ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ, ಭರವಸೆಗಳ ನಡುವೆ....

Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಆರನೇ  ವರ್ಷದ ವಿಶ್ವ ಟ್ವೆಂಟಿ–20 ಟೂರ್ನಿ ಈಗಾಗಲೇ ಆರಂಭವಾಗಿದೆ. ಅರ್ಹತಾ ಸುತ್ತಿನ ಕುತೂಹಲವೂ ಮುಗಿದು ಹೋಗಿದೆ. ಆದ್ದರಿಂದ ಈಗ ಟ್ರೋಫಿ ಗೆಲ್ಲುವವರು ಯಾರು ಎನ್ನುವ ಪ್ರಶ್ನೆ ಮೊಳಕೆಯೊಡೆದಿದೆ.

ಮೊದಲ ವಿಶ್ವ ಟೂರ್ನಿ ಆಡುತ್ತಿರುವ ಒಮನ್‌ಗೆ ನೆನಪಿನಲ್ಲಿ ಉಳಿಯುವಂಥದ್ದನ್ನು ಸಾಧಿಸಬೇಕೆನ್ನುವ ಗುರಿಯಿದೆ. ತವರಿನಲ್ಲಿಯೇ ಟೂರ್ನಿ ನಡೆಯುತ್ತಿರುವ ಕಾರಣ ಟ್ರೋಫಿಯನ್ನು ಭಾರತದಲ್ಲಿಯೇ ಉಳಿಸಿಕೊಳ್ಳಬೇಕೆನ್ನುವ ಆಸೆ ದೋನಿ ಬಳಗದ್ದು. ಹೋದ ವರ್ಷ ಚಾಂಪಿಯನ್‌ ಆಗಿದ್ದ ಶ್ರೀಲಂಕಾಕ್ಕೆ ಪ್ರಾಬಲ್ಯ ಮುಂದುವರಿಸುವ ಕನಸು.

ಕೆರಿಬಿಯನ್ ನಾಡಿನ ಕ್ರಿಕೆಟ್‌ಗೆ ನವಚೈತನ್ಯ ತುಂಬಿದ್ದ 2012ರ (ಆ ವರ್ಷ ವೆಸ್ಟ್‌ ಇಂಡೀಸ್‌ ಚಾಂಪಿಯನ್‌ ಆಗಿತ್ತು) ಸವಿ ನೆನಪನ್ನು ಮರುಕಳಿಸುವಂತೆ ಮಾಡುವ ಕಾತರ. ಏಕದಿನ ವಿಶ್ವಕಪ್‌ನ ಸಾಮ್ರಾಟ ಆಸ್ಟ್ರೇಲಿಯಾ, ವಿಶ್ವ ಶ್ರೇಷ್ಠ ಆಟಗಾರರನ್ನು ಒಳಗೊಂಡಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳಿಗೆ ಮೊದಲ ಪ್ರಶಸ್ತಿ ಗೆಲ್ಲುವ ಗುರಿ.

ಹೀಗೆ ಈ ಟೂರ್ನಿಯಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ತಂಡಗಳು ಹಿಂದಿನ ವಿಶ್ವ ಟೂರ್ನಿಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿವೆ. ಕೆಲ ತಂಡಗಳು ಪ್ರಶಸ್ತಿ ಸನಿಹ ಬಂದು ಮುಗ್ಗರಿಸಿವೆ. ಹಿಂದಿನ ಐದು ಟೂರ್ನಿಗಳಲ್ಲಿ ವಿವಿಧ ತಂಡಗಳ ಸಾಧನೆ ಏನಾಗಿತ್ತು. ಏನೆಲ್ಲಾ ಕುತೂಹಲದ ಅಂಶಗಳಿದ್ದವು.  ಈ ಎಲ್ಲಾ ವಿಷಯಗಳ ಕುರಿತು ಇಲ್ಲಿದೆ ಮಾಹಿತಿ.

2007ರ ಟೂರ್ನಿ (ದಕ್ಷಿಣ ಆಫ್ರಿಕಾ)
ಏಕದಿನ ಮಾದರಿಯಲ್ಲಿ ನಡೆದಿದ್ದ ವಿಶ್ವಕಪ್‌, ಕ್ರಿಕೆಟ್‌ ಪ್ರೇಮಿಗಳ ಪರಿಚಿತವಾಗಿತ್ತು. ಆದರೆ ಮೊದಲ ವರ್ಷ ನಡೆದ ವಿಶ್ವ ಟ್ವೆಂಟಿ–20 ಟೂರ್ನಿ ಸಹಜವಾಗಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್‌, ಕೆನ್ಯಾ, ನ್ಯೂಜಿಲೆಂಡ್‌, ಪಾಕಿಸ್ತಾನ, ಸ್ಕಾಟ್ಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.

ಚೊಚ್ಚಲ ಟೂರ್ನಿಯಲ್ಲಿಯೇ ಒಟ್ಟು 16 ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಿದ್ದವು. 27 ಪಂದ್ಯಗಳು ನಡೆದವು. ಪಾಕಿಸ್ತಾನದ ಶಾಹಿದ್ ಅಫ್ರಿದಿ ಸರಣಿ ಶ್ರೇಷ್ಠ ಗೌರವ ಪಡೆದರೆ, ಇದೇ ದೇಶದ ಉಮರ್ ಗುಲ್‌ (13) ಹೆಚ್ಚು ವಿಕೆಟ್ ಕಬಳಿಸಿದ್ದರು. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌
(ಒಟ್ಟು 265 ) ಹೆಚ್ಚು ರನ್ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದರು.

ಮೊದಲ ವರ್ಷದ ಟೂರ್ನಿ ಕೆಲ ವಿಶೇಷ ದಾಖಲೆಗಳಿಗೂ ಸಾಕ್ಷಿಯಾಯಿತು. ಅಂತರರಾಷ್ಟ್ರೀಯ ಟ್ವೆಂಟಿ–20 ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿ ಕ್ರಿಸ್ ಗೇಲ್‌ ಪಾಲಾಯಿತು. ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದರು.

ಇದೆಲ್ಲಕ್ಕಿಂತ ಹೆಚ್ಚಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯ ರೋಚಕ ಟೈ ಆಗಿತ್ತು. ಬೌಲ್ ಔಟ್‌ ಮೂಲಕ ಫಲಿತಾಂಶ ನಿರ್ಧರಿಸಿದಾಗ ಭಾರತ ಗೆಲುವು ಪಡೆದಿತ್ತು. ಇದು ಟೂರ್ನಿಯಲ್ಲಿ ದಾಖಲಾದ ಮೊದಲ ಮತ್ತು ಕೊನೆಯ ಟೈ ಪಂದ್ಯ ಆಗಿದೆ. ದಕ್ಷಿಣ ಆಫ್ರಿಕಾದ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿತ್ತು.

2009ರ ಟೂರ್ನಿ (ಇಂಗ್ಲೆಂಡ್‌)
ಎರಡನೇ ವರ್ಷದ ಟೂರ್ನಿಯಲ್ಲೂ 12 ರಾಷ್ಟ್ರಗಳು ಪಾಲ್ಗೊಂಡಿದ್ದವು. ಟೆಸ್ಟ್‌ ಆಡುವ ಒಂಬತ್ತು ತಂಡಗಳು, ಐಸಿಸಿಯಿಂದ ಮಾನ್ಯತೆ ಹೊಂದಿರುವ ರಾಷ್ಟ್ರಗಳ ಮೂರು ತಂಡಗಳು ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿದ್ದವು. 2007ರ ಟೂರ್ನಿಯಲ್ಲಿ ಆಡಿದ ತಂಡಗಳನ್ನು ಬಿಟ್ಟು ಎರಡು ಹೊಸ ತಂಡಗಳು ಸೇರ್ಪಡೆಯಾಗಿದ್ದವು. ಐರ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ಚೊಚ್ಚಲ ಟೂರ್ನಿ ಆಡಿದ್ದವು. ಕೆನ್ಯಾ, ಸ್ಕಾಟ್ಲೆಂಡ್‌ ಹಾಗೂ ಬರ್ಮುಡಾ ತಂಡಗಳು ಅರ್ಹತಾ ಸುತ್ತಿನಲ್ಲಿ ಸೋತಿದ್ದವು.

ಪುರುಷರ ವಿಶ್ವ ಟೂರ್ನಿ ನಡೆದ ವೇಳೆಯೇ ಮಹಿಳೆಯರ ಟೂರ್ನಿಯೂ ನಡೆದಿತ್ತು. ಮೆರ್ಲೆಬೋನ್‌, ಸರ್ರೆ ಮತ್ತು ಲಾರ್ಡ್ಸ್‌ ಅಂಗಳದಲ್ಲಿ ಪಂದ್ಯಗಳು ನಡೆದಿದ್ದವು. ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿದ್ದ ಪಾಕಿಸ್ತಾನ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು.

2010ರ ಟೂರ್ನಿ (ವೆಸ್ಟ್‌ ಇಂಡೀಸ್‌)
ಏಪ್ರಿಲ್‌ 30ರಿಂದ ಮೇ 16ರ ವರೆಗೆ ನಡೆದ ಮೂರನೇ ವರ್ಷದ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಕೆವಿನ್ ಪೀಟರ್ಸನ್‌ ಟೂರ್ನಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.

ವಿಶ್ವ ಟ್ವೆಂಟಿ–20 ಟೂರ್ನಿಯನ್ನು ಎರಡು ವರ್ಷಕ್ಕೊಮ್ಮೆ ನಡೆಸಲು ಐಸಿಸಿ ಮೊದಲೇ ನಿರ್ಧರಿಸಿತ್ತು. ಆದರೆ 2008ರಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್‌ ಟ್ರೋಫಿಯನ್ನು ಭದ್ರತಾ ಕಾರಣದಿಂದ ಮುಂದೂಡಲಾಗಿತ್ತು. ಜೊತೆಗೆ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಆಯೋಜನೆಯಾಗಿತ್ತು. ಆದ್ದರಿಂದ ಒಂದೇ ವರ್ಷದಲ್ಲಿ ಮತ್ತೊಂದು ವಿಶ್ವ ಚುಟುಕು ಟೂರ್ನಿ ನಡೆಸಲಾಯಿತು.

ಕಿಂಗ್‌ಸ್ಟನ್‌ ಓವಲ್‌, ಬರ್ಬಡಾಸ್‌ ಮತ್ತು ಪ್ರೊವಿಡಿಯನ್ಸ್‌ ಮೈದಾನಗಳಲ್ಲಿ ಪಂದ್ಯಗಳು ನಡೆದವು. ಆ್ಯಷಸ್‌ ಸರಣಿಯ ಬದ್ಧ ವೈರಿಗಳಾದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್‌ ಪೈಪೋಟಿ ವಿಶ್ವದ ಗಮನ ಸೆಳೆದಿತ್ತು.

2012ರ ಟೂರ್ನಿ (ಶ್ರೀಲಂಕಾ)
ಏಷ್ಯಾದ ನೆಲದಲ್ಲಿ ನಡೆದ ಮೊದಲ ವಿಶ್ವ ಚುಟುಕು ಕ್ರಿಕೆಟ್ ಟೂರ್ನಿ ಇದಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ಪ್ರಶಸ್ತಿ ಗೆದ್ದ ವೆಸ್ಟ್‌ ಇಂಡೀಸ್ ತಂಡಕ್ಕೆ ಇಲ್ಲಿ ಲಭಿಸಿದ ಚಾಂಪಿಯನ್‌ ಪಟ್ಟ ನವಚೈತನ್ಯ ತುಂಬಿತ್ತು.

ಅಸಾಧಾರಣದ ದೈಹಿಕ ಸಾಮರ್ಥ್ಯ ಹಾಗೂ ಪ್ರತಿಭಾವಂತರನ್ನು ಹೊಂದಿರುವ ಕೆರಿಬಿಯನ್ ನಾಡಿನ ತಂಡ ಅಂಗಳದಾಚೆಯೂ ಸಾಕಷ್ಟು ವಿವಾದ ಮಾಡಿತ್ತು. ಈ ದೇಶದ ಕ್ರಿಕೆಟ್ ಆಡಳಿತ ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿ ಮಾಡುತ್ತಿತ್ತು. 2004ರಲ್ಲಿ ವಿಂಡೀಸ್ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿತ್ತು.

ಆಗ ವಿವಿಯನ್‌ ರಿಚರ್ಡ್ಸ್‌, ಮೈಕಲ್ ಹೋಲ್ಡಿಂಗ್‌, ಕ್ಲೈವ್‌ ಲಾಯ್ಡ್ ಅವರಂಥ ದಿಗ್ಗಜರು ಆಡಿದ್ದರು. ಆ ಬಳಿಕ ಆಡಿದ್ದ  ಐಸಿಸಿ ಟೂರ್ನಿಗಳಲ್ಲಿ ವಿಂಡೀಸ್‌ ಕೇವಲ ನಿರಾಸೆ ಅನುಭವಿಸಿತ್ತು. ಆದ್ದರಿಂದ 2012ರಲ್ಲಿ ಸಿಕ್ಕ ಟ್ರೋಫಿ ವಿಂಡೀಸ್ ತಂಡಕ್ಕೆ ಹೊಸ ಹುಮಸ್ಸು ತುಂಬಿತು.
ಇದರೊಂದಿಗೆ ಮೂರೂ (ಐಸಿಸಿ ಏಕದಿನ ವಿಶ್ವಕಪ್‌, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟ್ವೆಂಟಿ–20) ಪ್ರತಿಷ್ಠಿತ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಎರಡನೇ ತಂಡವೆನಿಸಿತ್ತು. ಭಾರತ ಮೊದಲು ಈ ಸಾಧನೆ ಮಾಡಿತ್ತು.

2014ರ ಟೂರ್ನಿ (ಬಾಂಗ್ಲಾದೇಶ)
2011ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಆತಿಥ್ಯ ವಹಿಸಿದ್ದವು. ಇದಾದ ಮೂರೇ ವರ್ಷಗಳಲ್ಲಿ ಬಾಂಗ್ಲಾಕ್ಕೆ ಸ್ವತಂತ್ರವಾಗಿ ಮತ್ತೊಂದು ಮಹತ್ವದ ಟೂರ್ನಿ ಆಯೋಜಿಸಲು ಅವಕಾಶ ಲಭಿಸಿತು. ಇದರಲ್ಲಿ ಬಾಂಗ್ಲಾ ಯಶಸ್ವಿಯೂ ಆಯಿತು. ಹಾಂಕಾಂಗ್‌, ನೇಪಾಳ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಅವಕಾಶ ಪಡೆದಿದ್ದವು. ಬಾಂಗ್ಲಾದ ಎಂಟು ನಗರಗಳಲ್ಲಿ ಪಂದ್ಯಗಳು ನಡೆದವು.

ಈ ಟೂರ್ನಿ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿತು. ಮೊದಲ ಬಾರಿಗೆ 16 ತಂಡಗಳು ಪಾಲ್ಗೊಂಡಿದ್ದವು. ಫೈನಲ್‌ನಲ್ಲಿ ಭಾರತ ಮತ್ತು ಲಂಕಾ ತಂಡಗಳು ಪೈಪೋಟಿ ನಡೆಸಿದ್ದವು. ಲಂಕಾ ಚಾಂಪಿಯನ್‌ ಆಗಿತ್ತು. ಇದರಿಂದ ಟೂರ್ನಿಯಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಏಕೈಕ ತಂಡ ಎನ್ನುವ ಸಾಧನೆ ಮಾಡುವ ಭಾರತದ ಕನಸು ನುಚ್ಚು ನೂರಾಗಿತ್ತು. 

ಮಾದರಿ ಹುಟ್ಟಿದ ಕಥೆಯೂ..
ಜಗತ್ತಿಗೆ ಕ್ರಿಕೆಟ್‌ ಪರಿಚಯಿಸಿದ ಇಂಗ್ಲೆಂಡ್‌ನಲ್ಲಿ ಹಲವಾರು ಪ್ರತಿಷ್ಠಿತ ದೇಶಿ ಟೂರ್ನಿಗಳು ನಡೆಯುತ್ತವೆ. ಸಂಡೇ ಲೀಗ್‌, ಗಿಲ್ಲಾಟೆ ಕಪ್‌ ಮತ್ತು ಬೆನ್ಸನ್‌–ಹಾಡ್ಜಸ್‌ ಅವುಗಳಲ್ಲಿ ಪ್ರಮುಖವಾದವು.

ಭಾರತದಲ್ಲಿ ರಣಜಿ, ಇರಾನಿ ಹಾಗೂ ವಿಜಯ್ ಹಜಾರೆ ಟೂರ್ನಿಗಳಿಗೆ ಇರುವಂಥ ಪ್ರಾಮುಖ್ಯತೆ ಆ ಟೂರ್ನಿಗಳಿಗೆ ಲಭಿಸುತ್ತಿತ್ತು. 1972ರಲ್ಲಿ ಮೊದಲ ಬಾರಿಗೆ ಬೆನ್ಸನ್‌ ಹಾಗೂ ಹಾಡ್ಜಸ್‌ ಟೂರ್ನಿ ನಡೆಯಿತು. ಹೆಚ್ಚು ಪ್ರಾಯೋಜಕತ್ವ ಹೊಂದಿದ್ದ ಏಕದಿನ ಟೂರ್ನಿ ಎನ್ನುವ ಖ್ಯಾತಿ ಇದಕ್ಕಿತ್ತು. ಇಂಗ್ಲೆಂಡ್‌ನ ನಾಲ್ಕು ವಲಯಗಳಿಂದ ಒಟ್ಟು 20 ತಂಡಗಳು ಪೈಪೋಟಿ ನಡೆಸುತ್ತಿದ್ದವು.

ಈ ಟೂರ್ನಿ 2002ರಲ್ಲಿ ಕೊನೆಯ ಬಾರಿಗೆ ನಡೆಯಿತು. ಆದ್ದರಿಂದ ಇದರ ಬದಲಾಗಿ ಹೊಸ ಟೂರ್ನಿಯನ್ನು ಆರಂಭಿಸಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ ಆಗಿನ ಮಾರುಕಟ್ಟೆ ವಿಭಾಗದ ಮ್ಯಾನೇಜರ್‌ ಸ್ಟುವರ್ಟ್‌ ರಾಬರ್ಟ್‌ಸನ್‌ ದೇಶಿ ಟ್ವೆಂಟಿ–20 ಟೂರ್ನಿಯನ್ನು ಆಯೋಜಿಸುವ ವಿಚಾರವನ್ನು ಮುಂದಿಟ್ಟಿದ್ದರು.

ಇದಕ್ಕೆ ಪರ ವಿರೋಧ ಚರ್ಚೆಗಳು ನಡೆದರೂ ಅಂತಿಮವಾಗಿ ಟೂರ್ನಿ ನಡೆಸಲು ಇಂಗ್ಲೆಂಡ್ ಮಂಡಳಿ ಒಪ್ಪಿಕೊಂಡಿತು. ಹೀಗೆ ಹುಟ್ಟಿಕೊಂಡ ಚುಟುಕು ಮಾದರಿ ಈಗ ಎಲ್ಲರ ಮೆಚ್ಚುಗೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT