿ ಇದೆ ಈ ಕೇಂದ್ರ. ನಿಸರ್ಗದ ಚೆಲುವನ್ನು ಅನುಭವಿಸಲೆಂದು ಬರುವ ಪ್ರವಾಸಿಗರ ಮನವನ್ನು ಬಡಿದೆಬ್ಬಿಸಿ ಕುಣಿಯುವಂತೆ ಮಾಡಿಬಿಡುವ ಬೀಡಿದು. ಸಾಕ್ಷಾತ್ ಸ್ವರ್ಗದಲ್ಲಿದ್ದೇವೇನೋ ಅನಿಸಿಬಿಡುವ ಚೆಲುವಿನ ತಾಣವೂ ಹೌದು. ಮನಸ್ಸಿಗೆ ಅದೆಷ್ಟು ಆನಂದ. ಚಳಿಗಾಲ ಹಾಗೂ ಮಳೆಗಾಲದಲ್ಲಿ ಇಲ್ಲಿ ಮಂಜು ಮುಸುಕಿದ ಪರಿಸರ ನೋಡುವುದೇ ಒಂದು ಸೊಬಗು.

ಇಂತಹ ಸೌಂದರ್ಯವನ್ನು ಆಸ್ವಾದಿಸುತ್ತ ಶಾಂತಮೂರ್ತಿ ಬುದ್ಧನ ವಿಗ್ರಹದ ಮುಂದೆ ಕುಳಿತು ಕೆಲಕಾಲ ಧ್ಯಾನಾಸಕ್ತರಾದರೆ ಸಾಕು ಎಲ್ಲಾ ನೋವು, ಒತ್ತಡಗಳು ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತವೆ. ಚಳಿಗಾಲದಲ್ಲಂತೂ ಇಬ್ಬನಿಯ ಧಾರೆ ಹಸಿರ ಮೇಲೆ ಮುತ್ತಿನ ಹರಳಿನಂತೆ ಕಂಗೊಳಿಸುತ್ತಾ ಶೃಂಗಾರ ಕಾವ್ಯವನ್ನೇ ಕಡೆದಿಡುತ್ತದೆ.

ಈ ಓಶೋ ಧ್ಯಾನ ಕೇಂದ್ರವನ್ನು ನಿರ್ಮಿಸಿರುವುದು ತುಮಕೂರಿನ  ಪೃಥ್ವಿ ರೆಸ್ಟೋರೆಂಟ್‌ನ ಮಾಲೀಕ ಪೃಥ್ವಿ ಮಲ್ಲಣ್ಣ. ಪಿರಮಿಡ್ ಆಕಾರದಲ್ಲಿ ತೆಂಗಿನ ಗರಿಗಳನ್ನು ಬಳಸಿ ನಿರ್ಮಿಸಿರುವ ಧ್ಯಾನ ಕೇಂದ್ರ ಮಧ್ಯಾಹ್ನದ ಸುಡುಬಿಸಿಲಿನಲ್ಲಿಯೂ ತಂಪಾಗಿರುತ್ತದೆ. ಒಳಗೆ ಕಾಲಿಟ್ಟರೆ ಧ್ಯಾನಕೇಂದ್ರದ ಗೋಡೆಗಳಿಗೆ ನೇತುಹಾಕಿರುವ ಚಿತ್ರಪಟಗಳು ಮನಸಿಗೆ ಆಹ್ಲಾದವನ್ನುಂಟು ಮಾಡುತ್ತವೆ.

ಪರಿಸರಸ್ನೇಹಿ ವಸ್ತುಗಳಿಂದಲೇ ನಿರ್ಮಿತವಾದ ಸಾಕ್ಷಿಯಲ್ಲಿ, ಹುಲ್ಲು ಚಾವಣಿಗಳನ್ನು ಹೊಂದಿರುವ ಕುಟೀರಗಳು, ಕಲಾತ್ಮಕ ಬಾಗಿಲಿನ ಒಳಾಂಗಣ ಹಾದಿ, ಮರದ ಕಂಬಗಳು, ಕಲ್ಲಿನಲ್ಲೇ ಕೆತ್ತಿರುವ ಸುಂದರ ಕಲಾಕೃತಿಗಳು ನೋಡುಗರ ಕಣ್ಣುಗಳನ್ನು ಸೆಳೆಯುತ್ತವೆ. ‘ಮೌನ’ ಎಂಬ ಧ್ಯಾನ ಮಂದಿರ ಅಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ‘ಶಾರದಾ’ ಎಂಬ ಹೆಸರಿನ ಗ್ರಂಥಾಲಯದಲ್ಲಿ ಓಶೋ ಪುಸ್ತಕಗಳು, ಯೋಗಕ್ಕೆ ಸಂಬಂಧಿಸಿದ ಪುಸ್ತಕಗಳು, ಧ್ಯಾನ, ಸಂಗೀತದ ಸಿ.ಡಿಗಳು ಲಭ್ಯವಿವೆ. ‘ಪ್ರತಿಮಾ’ ಎಂಬ ಬಯಲು ರಂಗಮಂದಿರದಲ್ಲಿ ಸಂಜೆ ವೇಳೆ ನೃತ್ಯ ಪ್ರದರ್ಶನಗಳು, ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಬಹುದಾಗಿದೆ.

ಇದರೊಂದಿಗೆ ಸಾವಯವ ಕೃಷಿಯಿಂದ ಬೆಳೆದ ಹಣ್ಣು ತರಕಾರಿಗಳು ಇಲ್ಲಿ ಸಿಗುತ್ತವೆ. ಬರುವ ಪ್ರವಾಸಿಗರು ಉಳಿದುಕೊಳ್ಳಲು ಅನುಕೂಲವಾಗುವಂತೆ ಕೊಠಡಿ ಸೌಲಭ್ಯ, ಕ್ಯಾಂಪ್‌ಫೈರ್, ನಾಟಕಗಳ ಪ್ರದರ್ಶನಕ್ಕೆ ಹೇಳಿ ಮಾಡಿಸಿದ ಜಾಗ ಇದಾಗಿದೆ. ವಿವಿಧ ಪಕ್ಷಿಗಳ ಕಲರವವನ್ನು ಆನಂದಿಸಲು, ಛಾಯಾಗ್ರಹಣಕ್ಕೆ ತುಂಬಾ ಸೂಕ್ತವಾಗಿದೆ. ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಜಾಗದ ವ್ಯವಸ್ಥೆ ಕೂಡ ಇಲ್ಲಿದೆ.

ಇದರೊಂದಿಗೆ ಉತ್ತಮ ತಳಿಗಳ ದೇಸೀ ಹಸುಗಳ ಪೋಷಣೆಯೊಂದಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳು ದೊರೆಯುತ್ತವೆ. ಬರುವಂತಹ ಪ್ರವಾಸಿಗರ ವಾಹನಗಳನ್ನು ನಿಲ್ಲಿಸಲು ‘ಲಾಯ’ ಎಂಬ ಪ್ರತ್ಯೇಕ ಪಾರ್ಕಿಂಗ್ ಸ್ಥಳವೂ ಇದೆ. ಒಟ್ಟಾರೆಯಾಗಿ ನಗರಪ್ರದೇಶದ ಜೀವನದಿಂದ ಬಳಲಿ ಬೆಂಡಾದವರಿಗೆ ‘ಸಾಕ್ಷಿ’ ಸುಂದರವಾದ ಪ್ರದೇಶವಾಗಿದ್ದು, ಮನಸ್ಸಿಗೆ ಮುದ ನೀಡಿ ಆಹ್ಲಾದವನ್ನುಂಟು ಮಾಡುವುದರಲ್ಲಿ ಸಂಶಯವೇ ಇಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT