ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಹಣ್ಣುಗಳ ಒಡತಿ ಯೆಂಕಿ ಅಕ್ಕ

Last Updated 7 ಮಾರ್ಚ್ 2016, 19:59 IST
ಅಕ್ಷರ ಗಾತ್ರ

ಜೀವನವನ್ನು ಒಂದು ಕದನವೆಂದು ಹೆದರಿ ಬಿಟ್ಟು ಓಡಿ ಹೋಗದೆ, ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಕೊಂಡು, ಬುದ್ಧಿ ಹಾಗೂ ವಿವೇಕವನ್ನು ಆಯುಧವಾಗಿಸಿಕೊಂಡು, ‘ಬಂದದ್ದನ್ನೆಲ್ಲಾ ಎದುರಿಸುತ್ತೇನೆ’ ಎಂದು ಗಟ್ಟಿಯಾಗಿ ನಿಂತರೆ, ನಮ್ಮ ಪ್ರಯತ್ನಕ್ಕೆ ವಿಧಿಯೂ ಸಹಾಯ ಮಾಡುತ್ತದೆಂಬುದನ್ನು ತಿಳಿಸಿರುವ ಡಿ.ವಿ.ಜಿಯವರ ನುಡಿಗೆ ಅನ್ವರ್ಥ ಈ ಯೆಂಕಿ ಅಕ್ಕ. ಅಕ್ಷರದ ಸುಳಿವೇ ಇಲ್ಲದಿದ್ದರೂ ಸ್ವಾಭಿಮಾನಿಯಾಗಿ ಬದುಕಬೇಕು ಎಂದುಕೊಂಡ ಯೆಂಕಿಯ ಸ್ವಾವಲಂಬಿ ಬದುಕು ಇತರರಿಗೂ ಮಾದರಿ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕುಗ್ರಾಮ ಕಡೆಗದ್ದೆ ಕಂಚಿಗದ್ದೆ ಸಮೀಪದ ಯೆಂಕಿ ಸಿದ್ದಿಯ ಜೀವನದ ಕತೆ ಇದು. 70ರ ಆಸುಪಾಸಿನಲ್ಲಿರುವ ಇವರು ಅರಣ್ಯಾವಲಂಬಿತ ಆದಿವಾಸಿ ಸಮುದಾಯವಾದ ಸಿದ್ದಿ ಜನಾಂಗಕ್ಕೆ ಸೇರಿದವರು. ಏಳು ಮಕ್ಕಳ ತಾಯಿ. ಇಂದು ಎಲ್ಲರ ಜೊತೆ ಇದ್ದರೂ ತಮ್ಮ ಸಂಪಾದನೆಯಲ್ಲೇ ಬದುಕುತ್ತಿರುವ ಸ್ವಾಭಿಮಾನಿ ಮಹಿಳೆ. ಸ್ಥಳೀಯರ ಪ್ರಕಾರ ಯೆಂಕಿಗೆ ಯೆಂಕಿಯೇ ಸಾಟಿ. 

ಇಂತಿಪ್ಪ ಯೆಂಕಿಯ ಜೀವನ ಪುಟವನ್ನು ತೆರೆದು ನೋಡುವುದಾದರೆ,  ತುಂಡು ಭೂಮಿಯಲ್ಲಿ ಒಂದಿಷ್ಟು ದಿನ ಕೃಷಿ ಮಾಡಿ, ಮಿಕ್ಕ ದಿನಗಳಲ್ಲಿ ಕೃಷಿ ಕೂಲಿ ಮಾಡಿ ಬದುಕಿನ ಬಂಡಿ ಎಳೆಯುತ್ತಿದ್ದ ಬಡಪಾಯಿ. ಜೀವನ ಸುಖಮಯ ಎನ್ನಲಾಗದಿದ್ದರೂ ಸಂತೃಪ್ತವಾಗಿತ್ತು.  ‘ಇಂದು ಇಂದಿನದ್ದು; ನಾಳೆ ನಾಳೆಯದ್ದು, ಮುಂದಿನದ್ದು ಅದು ಬಂದಾಗ ನೋಡಿಕೊಳ್ಳುವಾ’ ಎಂಬ ಎಲ್ಲಾ ಆದಿವಾಸಿಗಳ  ಮನೋಭಾವವೇ ಈಕೆಯದ್ದು ಕೂಡಾ. 

ಹೀಗಿದ್ದ ಯೆಂಕಿಯ ಬದುಕು ಒಂದು ದಿನ ಬೀದಿಗೆ ಬಂತು. ಅದನ್ನು ಅವರ ಮಾತುಗಳಲ್ಲೇ ಕೇಳಿ...
‘ನಂಗೂ ಒಂಚೂರು ಜಮೀನಿತ್ತು. ಅದರಲ್ಲಿ ಭತ್ತ ಬೆಳೀತಿದ್ದು. ಚೂರು ಬಾಳೆ ಗಿಡಗಳೂ ಇದ್ವು. ಹ್ಯಾಂಗೊ ಜೀವ್ನ ಮಾಡ್ತಿದ್ದು. ಒಂದಿನ ಒಬ್ರು ಹೆಗಡೇರು ಬಂದ್ರು, ಈ ಜಮೀನು ನಂದು ಅಂದ್ರು. ಆಗ ನಮ್ಮ ಹಳ್ಳೀಲಿ ನಾನು ನನ್ನ ತಂಗಿ ಎಲ್ಲಾ ಇದ್ದೆವು. ನಮ್ಮ ಈ ಜಾಗಾನ ಖಾಲಿ ಮಾಡೋಕೆ ಹೇಳೀರು. ನಾ ಆಗಲ್ಲ ಹೇಳಿ ಹಟ ಮಾಡ್ದೆ. ನನ್ನ ಜಮೀನು ನಾ ಯಾಕೆ ನಿಮಗೆ ಬಿಟ್‌ಕೊಡ್ಬೇಕು ಕೇಳ್ದೆ. ಅದ್ಕೆ ಅವ್ರು, ನಿನ್ನ ಗಂಡ ತಗೊಂಡ ಸಾಲಕ್ಕೆ ನಿನ್ನ ಜಮೀನು ನಂಗೆ ಮಾರಿದ್ದ, ಅದ್ಕೆ ನೀ ಜಾಗ ಖಾಲಿ ಮಾಡ್ಬೇಕು, ಇಲ್ಲಾ ಅಂದ್ರೆ ಪೊಲೀಸ್ ಕರಿತೀನಿ ಅಂತ  ಹೇಳೀರು. ನಂಗೆ ಓದು ಬರಹಾ ಗೊತ್ತಿಲ್ಲ, ನನ್ನ ಗಂಡ ಹಾಗೂ ಭಾವ ನಮ್ ಜಮೀನನ್ನು ಅವರಿಗೆ ಮಾರಿದ್ರು.

ಇದು ಯಾವ್ದೂ ನಂಗೆ ಗೊತ್ತೇ ಇರ್ಲಿಲ್ಲ. ಕಡೆಗೂ ನಮಗೇ ಗೊತ್ತಿಲ್ಲದ ಈ ಸಾಲದ ಕಾರಣಕ್ಕಾಗಿ,  ನಮ್ಮ ಜೊತೆಲೇ ಇದ್ದ ನನ್ನ ತಂಗಿ, ಅವಳ ಸಂಸಾರಾನ ಜೀಪಲ್ಲಿ ಹಾಯ್ಕಂಡು ಮಾಯಿನ ಕಟ್ಟೆ ಕಡೆ ರಸ್ತಿ ಬದಿ ಬಿಟ್ರು ಬಂದ್ರು. ನಾ ಹೋಗ್ಲಿಲ್ಲ. ಪೊಲೀಸ್ ಕರೆಸ್ತೀನಿ ಅಂತ ಹೆದ್ರಸೀರು. ನಾ ಹೆದ್ರಲಿಲ್ಲ , ಊರೂ ಬಿಡ್ಲಿಲ್ಲ.  ಅಲ್ಲೇ ನನ್ನ ಜಮೀನಿನ ತಲೇಲಿ ಒಂದು ಹಾಳು ಜಾಗ ಇತ್ತು. ಅಲ್ಲೇ ಬಿಡಾರ ಹಾಯ್ಕಂಡು ಕೂತ್ಕಂಡೆ. ಸಣ್ಣ ಸಣ್ಣ ಮಕ್ಕಳು, ಜೀವನ ಕಷ್ಟ ಆತು. ಹಲಸಿನ ಕಾಯಿ, ಬೈನೆ ಮರದ ಹಿಟ್ಟು ಎಲ್ಲಾ ತಿಂದು ಜೀವನ ಮಾಡಿದೆ. ದುಡಿಯದ ಗಂಡ ಒಂದ್ಕಡೆ, ಸಣ್ಣ ಮಕ್ಕಳು ಇನ್ನೊಂದ್ ಕಡೆ, ಜೀವನ ಸಾಗಿಸಬೇಕಿತ್ತಲೆ? ಕೂಲಿಗೆ ಹೋದ್ರೆ ಇಡೀ ದಿನ ಮನೆ ಮಕ್ಕಳನ್ನು ಬಿಟ್ಟಿರೋದು ಕಷ್ಟ ಆಗ್ತಿತ್ತು.

ಏನ್‌ ಮಾಡೂಕು ಎಂದು ಯೋಚ್ನೆ ಮಾಡ್ಕಾಗ ಕಂಡದ್ದು ಮರ ಹತ್ತೂದು. ಚಿಕ್ಕ ವಯಸ್ನಲ್ಲಿ ಆಟ ಆಡೂಕೆ ಮರ ಹತ್ತಿದ್ದು ಈಗ ಸಹಾಯ ಮಾಡ್ತು. ಹಾಂಗೆ ಮರ ಹತ್ತಿ ಕಾಡು ಉತ್ಪತ್ತಿ ಒಟ್ಟ್ಹಾಕೂಕೆ ಸುರು ಮಾಡ್ದೆ. ಅದೇ ಕೈ ಹಿಡೀತು. ಆಮೇಲೆ ಅದನ್ನೇ ಮುಂದುವರಿಸ್ಕಂಡು ಬರ್ತಿದೀನಿ. ಇದೆಲ್ಲಾ ಆಗಿ ಭಾಳಾ ದಿನಾ ಆತು... ಈಗ ಯಜಮಾನ್ರಿಲ್ಲ. ಎಲ್ಲಾ ಮಕ್ಳೀಗೂ ಲಗ್ನ ಮಾಡೀನಿ. ಎಲ್ರೂ ಕೂಲಿ ನಾಲಿ ಮಾಡಕಂಡು ಇದಾರೆ. ನಾನು ಈಗ್ಲೂ ಕಾಡಲ್ಲಿ ಮರ ಹತ್ತಿ ಜೇನು ಕೀಳ್ತೀನಿ, ಮುರುಗಲು ಹಣ್ಣು ತರ್ತೀನಿ, ಮುಂಚೆ ಇದ್ನೆಲ್ಲಾ ಒಂಚೂರು ಮನೆ ಖರ್ಚಿಗೆ ಮಾಡ್ಕಂತಿದ್ದೆ. ಈಗ ಖರ್ಚಿಗೂ ಸ್ವಲ್ಪ ದುಡ್ಡು ಸಿಗ್ತದೆ. ಹೀಂಗೆ ನನ್ನ ಬದುಕು...’

ಯಾರದ್ದೋ ಮನೆಯಲ್ಲಿ ಜೀತ, ಕೂಲಿನಾಲಿ ಎಂದು ಕಳೆದುಹೋಗಬೇಕಿದ್ದ ಯೆಂಕಿಯಕ್ಕ ತಾವು ಇವೆಲ್ಲವನ್ನೂ ಮೀರಿ ಬದುಕು ನಡೆಸಿದ್ದನ್ನು ಹೆಮ್ಮೆಯಿಂದ ಹೇಳುತ್ತಿದ್ದರು. ಈ ಯೆಂಕಿ ಸಿದ್ದಿ ಇಂದು ಅರಣ್ಯದಲ್ಲಿ ದೊರೆಯುವ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದಾರೆ. ಈ ಭಾಗದಲ್ಲಿ ಮುರುಗಲು ಹಣ್ಣು ಹೇರಳವಾಗಿ ದೊರೆಯುತ್ತದೆ. ಅದನ್ನು ಸಂಗ್ರಹಿಸಿ ಮನೆ ಬಳಕೆಗೆ ಬೇಕಾದ ಹುಳಿ ಹಾಗೂ ಕೋಕಂ ಜ್ಯೂಸ್ ತಯಾರಿಸಿ ಮಾರಾಟ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಶಿರಸಿಯ ‘ಮಾತೃಭೂಮಿ ಸ್ವಸಹಾಯ ಗುಂಪು’ ಕೂಡ ಇಂಥ ಪ್ರಯತ್ನ ಮಾಡುತ್ತಿದೆ. ಯೆಂಕಿಯಕ್ಕ ಈ ಗುಂಪಿನ ಸದಸ್ಯೆಯಾಗಿದ್ದಾರೆ.

ಉಳಿದ ಸದಸ್ಯೆಯರು ತಂತಮ್ಮ ಬ್ಯಾಣ (ಮನೆಯ ಸಮೀಪ ಇರುವ ತೋಟ)ಗಳಲ್ಲಿರುವ ಮುರುಗಲನ್ನು ಸಂಗ್ರಹಿಸಿದರೆ, ಕಾಡಿನಲ್ಲಿ ದೊರೆಯುವ ಹಣ್ಣುಗಳಿಗೆ ಈಕೆಯೇ ಒಡತಿ.  ಸಹಾಯಕ್ಕೆ ಪಾರ್ವತಿ ಸಿದ್ದಿ. ಎಂಥ ಮರವಾದರೂ ಸೈ, ಕೆಳಗಿನಿಂದ ಮರವನ್ನೊಮ್ಮೆ ನೋಡಿದರೆ ಸಾಕು, ಅದು ಯೆಂಕಿಯಕ್ಕನ ತೆಕ್ಕೆಗೆ ಬಂದಂತೆಯೇ ಸರಿ. ಮುಂದಿನದು ಸಲೀಸು. ಕೈಗೆ ಸಿಗುವಷ್ಟನ್ನು ಕೆಳಗಿನಿಂದಲೇ ಕೊಯ್ದು, ಸಿಗಲಾರದ್ದನ್ನು ಮರ ಹತ್ತಿ ಉದುರಿಸಿ ಹೆಕ್ಕಿ, ಚೀಲವೋ ಬುಟ್ಟಿಯೋ ತುಂಬಿ ‘ಮಾತೃಭೂಮಿ’ಯ ಅಂಗಳಕ್ಕೆ ತಂದಿಳಿಸಿದರೆ ಉಳಿದವರಿಗೆ ನಿರಾಳ. 

‘ಬೇರೆಯವರೆಲ್ಲ ರೆಂಬೆ ಹೊಡಿತ್ತಂತ ಕೇಳಿದ್ದಿ. ನಾ ಹಾಂಗೆ ಮಾಡುದಿಲ್ಲ. ರೆಂಬೆ ಕಡುದ್ರೆ ಅದ್ರಲ್ಲಿ ಕಾಯಿ ಹಣ್ಣು ಎಲ್ಲಾ ಇರ್ತದಲ್ಲ. ಕಾಯಿ ಉಪಯೋಗಕ್ಕೆ ಬರೂದಿಲ್ಲ, ನಂಗೆ ಮುಂದಿನ್ವರ್ಸಕ್ಕೂ ಬೇಕಲ್ಲ. ಅದ್ಕೆ ಮರ ಹತ್ತಿ ಬರೀ ಹಣ್ಣನ್ನು ಮಾತ್ರ ಉದುರಿಸಿ  ತತ್ರೇನೆ’ ಎಂದು ಎಲ್ಲರಿಗೂ ಸುಸ್ಥಿರ ಸಂಗ್ರಹಣೆಯ ಪಾಠವನ್ನೂ ಹೇಳುತ್ತಾರೆ.ಯೆಂಕಿಯಕ್ಕನ ಸಂಗ್ರಹಣೆಯಲ್ಲಿ ಕೇವಲ ಮುರುಗಲೊಂದೇ ಅಲ್ಲ. ಇತರೆ ಉತ್ಪನ್ನಗಳಾದ ಉಪ್ಪಾಗೆ, ವಾಟೆ ದಾಲ್ಚಿನ್ನಿ ಮೊಗ್ಗು, ರಾಮಪತ್ರೆ,  ಜೇನು, ಅಣಲೆ ಕಾಯಿ, ಸುರಗಿ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಪರಿಣತರಿಗೆ ಸವಾಲೊಡ್ಡುವ ಹೆಜ್ಜೇನು ತುಪ್ಪದ ಸಂಗ್ರಹಣೆಗೆ ಮಾತ್ರ ತಮ್ಮ ಮಗನ ನೆರವನ್ನು ಪಡೆದುಕೊಳ್ಳುತ್ತಾರೆ. ಗಂಡನನ್ನು ಕಳೆದುಕೊಂಡು ಆರೇಳು ವರ್ಷಗಳೇ ಆದರೂ ಇದುವರೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಯಾವುದೂ ಇವರ ಪಾಲಿಗೆ ಬಂದಿಲ್ಲ. ಸದ್ಯ ಬದುಕಿಗೆ ಇರುವುದು ಕಾಡಿನ ಮರಗಳು ಮಾತ್ರ. ಇವುಗಳ ನಡುವೆಯೂ ಇವರದ್ದು ತೃಪ್ತ ಬದುಕು. ಮಕ್ಕಳು, ಅಳಿಯಂದಿರು, ಸೊಸೆಯಂದಿರು ಎಲ್ಲರೂ ಇದ್ದಾರೆ. ಆದರೂ ತಮ್ಮ ಖರ್ಚಿಗೆ ತಾವೇ ಸಂಪಾದನೆ ಮಾಡುವ ಇವರ ಬದುಕು ಆದರ್ಶಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT