ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಹ್ವಾ ಚಾಪಲ್ಯವಿದು...

Last Updated 9 ಮಾರ್ಚ್ 2016, 19:35 IST
ಅಕ್ಷರ ಗಾತ್ರ

ತಿನ್ನೋ ತಿನ್ನು...’ ಆ ಹುಡುಗ ಅಜ್ಜಿಯ ಒತ್ತಾಯಕ್ಕೆ ಬಾಳೆ ಹಣ್ಣನ್ನು ಬಾಯಿಗಿಟ್ಟುಕೊಂಡಿದ್ದ. ಬಾಳೆ ಬೆತ್ತಲಾದ ತನ್ನ ಬಿಳಿ ಮೈಯನ್ನು ಅರ್ಧ ಬಾಯಿಯೊಳಗೆ ಅಡಗಿಸಿದ್ದರೆ ಮತ್ತರ್ಧ ಬಾಯಿಯಿಂದ ಆಚೆಗೆ ಉಳಿಸಿತ್ತು. ಎರಡೂ ಕೆನ್ನೆಗಳು ಊದಿತ್ತು, ಬಾಯಿಯ ಸಂದಿನಿಂದ ಜೊಲ್ಲು ಒಸರಿತ್ತು. ಒಣಗಿದ ಪಪ್ಪಾಯಿ ಮರದಂತೆ ಕಾಣುತ್ತಿದ್ದ ಅಜ್ಜಿಯ ಬಾಯಿ ಜೋರಾಗಿತ್ತು. ಆಕೆಯ ಮೊಗದಲ್ಲಿ ಆತಂಕ. ಅದು ಕಳಿತ ಚುಕ್ಕಿ ಬಾಳೆ ಹಣ್ಣು. ಅಬ್ಬಬ್ಬಾ ಎಂದರೆ ಎರಡು ತಿನ್ನಬಹುದು. ಅದಾಗಲೇ ನಾಲ್ಕೈದು ಸಿಪ್ಪೆಗಳು ಕಾಲ ಬದಿ ಬಿದ್ದಿವೆ. ಅಜ್ಜಿ ಮಾತು ಜೋರಿದ್ದರೂ ‘ತಿನ್ನೋ ಚಿನ್ನ, ತಿನ್ನೋ ರನ್ನ...’ ಆಕೆಯ ಕೈಗಳು ಮೊಮ್ಮಗನ ಕೆನ್ನೆ ಸವರುತ್ತಿವೆ. ನಾಲ್ಕಾರು ಸ್ನೇಹಿತರು ಕೂಡಿದ ಮೇಲಂತೂ ಅವಮಾನ! 

ಈಗ ಅರ್ಧ ತಾಸಿಗೂ ಮುನ್ನ ಆಗಿದ್ದು ಇಷ್ಟೇ! ಕಿರಾಣಿ ಅಂಗಡಿಯ ‘ಬೂಂ ಬೂಂ ಬೂಮರ್...’ ಡಬ್ಬಿಯೊಳಗಿದ್ದ ಗುಲಾಬಿ ಬಣ್ಣದ ಬೂಮರ್‌ ಹುಡುಗನ ಬಾಯಿ ಸೇರಿತ್ತು. ಹತ್ತು ನಿಮಿಷ ಚೆನ್ನಾಗಿ ಅಗಿದು ರಸ ಹೀರಿದ್ದವನಿಗೆ ಅಚಾನಕ್ಕಾಗಿ ಗಂಟಲು ಹಾದು ತುಪುಕ್ಕನೆ ಹೊಟ್ಟೆ ಸೇರಿತ್ತು ಬೂಮರ್. ಹೀಗಾಗಿದ್ದನ್ನು ಹುಡುಗ ಅಜ್ಜಿಗೆ ಹೇಳಿದ್ದ.

‘ಬೂಮರ್ ನುಂಗುವಂತಿಲ್ಲ. ಅಗಿದು ಉಗಿಯಬೇಕು. ಹೊಟ್ಟೆ ಸೇರಿದರೆ ದೊಡ್ಡ–ಸಣ್ಣ ಕರುಳುಗಳ ಮೇಲೆಲ್ಲಾ ಹರಡುತ್ತದೆ. ರಬ್ಬರ್‌ನಂತೆ ಎಳೆಯುವ ಅಂಟು ಕರುಳಿಗೆಲ್ಲ ಸಿಕ್ಕಿಕೊಂಡರೆ ಅಪಾಯ! ಒಂದು ವೇಳೆ ನುಂಗಿದರೆ ಐದಾರು ಕಳಿತ ಬಾಳೆಹಣ್ಣು ತಿನ್ನಿಸಿ, ಎರಡು ಚಂಬು ನೀರು ಕುಡಿಸಿದರೆ ಗುದದ್ವಾರಕ್ಕೆ ಸೇರುತ್ತದೆ. ಆಗ ಕಕ್ಕಸ್ಸಿನ ಮೂಲಕ ದೇಹದಿಂದ ಹೊರ ಬೀಳುತ್ತದೆ. ಮಕ್ಕಳು ನಿರಾಳ’ ಊರಿನ ನಾಲ್ಕಾರು ಮಂದಿ ಹಳ್ಳಿ ಡಾಕ್ಟರ್‌ ಸಲಹೆ ಸೂಚನೆಗಳು ಅಜ್ಜಮ್ಮನಿಗೂ ಮಸ್ತಕದೊಳಗೆ ಜುಯ್ಯನೇ ಹಾಯ್ದಿದ್ದವು.

‘ಏ...ಥೂ...ಅದನ್ನು ತಿನ್ನಬೇಡ’ ಉಂಡೆಯಾಗದ ಸಪಾಟಾಗಿದ್ದ ಆಗ ತಾನೇ ಬಾಯಲ್ಲಿಟ್ಟಿದ್ದ ಬೂಮರ್‌ ಅನ್ನು ಮಕ್ಕಳ ಬಾಯಿಂದ ತೆಗೆಸಿ ಉಗಿಸಿದ್ದನ್ನು ಎಷ್ಟೋ ಮನೆಗಳಲ್ಲಿ ಅಜ್ಜಿ ಕಣ್ಣಾರೆ ಕಂಡಿದ್ದಳು. ಈಗ ಅದು ತಮ್ಮ ಮನೆಯ ವಂಶೋದ್ಧಾರಕನಾದ ಮೊಮ್ಮಗನ ಕರುಳುಗಳ ಮೇಲೆಲ್ಲಾ ಅದ್ಯಾವ ಪರಿ ಬಿಳಿಲುಗಳನ್ನು ಬಿಡುತ್ತದೆ ಎನ್ನುವ ಭ್ರಾಂತು!

‘ಬೂಂ... ಬೂಂ...ಬೂಂ.. ಬೂಮರ್’ ಜಾಹೀರಾತು ಟಿ.ವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಸಮಯ. ಬೂಮರ್ ಮಾರುಕಟ್ಟೆಗೆ ಬಂದ ಹೊಸತು. ಬಾಯಲ್ಲಿ ಬೂಮರ್‌ ಜಗಿಯುತ್ತಿದ್ದ ಹುಡುಗರು ಅದನ್ನು ದೊಡ್ಡದಾಗಿ ಉಫ್... ಉಫ್‌... ಎಂದು ಊದಿದಾಗ ಉದ್ದವಾಗಿ ಬಾಯೊಳಗಿನಿಂದ ಬರುವ ಗುಳ್ಳೆಯಲ್ಲಿ ಬೂಮರ್ ಮ್ಯಾನ್‌. ಇಂಥದ್ದೆಲ್ಲ ನೋಡಿ ಅಚ್ಚರಿ ಪಟ್ಟಿದ್ದರು ಮಕ್ಕಳು. ಬಾಯಲ್ಲಿ ದೊಡ್ಡ ಗುಳ್ಳೆ ಮಾಡುವ ಆಸೆ. ಗೋಧಿ ಜಗಿದು ಬೂಮರ್‌ಗುಳ್ಳೆ ಮಾಡಿದ್ದೂ ಇದೆ.

ಕೈಗೆ ಸಿಕ್ಕಿದ್ದನ್ನೆಲ್ಲ ಬಾಯಿಗಿಟ್ಟು ರುಚಿ ನೋಡುವ ಮೊಮ್ಮಗನ ಖಯಾಲಿ ಮೂಗಿನೊಳಗಿನ ಕಸ, ಸಿಂಬಳಕ್ಕೂ ಪಸರಿಸಿದ್ದನ್ನು ಬಿಡಿಸುವ ಆಸೆಯಲ್ಲಿ ಅಜ್ಜಮ್ಮ ಮೊಮ್ಮಗನಿಗೆ ಆಗಾಗ್ಗೆ ಒಂದು ರೂಪಾಯಿ ದಕ್ಷಿಣೆ ನೀಡುತ್ತಿದ್ದಳು. ಅದು ಶೆಟ್ಟರ ಅಂಗಡಿಯ ಬೂಮರ್‌ ಪಾಲಾಗುತ್ತಿತ್ತು.

ಹೌದಲ್ಲ... ಬಾಲ್ಯದಲ್ಲಿ ‘ತಿನ್ನಬಾರದು–ಮೂಸಬಾರದು’ ಎಂದು ಮನೆಗಳಲ್ಲಿ ನಿರ್ಬಂಧಿಸಿದ್ದ ಪದಾರ್ಥಗಳ ರುಚಿ ನೋಡಿ ಪೇಚಿಗೆ ಸಿಲುಕಿದ್ದಿದೆ, ಮೂಸಿ ಅವಾಂತರ ಮಾಡಿಕೊಂಡಿದ್ದಿದೆ. ಸುಮ್ಮನೆ ನೋಡಿ.... ಹಳಸಿನ ಬೀಜ, ಹುಣಸೇ ಹಣ್ಣಿಗೆ ಉಪ್ಪು ಖಾರ ಬೆಲ್ಲ ಬೆರೆಸಿ ಕಡ್ಡಿಗೆ ಸಿಕ್ಕಿಸಿಕೊಂಡು ಮೆದ್ದಿದ್ದು, ಮಾವಿನ ಕಾಯಿಗೆ ಸಕ್ಕರೆ ಉಪ್ಪು ಬೆರೆಸಿದ್ದು, ಬೋಟಿ, ಚಿನಕುರುಳಿ, ರೂಪಾಯಿಗೆ ಹತ್ತು ಒಣ ಜಾಮೂನು... ಒಂದೇ, ಎರಡೇ. ತಿಂದು ಆಹಾ... ಆಹಾ... ಎಂದಿದ್ದು. ಇದೆಲ್ಲ ವ್ಯವಸ್ಥಿತ. ‘ಅಂಗಡಿ ತಿಂಡಿ ತಿನ್ನ ಬೇಡ, ಊಟ ಸೇರೊಲ್ಲ’ ಎಂದು ಅಮ್ಮ ಪಟೀರನೆ ಏಟು ಬಾರಿಸಿದರೂ ಮಕ್ಕಳು ಜಪ್ಪಯ್ಯ ಎನ್ನದಿದ್ದಾಗ, ‘ಹೇಳಿದ ಮಾತು ಕೇಳಲ್ಲ...’ ಎಂದು ಬೈಯ್ದು ಸುಮ್ಮನಾಗಿದ್ದಾಳೆ.

ಅದೇ ಮತ್ತಷ್ಟು ಹಿಂದಕ್ಕೋ ಮುಂದಕ್ಕೋ ನಿಮ್ಮ ಜಿಹ್ವೆ ಸವಿದದ್ದನ್ನು ಅಳುಕಿಲ್ಲದೆ ಪಟ್ಟಿ ಮಾಡಿ. ಮುಖ ಕಿವುಚುತ್ತದೆ, ನಾಚಿಕೆಯಾಗುತ್ತದೆ ಅಲ್ಲವೇ! ನೂರಕ್ಕೆ ನೂರರಷ್ಟು ಬಿಗುಮಾನ ಬಿಟ್ಟು ನಾವು ಇಂಥದ್ದರ ರುಚಿ ನೋಡಿದ್ದೇ ಎಂದು ಹೇಳುವುದು ಕಷ್ಟ. ಮಗು ದೊಗ್ಗಾಲಿನಲ್ಲಿ ಪಡಸಾಲೆಯಲ್ಲಿ ರಾಕೆಟ್‌ನಂತೆ ಸುತ್ತು ಹಾಕುತ್ತಿರುವಾಗ ಕೈಗೆ ಸಿಕ್ಕುವ ಕಸ–ಕಡ್ಡಿ, ಅಪ್ಪನೋ ಅಜ್ಜನೋ ಸೇದಿ ಎಸೆದ ಮೋಟು ಬೀಡಿ, ಚಾಪೆಯ ಕಡ್ಡಿ, ಕಲ್ಲು ಹೀಗೆ ಸಿಕ್ಕಿದ್ದೆಲ್ಲ ಬಾಯಿಗೆ ಇಟ್ಟುಕೊಳ್ಳುತ್ತದೆ. ಸಾಕಿದ ನಾಯಿ, ಬೆಕ್ಕುಗಳ ಮೂತಿ ಮೂಸುತ್ತದೆ. ತಾನು ಮಾಡುವುದು ಯಾವುದೂ ಅದಕ್ಕೆ ಗೊತ್ತಿಲ್ಲ. ಅದು ಮಗು.

ಈ ಹಂತದಿಂದ ಮತ್ತಷ್ಟು ಮುಂದುವರಿಯಿರಿ... ಪ್ರಾಥಮಿಕ, ಪ್ರೌಢ ಶಾಲೆಯ ಅಂಗಳ. ಆಗ ಬಾಯಿ ಚಪಲಕ್ಕೆ ಇಲ್ಲವೆ ರುಚಿಯ ಪರೀಕ್ಷೆಗೋ ಬಾಯಿಗೆ ತುರಿಕಿಸಿದ್ದ ಪದಾರ್ಥಗಳೇನು ಕಡಿಮೆಯೇ. ಅದರಲ್ಲೂ ಬಾಯಿ ಚಪಲಕ್ಕಿಂತ ರುಚಿಯ ಪರೀಕ್ಷೆಗೆ ತುರುಕಿದ ಪಡಿ ಪದಾರ್ಥಗಳ ಬಗ್ಗೆ ಅಳುಕಿಲ್ಲದೆ ಹೇಳಿಕೊಳ್ಳುವ ಧೈರ್ಯ ಮಾಡುವುದು ಕಷ್ಟ. ದುಸ್ಸಾಹಸದಿಂದಲೇ ಅಲ್ಲವೇ ಇವುಗಳ ರುಚಿ ಪರೀಕ್ಷೆ ಮಾಡಿರುವುದು!

ಹಾಲು ಕೊಡುವ ಹಸುಗಳ ಮೇವು ಕಡಲೆ ಕಾಯಿ ಹಿಂಡಿ, ಮೂಗಿನಿಂದ ಒಂದಿಂಚು ಕೆಳಕ್ಕಿಳಿಯಲು ತ್ರಾಸ ಪಡುತ್ತಿರುವ ಸಿಂಬಳವನ್ನು ಬಾಯಿಗೆ ಸರ್ರನೆ ಎಳೆದುಕೊಂಡು ಚಪ್ಪರಿಸಿದ್ದು, ಮೂಗಿನೊಳಗಿನ ಹಕ್ಕನ್ನು (ಕಸ) ಬಾಯಿಗಿಡುವಾಗ ‘ಇನ್ನೊಂದು ಸಲ ತಿಂದರೆ ನೋಡು, ಥೂ...’ ಅಮ್ಮ ಗೊಣಗುತ್ತ ಮೂಗಿನ ಹೊಳ್ಳೆಗಳಲ್ಲಿರುವ ಬೆರಳಮೇಲೆ ಛಟೀರನೆ ಬಾರಿಸಿದ್ದು, ಅದು ನನ್ನ ಹಕ್ಕು ಎನ್ನುವಂತೆ ಕಾಣದೆಯೇ ಹಕ್ಕನ್ನು ಮತ್ತೆ ತೆಗೆದು ತಂದಿದ್ದು, ಸುಸ್ತಾದ ದೇಹದಿಂದ ಒಸರುವ ಬೆವರಿನಲ್ಲಿ ಉಪ್ಪು ನೀರು ಸಿಕ್ಕಿದ್ದು, ಬೆವರು ಮತ್ತು ಉಪ್ಪು ನೀರಿನಲ್ಲಿ ಶೇಕಡಾವಾರು ಉಪ್ಪನ್ನು ತಾಳೆ ಮಾಡಿದ್ದು, ಕಿವಿಯೊಳಗಿನ ಅಂಟು ಗುಗ್ಗೆ (ಕಸ) ತೆಗೆದು ಸಿಹಿ–ಹುಳಿಯ ಸ್ವಾದ ಹುಡುಕಿದಾಗ ಬೇವಿನ ಎಲೆಯ ಒಗರು ರುಚಿ ಸಿಕ್ಕಿದ್ದು, ಸಪ್ಪೆ–ಒಗರಿನ ಹುಣಸೇ ಬೀಜದಲ್ಲಿ ಹುಳಿ–ಸಿಹಿ ಹುಡುಕಿದ್ದು, ರಾತ್ರಿ ಚೆನ್ನಾಗಿ ಬಿಸಿ ಮಾಡದ್ದರಿಂದ ಕಾಫಿಗೆ ಹಾಕಿದ ಹಾಲು ಒಡೆದು ಕಾಫಿ ಕೆಟ್ಟಾಗ ಅಪ್ಪ, ಸಿಡಿ ಮುಖದಲ್ಲಿ ಅಮ್ಮನ ಕೈಗಿತ್ತ ಕಾಫಿಯ ರುಚಿ ನೋಡಿದ್ದು, ಕೆಟ್ಟು ವಾಸನೆ ಗಟ್ಟಿರುವ ಮೊಸರಿನ ಸ್ವಾದ, ಕೊಚ್ಚೆಯ ಹೊಂಡದಲ್ಲಿ ಬಿದ್ದ ಬಾರೆ ಹಣ್ಣುಗಳನ್ನು ಆಯ್ದು ತಿಂದಿದ್ದು, ಮಾವಿನ ಮರದ ಹೊಸ ಫಸಲು ನನ್ನ ಹಕ್ಕು ಎಂದು ರುಚಿ ನೋಡಿ ಹಾರಿದ ಹಕ್ಕಿಗಳ ಎಂಜಲಿನ ‘ಗಿಣಿಗಡಕ’ದ ಹಣ್ಣನ್ನು ಅದು ತಿಂದು ಬಿಟ್ಟ ಜಾಗದಲ್ಲಿಯೇ ಬಾಯಿಟ್ಟು ಎಂಜಲು ರುಚಿಯಲ್ಲಿ ಸ್ವಾದ ಹುಡುಕಿದ್ದು, ಮುಳ್ಳು ಹೊದ್ದ ಹರಳಿನ ಗಿಡದ ಕಾಯಿಗಳ ಕಪ್ಪನೆಯ ಮೇಲು ಹೊದಿಕೆ ತೆಗೆದು ಒಳಗಿನ ಬಿಳಿಯ ಪಪ್ಪಿನ ರುಚಿ
ನೋಡಿದ್ದು, ತೊಗರಿ ಗಿಡಗಳ ಸಾಲಿನಲ್ಲಿ, ಮುಳ್ಳು ಪೊದೆಗಳ ಸಾಲಿನಲ್ಲಿ ವಂಶ ಬೆಳೆಸಲು ಹಕ್ಕಿ ಇಟ್ಟ ಮೊಟ್ಟೆಗಳನ್ನು ಕೋಳಿ ಮೊಟ್ಟೆಯ ಸ್ವಾದಕ್ಕಿಂತ ಚೆನ್ನಾಗಿ ಹೀರಿದ್ದು, ಕಾಯಿ ಎಂದು ಗೊತ್ತಿದ್ದರೂ ರುಚಿ ನೋಡುವ ಆಸೆಯಲ್ಲಿ ಸೀಬೆ ಈಚನ್ನು ಕಡಿದಿದ್ದು, ಅಪ್ಪ ತಂದುಕೊಡುತ್ತಿದ್ದ ಬಳಪದ ಪ್ಯಾಕೇಟುಗಳು ಅರ್ಧ ಸ್ಲೇಟಿಗೆ ಬಳಕೆಯಾದರೆ ಇನ್ನರ್ಧ ಬೆಂಡು ಬತ್ತಾಸಿನಂತೆ ಕಾಣಿಸಿದ್ದು, ಮನೆ ಗೋಡೆಗೆ ಬಳಿದ ಸುಣ್ಣ ಬಾಯಿಗೆ ಇಳಿದಿದ್ದು, ಜಾಮಿಟ್ರಿಯಲ್ಲಿರುವ ಮರದ ಪೆನ್ಸಿಲನ್ನು ಕಬ್ಬಿನ ಜಲ್ಲೆಯಂತೆ ಅಗಿದಿದ್ದು, ಬರೆದಿದ್ದನ್ನು ಅಳಿಸುವ ರಬ್ಬರ್‌ ತುಂಡಿನ ಮೂಲೆಗಳು ಹಲ್ಲುಗಳ ನಡುವೆ ಸಿಕ್ಕಿದ್ದು, ಕೆಂಪನೆಯ ಸುಟ್ಟ ಇಟ್ಟಿಗೆಯನ್ನು ಕೆರೆದು ಮಣ್ಣಿನ ರುಚಿ ನೋಡಿದ್ದು, ಅಜ್ಜಿ ಮಡಿ ಉಡಿಸಿ ದೇವರಿಗೆ ಗಂಧ ತೇಯಿ ಎಂದು ಕೂರಿಸಿದಾಗ ನೀರಲ್ಲಿ ತೇಯ್ದ ಶ್ರೀಗಂಧವನ್ನು ಬಾಯಿಗಿಟ್ಟುಕೊಂಡಿದ್ದು, ಅಡುಗೆ ಮನೆ ಅರಿಶಿಣಕ್ಕೂ ದೇವರ ಮನೆ ಅರಿಶಿಣಕ್ಕೂ, ಹರಳೆಣ್ಣೆಗೂ–ಕಡಲೇಕಾಯಿ ಎಣ್ಣೆಗೂ ವ್ಯತ್ಯಾಸಗಳನ್ನು ಸ್ವ ಅನುಭವಕ್ಕೆ ತಂದುಕೊಂಡು ರುಚಿ ವ್ಯತ್ಯಾಸ ಕಂಡು ಹಿಡಿದಿದ್ದು ಬಾಲ್ಯದ ಚಪ್ಪರಿಸುವ ಆಟ–ಹುಡುಗಾಟದಿಂದಲೇ ಅಲ್ಲವೇ.

ಅದರಲ್ಲೂ ಬಳಪ ಬಹಳ ಟೇಸ್ಟ್. ಬಳಪಕ್ಕೆ ಪೈಪೋಟಿ ಎಂದರೆ ವಿಭೂತಿ. ಮನೆಗಳಲ್ಲಿ ದೇವರ ದೂಳತ್ತಾ (ಪ್ರಸಾದ) ಎಂದು ವಿಭೂತಿ ಕೆರೆದು ಪೌಡರ್ ಮಾಡಿಕೊಟ್ಟ ಗಳಿಗೆಗಳು ಸಾಕಷ್ಟಿವೆ. ಬಚ್ಚಲು ಮನೆಯ ಒಲೆಯಲ್ಲಿನ ಪೂರ್ಣ ಸುಟ್ಟುಕೊಂಡ ಸೌದೆಯ ಬೂದಿಗೆ ಯಾವ ರುಚಿ ಇದೆ ಎಂದು ಪರೀಕ್ಷಿಸಿದ ಹುಡುಗಾಟದ ಹುಚ್ಚುತನಗಳೂ ಇವೆ.

ಅಮ್ಮ ಅಡುಗೆ ಮನೆಯಲ್ಲಿ ಶೆಲ್ಫುಗಳ ನಡುವೆ ಜೋಡಿಸಿಟ್ಟ ಡಬ್ಬಿಯೊಳಗಿನ ಒಂದೊಂದೇ ಪದಾರ್ಥಕ್ಕೂ ಯಾವ ರುಚಿ ಇದೆ ಎಂದು ಪರೀಕ್ಷಿಸಿಯೇ ಇರುತ್ತೇವೆ. ಇವುಗಳಲ್ಲಿ ಮುಕ್ಕಾಲು ಪಾಲು ತಿನ್ನಬೇಕೋ– ಬೇಡವೋ ಎನ್ನುವ ತರ್ಕಗಳ ಸ್ಪರ್ಶವಿಲ್ಲದೆಯೇ ರುಚಿ ನೋಡಿದ್ದು. ಔಷಧದ ಗುಣದ ಮಾವಿನ ಎಲೆ, ಬೇವಿನ ಎಲೆ, ನಿಂಬೆಯ ಎಲೆಗಳಿಗೆ ಆ ಗುಣವಿದೆ ಎನ್ನುವುದು ಗೊತ್ತಿಲ್ಲದೇ ಇದ್ದಾಗಲೇ ಬಾಯಿಗೆ ಸೇರಿವೆ.

ಈ ತಿನ್ನುವ ಪರಿ ರೋಗದ ಲಕ್ಷಣವೋ ವಿಲಕ್ಷಣವೋ ಗೊತ್ತಿಲ್ಲ. ಆ ಕ್ಷಣದಲ್ಲಿ ಮೊದಲ ರುಚಿ ನೋಡಬೇಕಷ್ಟೇ. ಆ ರುಚಿ ನಾಲಿಗೆಯಲ್ಲಿ ಹೊಸ ರಸ ಸ್ರವಿಸಿದರೆ ಮುಗಿಯಿತು. ಆಗಾಗ್ಗೆ ಅವು ಹೊಟ್ಟೆ ಸೇರುತ್ತವೆ. ಸಿಂಬಳ, ಹಕ್ಕುಗಳ ರುಚಿ ನೋಡಿದ ಮೇಲೆ ‘ವ್ಯಾ ಎನಿಸಿಯೋ, ಅಮ್ಮ–ಅಪ್ಪನ ಹೊಡೆತಕ್ಕೆ ಬೆದರಿಯೋ ಸುಮ್ಮನೆ ಇರಬಹುದು. ಆದರೆ ಕಡಲೇಕಾಯಿ ಹಿಂಡಿ ರುಚಿ ಮರೆಯಲಾದೀತೇ. ಬಾಲ್ಯದಲ್ಲಿ ಬಾಯಿಗಿಟ್ಟ ವಸ್ತುಗಳು ನಂತರದ ದಿನಗಳಲ್ಲಿ ಕಾಣುವುದು ಸರಿ–ತಪ್ಪುಗಳ ವರ್ಗೀಕರಣದಲ್ಲಿ. ಆಹಾ ಆಹಾ ಎನ್ನುವ ಬಾಯಿ ರುಚಿಗೆ ಪ್ರಜ್ಞೆಯ ಸೀಲು ಒತ್ತುವ ಮುನ್ನ ಸಿಂಬಳ, ಹಕ್ಕು, ಬೆವರು, ಗುಗ್ಗೆ (ಕಿವಿ ಕಸ), ಒಡೆದ ಹಾಲಿಗೆ ಯಾವ ರುಚಿ ಇದೆ ಎಂದು ಪರೀಕ್ಷಿಸಿದ್ದು ಉಂಟೇ?

ಮಕ್ಕಳ ಈ ರುಚಿ ಸ್ವಾದ ನೋಡಿಯೇ ಹಳ್ಳಿಗಳಲ್ಲಿ ಹುಣಸೇ ಬೀಜದಂಥ ಕಪ್ಪನೆಯ ಪೆಪ್ಪರ್ ಮೆಂಟು, ಮಾವಿನ ಹಣ್ಣಿನ ಆಕಾರದ ಚಾಕೊಲೇಟ್‌ಗಳು ಪ್ರವೇಶಿಸಿದ್ದಿರಬೇಕು. ಹುಳಿ ಮಾವಿನ ಕಾಯಿ ತಿಂದಿದ್ದರಿಂದ ಹಲ್ಲು ನೋವಾಗಿ ಊಟ ಸೇರದಿದ್ದರೂ ಮರು ದಿನ ಮತ್ತೆ ಹುಳಿ ಮಾವಿನ ರುಚಿ ನೋಡಲೇಬೇಕು.

‘ದಿನಕ್ಕೆ ಒಂದು ರೂಪಾಯಿ ಕೊಡದಿದ್ದರೆ ಮುಂಡೇದು ಮೂಗಿನೊಳಿಕ್ಕೆ ಕೈ ಇಟ್ಕಳ್ಳುತ್ತೆ, ಸಿಕ್ಕಿದ್ದೆಲ್ಲ ಬಾಯಿಗೆ ಇಟ್ಕೊಳುತ್ತೆ... ಥೂ’ ಐದನೇ ಕ್ಲಾಸಿನಲ್ಲಿದ್ದಾಗ ನನ್ನ ಗೆಳೆಯನ ತಾಯಿ ಹಿಂದಿ ಮಿಸ್‌ (ಟೀಚರ್)ಗೆ ಹೇಳಿದ ದೂರಿನ ಮಾತಿದು. ಶಾಮಾ ಚಾಕೊಲೇಟ್‌, ಅಜ್ಜಿ ಕೂದಲು, ಎಂಟಾಣಿಯ ಮೈಸೂರು ಪಾಕ್, ಹಾಲ್ಕೋವಾ, ಪೆಪ್ಪರ್ ಮೆಂಟ್‌ ಇತ್ಯಾದಿಗಳೆಲ್ಲ ಸಿಕ್ಕರೂ ಕಡಲೇಕಾಯಿ ಹಿಂಡಿ, ಸಿಂಬಳದ ರುಚಿಯನ್ನೂ ನೋಡದಿದ್ದರೆ ಬಾಲ್ಯ ಅಪೂರ್ಣ!

ಹುಣಸೇ ಬೀಜ ಇತ್ಯಾದಿ ಬೀಜಗಳನ್ನು ನುಂಗಿದರೆ ಹೊಟ್ಟೆಯಲ್ಲಿ ಅದು ಮೊಳಕೆಯೊಡೆದು ಮರವಾಗುತ್ತದೆ ಎನ್ನುವ ಅಮ್ಮನ ಮಾತೇ ಬಾಲ್ಯದಲ್ಲಿ ತಿನ್ನುವ ತುಂಟತನಕ್ಕೊಂದು ಬೆದರಿಕೆಯ ಅಸ್ತ್ರ. ಈ ಬೆದರಿಕೆ ತಿನ್ನುವ ಬಾಯಿಯನ್ನು ಕೊಂಚ ಹೊಲಿಸಬಹುದು. ಪೂರ್ಣ ಮುಚ್ಚಿಸುವುದಕ್ಕೆ ಸಾಧ್ಯವಿಲ್ಲ.

ಮೂಸಿ ನೋಡು: ಸಿಕ್ಕಿದ್ದೆಲ್ಲ ಬಾಯಿಗಿಟ್ಟು ಆಸ್ವಾದಿಸುವುದು ಒಂದು ಬಗೆಯಾದರೆ, ಕಂಡಿದ್ದಕ್ಕೆಲ್ಲ ಮೂಗು ತೂರಿಸುವುದು ಇನ್ನೊಂದು ಬಗೆ. ಸೀಮೆಎಣ್ಣೆ, ಪೆಟ್ರೋಲ್, ಬೆವರಿನ ವಾಸನೆ, ಬಟ್ಟೆಯ ವಾಸನೆ, ಸುಗಂಧ ದ್ರವ್ಯದ ವಾಸನೆ, ಉಗುರು ಬಣ್ಣ, ಮನೆಗೆ ಬಳಿಯಲು ತಂದ ಬಣ್ಣ, ವೈಟ್ನರ್, ಫೆವಿಕಾಲ್, ಕೆಸರಿಗೆ ಬಿದ್ದ ರಬ್ಬರ್ ಬಾಲನ್ನು ಮೂಸುವುದು ಹೀಗೆ ಸಿಕ್ಕಿದ್ದೆಲ್ಲ ಮೂಗು ತೂರಿಸಿ ಮೂಸುವುದು ಮತ್ತೊಂದು ಆಟ. ಹಳೆಯ ಗ್ರಂಥಾಲಯದ ಪುಸ್ತಕ ಬೀರುವ ಪರಿಮಳ, ಹರಳೆಣ್ಣೆ ಪೂಸಿಕೊಂಡು, ಕರ್ಪೂರ ಊದುಬತ್ತಿಯ ಪರಿಮಳ ಅಡರಿಕೊಂಡು, ಜಂತಿಗಳಲ್ಲಿರುವ ಗುಬ್ಬಿಗಳ ಬಾವಲಿಗಳ ಆವಾಸವಾಗಿರುವ ದೇವಾಲಯಗಳ ವಾಸನೆಯೂ ಕೆಲವರ ಮೂಗಿನ ಹೊಳ್ಳೆಗಳಿಗೆ ಗಂಧದ ಪರಿಮಳದಂತೆ. ದೇವಾಲಯಗಳಿಗೆ ಟೈಲ್‌ಗಳು, ತಾರಸಿ ಬಿದ್ದ ಮೇಲೆ ಗುಬ್ಬಿಗಳ, ಎಣ್ಣೆ–ಬತ್ತಿಗಳ ವಾಸನೆ ಇಲ್ಲ ಬಿಡಿ.

ಮೋಟಾರು ಬೈಕಿನ ಪೆಟ್ರೋಲ್ ಟ್ಯಾಂಕ್‌ಗೆ ಮೂಗಿಟ್ಟು ವಾಸನೆ ಎಳೆದರೆ, ಅಪ್ಪ ಹಳೆಯ ಸ್ಟೌವ್‌ಗೆ ಸೀಮೆಎಣ್ಣೆ ಹಾಕುವಾಗ ಪಸರಿಸುವ ವಾಸನೆಯೂ ಒಂದು ಹಿತ. ಅಜ್ಜಿಯ ಸೀರೆ ಹೊದ್ದು ಮಲಗುವ ಹಿತವಿದೆಯಲ್ಲ ಅದು ಸೋನೆ ಮಳೆ ಬಿದ್ದಾಗ ಮಣ್ಣು ಘಮ್ಮೆನ್ನುವ ವಾಸನೆ ಮೂಗಿಗೆ ಅಡರಿದಂತೆ.

ಕೊಳೆತ ಹಣ್ಣುಗಳನ್ನು ಮೂಸಿದ್ದು–ತಿಂದಿದ್ದು, ಅಷ್ಟೇಕೆ ಎಲ್ಲೋ ಬಿದ್ದ ಸಾರಾಯಿ ಪ್ಯಾಕೇಟು, ಮದ್ಯದ ಬಾಟಲಿಗಳನ್ನು ನೋಡಿ ಇದನ್ನು ಕುಡಿದರೆ ಕಿಕ್ಕು ಹೊಡೆಯುತ್ತದೆಯೇ? ಯಾವ ವಾಸನೆ ಸಿಕ್ಕುತ್ತದೆ ಎಂದು ಮೂಸಿದ್ದು... ಒಂದೇ, ಎರಡೇ? ನಿರ್ಬಂಧದ ಕಟ್ಟಳೆಗಳನ್ನು ಮುರಿದು ಮೂಸಿದ್ದು, ತಿಂದಿದ್ದು. ಆದರೆ ಈಗ ಆಟ–ಹುಡುಗಾಟದಲ್ಲಿ ಯಾವ ವಸ್ತು ಮೂಸಿದ್ದಿರಿ, ಯಾವ ಯಾವ ಪಡಿ ಪದಾರ್ಥ ತಿಂದಿದ್ದೀರಿ ಮುಕ್ತವಾಗಿ ಪಟ್ಟಿ ಮಾಡಿ ಎಂದರೆ ಬಹಳ ಪದಾರ್ಥಗಳು ಪಟ್ಟಿಯಿಂದ ಆಚೆ ಉಳಿಯುತ್ತವೆ ಅಲ್ಲವೇ.

ಪ್ರಾಥಮಿಕ ಶಾಲೆಯಲ್ಲಿದ್ದಾಗ ಅಪ್ಪ ನಿತ್ಯ ಎರಡು ರೂಪಾಯಿ ಕೊಡುತ್ತಿದ್ದರು. ದುಡ್ಡು ಕೊಡುವುದಕ್ಕೆ ಅಮ್ಮ ವಿರೋಧಿಸುತ್ತಿದ್ದರು. ಹಣ ಕೊಡಲಿಲ್ಲ ಅಂದರೆ ಅಳು, ಹಟ. ಆದರೆ ನಾನು ಬೆಳಿಗ್ಗೆ ಬೇಗ ಎದ್ದು ಅಪ್ಪನ ಕಾಲು ಒತ್ತಿ ಮಸ್ಕಾ ಹೊಡೆದು ದುಡ್ಡು ಪಡೆಯುತ್ತಿದ್ದೆ. 25 ಪೈಸೆಗೆ ನಾಲ್ಕು ಬರ್ಫಿ ಬರುತ್ತಿತ್ತು. ಕೊಬ್ಬರಿ ಮಿಠಾಯಿ ರೀತಿ ಇರುತ್ತದೆಯಲ್ಲ ಅದಲ್ಲ, ಬಿಳಿಯಾಗಿರುತ್ತಿತ್ತು. ಇದು ನನಗೆ ತುಂಬಾ ಇಷ್ಟ. ನಮ್ಮ ಶಾಲೆಯ ಎದುರು ಮಕ್ಕಳ ತಿಂಡಿ ಮಾರಾಟ ಮಾಡಲು ಒಬ್ಬ ವ್ಯಕ್ತಿ ಬರುತ್ತಿದ್ದರು. ಅವರನ್ನು ನಾವು ನಾನಿ ಎನ್ನುತ್ತಿದ್ದೆವು. ಅವರ ಬಳಿ ಸಾಲ ಮಾಡಿ ತಿಂಡಿ ತಿಂದಿದ್ದೇನೆ.

ನಿಂಬೆಹುಳಿ, ಹುಣಸೇ ಕಾಯಿ ಮಸಾಲೆ ಇತ್ಯಾದಿ ಬೇರೆ ಬೇರೆ ತಿಂಡಿಗಳು ಇಷ್ಟವಾಗಿದ್ದವು. ಆದರೆ ಈಗ ಅವು ಯಾವನ್ನೂ ತಿನ್ನುತ್ತಿಲ್ಲ. ಆರೋಗ್ಯ ಕಾಳಜಿ. 
–ಮಯೂರಿ, ನಟಿ



ಬೋಟಿ, ನಿಂಬೆಹುಳಿ ಪೆಪ್ಪರ್‌ಮೆಂಟ್, ಡ್ರೈ ಇದ್ದು ಒಳಗೆ ರಸ ತುಂಬಿದ ಜಾಮೂನು, ಬೆಲ್ಲದ ಮಿಠಾಯಿ, 50 ಪೈಸೆ ಐಸ್‌ಕ್ಯಾಂಡಿ  ಚಿಕ್ಕಂದಿನಲ್ಲಿ ಇಷ್ಟದ ತಿಂಡಿಗಳು. ಈಗಲೂ ಬಾಲ್ಯದ ತಿಂಡಿಗಳಿಂದ ನಾನು ದೂರವಿಲ್ಲ. ಬೋಟಿ, ಮಿಠಾಯಿ ತಿನ್ನುವೆ. ರಾಮನಗರದ ಬಸ್‌ನಿಲ್ದಾಣ ಮತ್ತು ಸಿಗ್ನಲ್‌ಗಳಲ್ಲಿ ಬೆಲ್ಲದ ಮಿಠಾಯಿ ಸಿಕ್ಕುತ್ತದೆ. ದಿನಕ್ಕೆ 25 ಪೈಸೆ ಸಿಕ್ಕಿದರೆ ಸಾಕಿತ್ತು ನನಗೆ. ದುಡ್ಡಿಗೆ ಹಟ ಹಿಡಿದಾಗ ‘ದಿನವೂ ದುಡ್ಡು ಕೇಳ್ತೀಯಾ’ ಎಂದು ಅಮ್ಮ ಪೆಟ್ಟುಕೊಟ್ಟಿದ್ದಾಳೆ. ಮನೆಗೆ ನೆಂಟರು ಬಂದರೆ ಖುಷಿಯೋ ಖುಷಿ. ಬಂದ ನೆಂಟರಲ್ಲಿ ಯಾರು, ಯಾವಾಗ ದುಡ್ಡು ಕೊಡುತ್ತಾರೆ, ಏನು ತಂದಿದ್ದಾರೆ ಎನ್ನುವ ಕುತೂಹಲ. ನೆಂಟರು ದುಡ್ಡು ಕೊಟ್ಟೇ ಕೊಡುತ್ತಿದ್ದರು. ಊರಿನ ಹೊರಗೆ ಮಾರಮ್ಮನ ಗುಡಿ. ಸಿಡುಬು ಸೇರಿದಂತೆ ಚರ್ಮ ರೋಗ ಬಂದವರ ಮನೆಯವರು ಅಲ್ಲಿಗೆ ಬಂದು ಮೊಸರನ್ನದ ಉಂಡೆ ಇಟ್ಟು ಹೋಗುತ್ತಿದ್ದರು. ಅದನ್ನು ತಿನ್ನುತ್ತಿದ್ದೆವು. ದೇವರ ಮೂರ್ತಿಗೆ ಕುಂಕುಮ, ಎಣ್ಣೆ ಬಳಿಯುತ್ತಿದ್ದರು. ನನಗೆ ಈಗಲೂ ಆ ದೇವಾಲಯದ ವಾಸನೆ ಚೆನ್ನಾಗಿ ನೆನಪಿದೆ. 
–ನೀನಾಸಮ್ ಸತೀಶ್, ನಟ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT