ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ ಮಾನವೀಯವಾಗಿರಲಿ

Last Updated 4 ಮಾರ್ಚ್ 2016, 19:30 IST
ಅಕ್ಷರ ಗಾತ್ರ

* ರಾಜ್ಯದಲ್ಲಿ ಮೀಸಲಾತಿ ಪರ ಕೂಗು ಹೇಗಿದೆ ಮತ್ತು ಯಾವಾಗಿನಿಂದ ಕೇಳಿಬರುತ್ತಿದೆ?
ಕರ್ನಾಟಕದಲ್ಲಿ ಮೀಸಲಾತಿಗಾಗಿ ಹರಿಯಾಣ ಇಲ್ಲವೇ ಗುಜರಾತ್ ಮಾದರಿಯಲ್ಲಿ  ದೊಡ್ಡ ಮಟ್ಟದ ಹೋರಾಟ ನಡೆದಿಲ್ಲವಾದರೂ ಇಲ್ಲಿನ ಮೀಸಲಾತಿ ಕೂಗು ಹಲವು ವರ್ಷಗಳಷ್ಟು ಹಿಂದಿನದು. 1919ರಲ್ಲಿ ಮಿಲ್ಲರ್ ಸಮಿತಿ ರಚಿಸಲಾಯಿತು. ಅದು 1921ರಲ್ಲಿ ವರದಿಯನ್ನು ಸಲ್ಲಿಸಿತು. ನಂತರ 1963ರಲ್ಲಿ ನಾಗನಗೌಡ ಸಮಿತಿ ರಚಿಸಲಾಯಿತು. 1972ರಲ್ಲಿ ಹಾವನೂರು ಆಯೋಗ ಬಂತು. ಆನಂತರ ಹಲವು ಆಯೋಗಗಳು ರಚನೆಯಾಗಿವೆ.

ಅಷ್ಟಾದರೂ ಸಂವಿಧಾನದ ಆಶಯವಾದ ಸಮಾನತೆ ಹಾಗೂ ಜಾತಿಗಳ ನಡುವಿನ ಅಂತರ ನಿವಾರಣೆ ಸ್ವಲ್ವ  ಮಟ್ಟಿಗಷ್ಟೇ ಸಾಧ್ಯವಾಗಿದ್ದು, ಅದು ನಿರೀಕ್ಷಿತ ಮಟ್ಟ ತಲುಪಿಲ್ಲ. ಹಿಂದುಳಿದವರಿಗೆ ವಿದ್ಯಾಭ್ಯಾಸ, ಸರ್ಕಾರಿ ನೌಕರಿ ಹಾಗೂ ಸ್ಥಳೀಯ ಸಂಸ್ಥೆ ಸೇರಿ ಮೂರು ಕ್ಷೇತ್ರಗಳಲ್ಲಿ ಮೀಸಲಾತಿ ಇದೆ. ಆದಾಗ್ಯೂ ಇನ್ನೂ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರಿ ಉದ್ಯೋಗ ದೊರಕಿಲ್ಲ. ಖಾಸಗಿ ಕ್ಷೇತ್ರದಲ್ಲಿ ನೇಮಕಾತಿಗೆ ಮೀಸಲಾತಿ ಸಿಗುತ್ತಿಲ್ಲ. ಆದ್ದರಿಂದ ಹಿಂದುಳಿದ ವರ್ಗಕ್ಕೆ ಅಗತ್ಯವಾದ ಜೀವನ ಭದ್ರತೆ ಸಿಗುತ್ತಿಲ್ಲ.

* ಮೀಸಲಾತಿ ಪುನರ್‌ವಿಮರ್ಶೆ ಅಗತ್ಯ ಎಂಬ ಮಾತಿಗೆ ನಿಮ್ಮ  ಅಭಿಪ್ರಾಯ ಏನು?
ಮೀಸಲಾತಿ ಮುಂದುವರಿಕೆ ಬಗ್ಗೆ ಬಹಳ ದಿನಗಳಿಂದಲೂ ಅಪಸ್ವರಗಳು ಕೇಳಿಬರುತ್ತಲೇ ಇವೆ. ಕೆಲವರ ಹೇಳಿಕೆಗಳು
ವಿವಾದಕ್ಕೆ ಕಾರಣವಾಗಿದ್ದೂ ಇದೆ. ಎಲ್ಲಿಯವರೆಗೆ ಸಂವಿಧಾನದ ಆಶಯವಾದ ಸಮಾನತೆಯ ಸಮಾಜ ನಿರ್ಮಾಣವಾಗುವುದಿಲ್ಲವೋ ಅಲ್ಲಿಯವರೆಗೂ ಮೀಸಲಾತಿ ಇರಲೇಬೇಕಾಗುತ್ತದೆ. 1950ರಲ್ಲಿ ಸಂವಿಧಾನ ಜಾರಿಗೆ ಬಂತು. ಅಲ್ಲಿಂದ ಇಲ್ಲಿಯವರೆಗೆ ಮೀಸಲಾತಿ ಸೌಲಭ್ಯ ಮುಂದುವರಿದೇ ಇದೆ. ಇಲ್ಲಿ ಮೀಸಲಾತಿ ಜಾರಿ ಮಾಡುವುದೂ ಮುಖ್ಯ. ಇದಕ್ಕೆ 10 ವರ್ಷ, 15 ವರ್ಷ ಎಂಬ ಅವಧಿ ನಿಗದಿಯ ಪ್ರಶ್ನೆ ಉದ್ಭವಿಸದು. ಮೀಸಲಾತಿಯಿಂದ  ಎಂತಹ ಸಾಧನೆ ಆಗಿದೆ ಎಂಬ ಬಗ್ಗೆ ಸಮೀಕ್ಷೆ ಮಾಡಬೇಕಿದೆ.

* ಸಂವಿಧಾನದ ಪ್ರಕಾರ ಮೀಸಲಾತಿಯ ಮೂಲ ಆಶಯವೇನು?
ಮೀಸಲಾತಿ ಕೇವಲ ಸೌಲಭ್ಯ ಅಲ್ಲ. ಸಂವಿಧಾನ ಜಾರಿಯಾಗಿ 10 ವರ್ಷಗಳ ನಂತರ ಅದನ್ನು ಬಿಟ್ಟು ಬಿಡಬೇಕು ಎನ್ನುವುದು ಸರಿಯಲ್ಲ. ಚುನಾವಣೆಯಲ್ಲಿ ಗೆಲ್ಲಲು ಜಾತಿ ಬೇಕು, ಇಲ್ಲವೇ ಹಣ ಇರಬೇಕು. ಹಾಗಾದರೆ ಕೈಬೆರಳಿನಲ್ಲಿ ಎಣಿಸುವಷ್ಟು ಜನಸಂಖ್ಯೆ ಹೊಂದಿರುವ ತಳ ಸಮುದಾಯಗಳ ಕತೆ ಏನು? ಇವರೆಲ್ಲ ನಮ್ಮ ಸಮಾಜದ ಭಾಗವಾಗಿದ್ದಾರೆ. ಕಡಿಮೆ ಜನಸಂಖ್ಯೆ ಹೊಂದಿರುವ ಜನ ಚುನಾವಣೆಯಲ್ಲಿ ಆಯ್ಕೆಯಾಗಬೇಕು. ಇಲ್ಲದೇ ಇದ್ದರೆ ಅವರನ್ನು ನಾಮನಿರ್ದೇಶನ ಮಾಡಬೇಕು. ಸಣ್ಣ ಸಮುದಾಯಗಳಿಗೂ ಪ್ರಾತಿನಿಧ್ಯ ದೊರೆಯಬೇಕು.

* ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗದ ಕೆಲಸವೇನು?
ಆಯೋಗದ ಬಳಿ ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಪಟ್ಟಿ ಇದೆ. ಅವುಗಳನ್ನು ಪ್ರವರ್ಗ 1, 2ಎ, 2ಬಿ, 3ಎ ಮತ್ತು 3ಬಿ ಎಂಬುದಾಗಿ ವಿಂಗಡಿಸಲಾಗಿದೆ. ಪ್ರವರ್ಗ 1 ಅತ್ಯಂತ ಹಿಂದುಳಿದ ಜಾತಿ. ಅದರಲ್ಲಿ ಯಾರನ್ನು ಸೇರಿಸಬೇಕು ಅಥವಾ ಸೇರಿಸಬಾರದು ಎಂದು ಶಿಫಾರಸು ಮಾಡುವುದು ಆಯೋಗದ ಕೆಲಸ. ನಾವು ಮಾಡುವ ಎಲ್ಲ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ ಎನ್ನುವ ಹಾಗಿಲ್ಲ. ಆದರೆ ಸಾಮಾನ್ಯವಾಗಿ ಸರ್ಕಾರ ಮಾನ್ಯತೆ ನೀಡುತ್ತದೆ. ಶಿಫಾರಸನ್ನು ಮಾನ್ಯ ಮಾಡದೇ ಇದ್ದರೆ ಅದಕ್ಕೆ  ಕಾರಣಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಾಗುತ್ತದೆ. 

* ಇತ್ತೀಚೆಗೆ ನಡೆಸಿದ ಜಾತಿ ಸಮೀಕ್ಷೆಯ ವರದಿ ಯಾವಾಗ ಸರ್ಕಾರಕ್ಕೆ ಸಲ್ಲಿಕೆಯಾಗುತ್ತದೆ? ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಮುಖ ಅಂಶಗಳೇನು?
ಜಾತಿ ಸಮೀಕ್ಷೆ ವರದಿಯನ್ನು ಇನ್ನು ಎರಡು ಮೂರು ತಿಂಗಳಲ್ಲಿ ಸರ್ಕಾರಕ್ಕೆ ನೀಡಲಾಗುತ್ತದೆ. ಇತ್ತೀಚೆಗೆ ನಡೆಸಿದ ಮನೆ ಮನೆ ಸಮೀಕ್ಷೆಯಲ್ಲಿ ಹೊಸ ಅಂಶಗಳನ್ನು  ಗುರುತಿಸಲಾಗಿದೆ. ಎಷ್ಟು ಜಾತಿಗಳಿವೆ, ಎಷ್ಟು ಅಭಿವೃದ್ಧಿಯಾಗಿದೆ, ಯಾವ ಮಟ್ಟಕ್ಕೆ ಆಗಿದೆ ಎಂಬುದು ತಿಳಿದುಬಂದಿದೆ.
ಹೊಸ  ಜಾತಿಗಳನ್ನು ಸೇರಿಸಿದ್ದೇವೆ. ಇಷ್ಟೊಂದು ವಿವರವಾದ ಸಮೀಕ್ಷೆ ಈ ಹಿಂದೆ ನಡೆದಿರಲಿಲ್ಲ. ನಡೆದಿದ್ದರೂ ಅದು ಮಾದರಿ ಸಮೀಕ್ಷೆ  ಮಾತ್ರ. 

* ಮುಂದುವರಿದ ಮತ್ತು ಬಹುಸಂಖ್ಯಾತರ ಜಾತಿಗಳೇ ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆಯಲ್ಲ?
ಇದರಿಂದ ನಿಜವಾಗಿಯೂ ತಳ ಸಮುದಾಯಗಳು ಯಾವುವು, ಯಾರಿಗೆ ಮೀಸಲಾತಿ ಬೇಕು ಎಂಬುದೇ ತಿಳಿಯುವುದಿಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ  ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಕೇವಲ ಆರ್ಥಿಕ ಬಲ ನೋಡಿ ಮೀಸಲಾತಿ ನೀಡಿದರೆ ಅದು ಸಂವಿಧಾನ ವಿರೋಧಿ ಕ್ರಮವಾಗುತ್ತದೆ. ಎಲ್ಲ ಜಾತಿಗಳಲ್ಲೂ ಬಡವರು ಇದ್ದಾರೆ. ಮೀಸಲಾತಿಗೆ  ಜಾತಿಯೊಂದೇ ಮಾನದಂಡವಲ್ಲ.

* ಸಣ್ಣಪುಟ್ಟ ಸಮುದಾಯಗಳ ಕತೆ ಏನು?
ಇಂತಹವರನ್ನು ಗುರುತಿಸಲೆಂದೇ ನಾವು ಸಮೀಕ್ಷೆ ಮಾಡಿದ್ದು. ಕೇವಲ 100 ಜನರೇ ಇರುವ ಜಾತಿಗಳು ಸಿಕ್ಕಿವೆ.  ಅವರು ಬಂದು ನಮ್ಮನ್ನು ಏನು ಕೇಳುತ್ತಾರೆ? ಕೇಳಬೇಕೆಂಬ ತಿಳಿವಳಿಕೆಯೂ ಅವರಿಗಿಲ್ಲ. ಕರ್ನಾಟಕದಲ್ಲಿ ಎಷ್ಟು ಜಾತಿಗಳಿವೆ, ಅವರ ಅಭಿವೃದ್ಧಿಗಾಗಿ ಏನಾದರೂ ಕಾರ್ಯಕ್ರಮ ಹಮ್ಮಿಕೊಳ್ಳಬಹುದೇ  ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸಲಾಗಿದೆ. ಇದರರ್ಥ ಜಾತೀಯತೆಯನ್ನು ಒಳಗೊಂಡ ಸಮಾಜವನ್ನು ಮುಂದುವರಿಸಬೇಕು, ಜಾತಿ ವ್ಯವಸ್ಥೆ ಹಾಗೇ ಉಳಿಯಬೇಕು ಎಂಬುದಲ್ಲ. ಜಾತಿ ಜಾತಿಗಳ ನಡುವಿನ ಕಂದಕವನ್ನು ಕಡಿಮೆ ಮಾಡಿ ಸಮ ಸಮಾಜ ಕಟ್ಟುವ ಉದ್ದೇಶ ಇದರ ಹಿಂದಿದೆ. ಬಡವರಾಗಿಯೇ ಉಳಿಯಲು ಏನೇನು  ಕಾರಣಗಳಿವೆ ಎಂಬುದನ್ನು ಅಂದಾಜು ಮಾಡಲು ಸಮೀಕ್ಷೆ ಸಹಕಾರಿಯಾಗಿದೆ. ಜಾತಿ ಎಂಬುದು ಸಮಾಜದ ನಿಜಸ್ಥಿತಿ.

* ಮೀಸಲಾತಿ ಹೋರಾಟದ ಹಿಂದೆ ಇರುವ ಪ್ರಬಲ ಕಾರಣಗಳೇನು?
ಹಲವು ಕಾರಣಗಳಿರಬಹುದು. ಆದರೆ ಈ ಹೋರಾಟ ರಾಜಕೀಯ ಪ್ರೇರಿತವಾಗಿರಬಾರದು. ಹೈದರಾಬಾದ್‌  ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆಗೂ ಆತನ ಜಾತಿಗೂ ತಳಕು ಹಾಕಿ ಅದನ್ನೇ ದೊಡ್ಡ ವಿವಾದವಾಗಿ ಮಾಡಿದಂತೆ ಆಗಬಾರದು. ಯಾರೂ ಜಾತಿಯನ್ನು ಆಯ್ಕೆ ಮಾಡಿಕೊಂಡು ಹುಟ್ಟುವುದಿಲ್ಲ. 

* ಜಾತಿಯ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ ಎಂಬ ಆರೋಪ ಇದೆಯಲ್ಲ?
ಇಂದು ಕೇವಲ ಮೀಸಲಾತಿಯಷ್ಟೇ ಅಲ್ಲ, ಅಧಿಕಾರ, ಕಾನೂನು, ಹಣ ಹೀಗೆ ಎಲ್ಲವೂ ದುರುಪಯೋಗ ಆಗುತ್ತಿವೆ. ಆದರೆ ಸರ್ಕಾರಗಳು ಒತ್ತಡಕ್ಕೆ ಮಣಿಯಬಾರದು. ದುರುದ್ದೇಶದಿಂದ ಮೀಸಲಾತಿ ನೀಡಿದರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ರಾಜಿಯಾಗಬಾರದು.

* ಮೀಸಲಾತಿಗಾಗಿ ಹೋರಾಟ ಅನಿವಾರ್ಯವೇ?
ಹೋರಾಟ ಮಾಡದೆ ಬೇರೆ ದಾರಿಯೇ ಇಲ್ಲ. ಅಂತಹ ಪರಿಸ್ಥಿತಿ ನಮ್ಮ ದೇಶದಲ್ಲಂತೂ ಇಲ್ಲ. ಆದರೆ ಆ ಹೋರಾಟ ಮಾನವೀಯವಾಗಿರಲಿ. ನಮ್ಮ ಹೋರಾಟ ಬೇರೆಯವರ ಹಕ್ಕನ್ನು ಕಸಿಯಬಾರದು. ಯಾರದೋ ಆಸ್ತಿಪಾಸ್ತಿಗೆ ಹಾನಿಯಾಗುವಂತೆ, ಜೀವ ತೆಗೆಯುವಂತೆ ಆಗಬಾರದು.  ಮೀಸಲಾತಿ ಸೌಲಭ್ಯ ಉಳಿಸಿಕೊಳ್ಳಲು ಸಹ ಹೋರಾಟ ಅನಿವಾರ್ಯ.

* ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಲ್ಲಿ ಮೀಸಲಾತಿ ನೀಡಿರುವುದರ ಫಲವೇನು?
ಮೀಸಲಾತಿ ಮೂಲಕ ಬಂದವರಿಂದ ಹಲವು ಅನುಕೂಲಗಳಿವೆ. ಅವರ ಸಮುದಾಯ ಯಾವ ಮಟ್ಟದಲ್ಲಿ ಇದೆ ಎಂಬುದು ತಿಳಿಯುತ್ತದೆ. ಪ್ರತಿ ಪ್ರತಿನಿಧಿಯೂ ತನ್ನ ಸಮಾಜ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿ, ಸರ್ಕಾರಿ ಸೌಲಭ್ಯಗಳನ್ನು ಅವರಿಗೆ ತಲುಪಿಸಬೇಕು.

* ಬೇರೆ ರಾಜ್ಯಗಳಲ್ಲಿನ ಮೀಸಲಾತಿ ಕೂಗಿಗೂ ನಮ್ಮಲ್ಲಿನ ಬೇಡಿಕೆಗೂ ಏನು ವ್ಯತ್ಯಾಸ?
ಒಡಿಶಾದಲ್ಲಿ ಶೇ 70ರಿಂದ 80ರಷ್ಟು ಮಂದಿ ಪರಿಶಿಷ್ಟ ಜಾತಿ, ಪಂಗಡದವರಿದ್ದಾರೆ.  ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಜನರಿದ್ದಾರೆ. ಅಲ್ಲೆಲ್ಲ ಹೋರಾಟಗಳು ನಡೆಯುತ್ತಲೇ ಇರುತ್ತವೆ.

ಎಲ್ಲಿಯವರೆಗೆ ಬಡವರು ಬಡವರಾಗಿಯೇ ಇರಬೇಕು? ಅವರ ಅಭಿವೃದ್ಧಿಯೂ ಆಗಬೇಕು. ಅವರಿಗೂ ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ಸಿಗಬೇಕು.  ದೊಡ್ಡ ದೊಡ್ಡ ಹುದ್ದೆಗಳು ಸಿಗಬೇಕು. ಒಟ್ಟಾರೆ ಮೀಸಲಾತಿ ಸದುಪಯೋಗ ಆಗಬೇಕು.  ಒಳ್ಳೆಯ ಮಾರ್ಗದಲ್ಲಿ ಹೋರಾಟ ನಡೆಯಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT