ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿವಾದದಲ್ಲಿ ಉತ್ತರವಿದೆಯೇ?

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಪ್ರಸನ್ನ ಅವರು ಹಿಂದುತ್ವದ ಕುರಿತಾಗಿ ಬರೆಯುತ್ತಾ, ಅದನ್ನು ಎದುರಿಸಲು ಗಾಂಧಿವಾದ ಮಾತ್ರ ಸಮರ್ಥವಾಗಿದೆ, ಗಾಂಧಿ ಧಾರ್ಮಿಕ ವ್ಯಕ್ತಿಯಾಗಿದ್ದರು, ಹಿಂದುತ್ವದ ಪ್ರತಿಪಾದಕ ಸಾವರ್ಕರ್ ಧಾರ್ಮಿಕ ರಾಜಕಾರಣಿಯಾಗಿದ್ದರು, ಆದರೆ ವೈಯಕ್ತಿಕವಾಗಿ ನಿರೀಶ್ವರವಾದಿಯಾಗಿದ್ದರು ಎಂದೆಲ್ಲ ಹೇಳಿದ್ದಾರೆ (ಪ್ರ.ವಾ., ಅಭಿಮತ, ಮಾರ್ಚ್‌ 12). ಆದರೆ ಆ ಭರದಲ್ಲಿ ಕಮ್ಯುನಿಸ್ಟರು, ಅಂಬೇಡ್ಕರ್‌ವಾದಿಗಳು ಭಾರತ ರಾಜಕಾರಣದ ಮುಖ್ಯವಾಹಿನಿಗೆ ಬರುವಲ್ಲಿ ಸೋತಿದ್ದಾರೆ ಎಂದು ಏಕ್‌ದಂ ಷರಾ ಬರೆಯುವುದು ಅಸಹಜ ಮತ್ತು ಅಪಾಯಕಾರಿ. ಏಕೆಂದರೆ ಇಂದು ಪ್ರಸನ್ನ ಅವರು ಕಳಕಳಿಯಿಂದ ಬಯಸುವ ಗಾಂಧಿವಾದವೂ ಮುಖ್ಯವಾಹಿನಿಯಲ್ಲಿ ಇಲ್ಲ. ಆದರೆ ಸಾಂಪ್ರದಾಯಿಕವಾದದ ಇಂಡಿಯಾದ ವ್ಯವಸ್ಥೆಯಲ್ಲಿ ಇಂದಿನ 21ನೇ ಶತಮಾನದ ನವ ಉದಾರೀಕರಣದ ಸಂದರ್ಭದಲ್ಲಿ ಬ್ರಾಹ್ಮಣ್ಯ- ಫ್ಯೂಡಲಿಸಂನ ಶಕ್ತಿಗಳು ಮತ್ತಷ್ಟು ಬಲಗೊಳ್ಳುತ್ತಿವೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಸೆಕ್ಯುಲರಿಸಂ ಚಿಂತನೆಗಳು, ಬೌದ್ಧಿಕ ಕಸರತ್ತುಗಳು ತಳ ಸಮುದಾಯಗಳ ವಿಮೋಚನೆಗಾಗಿ ಸಮರ್ಥವಾದ ಚಳವಳಿಗಳನ್ನು ರೂಪಿಸುವುದರಲ್ಲಿ ಸೋತಿವೆ ಎನ್ನುವ ಗಿಲ್ಟ್ ಒಂದು ಕಡೆಗಿದ್ದರೆ, ಮತ್ತೊಂದೆಡೆ ತಳ ಸಮುದಾಯಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ವಿಫಲಗೊಂಡಿವೆ ಎನ್ನುವುದು ನಮ್ಮೆಲ್ಲರ ಇಂದಿನ ಆತಂಕ. ಈ ವಿಷಚಕ್ರಕ್ಕೆ ಪ್ರಸನ್ನ ಅವರ ಬಳಿ ಉತ್ತರವಿದೆಯೇ ಅಥವಾ ಅವರು ಆ ಉತ್ತರವು ಗಾಂಧಿವಾದ ಎಂದು ಸರಳವಾಗಿ, ಮಗುಮ್ಮಾಗಿ ಹೇಳುವುದಾದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ.

ಮೂವತ್ತು, ನಲವತ್ತರ ದಶಕದಲ್ಲಿ ಅಂಬೇಡ್ಕರ್ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಸಮುದಾಯಕ್ಕೆ ತಲುಪಲು ಇಂದಿನ ವ್ಯವಸ್ಥೆಯಿಂದ ಸಾಧ್ಯವಿಲ್ಲ’ ಎಂದು ಗಾಂಧೀಜಿಗೆ ವಿವರಿಸಿದ್ದರು. ಅದು 69 ವರ್ಷಗಳ ನಂತರವೂ ಇಂದಿಗೂ ಸತ್ಯ ಮತ್ತು ವಾಸ್ತವ. ಅಂದು ಗಾಂಧಿಯವರ ಬಳಿ ಇದಕ್ಕೆ ಸೂಕ್ತ ಉತ್ತರವಿರಲಿಲ್ಲ. ಏಕೆಂದರೆ ಪ್ರಸನ್ನ ಅವರ ಗಾಂಧಿವಾದದಲ್ಲಿ ಇದಕ್ಕೆ ಯಾವುದೇ ನೇರ ಮಾರ್ಗಗಳಿಲ್ಲ. ಇದು ಗಾಂಧೀಜಿ ತಪ್ಪಲ್ಲ. ಆದರೆ ಸ್ವಾತಂತ್ರ್ಯಾ ನಂತರದ ಗಾಂಧಿವಾದಿಗಳು ಮತ್ತು ಕಾಂಗ್ರೆಸ್‌ನ ಸೆಕ್ಯುಲರ್‌ವಾದಿಗಳು ಆಯಾ ಕಾಲಮಾನಕ್ಕೆ ತಕ್ಕಂತೆ ತಮ್ಮ  ಚಿಂತನೆಗಳನ್ನು ಹರಿತಗೊಳಿಸಿಕೊಳ್ಳುತ್ತಾ, ಪ್ರಸ್ತುತಗೊಳಿಸುವುದನ್ನು ತಿರಸ್ಕರಿಸಿರುವುದೇ ಇದಕ್ಕೆ ಮೂಲಭೂತ ಕಾರಣ. ಇಂದು ಪ್ರಸನ್ನ ಅವರು ಅದೇ ತಪ್ಪನ್ನು ಮಾಡುತ್ತಿದ್ದಾರೆ.

ಸ್ಥಾಪಿತ, ಪಟ್ಟಭದ್ರ ಸವರ್ಣೀಯ ಜಾತಿಗಳ ಸಂಸ್ಕೃತಿಗಳೇ ಇಂದಿಗೂ ಪ್ರಧಾನ ಧಾರೆಯಲ್ಲಿವೆ ಮತ್ತು ಈ ‘ಹೆಜಮನಿ’ ಸಂಸ್ಕೃತಿಯು ನಿರ್ಮಿಸುತ್ತಿರುವ ಮಾದರಿಗಳೇ ಇಂದು ಪ್ರಬಲಗೊಂಡಿವೆ. ಜಾಗತೀಕರಣದ, ನವ ಉದಾರೀಕರಣದ ಇಂಡಿಯಾದಲ್ಲಿ ಈ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ಅಂಬೇಡ್ಕರ್ ಅವರ ಕನ್ನಡಕದ ಮೂಲಕ, ಅಂಬೇಡ್ಕರ್ ನೋಟದ ಮೂಲಕ ಮಾತ್ರ ಸಾಧ್ಯವೇ ಹೊರತು ಅಪೂರ್ಣವಾದ ಗಾಂಧಿವಾದದಿಂದ ಕಷ್ಟ.

ಏಕೆಂದರೆ ಹಿಂದುತ್ವವಾದಿಗಳು ಸನಾತನವಾದಕ್ಕೆ, ಜಾತಿ ತಾರತಮ್ಯಕ್ಕೆ ಗಾಂಧಿವಾದದಲ್ಲಿ ಸಲೀಸಾಗಿ ತಮ್ಮ ಉತ್ತರವನ್ನು ಕಂಡುಕೊಂಡುಬಿಡುತ್ತಾರೆ.
ಇಂದಿಗೂ ಭಾರತವನ್ನು ಕಾಡುತ್ತಿರುವುದು ಜಾತಿ ಸಮಾಜದ ಪ್ರತ್ಯೇಕತೆ ಮತ್ತು ತಾರತಮ್ಯ ನೀತಿ.  ಪುರಾಣದ ಏಕಲವ್ಯನಿಂದ ಇತ್ತೀಚಿನ ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್‌ ವೇಮುಲವರೆಗೆ ಹಲವರು ಇದಕ್ಕೆ ಬಲಿಯಾಗಿದ್ದಾರೆ. ಈ ಎಲ್ಲ ವಿದ್ಯಮಾನಗಳಿಗೂ ಪ್ರಸನ್ನ ಅವರು ವಿವರಿಸಿದ ಹಿಂದುತ್ವ ರಾಜಕಾರಣಕ್ಕೂ ನೇರವಾದ ಸಂಬಂಧಗಳಿವೆ.

ತಳ ಸಮುದಾಯಗಳು ದೇಶದ ಆತ್ಮವಾಗಬೇಕು. ಇದು ಸಾಧ್ಯವಾಗದೇ ಹೋದರೆ ಅಲ್ಲಿಯವರೆಗೂ ಹಿಂದುತ್ವ ರಾಜಕಾರಣ ಚಾಲ್ತಿಯಲ್ಲಿರುತ್ತದೆ. ಪ್ರಸನ್ನ ಅವರು ಈ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಕೇವಲ ಗಾಂಧಿವಾದವನ್ನು ಸರಳವಾಗಿ ಪ್ರತಿಪಾದಿಸುವುದು ಬಾಲಿಶವೆನಿಸಿಕೊಳ್ಳುತ್ತದೆ. ಕಡೆಗೆ ಎಲ್ಲವನ್ನೂ, ಯಂತ್ರವನ್ನೂ  ಕಳಚಿಟ್ಟು ಬನ್ನಿ ಎನ್ನುವ ವಿತಂಡವಾದದ ಕಡೆಗೆ ಕೊಂಡೊಯ್ಯುವುದಂತೂ ಪ್ರಸನ್ನ ಅವರು ಇನ್ನೂ ಪ್ರಸ್ತುತಗೊಳ್ಳಬೇಕು ಎನ್ನುವುದನ್ನು ಸಾಕ್ಷೀಕರಿಸುತ್ತದೆ.
- ಬಿ.ಶ್ರೀಪಾದ ಭಟ್, ಬೆಂಗಳೂರು


ಸಾವರ್ಕರ್‌ ದ್ವಂದ್ವ ಬರಹ
ಪ್ರಸನ್ನ ಅವರು ಲೇಖನದಲ್ಲಿ ವಿಶ್ಲೇಷಿಸಿರುವಂತೆ ಗಾಂಧಿವಾದವೇ ಹಿಂದುತ್ವವನ್ನು ಸಮರ್ಥವಾಗಿ ಎದುರಿಸಬಲ್ಲಂತಹ ವಿಚಾರ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಸಾವರ್ಕರ್ ಬಗ್ಗೆ ಹೇಳುವಾಗ, ಅವರ ವಿಚಾರಗಳು ಭಾರತೀಯ ಚಿಂತನಾಕ್ರಮಕ್ಕೆ ಒಂದು ದೊಡ್ಡ ಕೊಡುಗೆ ಎಂದಿರುವುದು ಸತ್ಯಕ್ಕೆ ದೂರವಾದುದು.

ಸಾವರ್ಕರ್ ಅವರು ಪ್ರತಿಪಾದಿಸಿದ ಹಲವು ವಿಚಾರಗಳು ಹಿಂದೂಯಿಸಂ ಅನ್ನು ಪುರಾಣಗಳು, ಮೂಢನಂಬಿಕೆಗಳಿಂದ ಮುಕ್ತಗೊಳಿಸುವಂತೆ ಭಾಸವಾದರೂ ಹಲವಾರು ಅಸಂಗತಗಳು ಮತ್ತು ಅಪಕಲ್ಪನೆಗಳು ಅವರ ಆಲೋಚನೆಗಳಲ್ಲಿ ಕಂಡುಬರುತ್ತವೆ (ಇವುಗಳೆಲ್ಲಕ್ಕೂ ಮೂಲವಾದ ಪುರೋಹಿತಶಾಹಿಯ ಬಗ್ಗೆ ನಿಖರವಾದ ವಿಶ್ಲೇಷಣೆ ಎಲ್ಲೂ ಇಲ್ಲ. ಸಮಕಾಲೀನ ಸಮಾಜಕ್ಕೆ ಮನುಸ್ಮೃತಿಯ ಅವಶ್ಯಕತೆ ಇಲ್ಲ ಎಂದು ಹೇಳಿದರೂ ಅದು ಜಗತ್ತಿನ ಉತ್ತಮ ಗ್ರಂಥಗಳಲ್ಲಿ ಒಂದು ಎಂಬ ಪ್ರಾಮುಖ್ಯ ಕಲ್ಪಿಸುತ್ತಾರೆ).

ಆಧುನಿಕ ಪಾಶ್ಚಾತ್ಯ ತಾತ್ವಿಕ ಪರಂಪರೆಯಿಂದ ಸಾಣೆಹಿಡಿದ ಸಾವರ್ಕರ್‌ ಅವರ ಬಹಳಷ್ಟು ವಿಚಾರಗಳು ಅವರ ಆಲೋಚನಾ ಕ್ರಮದಲ್ಲಿ ಕಾಣಿಸಿಕೊಂಡರೂ ಅವರು ಮೂಲತಃ ಗುರುಗಳು (ಮಠ), ದೇವರು (ದೇವಸ್ಥಾನ), ದೇವಮಾನವರಿಗೆ (ಮೂಢನಂಬಿಕೆ) ಮಹತ್ವ ನೀಡಿ ಈ ಪರಿಕಲ್ಪನೆಗಳನ್ನು ತಮ್ಮ ಆಲೋಚನೆಗಳ ಮೂಲಧಾತುವಾಗಿಯೇ ಸ್ವೀಕರಿಸುತ್ತಾರೆ. ಹೀಗಾಗಿ ಸಾವರ್ಕರ್ ಅವರನ್ನು ಓದಿದಾಗ ಅವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕಿಂತ ಏನು ಹೇಳುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ. ಒಮ್ಮೆ ಸರಿಯೆನಿಸುವ ಮತ್ತು ಇನ್ನೊಮ್ಮೆ ಶುದ್ಧಾಂಗ ತಪ್ಪು ಎನಿಸುವ ದ್ವಂದ್ವಗಳು ಸಾವರ್ಕರ್ ಬರಹಗಳಲ್ಲಿ ತುಂಬಿತುಳುಕುತ್ತವೆ.

ಪ್ರಸನ್ನ ಅವರು ಹೇಳಿರುವಂತೆ ಸಾವರ್ಕರ್‌ ಒಬ್ಬ ಬುದ್ಧಿಜೀವಿ ಎಂಬುದು ನಿರ್ವಿವಾದ. ಆದರೆ ಅವರು ಅಪ್ರತಿಮ ಬುದ್ಧಿಜೀವಿಯೂ ಅಲ್ಲ, ಮೇಲ್ಜಾತಿಯ ಮೂಲ ಸಂರಚನೆಗಳನ್ನು ಸಂಪೂರ್ಣವಾಗಿ ತೊರೆದ ಸುಧಾರಕನೂ ಅಲ್ಲ. ಅವರ ಆಲೋಚನೆಗಳಲ್ಲಿ ನಮ್ಮ ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗೆ ಸುಸ್ಪಷ್ಟವಾದ ತಾತ್ವಿಕ ನಿಲುವುಗಳು ದೊರಕದಿರಲು (ರಾಜಕೀಯವಾಗಿ ಅವರ ವಾದ ಮುಂದುಮಾಡುವ ಹಿಂದೂ ಸಂಘಟನೆಗಳೇ ಅವರ ವಿಚಾರಧಾರೆಯಲ್ಲಿ ಕಾಣಿಸಿಕೊಳ್ಳುವ ಅಸಾಂಪ್ರದಾಯಿಕ ಅಂಶಗಳಲ್ಲಿ ಅವರನ್ನು ಅನುಸರಿಸದಿರಲು) ಇದೂ ಒಂದು ಕಾರಣ. ಅಂಬೇಡ್ಕರ್ ಹೇಳುವಂತೆ ಒಬ್ಬ ಬುದ್ಧಿಜೀವಿ ಸಂಕುಚಿತ ಸ್ವಭಾವದವನಾದರೆ ಸಮಾಜಕ್ಕೆ ಕಂಟಕನಾಗುವುದು ಸಾಧ್ಯ. ಸಾವರ್ಕರ್ ಅವರಲ್ಲಿ ಈ ಅವಗುಣವನ್ನು ಧಾರಾಳವಾಗಿ ಗುರುತಿಸಬಹುದು. 
- ಪ್ರೊ.ಬಿ. ಗಂಗಾಧರಮೂರ್ತಿ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT