ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ ಅರಿವಿಗೆ ವಿರುದ್ಧವಾದದ್ದು...

Last Updated 8 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಹಾಸ್ಯ ಎಂಬುದು ಎಲ್ಲವನ್ನೂ ಹಗುರವಾಗಿ ನೋಡುವ ಮನೋಭಾವದಿಂದ ಬರುವುದಿಲ್ಲ. ಮೂಲದಲ್ಲಿ ಎಲ್ಲವೂ ಸರಿಯಾಗಿ ಇದೆ. ಯಾವುದೇ ಸಂಕಷ್ಟಗಳಿದ್ದರೂ ಅದು ಕರಗಿಹೋಗುತ್ತದೆ. ಕಷ್ಟ ಎಂಬುದು ಭ್ರಮೆ ಎಂಬ ಸತ್ಯದ ಅರಿವಿನಿಂದ ಮಾತ್ರ ಎಲ್ಲವನ್ನೂ ತಮಾಷೆ ಮಾಡಲು ಸಾಧ್ಯವಾಗುತ್ತದೆ.

ನಿಮ್ಮೊಳಗೆ ಸದಾ ಪ್ರೀತಿ ಮತ್ತು ಉಲ್ಲಾಸ ತುಂಬಿಕೊಳ್ಳುತ್ತಿದ್ದರೆ ನೀವು ಖಿನ್ನತೆಗೊಳಗಾಗಲು ಸಾಧ್ಯವೆ ಇಲ್ಲ. ಖಿನ್ನತೆ ಎಂಬುದು ಭಯ, ದುಃಖ ಮತ್ತು ಬೇಸರದ ಮಿಶ್ರಣವಾಗಿರುತ್ತದೆ. ನಿಮ್ಮನ್ನು ನೀವು ಗಂಭೀರವಾಗಿ ಪರಿಗಣಿಸಿದಾಗ ಖಿನ್ನತೆ ನಿಮ್ಮಲ್ಲಿ ಮೂಡುತ್ತದೆ. ನೀವು ಬದುಕಿನತ್ತ ನಕ್ಕಾಗ ಬದುಕು ಸಹ ನಿಮ್ಮತ್ತ ಜೋರಾಗಿ ನಗುತ್ತದೆ. ನಿಮ್ಮ ಆತ್ಮಕ್ಕೆ ನೀವೇ ಸಿಹಿ ಉಣಿಸುತ್ತೀರಿ. ಬದುಕಿನ ದ್ವಂದ್ವಗಳು ಹಾಗೂ ಅಸಂಗತ ಸಂಗತಿಗಳನ್ನು ಇದ್ದಂತೆಯೇ ಒಪ್ಪಿಕೊಳ್ಳುವುದನ್ನು ಮನೋವಿಜ್ಞಾನದಲ್ಲಿ  ‘ಕಾಸ್ಮಿಕ ಹ್ಯೂಮರ್’ ಎಂದು ಕರೆಯುತ್ತಾರೆ. ನಿಮ್ಮತ್ತ ಹಾಗೂ ಇತರರತ್ತ ಪ್ರೀತಿ, ಗೌರವ ಕಳೆದುಕೊಳ್ಳದೇ ಮಾಡುವ ಹಾಸ್ಯ ’ಕಾಸ್ಮಿಕ್ ಹ್ಯೂಮರ್’.

ಬಿಷಪ್ ಫಾಲ್ಟನ್ ಶೀನ್ ಸದಾ ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತಿದ್ದರು. ಹೊಸ ನಗರವೊಂದಕ್ಕೆ ಪ್ರವಚನ ನೀಡಲು ತೆರಳಿದ್ದರು. ಪ್ರವಚನ ಏರ್ಪಡಿಸಿದ್ದ ಸಂಭಾಗಣ ಎಲ್ಲಿದೆ ಎಂದು ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಬಳಿ ಕೇಳಿದರು. ಟೌನ್‌ಹಾಲ್ ದಿಕ್ಕಿಗೆ ಕೈತೋರಿಸಿದ ಬಾಲಕನೊಬ್ಬ ಅಲ್ಲಿ ನಿಮಗೇನು ಕೆಲಸ ಎಂದು ಪ್ರಶ್ನಿಸಿದ. ’ಸ್ವರ್ಗದ ಸಾಮ್ರಾಜ್ಯಕ್ಕೆ ದಾರಿ ಯಾವುದು’ ಎಂಬ ವಿಷಯದ ಕುರಿತು ಪ್ರವಚನ ನೀಡುತ್ತಿದ್ದೇನೆ ಎಂದು ಬಿಷಪ್ ಉತ್ತರಿಸಿದರು. ಕೂಡಲೇ ಜೋರಾಗಿ ನಕ್ಕ ಆ ಬಾಲಕ ’ನಿಮಗೆ ಟೌನ್‌ಹಾಲ್ ದಾರಿಯೇ ಗೊತ್ತಿಲ್ಲ.

ಇನ್ನು ಸ್ವರ್ಗದ ಹಾದಿ ಹೇಗೆ ತೋರಿಸುವಿರಿ?’ ಎಂದು ಕೇಳಿದ. ಬಿಷಪ್ ತಮ್ಮ ಪ್ರವಚನಗಳಲ್ಲೆಲ್ಲ ಈ ಘಟನೆಯನ್ನು ಉಲ್ಲೇಖಿಸಿ ನಗುತ್ತಿದ್ದರು. ಶಿಲ್ಪಿ ಡ್ಯಾನಿಯಲ್ ಚೆಸ್ಟರ್ ಶ್ರೇಷ್ಠ ತತ್ವಜ್ಞಾನಿ ರಾಲ್ಫ್ ವಾಲ್ಡೊ ಎಮರ್‌ಸನ್‌ನ ಪ್ರತಿಮೆಯನ್ನು ಕೆತ್ತುತ್ತಿದ್ದ. ಎಮರಸನ್ ನಿತ್ಯವೂ ಚೆಸ್ಟರ್ ಸ್ಟುಡಿಯೊಕ್ಕೆ ಹೋಗುತ್ತಿದ್ದ. ಒಂದು ದಿನ ಪ್ರತಿಮೆಯತ್ತ ನೋಡಿದ ಎಮರಸನ್ ನನಗೆ ಹೆಚ್ಚೆಚ್ಚು ಹೋಲಿಕೆಯಾಗುತ್ತಿದ್ದಂತೆ ಇದು ಕೆಟ್ಟದಾಗಿ ಕಾಣುತ್ತಿದೆ ಎಂದು ಉದ್ಗರಿಸಿದ. ತಮ್ಮನ್ನು ತಾವು ಹಗುರಾಗಿಸಿಕೊಳ್ಳುವುದು, ಗಾಂರ್ಭೀಯವನ್ನು ತೊರೆಯುವುದು ಹೀಗೆ.

ಸಂತರು ತಮ್ಮ ಶಿಷ್ಯರ ಅಹಂಕಾರಗಳನ್ನು ಕಿತ್ತೊಗೆಯುವಲ್ಲಿ ಸಿದ್ಧಹಸ್ತರು. ನಾನು ಸತ್ಯದ ಸಂತನಾಗಲು ಬಯಸುತ್ತೇನೆ ಎಂದು ಶಿಷ್ಯನೊಬ್ಬ ಹೇಳಿದ. ೪೫ ವರ್ಷದವರೆಗೂ ಹಾಸ್ಯಕ್ಕೆ ಒಳಗಾಗಲು, ಉಪೇಕ್ಷೆಗೆ ಒಳಗಾಗಲು, ಹಸಿದುಕೊಂಡು ಇರಲು ಸಿದ್ಧನಾಗಿರುವೆಯೇ? ಎಂದು ಸಂತರು ಪ್ರಶ್ನಿಸಿದರು. ಹೌದು, ಸಿದ್ಧನಿರುವೆ ಎಂದು ಆತ ಹೇಳಿದ. ಆದರೆ, ೪೫ ವರ್ಷಗಳಾದ ಮೇಲೆ ಏನಾಗುತ್ತದೆ ಎಂದು ಶಿಷ್ಯ ಪ್ರಶ್ನಿಸಿದ. ಏನಿಲ್ಲ. ಅದು ನಿನಗೆ ಅಭ್ಯಾಸವಾಗುತ್ತದೆ ಎಂದು ಆ ಗುರು ಹೇಳಿದರು.

ಹಾಸ್ಯ ನಮ್ಮನ್ನು ಸಮತೋಲನದಲ್ಲಿ ಇಡುತ್ತದೆ. ಹಾಸ್ಯ ಎಂಬುದು ಎಲ್ಲವನ್ನೂ ಹಗುರವಾಗಿ ನೋಡುವ ಮನೋಭಾವದಿಂದ ಬರುವುದಿಲ್ಲ. ಮೂಲದಲ್ಲಿ ಎಲ್ಲವೂ ಸರಿಯಾಗಿ ಇದೆ. ಯಾವುದೇ ಸಂಕಷ್ಟಗಳಿದ್ದರೂ ಅದು ಕರಗಿಹೋಗುತ್ತದೆ. ಕಷ್ಟ ಎಂಬುದು ಭ್ರಮೆ ಎಂಬ ಸತ್ಯದ ಅರಿವಿನಿಂದ ಮಾತ್ರ ಎಲ್ಲವನ್ನೂ ತಮಾಷೆ ಮಾಡಲು ಸಾಧ್ಯವಾಗುತ್ತದೆ. ಈ ಅರಿವು ನಮ್ಮಲ್ಲಿ ಮುಗುಳ್ನಗೆ ಮೂಡಿಸುತ್ತದೆ. ಈ ಅರಿವು ಮೂಡಿದಾಗ ಎಂತಹ ಚಡಪಡಿಕೆಯಲ್ಲೂ ನಾವು ಪ್ರಶಾಂತವಾಗಿ ಇರಬಹುದಾಗಿದೆ. ಖಿನ್ನತೆ ಎಂಬುದು ಅರಿವಿಗೆ ವಿರುದ್ಧವಾದದ್ದು. ಎಲ್ಲವೂ ಎಷ್ಟು ಪರಿಪೂರ್ಣವಾಗಿದೆ ಎಂದು ಅರಿವಾದಾಗ ನೀವು ಆಗಸದತ್ತ ಮುಖ ಮಾಡಿ ನಗುತ್ತೀರಿ ಎಂದು ಬುದ್ಧ ಹೇಳಿದ.

ಹಾಸ್ಯದಿಂದ ಸಮಾಧಾನ, ಸಂತಸ, ಆರೋಗ್ಯ ಎಲ್ಲವೂ ವೃದ್ಧಿಸುತ್ತವೆ. ದೇಹದ ಪ್ರತಿ ಕಣವೂ ವಿಶ್ರಾಂತಿ ಅನುಭವಿಸುತ್ತದೆ. ನಗುತ್ತದೆ. ವಿಷ ವಸ್ತುಗಳೆಲ್ಲ ಹರಿದುಹೋಗಲು ಅನುವು ಮಾಡಿಕೊಡುತ್ತದೆ. ಇದು ಕೇವಲ ಮಾನಸಿಕ ಪ್ರಕ್ರಿಯೆಯಲ್ಲ. ದೈಹಿಕ ಪ್ರಕ್ರಿಯೆ ಕೂಡ ಹೌದು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜಾರ್ಜ್ ಸ್ಲಾವಿಚ್ ಎಂಬ ಮನಶಾಸ್ತ್ರಜ್ಞರು ಖಿನ್ನತೆಗೆ ಕೇವಲ ಮನಸ್ಸಷ್ಟೇ ಕಾರಣವಲ್ಲ. ಇದರಲ್ಲಿ ದೈಹಿಕ, ಜೈವಿಕ ಅಂಶಗಳರಿರುತ್ತವೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಆರೋಗ್ಯವಂತ ವ್ಯಕ್ತಿಗಳಿಗೆ ಊತ ಉಂಟು ಮಾಡುವ ಲಸಿಕೆ ನೀಡಿದಾಗ ಅವರಲ್ಲಿ ಖಿನ್ನತೆ, ಆತಂಕದ ಮನೋಭಾವ ತಲೆದೋರಿತು. ಸೈಟೊಕೈನೆಸ್ ಎಂಬ ಪ್ರೋಟಿನ್ ಈ ಏರಿಳಿತಕ್ಕೆ ಕಾರಣವಾಗಿತ್ತು.

ನಿಮ್ಮ ದೇಹದೊಳಗೆ ಊತ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಿ. ಊತ ಉಂಟು ಮಾಡುವ ಕೊಬ್ಬು, ಸಕ್ಕರೆ ವರ್ಜ್ಯಿಸಿ. ಸ್ವಮರುಕವನ್ನು ಸಂಪೂರ್ಣವಾಗಿ ನಿಲ್ಲಿಸಿ. ತಪ್ಪು ಮಾಡಿದ್ದೀರಾ? ಸರಿ. ಎಲ್ಲರೂ ತಪ್ಪು ಮಾಡುತ್ತಾರೆ. ಮುಗ್ಗರಿಸಿದ್ದೀರಾ. ಸರಿ. ಎಲ್ಲರೂ ಮುಗ್ಗರಿಸಿರುತ್ತಾರೆ. ನಿಮ್ಮತ್ತ ನೀವು ಒಮ್ಮೆ ನಕ್ಕುಬಿಡಿ. ಅದು ಪ್ರಬುದ್ಧತೆ. ನಿಮ್ಮ ಆಲೋಚನೆಗಳು ಸದಾ ಸಕಾರಾತ್ಮಕವಾಗಿ, ಪ್ರೋತ್ಸಾಹಕಾರಿಯಾಗಿ ಇರಬೇಕು. ನಿತ್ಯ ಐದು ನಿಮಿಷ ನಿಧಾನವಾಗಿ ಉಸಿರಾಡಿ. ಸಂಗೀತ ಕೇಳಿ, ಮರ, ಗಿಡಗಳ ಜೊತೆ ಸಂಭಾಷಣೆ ಮಾಡಿ. ವಾಕ್ ಮಡಿ, ಸೈಕ್ಲಿಂಗ್ ಮಾಡಿ. ಸಣ್ಣ ಕಾರ್ಟೂನ್ ಚಿತ್ರದ ಮೇಲೆ ನಿಮ್ಮ ಮುಖ ಅಂಟಿಸಿ ಗೋಡೆಗೆ ಹಚ್ಚಿಕೊಳ್ಳಿ...ಆಗಾಗ್ಗ ಅದನ್ನು ನೋಡುತ್ತ ನಕ್ಕುಬಿಡಿ. ನಾನೆಷ್ಟು ಸಿಲ್ಲಿ ಎಂದು ನಕ್ಕುಬಿಡಲು ಸಹ ಅಸಾಧಾರಣ ಶಕ್ತಿ ಬೇಕು. ಸಿಲ್ಲಿಯಾಗಿರಿ. ತಿಕ್ಕಲ, ತಿಕ್ಕಲಾಗಿ ಆಡಿ....ಅದರಲ್ಲಿ ತಪ್ಪೇನೂ ಇಲ್ಲ ಎಂಬುದನ್ನೂ ಅರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT