ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಊರು–ಕೇರಿಯ ರಾಷ್ಟ್ರೀಯತೆ

Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ರಾಷ್ಟ್ರ, ರಾಷ್ಟ್ರೀಯತೆ ಹಾಗೂ ರಾಷ್ಟ್ರಪ್ರೇಮದ ಕುರಿತಂತೆ ವ್ಯಾಖ್ಯಾನ – ಚರ್ಚೆಗಳು ನಡೆಯುತ್ತಿರುವ ಸಂದರ್ಭವಿದು. ‘ಕೆಲವರ ರಾಷ್ಟ್ರೀಯತೆಯೇ ಎಲ್ಲರ ರಾಷ್ಟ್ರೀಯತೆ ಅಲ್ಲ. ದೇಶದ ಭಾವನೆ ಒಂದೇ ಪ್ರಮಾಣದಲ್ಲಿ ಇರಲು ಸಾಧ್ಯವಿಲ್ಲ’ ಎನ್ನುವ ಇಲ್ಲಿನ ಬರಹ– ತನ್ನೂರು ಹಾಗೂ ಕೇರಿಯ ಮೂಲಕವೇ ದೇಶವನ್ನು ಕಲ್ಪಿಸಿಕೊಳ್ಳಲು ಒತ್ತಾಯಿಸುತ್ತದೆ. ‘ದೇಶಕ್ಕೆ ಸ್ವಾತಂತ್ರ್ಯ ಇದ್ದರೂ ಅನೇಕ ಸಮುದಾಯಗಳಿಗೆ ವಾಸ್ತವ ಸ್ವಾತಂತ್ರ್ಯವೇ ಇರುವುದಿಲ್ಲ. ಸಮಾನ ಸ್ವಾತಂತ್ರ್ಯ ಮತ್ತು ನ್ಯಾಯ ಇಲ್ಲದ ಸಂದರ್ಭದಲ್ಲಿ ದೇಶಭಕ್ತಿ ಮೂಡಲು ಸಾಧ್ಯವಿಲ್ಲ’ ಎನ್ನುತ್ತ, ಸಹನೆ – ಭ್ರಾತೃತ್ವಗಳ ನೆಲೆಗಟ್ಟಿನಲ್ಲಿ, ಯಾವ ಧರ್ಮಗಳ ಹಂಗಿಗೂ ಸಿಲುಕದ ಹೊಸ ಭಾರತವನ್ನು ರೂಪಿಸುವ ಕನಸನ್ನು ಪ್ರತಿಪಾದಿಸುತ್ತದೆ.

ರಾಷ್ಟ್ರ ಮತ್ತು ರಾಷ್ಟ್ರೀಯತೆಯನ್ನು ಭಾವಿಸಲು ಹಲವಾರು ದಾರಿಗಳಿವೆ. ‘ಹಿಂದ್ ಸ್ವರಾಜ್’ ಮೂಲಕ ಗಾಂಧೀಜಿ ಗ್ರಾಮ ಭಾರತದ ಆದರ್ಶ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದರು. ನೆಹರು ಭಾಷಾವಾರು ಪ್ರಾಂತಗಳ ಹಿನ್ನೆಲೆಯಲ್ಲಿ ಒಕ್ಕೂಟ ರಾಷ್ಟ್ರೀಯತೆಯನ್ನು ಪಾಲಿಸಿದರು. ಸ್ವತಃ ‘ಬಹಿಷ್ಕೃತ ಭಾರತೀಯ’ ಎಂದು ನೊಂದುಕೊಂಡರೂ ಅಂಬೇಡ್ಕರ್ ಜಾತ್ಯತೀತ ರಾಷ್ಟ್ರೀಯತೆಯನ್ನು ಸಮಾನ ಸಾಮಾಜಿಕ ನ್ಯಾಯದಲ್ಲಿ ವ್ಯಾಖ್ಯಾನಿಸಿದರು. ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಆಧುನಿಕ ಭಾರತವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಆರ್.ಎಸ್.ಎಸ್. ಪ್ರಣೀತ ‘ರಾಷ್ಟ್ರವಾದ’ ಬೇರೊಂದು ಬಗೆಯಲ್ಲಿದೆ. ಆಧುನಿಕ ಚರಿತ್ರಕಾರರು ವ್ಯಾಪಕವಾಗಿ ರಾಷ್ಟ್ರ ಮತ್ತು ರಾಷ್ಟ್ರೀಯತೆಯನ್ನು ಚರ್ಚಿಸಿದ್ದಾರೆ. ಹಿಟ್ಲರನ ನಾಜಿವಾದ ಯಾವ ಬಗೆಯಲ್ಲಿ ಯುರೋಪಿನ ವಲಯದಲ್ಲಿ ರಾಷ್ಟ್ರೀಯತೆ ಮತ್ತು ಜನಾಂಗವಾದವನ್ನು ಬಿತ್ತಿತೆಂದು ಬಿಡಿಸಿ ಹೇಳಬೇಕಾಗಿಲ್ಲ.

ಒಂದು ಸರ್ವತಂತ್ರ ಸ್ವತಂತ್ರ ದೇಶ ಮತ್ತು ಅದರ ರಾಷ್ಟ್ರೀಯತೆಯು ಯಾವ ಯಾವ ಮಾನದಂಡಗಳಿಂದ ನಿರ್ಧಾರವಾಗಬೇಕು ಎಂಬುದನ್ನು ನಾವಿನ್ನೂ ಸರಿಯಾಗಿ ಬಗೆಹರಿಸಿಕೊಂಡಿಲ್ಲ. ಯುರೋಪಿನಲ್ಲಿ ಹುಟ್ಟಿಕೊಂಡ ರಾಷ್ಟ್ರೀಯತೆಯ ಮೂಲದಲ್ಲೇ ಸಾಮ್ರಾಜ್ಯಶಾಹಿ ಗುಣಗಳು ಬೆರೆತಿವೆ. ಅಮೆರಿಕದ ಹಾಗೂ ಬ್ರಿಟನ್ನಿನ ರಾಷ್ಟ್ರೀಯತೆಗಳು ಇವತ್ತು ಜಾಗತೀಕರಣದ ಹೆಸರಿನಲ್ಲಿ ಆಧುನಿಕೋತ್ತರ ಸಾಮಾಜಿಕ ಚಲನೆಯ ಹಿನ್ನೆಲೆಯಲ್ಲಿ ರಾಷ್ಟ್ರಗಳ ಚಹರೆಗಳನ್ನೇ ಅಳಿಸಿಬಿಡುತ್ತಿವೆ. ಯುದ್ಧಗಳ ಮೂಲಕ ರಾಷ್ಟ್ರೀಯತೆ ರೂಪುಗೊಂಡಾಗ ಆಗುವ ಅಪಾಯಗಳು ನಿರಂತರವಾದುವು. ಭಾರತದ ರಾಷ್ಟ್ರೀಯತೆಗೆ ಯುದ್ಧ ಅಥವಾ ಕೋಮುವಾದಗಳ ಅವಶ್ಯಕತೆಯಿಲ್ಲ.

ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಲೇ ಹಿಂದಿನಿಂದಲೂ ಯಾವುದೇ ದೇಶದ ರಾಷ್ಟ್ರೀಯತೆ ಸಂಕೀರ್ಣ ಸವಾಲುಗಳಿಗೆ ಒಳಗಾಗಿರುವುದು. ಇವೆರಡರ ಬಲದಿಂದ ಧರ್ಮದ ಮಾನದಂಡಗಳು ಕೂಡ ಮುಖ್ಯವಾಗುತ್ತವೆ. ವರ್ತಮಾನದ ರಾಜಕಾರಣದಲ್ಲಿ ಇವುಗಳ ಪಾತ್ರವನ್ನು ಗಮನಿಸಬಹುದು. ಇಂತಲ್ಲಿ ದೇಶಕ್ಕೆ ಸ್ವಾತಂತ್ರ್ಯ ಇದ್ದರೂ ಅನೇಕ ಸಮುದಾಯಗಳಿಗೆ ವಾಸ್ತವ ಸ್ವಾತಂತ್ರ್ಯವೇ ಇರುವುದಿಲ್ಲ. ಸಮಾನ ಸ್ವಾತಂತ್ರ್ಯ ಮತ್ತು ನ್ಯಾಯ ಇಲ್ಲದ ಸಂದರ್ಭದಲ್ಲಿ ದೇಶಭಕ್ತಿ ಮೂಡಲು ಸಾಧ್ಯವಿಲ್ಲ. ಇವತ್ತಿಗೂ ಅಸಂಖ್ಯಾತ  ಭಾರತೀಯರಿಗೆ ‘ನಾವು, ನಮ್ಮದು, ನಮ್ಮ ದೇಶ’ ಎಂಬ ಭಾವನಾತ್ಮಕ ಸಂಬಂಧವೇ ಸಾಧ್ಯವಾಗಿಲ್ಲ. ಕೆಲವರ ರಾಷ್ಟ್ರೀಯತೆಯೇ ಎಲ್ಲರ ರಾಷ್ಟ್ರೀಯತೆ ಅಲ್ಲ. ದೇಶದ ಭಾವನೆ ಒಂದೇ ಪ್ರಮಾಣದಲ್ಲಿ ಇರಲು ಸಾಧ್ಯವಿಲ್ಲ.

ಒಂದು ದೇಶದ ರಾಷ್ಟ್ರೀಯತೆ ನಿರ್ಧಾರ ಆಗಬೇಕಾದ್ದು ಯಾವ ಯಾವ ಅಂಶಗಳಿಂದ ಎಂಬುದನ್ನು ಗಮನಿಸಬಹುದು. ಒಂದು ಭಾಷೆ, ಒಂದು ಧರ್ಮ, ಒಂದು ಸಮಾಜ, ಒಂದು ಸಂಸ್ಕೃತಿ, ಒಂದು ಚರಿತ್ರೆ, ಒಂದು ಆರ್ಥಿಕ ರಾಜಕಾರಣಗಳು ಇದ್ದಲ್ಲಿ ಒಂದು ಅಖಂಡ ರಾಷ್ಟ್ರೀಯತೆ ಮೂಡಲು ಸಾಧ್ಯ ಎಂದು ಹೇಳುವುದುಂಟು. ಭಾರತದಲ್ಲಿ ಹೀಗೆ ಧರ್ಮ, ಭಾಷೆ, ಸಂಸ್ಕೃತಿ, ಜನಾಂಗಗಳಿಂದ ರಾಷ್ಟ್ರೀಯತೆ ಸಾಧ್ಯವೇ ಎಂದು ನೋಡಿದರೆ ಇವುಗಳೇ ಆ ಒಂದು ರಾಷ್ಟ್ರೀಯತೆಯ ಸಮರ್ಥನೆಯನ್ನು ಅಲ್ಲಗಳೆಯುತ್ತವೆ. ಯುರೋಪಿನಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ರಾಷ್ಟ್ರೀಯತೆಯನ್ನು ರೂಪಿಸಲು ದೊಡ್ಡ ಶಕ್ತಿಯಾಗಿವೆ. ಭಾರತದಲ್ಲಿ ಹಿಂದೂ ಧರ್ಮವನ್ನು ಮುನ್ನೆಲೆಗೆ ತಂದು ರಾಷ್ಟ್ರೀಯತೆಯ ಪ್ರಶ್ನೆಯನ್ನು ಎತ್ತಿದ ಕೂಡಲೇ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಹಾಗಾದರೆ ಭಾರತದ ರಾಷ್ಟ್ರೀಯತೆಯನ್ನು ಯಾವ ನೆಲೆಗಳಿಂದ ಭಾವಿಸಲು ಸಾಧ್ಯ ಎಂಬುದನ್ನು ಗಮನಿಸಬೇಕು. ಸಂವಿಧಾನದ ಮೂಲಕ ರಾಷ್ಟ್ರೀಯತೆಯನ್ನು ಭಾವಿಸುವುದು ಒಂದು ಕ್ರಮ. ಜಾತ್ಯತೀತ ಹಾಗೂ ಧರ್ಮ ನಿರಪೇಕ್ಷ ಸಂಗತಿಗಳು ನಮ್ಮ ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಮೂಲ ಆಶಯ. ಇಲ್ಲಿ ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವ ಸಹಜವಾಗಿಯೇ ಇದೆ. ಭಾರತದಲ್ಲಿ ಧರ್ಮ ಒಂದು ಔಪಚಾರಿಕ ಸೌಜನ್ಯ ಎಂಬುದನ್ನು ವಿಶಾಲವಾಗಿ ನೋಡಬೇಕಾಗಿದೆ. ಭಾರತದ ಬಹುಪಾಲು ಸಮುದಾಯಗಳಿಗೆ ಒಂದು ದೇವರಿಲ್ಲ, ಒಂದೇ ಆಚರಣೆ–ನಂಬಿಕೆಗಳಿಲ್ಲ. ಭಾರತೀಯರು ನಿಸರ್ಗಾರಾಧಕರು. ಅದರಲ್ಲಿ ಮಾತೃ ಪ್ರಧಾನ ಮತ್ತು ಪಿತೃ ಪ್ರಧಾನ ಮೌಲ್ಯಗಳಿವೆ. ಪೂರ್ವಿಕರ ನಡೆಗಳಿವೆ. ಇವು ಹೆಚ್ಚಾಗಿ ಲೌಕಿಕ ಕೇಂದ್ರಿತವಾಗಿವೆ. ಹಾಗೆಯೇ ಸಂಸ್ಕೃತಿ ಪ್ರಧಾನವಾಗಿವೆ.

ಈ ಎಲ್ಲ ಸಂಸ್ಕೃತಿಗಳೂ ಕುಟುಂಬ ನೆಲೆಯಿಂದ ವಿಕಾಸವಾಗಿವೆ. ದೇಶವನ್ನು ಕುಟುಂಬದ ನೆಲೆಯಿಂದ ನೋಡುವುದು ಒಳ್ಳೆಯ ಮಾನದಂಡ. ಆದರೆ ಈ ಎಲ್ಲ ಸಂಸ್ಕೃತಿಗಳು ಬಹುರೂಪಿ. ಇವೆಲ್ಲವೂ ಭಾರತದ ಉದ್ದಕ್ಕೂ ವ್ಯಾಪಿಸಿವೆ. ಈ ಎಲ್ಲ ವೈವಿಧ್ಯ ಕುಟುಂಬಗಳು ಮುಖ್ಯವಾಗಿ ಕುಲಜಾತಿಗಳಲ್ಲಿ ಬೆಳೆದಿವೆ. ಜಾತಿಗೆ ಒಂದೊಂದು ಸಂಸ್ಕೃತಿ ಇದೆ. ಚರಿತ್ರೆಯಿದೆ. ಇವುಗಳು ಸಂಘರ್ಷದಿಂದ ಅಂತರ ಸಾಧಿಸದೆ, ಸೌಹಾರ್ದತೆಯಿಂದ ಒಂದೊಂದು ಸಂಸ್ಕೃತಿಗಳೂ ಭಾರತೀಯ ಪರಂಪರೆಗಳನ್ನು ಬೆಳೆಸಿವೆ. ಹೀಗಾಗಿ ರಾಷ್ಟ್ರೀಯತೆಯನ್ನು ಇಂತಹ ಸಂಸ್ಕೃತಿಗಳ ಪರಸ್ಪರ ಹೊಂದಾಣಿಕೆಯಿಂದ ಭಾವಿಸಬೇಕೇ ವಿನಃ ಧರ್ಮ ಗ್ರಂಥಗಳಿಂದಲ್ಲ. ರಾಮಾಯಣ – ಮಹಾಭಾರತ ಎರಡೂ ಮಹಾಕಾವ್ಯಗಳು ತಾನೆ. ಇವು ಕೇವಲ ಎರಡಲ್ಲ.

ಲಕ್ಷಾಂತರ ರಾಮಾಯಣ ಮಹಾಭಾರತಗಳು ಭಾರತದ ಎಲ್ಲ ಜಾತಿಗಳಲ್ಲೂ ಭಾಷೆಗಳಲ್ಲೂ ಪ್ರದೇಶಗಳಲ್ಲೂ ವ್ಯಾಪಿಸಿವೆ. ಇದು ಭಾರತೀಯ ಗುಣ. ಆ ಕಾವ್ಯಗಳ ಪಾತ್ರಗಳ ಹೆಸರುಗಳು ಎಲ್ಲೆಡೆ ನಿತ್ಯ ಹರಿದಾಡುತ್ತಿವೆ. ಎಲ್ಲ ಸಮಾಜಗಳ ಸಂಸ್ಕೃತಿಯ ಭಾಗವಾಗಿ ರಾಮ–ಕೃಷ್ಣರ ಹೆಸರುಗಳು ಬೇರುಬಿಟ್ಟಿವೆ. ಮಾನವ ಸಮಾಜಕ್ಕೆ ಬೇಕಾದ ಮೌಲ್ಯಗಳನ್ನು ಈ ಕಥನಗಳು ಮಂಡಿಸಿವೆ. ಅದನ್ನೇ ಒಂದೊಂದು ತಳಸಮುದಾಯಗಳು ತಮಗೆ ಬೇಕಾದ ರೀತಿಯಲ್ಲಿ ರೂಪಾಂತರಿಸಿಕೊಂಡಿವೆ. ಮಹಾಭಾರತದ ನೀತಿಯನ್ನು ‘ಭಗವದ್ಗೀತೆ’ ಸಾರಿದೆ ಎಂಬ ಒಂದು ಅಭಿಪ್ರಾಯವಿದೆ. ಇದನ್ನು ಇಡೀಯಾಗಿ ಒಪ್ಪುವ ಬದಲು ವಿಚಾರ ಮಾಡಬೇಕಾಗಿದೆ. ಯುದ್ಧ ಮತ್ತು ಹಿಂಸೆ ಅನಿವಾರ್ಯ ಎಂದೇನಾದರೂ ಕೃಷ್ಣನೇ ಭೋದಿಸಿದ ಎಂದರೆ; ಈ ಕಾಲದಲ್ಲಿ ನಮ್ಮ ಧರ್ಮಕ್ಕಾಗಿ ನಾವು ರಕ್ತ ಹರಿಸುವುದು ತಪ್ಪಲ್ಲ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ಹಿಂಸೆ ಮತ್ತು ಯುದ್ಧವಿಲ್ಲದ ನೀತಿಯೇ ಯಾವುದೇ ದೇಶದ ನಿಜವಾದ ಮಾನವತ್ವ. ಬುದ್ಧ ಹಿಂಸೆ ಮತ್ತು ಯುದ್ಧನೀತಿಗೆ ವಿರುದ್ಧವಾಗಿದ್ದ. ಅಶೋಕನ ‘ಸತ್ಯಮೇವ ಜಯತೆ’ಯ ಮಾತನ್ನು ನಮ್ಮ ರಾಜಕಾರಣಿಗಳು ನೆನಪಿಸುವ ಬದಲು ಅದರಂತೆ ರಾಜನೀತಿಯನ್ನು ಅನುಸರಿಸಿದರೆ ನಮ್ಮ ಗಡಿಗಳು ಶಾಂತಿ ಮತ್ತು ಮಾನವ ಘನತೆಯಲ್ಲಿ ಬೆಳಗುತ್ತವೆ. ಸಂಸ್ಕೃತಿಗಳು ಯುದ್ಧಪರವಲ್ಲ. ಹಾಗಾಗಿಯೇ ಜಾತಿಗಳು ಸಹಬಾಳ್ವೆಯನ್ನು ಅನುಸರಿಸಲು ಸಾಧ್ಯವಾದದ್ದು. ನಮ್ಮ ಮಕ್ಕಳಲ್ಲಿ, ಯುವ ಜನಾಂಗದಲ್ಲಿ ದೇಶಭಕ್ತಿಯನ್ನು ಬಿತ್ತಬೇಕಾದರೆ ಧರ್ಮ ನೀತಿಯನ್ನು ಬೆಳೆಸಬೇಕಾಗಿಲ್ಲ.

ಜಾತಿಗಳು ನಾಶವಾದಂತೆಲ್ಲ ಸಮುದಾಯಗಳು ಮಾನವೀಯತೆಯತ್ತ ಸಾಗುತ್ತವೆ. ಎಲ್ಲಿ ಉನ್ನತ ಮಾನವೀಯ ಮೌಲ್ಯಗಳು ರಾಜಕೀಯವಾಗಿ ಬಲಗೊಳ್ಳುತ್ತವೆಯೇ ಅಲ್ಲಿ ಮಾತ್ರ ನಿಜವಾದ ಆದರ್ಶ ಮಾನವ ಸಮಾಜ ನಿರ್ಮಾಣವಾಗುತ್ತದೆ. ಯಾವ ಸಮಾಜ ಗಾಯಗೊಂಡು ಜಾತಿಗಳಿಂದ ನಲುಗಿರುತ್ತದೊ ಅಲ್ಲಿ ಊನಗೊಂಡ ರಾಷ್ಟ್ರೀಯತೆ ಬೆಳೆದಿರುತ್ತದೆ. ಜಾತಿಗಳ ಕಾರಣವಾಗಿಯೇ ದಲಿತರನ್ನು ಸುಟ್ಟುಹಾಕುವ ಹೇಯ ನೀತಿ ಇರುವಲ್ಲಿ ಸಮಾನ ರಾಷ್ಟ್ರೀಯತೆ ಹೇಗೆ ಸಾಧ್ಯ? ಅರ್ಧದಷ್ಟಿರುವ ಮಹಿಳೆಯರ ಸೊಲ್ಲು ನಮ್ಮ ರಾಷ್ಟ್ರೀಯತೆಯಲ್ಲಿ ಪ್ರತಿಧ್ವನಿಸಿದೆಯೇ? ‘ದೇಶಭಕ್ತಿ’ ಎನ್ನುವುದೇ ಒಂದು ಪುರುಷ ರಾಜಕಾರಣ ಎಂಬುದು ನಿಜ ಅಲ್ಲವೆ? ನಿಜವಾದ ರಾಷ್ಟ್ರೀಯತೆ ತೀರ್ಮಾನವಾಗುವುದು ಮಾನವ ಸಂಬಂಧಗಳು ಆ ದೇಶದಲ್ಲಿ ಯಾವ ಬಗೆಯಲ್ಲಿ ಜಾರಿಯಾಗಿವೆ ಎಂಬುದರಿಂದ.

ಲಿಂಗ ತಾರತಮ್ಯವಿಲ್ಲದೆ, ಜಾತಿ ಇಲ್ಲದೆ, ಬಡವ – ಶ್ರೀಮಂತ ಭೇದವಿಲ್ಲದೆ ಒಂದು ಸಮಾಜ ಉನ್ನತ ಮೌಲ್ಯಗಳನ್ನು ಪಾಲಿಸಿದೆ ಎಂದಾಗ ಮಾತ್ರವೇ ನಿಜವಾದ ರಾಷ್ಟ್ರೀಯತೆ ಇದೆ ಎಂದರ್ಥ. ಈಗಲೂ ದೇಶದ ತುಂಬ ನಗರಗಳಲ್ಲಿ ಅಸಂಖ್ಯಾತರು ಕೊಳೆಗೇರಿಗಳಲ್ಲಿ ವಾಸವಿದ್ದಾರೆ. ಎಷ್ಟೋ ಆದಿವಾಸಿ ಅಲೆಮಾರಿಗಳಿಗೆ ನೆಲೆಯಿಲ್ಲ. ಹೊಸ ಪೀಳಿಗೆಗೆ ತಕ್ಕ ಜೀವನಾಧಾರವಿಲ್ಲ. ಮೂಲಭೂತ ಸೌಕರ್ಯಗಳನ್ನೇ ನೀಡದ ಸರ್ಕಾರಗಳು ರಾಷ್ಟ್ರೀಯತೆಯ ಹೆಸರಿನಲ್ಲಿ ತನಗೆ ಬೇಕಾದ ನೀತಿಗಳನ್ನು ಹೇರುವುದು, ರಾಷ್ಟ್ರವಿರೋಧಿ ಚಟುವಟಿಕೆಯೇ ಆಗಿರುತ್ತದೆ. ದೇಶದ ಬೆನ್ನೆಲುಬು ಎನಿಸಿದ್ದ ಉತ್ಪಾದಕ ವರ್ಗವೇ ಆತ್ಮಹತ್ಯೆಯ ಹಾದಿಯತ್ತ ಸಾಗಿದೆ ಎಂದರೆ ದೇಶದ ಹೊಣೆಗಾರಿಕೆ ಏನಾಯಿತು? ಇಂತಲ್ಲಿ ದೇಶ ಉಳಿಯುವುದು ಮೊದಲೊ ಜನರ ಜೀವ ಉಳಿಯುವುದು ಮೊದಲೊ?

ಪ್ರಸ್ತುತ ಜಗತ್ತಿನ ಅರ್ಥವೇ ಬದಲಾಗುತ್ತಿದೆ. ದೇಶಗಳ ಸ್ವಾಯತ್ತೆ ಬಹಳ ಸಡಿಲವಾಗಿದೆ. ವಿದೇಶಗಳಲ್ಲಿ ದೇಶಗಳು ವಿಲೀನವಾಗುತ್ತ ದೇಶಗಳಲ್ಲಿ ವಿದೇಶಗಳು ಸಂಗಮಿಸುತ್ತಿವೆ. ಹೀಗಿರುವಲ್ಲಿ ರಾಷ್ಟ್ರೀಯತೆಗೆ ಬಹಳ ದೊಡ್ಡ ಭಾವನಾತ್ಮಕ ಸಂಬಂಧ ಇಲ್ಲವಾಗಿದೆ. ಈ ಕಾಲದ ಮೋದಿ ಸರ್ಕಾರವೋ ವಿದೇಶಿ ಸಂಬಂಧಗಳಿಗೆ ಹೆಚ್ಚಿನ ಮನ್ನಣೆ ನೀಡಿದೆ. ಇಂತಲ್ಲಿ ಸಹಜವಾಗಿಯೇ ‘ಹಿಂದೂ ದೇಶ’ ಎಂಬುದು ಎಲ್ಲಿದೆ, ಅದು ಯಾರ ಮುಖವಾಣಿ ಎಂದು ಕೇಳುವುದು ಅಪರಾಧವಲ್ಲ. ನಾನು ನನ್ನ ಹಳ್ಳಿಯಿಂದಲೇ ನನ್ನ ದೇಶವನ್ನೂ ರಾಷ್ಟ್ರೀಯತೆಯನ್ನೂ ಭಾವಿಸುತ್ತೇನೆ ಎಂದಾದರೆ ಅದರ ಸ್ವರೂಪ ಹೇಗಿರುತ್ತದೆ? ಧರ್ಮಗಳ ಮೇಲಾಟವೇ ರಾಷ್ಟ್ರೀಯತೆಗೆ ಹೆಚ್ಚಿನ ಒತ್ತು ನೀಡಲು ಕಾರಣವಾದದ್ದು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ತಮ್ಮ ಪತಾಕೆ ನೆಡಲು ಹೇಗೆಲ್ಲ ನಡೆದುಕೊಂಡಿವೆ ಎಂಬುದನ್ನು ಗಮನಿಸಿ.

ಹಿಟ್ಲರ್ ಮಹಾಯುದ್ಧದಿಂದ ಏನನ್ನು ಮಾಡಲು ಹೊರಟಿದ್ದ ಎಂಬುದನ್ನು ನೆನಪಿಸಿಕೊಳ್ಳಿ. ಈ ಯಾವುದೂ ಉಳಿಯಲಿಲ್ಲ. ಭಾರತೀಯ ಸಮಾಜಗಳ ಬಹುಸಂಖ್ಯಾತರು ಧರ್ಮಬೀರುಗಳಲ್ಲ. ಅವರೆಲ್ಲರಿಗೂ ಅವರದೇ ಆದ ಪ್ರಾಚೀನ ನೆನಪುಗಳಿವೆ. ಅವು ತಲೆಮಾರುಗಳಿಂದ ಸಾಗಿಬಂದಿವೆ. ಈಗಲೂ ಅವರವರ ಊರುಕೇರಿಗಳೇ, ನಾಡು, ನದಿ, ಬೆಟ್ಟಗುಡ್ಡಗಳೇ, ಸೀಮೆಗಳೇ ಅವರನ್ನು ನಿರ್ಧರಿಸಿರುವ ಮಾನದಂಡಗಳು. ಹಿಮಾಲಯವೋ, ಹರಪ್ಪಾ, ಮೊಹೆಂಜದಾರೊಗಳೊ, ರಾಮಜನ್ಮ ಭೂಮಿಯೊ ಮಾತ್ರವೇ ‘ಹಿಂದೂ’ವಲ್ಲ. ನಮ್ಮ ಊರಿನ ಹೊಲಗೇರಿಯಿಂದಲೇ ನಾನು ನನ್ನ ದೇಶವನ್ನು ಭಾವಿಸಲು ಸಾಧ್ಯವಾಗಿರುವುದು. ನನ್ನ ಊರು ಒಂದು ಉಪಭಾರತ. ಅಲ್ಲಿನ ಎಲ್ಲ ಕೇರಿಗಳು ಅದರ ಬಹುರೂಪ. ಇಲ್ಲಿ ಯಾವ ಕೇರಿಯಿಂದ ನಾನು ನನ್ನ ರಾಷ್ಟ್ರೀಯತೆಯನ್ನು ಆಯ್ಕೆ ಮಾಡಿಕೊಳ್ಳಬೇಕು?

ರಾಷ್ಟ್ರೀಯತೆಯು ಒಂದು ಆಯ್ಕೆ ಅಲ್ಲ. ಅದು ಸ್ವಯಂ ಸ್ವತಂತ್ರವಾಗಿ ದತ್ತಕವಾಗಿ ಸಮಾನವಾಗಿ ಬಂದಿರಬೇಕಾದ ಇಡೀಯಾದ ಒಂದು ಭಾವ. ಇದನ್ನು ಇಡಿಯಾಗಿಯೂ ಭಾವಿಸಬಹುದು; ಬಿಡಿಯಾಗಿಯೂ ಕಾಣಬಹುದು. ಹೀಗೆ ಬಿಡಿಬಿಡಿಯಾಗಿರುವ ಸಮುದಾಯಗಳೇ, ಅಲ್ಲಿನ ಜಾತಿಗಳ ಅನನ್ಯತೆಗಳೇ ಭಾರತ ಎಂಬ ದೇಶವನ್ನು ರೂಪಿಸಿರುವುದು. ಒಂದು ದೇಶ ನಿರ್ಮಾಣ ಆಗಿದೆ ಎಂದಮಾತ್ರಕ್ಕೆ ಅಲ್ಲಿ ಒಂದು ರಾಷ್ಟ್ರೀಯತೆಯೂ ರೂಪುಗೊಂಡಿದೆ ಎಂದು  ತೀರ್ಮಾನಿಸಬೇಕಾಗಿಲ್ಲ. ಬಿಡಿಬಿಡಿಯಾದ ಈ ಎಲ್ಲ ಜಾತಿ ಸಮುದಾಯಗಳ ನಡುವೆ ಏರ್ಪಟ್ಟಿರುವ ಮಾನವ ಸಂಬಂಧಗಳ ಅನಿವಾರ್ಯತೆಯಿಂದಲೇ ಭಾರತ ನಿರ್ಮಾಣವಾಗಿದೆಯೇ ಹೊರತು ಅದು ಹಿಂದೂ ಧರ್ಮದಿಂದ ಅಲ್ಲ. ರಾಷ್ಟ್ರೀಯತೆಯ ಒಂದೊಂದೇ ತೆಪ್ಪಗಳಲ್ಲಿ ದಮನಿತ ಸಮುದಾಯಗಳು ಈಗ ತಾನೆ ಸಂವಿಧಾನದ ದಿಕ್ಸೂಚಿಯಲ್ಲಿ ದೀರ್ಘ ಪಯಣಕ್ಕೆ ಮುಂದಾಗಿವೆ.

ಈ ಪಯಣದ ಉದಾತತ್ತೆಯನ್ನು ಯಾವ ಕೋಮುಗಳೂ ಧರ್ಮಗಳೂ ದಿಕ್ಕೆಡಿಸಬಾರದು. ಸ್ತ್ರೀವಾದಿ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಇದು ಸಕಾಲ. ಬಹುರೂಪಿ ತೆಪ್ಪಗಳೆಲ್ಲ ನಾಳೆ ಒಕ್ಕೂಟಗೊಂಡು ದೊಡ್ಡ ಹಡಗಾಗಿ ಮಾರ್ಪಡುವುದೇನು ಕಷ್ಟವಲ್ಲ. ಆಯಾಯ ಕೇರಿಗಳು ಅವುಗಳ ರೀತಿಯಲ್ಲಿ ದೇಶಪ್ರೀತಿಯನ್ನು ಈಗ ತಾನೇ ಆರಂಭಿಸಿವೆ. ಅವುಗಳಿಗೆ ಯಾವುದೇ ಧರ್ಮದ ಹಂಗಿನ ಅವಶ್ಯಕತೆಯಿಲ್ಲ. ನನ್ನ ಕೇರಿಯಿಂದಲೇ ನನಗೆ ನನ್ನ ದೇಶ ಅರ್ಥವಾಗುವುದು. ತಳಜಾತಿಗಳು ಯಾವತ್ತೂ ದೇಶದ್ರೋಹವನ್ನು ಎಸಗಿಲ್ಲ. ಅವು ದೇಶಕ್ಕಾಗಿ ಚರಿತ್ರೆಯ ಉದ್ದಕ್ಕೂ ತ್ಯಾಗ ಬಲಿದಾನಗಳನ್ನು ಮಾಡಿವೆ. ‘ತಳಸಮುದಾಯಗಳ ಸಹನೆಯೇ ಭಾರತ’ ಎನ್ನುವುದು ಬಹುರೂಪಿ ಸಮಾಜಗಳು ಒಟ್ಟುಗೂಡಲು ಕಾರಣವಾಗಿರುವುದು.

ಈ ಊರು ನನ್ನದು ನಿಜ; ಅಲ್ಲಿ ನನ್ನ ಪೂರ್ವಿಕರು ಸಾವಿರಾರು ವರ್ಷಗಳ ಸೇವೆಯನ್ನು ನಿಷ್ಠೆಯಿಂದ ಮಾಡಿದ್ದಾರೆ. ಆ ಘನತೆಗಾಗಿ ನಾನು ನನ್ನ ಊರನ್ನು ಗೌರವಿಸುತ್ತೇನೆ. ಅಲ್ಲಿಂದಲೇ ನನ್ನ ದೇಶಪ್ರೇಮ ಅರಳುವುದು. ಆದರೆ ಆ ನನ್ನ ಊರ ನೀತಿ ನಿರ್ದೇಶನಗಳು ಮಾತ್ರ ನನ್ನವಲ್ಲ. ಹಾಗಾಗಿ ಅಲ್ಲಿನ ವ್ಯವಸ್ಥೆಯನ್ನು ಮುಗ್ಧವಾಗಿ ಒಪ್ಪಲಾರೆ. ಪ್ರಶ್ನಿಸಬೇಕಾದ ಬಹಳಷ್ಟು ಸಂಗತಿಗಳು; ತೀರ್ಮಾನವಾಗದ ಎಷ್ಟೋ ಕೇಸುಗಳು ಹಾಗೇ ಬಾಕಿ ಉಳಿದಿವೆ. ನನ್ನ ಹಳ್ಳಿಯ ಜಾತಿಗಳ ಯಜಮಾನಿಕೆ ನನ್ನ ರಾಷ್ಟ್ರೀಯತೆಯನ್ನು ಕಿರಿದಾಗಿಸಿದೆ. ಮೂಲತಃ ಭಾರತೀಯರ ದರ್ಶನಗಳು ಧರ್ಮದ ಸಾಂಸ್ಥಿಕ ಸ್ವರೂಪದವಲ್ಲ. ಹಿಂದೂ ಧರ್ಮದ ಯಜಮಾನಿಕೆ ಹಳೆಯದೇ, ಆಗಿನಿಂದಲೂ ಅದು ಒಂದು ಧರ್ಮವಾಗಲು ಜಾತಿಗಳನ್ನು ಸೃಷ್ಟಿಸಿಕೊಂಡಿತು.

ವಿಪರ್ಯಾಸ ಎಂದರೆ ಈ ಜಾತಿಗಳೇ ‘ಹಿಂದೂ’ ಎಂಬ ಒಂದು ಧರ್ಮ ಸ್ಥಾಪಿತವಾಗದಂತೆ ತಡೆದರೆ, ಜಾತಿಗಳಿಂದ ಧರ್ಮವನ್ನು ಹೇಗೆ ಕಟ್ಟಲು ಸಾಧ್ಯ ಇಲ್ಲವೋ ಹಾಗೆಯೇ ಒಂದು ದೇಶವನ್ನು ಕೂಡ ನಿರ್ಮಿಸಲಾಗದು. ಹೀಗಿರುವಲ್ಲಿ ಒಂದು ರಾಷ್ಟ್ರೀಯತೆ ಸಾಧ್ಯವೇ ಇಲ್ಲ. ಹಲವಾರು ರಾಷ್ಟ್ರೀಯತೆಗಳ ಒಕ್ಕೂಟದಿಂದ ಮಾತ್ರ ಅತ್ಯಾಧುನಿಕ ಭಾರತವನ್ನು ಕಟ್ಟಲು ಸಾಧ್ಯ. ನಮ್ಮದು ಒಕ್ಕೂಟ ರಾಷ್ಟ್ರೀಯತೆಯೇ ವಿನಃ ಏಕೀಕೃತವಾದ ಏಕೀಕರಣಗೊಂಡ ರಾಷ್ಟ್ರೀಯತೆ ಅಲ್ಲ. ಈ ವಿಪರ್ಯಾಸವನ್ನು ತಿಳಿದೇ ಈಗ ಹಿಂದೂ ಪುನರುಜ್ಜೀವನದ ಉದಾರವಾದಿ ಮಾತುಗಳನ್ನು ಹಲವರು ಆಡುತ್ತಿರುವುದು. ಯುರೋಪಿನ ಪುನರುಜ್ಜೀವನದ ಜೊತೆಗೆ ಅಲ್ಲಿನ ಕ್ರಾಂತಿಗಳು ಹಾಗೂ ರಾಷ್ಟ್ರೀಯತೆಗಳು ಸ್ಪಷ್ಟ ದಾರಿಗಳನ್ನು ಕಂಡುಕೊಂಡವು. ಆ ಕಥೆ ಬೇರೆ. ಭಾರತದಲ್ಲಿ ಈ ಕಾಲದಲ್ಲಿ ಹಿಂದೂರಾಷ್ಟ್ರವನ್ನು ಸಾಧಿಸಲಾಗದು.

ಈಗಾಗಲೇ ಬಹಳ ತಡವಾಗಿದೆ. ಎಲ್ಲ ದಮನಿತ ಸಮಾಜಗಳಿಂದಲೇ ಈಗ ಅತ್ಯಾಧುನಿಕ ಭಾರತವನ್ನು ಕಟ್ಟಬೇಕಾಗಿದೆ. ನಮ್ಮ ಯುವ ಜನಾಂಗದ ಕೈಗಳಲ್ಲಿರುವ ಮಾಯಾಜಾಲದ ಮೊಬೈಲ್‌ಗಳಲ್ಲಿ ಈಗ ಯಾವ ಗಡಿಗಳೂ ಇಲ್ಲ. ಅವುಗಳ ಜಗತ್ತಿಗೆ ಮಿತಿಯಿಲ್ಲ. ವಿದ್ಯುನ್ಮಾನ ಮಾಧ್ಯಮಕ್ಕೆ ದೇಶಗಳ ಗಡಿಗಳು ಅನ್ವಯಿಸುವುದಿಲ್ಲ. ಯಾವುದೇ ದೇಶದ ಮೇಲೆ ಯಾವುದೇ ದೇಶ  ಎಷ್ಟೇ ದೂರದಿಂದಾದರೂ ಗಡಿಗಳ ಹಂಗಿಲ್ಲದೆ ಬಾಂಬುಗಳನ್ನು ಉಡಾಯಿಸಬಹುದು. ನಾನು ಈ ಊರಲ್ಲಿ ಹುಟ್ಟಿ ಬೆಳೆದೆ ಎಂಬ ಏಕೈಕ ಕಾರಣಕ್ಕಾಗಿಯೇ ನಾನು ಈ ದೇಶವನ್ನು ಮಾತೃತ್ವದಲ್ಲಿ ಭಾವಿಸಲು ಸಾಧ್ಯವಾಗಿರುವುದು. ಮಾಡಿದವರ ಪಾಪ ಮಾಡಿದವರ ಪಾಲಿಗೇ ಇರಲಿ ಎಂದು ನಾನು ನನ್ನ ಹಳ್ಳಿಯನ್ನು ಭಾವನಾತ್ಮಕವಾಗಿ ಪ್ರೀತಿಸುತ್ತೇನೆ. ಅಲ್ಲಿನ ಕೆರೆ ಕಟ್ಟೆಗಳು ಬತ್ತಿದರೆ ನನಗೆ ಸಂಕಟವಾಗುತ್ತದೆ.

ಊರತೊರೆ ಬರಿದಾದರೆ ನನ್ನ ಆತಂಕ ವಿಪರೀತವಾಗುತ್ತದೆ. ನನ್ನ ಊರಿಗೆ ಬೆಂಕಿ ಬಿತ್ತು ಎಂದಾಗ ಕಿಚ್ಚಾಗುತ್ತದೆ. ಅಲ್ಲಿ ಆ ನನ್ನ ಊರಲ್ಲಿ ಯಾರೋ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿದಾಗ ನನ್ನ ಎದೆಬಡಿತ ಏರುಪೇರಾಗುತ್ತದೆ. ಊರ ಹೆಣ್ಣುಮಕ್ಕಳು ಪೇಟೆಗಳ ರಸಿಕರ ಜಾಡಿಗೆ ಬಿಕರಿ ಆದರು ಎಂದಾಗ ನನ್ನ ರಕ್ತ ಕುದಿಯುತ್ತದೆ... ಇದು ಮಾತ್ರವೇ ನನ್ನ ಊರುಕೇರಿ ಸೀಮೆಯ ಸಂಬಂಧ. ಇದರಾಚೆಗೆ ಅಂತಹ ಯಾವ ದೊಡ್ಡ ರಾಷ್ಟ್ರೀಯತೆಯ ಧಾರ್ಮಿಕ ಹಾಗೂ ರಾಜಕೀಯ ಆಡಂಬರವೂ ನನಗಿಲ್ಲ. ಹಳ್ಳಿಗಳು ಕಣ್ಮರೆಯಾಗುತ್ತಿವೆ ಎಂತಿರುವಾಗ ನನ್ನ ರಾಷ್ಟ್ರೀಯತೆಗೆ ಯಾವ ಅರ್ಥ... ಹಿಮಾಲಯದ ಗಡಿಗಳಿಂದ ನಾನು ನನ್ನ ಹಳ್ಳಿಯನ್ನು ಅಲ್ಲಿನ ನನ್ನ ಕೇರಿಯನ್ನೂ ಭಾವಿಸಬೇಕೋ ಅಥವಾ ಸರ್ಕಾರ ಒಂದರ ರಾಷ್ಟ್ರೀಯತೆಯ ಜಾಹೀರಾತಿನಿಂದ ತೀರ್ಮಾನ ಮಾಡಿಕೊಳ್ಳಬೇಕೊ....

ನನಗೂ ಒಂದು ದೇಶ ಬೇಕು ಎಂಬ ಕನಸು... ನನ್ನ ಕನಸಿನ ದೇಶ ಎಲ್ಲ ಭಾರತೀಯರ ಕನಸೇ ಆಗಿದೆ ಎಂಬುದಕ್ಕೆ ಏನು ಖಾತ್ರಿ ಉಂಟು? ಭಾರತೀಯರ ಸಾಮ್ರಾಜ್ಯಗಳು ಒಂದೇ ಬಗೆಯ ಚರಿತ್ರೆಯ ಬುನಾದಿಯನ್ನು ಹಾಕಿವೆಯೇ? ಒಬ್ಬೊಬ್ಬ ಸಾಮ್ರಾಟರದೂ ಒಂದೊಂದು ರಾಷ್ಟ್ರೀಯತೆ ಆಗಿತ್ತಲ್ಲವೆ? ಅಶೋಕನ ರಾಜಲಾಂಛನ ನಮ್ಮ ದೇಶದ ಪ್ರಭುತ್ವದ ಸಂಕೇತವಾಗಿರುವುದು ಮಾತ್ರ ವಿಶೇಷವಾಗಿದೆ. ಅದರ ಮೇಲಿನ ‘ಸತ್ಯಮೇವ ಜಯತೆ’ ಎಂಬ ನುಡಿಯಲ್ಲಿ ಬುದ್ಧನ ನೀತಿಯ ಪ್ರತಿಧ್ವನಿಯಿದೆ. ಈ ದೊಡ್ಡ ಸಂಗತಿಗಳೆಲ್ಲ ಅತ್ತ ಇರಲಿ. ನನ್ನ ಊರೇ ಕೇರಿಯೇ ನನ್ನ ರಾಷ್ಟ್ರೀಯತೆಯ ಬೇರು. ಭಕ್ತಿಪಂಥದ ತತ್ವ ಇಂತಹ ಕೇರಿಗಳ ಸಮಷ್ಠಿ ದನಿಯೇ ಆಗಿತ್ತು. ಮೌಖಿಕ ಪರಂಪರೆಯ ಅಸಾಧಾರಣ ಕಥನಗಳೆಲ್ಲವೂ ಜನಸಾಮಾನ್ಯರ ರಾಷ್ಟ್ರೀಯತೆಯ ನಡೆನುಡಿಯೇ ಆಗಿದ್ದವು. ಇವುಗಳ ಮೂಲಕ ನಮ್ಮ ರಾಷ್ಟ್ರೀಯತೆ ರೂಪುಗೊಳ್ಳಬೇಕಿತ್ತು.

ಈಗ ದೇಶ, ಅದರ ರಾಷ್ಟ್ರೀಯತೆ, ಅದರ ದೇಶ ಭಕ್ತಿಯ, ದೇಶದ್ರೋಹದ ದೊಡ್ಡ ದೊಡ್ಡ ಮಾತುಗಳು ವಿಪರೀತವಾಗಿ ಕೇಳಿಸುತ್ತಿವೆ. ದೇಶಭಕ್ತಿಯೂ ದೇಶದ್ರೋಹವನ್ನು ಎಸಗಬಲ್ಲದು. ಜಾತಿ ಮತ್ತು ಜನಾಂಗಗಳ ಮೇಲಿನ ಹಿಂಸೆ ಅಂತಹದ್ದನ್ನು ನಿರಂತರವಾಗಿ ವಿವರಿಸುತ್ತಲೇ ಇದೆ. ಮಹಿಳೆಯರ ಮೇಲೆ ಇಷ್ಟೊಂದು ಹಲ್ಲೆ, ಅನ್ಯಾಯ, ಅತ್ಯಾಚಾರಗಳು ಆಗುತ್ತಿವೆಯೆಲ್ಲಾ... ಇದರಿಂದಾಗಿ ನಮ್ಮ ದೇಶದ ರಾಷ್ಟ್ರೀಯತೆಗೆ ಯಾವ ವಿದ್ರೋಹವೂ ಆಗಿಯೇ ಇಲ್ಲವೆ? ದೇಶಭಕ್ತರ ಕೈಗಳಲ್ಲಿರುವ ಆಯುಧಗಳು ಯಾರನ್ನೇ ಆದರೂ ಇರಿಯಬಲ್ಲವು ಅಲ್ಲವೇ? ಸಹನೆಯೇ ನಮ್ಮ ರಾಷ್ಟ್ರೀಯತೆ. ಭ್ರಾತೃತ್ವವೇ ನಮ್ಮ ರಾಷ್ಟ್ರೀಯ ನೀತಿ.

ವಿಶ್ವಮಾನವತ್ವವೇ ನಮ್ಮ ಆತ್ಯಂತಿಕ ಗುರಿ. ಹೀಗಿರುವಲ್ಲಿ ಯಾವ ಧರ್ಮಗಳ ಹಂಗಿಗೂ ಸಿಲುಕದೆ ಹೊಸ ಭಾರತವನ್ನು ಕಟ್ಟಬೇಕಾಗಿದೆ. ‘ಅಭಿವೃದ್ಧಿ’ ಎಂಬ ಮಾಯಾಕುದುರೆಯ ಮೇಲೆ ಕೂತಿರುವ ಭಾರತ ತನ್ನ ಸಾಮರ್ಥ್ಯವನ್ನು ತಾನೇ ಮತ್ತೊಮ್ಮೆ ಸರಿಯಾಗಿ ಅವಲೋಕಿಸಿಕೊಳ್ಳಬೇಕು. ಜಗತ್ತಿನಲ್ಲಿ ಬಹಳ ದೊಡ್ಡ ಉತ್ಪಾದಕ ವರ್ಗ ಭಾರತದಲ್ಲಿ ತುಂಬಿ ತುಳುಕುತ್ತಿದೆ. ಅದು ಎಲ್ಲ ಬಾಗಿಲುಗಳಿಂದಲೂ ಸಮರ್ಥವಾಗಿ ನುಗ್ಗಿ ಬರುತ್ತಿದೆ. ಹಾಗೆಯೇ ಕೊಳ್ಳಬಲ್ಲ, ಮಾರಬಲ್ಲ ದೊಡ್ಡ ಶಕ್ತಿಗಳೂ ಆಧುನಿಕ ಭಾರತಕ್ಕೆ ಸಾಧ್ಯವಾಗಿದೆ. ಸ್ತ್ರೀಯರ ರಾಜಕೀಯ ಪ್ರವೇಶ ಅಂತೂ ತಡವಾಗಿಯಾದರೂ ಈಗ ತಾನೆ ಸ್ಥಳೀಯ ಮಟ್ಟದಿಂದ ದಿಟ್ಟವಾಗಿ ಆರಂಭವಾಗಿದೆ.

ಇವೇ ನಮ್ಮ ನಾಳಿನ ರಾಷ್ಟ್ರೀಯತೆಯ ಸಾಧ್ಯತೆಗಳು ಆರಂಭವಾಗಿದೆ. ಇವೇ ನಮ್ಮ ನಾಳಿನ ರಾಷ್ಟ್ರೀಯತೆಯ ಸಾಧ್ಯತೆಗಳು. ಜಾತ್ಯತೀತ ರಾಷ್ಟ್ರೀಯತೆಯೇ ಭಾರತವನ್ನು ಬಲಿಷ್ಠಗೊಳಿಸಲು ಇರುವ ಏಕೈಕ ದಾರಿ. ಇಲ್ಲವಾದರೆ ಗಾಯಗೊಂಡಿರುವ ಜಾತಿಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ದೇಶದ ಆಂತರಿಕ ಭದ್ರತೆ ತುಂಡಾಗುತ್ತದೆ. ಇಡೀಯಾದ ಭಾವನಾತ್ಮಕ ಸಂಬಂಧಗಳು ಬಿರುಕಾಗುತ್ತವೆ. ಆಗ ಬಾಹ್ಯ ಶತ್ರುಗಳ ಬಾದೆಗಿಂತಲೂ ಒಳಗಿನ ಹಿಂಸೆಗಳೇ ಅಧಿಕವಾಗುತ್ತವೆ. ಜಾಗತೀಕರಣದ ಈ ಅವಸ್ಥೆ ಬಹಳ ಸುಂದರ ಹಾಗೆಯೇ ವಿರೂಪದ್ದೂ ಕೂಡ. ಈ ಎಚ್ಚರದಲ್ಲಿ ಮಾನವತ್ವದ ಕಡೆಗೇ ನಮ್ಮ ಪಯಣವಿರಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT