ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಕೋ! ಒಂದು ಹಳ್ಳಿಯ ಕಥೆ...

Last Updated 14 ಫೆಬ್ರುವರಿ 2016, 10:57 IST
ಅಕ್ಷರ ಗಾತ್ರ

ಹಿಮಾಚಲ ಪ್ರದೇಶದ ನಾಕೋ ಅಭಿವೃದ್ಧಿ ಮಾನದಂಡಗಳಿಂದ ಹಿಂದುಳಿದ ಗ್ರಾಮವಾಗಿದ್ದರೂ, ಪ್ರಾಕೃತಿಕ ಸೌಂದರ್ಯದ ಹಿನ್ನೆಲೆಯಲ್ಲಿ ಒಂದು ವಿಶಿಷ್ಟ ಭೂಪ್ರದೇಶ.

ಇಲ್ಲಿಂದ ಎಡಕ್ಕೆ ಉಸುರುಗಟ್ಟಿ ಓಡಿದರೆ ಚೀನಾದ ಗಡಿ. ಬಲಕ್ಕೆ ತಿರುಗಿದರೆ ಮುಗಿಲೆತ್ತರದ ಬೆಟ್ಟ. ಇದು ಸಾಧಾರಣ ಬೆಟ್ಟವಲ್ಲ. ಪದ್ಮಸಾಂಬಶಿವ ಧ್ಯಾನ ಮಾಡಿ ಗಿಡ ಮೂಲಿಕೆಗಳಿಂದ ಜನಜೀವನಕ್ಕೆ ಅಗತ್ಯದ ಔಷಧಿಯನ್ನು ಅವಿಷ್ಕಾರ ಮಾಡಿದ ಎನ್ನಲಾಗುವ ಪವಿತ್ರ ಔಷಧಿ ಬೆಟ್ಟ. ಇದುವರೆಗೂ ಯಾರೂ ಏರಿಲ್ಲ ಎಂದು ಹೇಳಲಾಗುವ, 22 ಸಾವಿರ ಅಡಿ ಎತ್ತರದ ಅಪರೂಪದ ಬೆಟ್ಟ. ಉತ್ತರಕ್ಕೆ ಲಡಾಕ್–ಲೇಹ್ ವ್ಯಾಲಿಯ ಸರಹದ್ದು ಅರ್ಧ ಆವರಿಸಿದ್ದರೆ, ದಕ್ಷಿಣಕ್ಕೆ ಬಂದರೆ ಹಿಮಾಚಲದ ಸೆರಗಿನಲ್ಲಿ ಕಾಲಿಡುತ್ತೀರಿ.

ಇಂಥ ವಿಚಿತ್ರ ಭೌಗೋಳಿಕ ಪರಿಸರದಲ್ಲಿ, 13 ಸಾವಿರ ಅಡಿ ಎತ್ತರದಲ್ಲಿ ಹೆಚ್ಚಿನಂಶ ತಣ್ಣಗೆ ಮಲಗಿದಂತಿರುವ, ಆದರೆ ವಿದೇಶಿಯರಿಗೆ ಹೇಳಿ ಮಾಡಿಸಿದ ತಾಣ ‘ನಾಕೋ’. ರಸಿಕರ ಕಣ್ಣಿಗಿದು ಅಪ್ಪಟ ಸ್ವರ್ಗ ಸದೃಶ ಪ್ರದೇಶ. ಹಿಮಾಚಲದ ಅತ್ಯಂತ ಎತ್ತರದ ಪರ್ವತ ಪ್ರದೇಶ ಇದರ ಬೆನ್ನಿಗಿದೆ– ಅದೇ ರಿಯೋ ಪುರೈಲ್. ಇದರ ಪಾದಕ್ಕಿರುವುದೇ ನಾಕೋ ಸರೋವರ.

ನಾಕೋ ಎನ್ನುವ ಈ ಊರಿಗೆ ಕಾಲಿಡುತ್ತಲೇ ಜನ ‘ಜುಲೇ... ಜುಲೇ...’ ಎನ್ನುತ್ತ ಸ್ವಾಗತಿಸುತ್ತಾರೆ. ಈ ಸ್ವಾಗತಕ್ಕೆ ಪರಿಚಯದ ಹಂಗಿಲ್ಲ. ಅಪರಿಚಿತರೇ ಹೆಚ್ಚಿನಂಶ ಈ ಊರಿಗೆ ಕಾಲಿಡುವುದು. ‘ಜುಲೇ ಎಂದರೆ ‘ಪ್ರಿಯರೇ ನಮಸ್ತೆ’ ಎಂದರ್ಥ. ಈ ಸ್ವಾಗತದ ಶಬ್ದವೇ ಲಡಾಖ್‌ನಿಂದ ಹಿಮಾಚಲದವರೆಗೂ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತಿದೆ.

ಚಾರಣ ಮತ್ತು ಪ್ರಕೃತಿ ಪ್ರಿಯರ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಈ ನಾಕೋ. ಸರೋವರ ಮತ್ತು ಹಸಿರು ಹೊದ್ದ ಬಟಾಣಿ ಗದ್ದೆಗಳು ಊರನ್ನು ಆವರಿಸಿವೆ. ಈ ಊರನ್ನು ನಡೆದುನೋಡುವುದೇ ಒಂದು ಸೊಗಸು. ದೂರದ ಗ್ರಾಂಫು ಮತ್ತು ಕಿಲಾಂಗ್‌ನಿಂದ ಇಲ್ಲಿಗೆ ನಡೆದು ಬರುವವರೂ ಇದ್ದಾರೆ. ಸೈಕಲ್ ಮತ್ತು ಬೈಕ್ ಸವಾರಿಗರೂ ಪೇಯಿಂಗ್ ಗೆಸ್ಟ್‌ಗಳಾಗುವುದು ಇಲ್ಲಿ ಸಹಜ. ಸುತ್ತ ಕಣ್ಣೆತ್ತರಕ್ಕೆ ಅಕ್ಕಪಕ್ಕದಲ್ಲೇ ಕೈಗೆ ತಾಕುವಂತಹ ಪರ್ವತದ ತುದಿಗಳು ಈ ಹಳ್ಳಿಯ ಪಕ್ಕೆಗಳಿಗೆ ತಗುಲಿ ನಿಂತಿರುವಂತೆ ಕಾಣಿಸುತ್ತವೆ. ಅಂದಹಾಗೆ, ಈ ನಾಕೋ ಯಾವಾಗಲೂ ಚಳಿಯಿಂದ ತತ್ತರಿಸುತ್ತಿರುತ್ತದೆ.

ಹದಿಮೂರು ಸಾವಿರ ಅಡಿ ಎತ್ತರದಲ್ಲಿರುವ ಪರ್ವತದ ತುದಿಯಲ್ಲಿ ಲಭ್ಯವಿರುವ ನಾಲ್ಕೈದು ಚ.ಕೀ.ಮೀ. ನೆಲದ ಮೇಲೆ ಹರಡಿಕೊಂಡ ಹಳ್ಳಿಯಲ್ಲಿ ಎಲ್ಲಿ ನಿಂತರೂ ಅದ್ಭುತ ನೋಟಗಳು ಎದುರಾಗುತ್ತವೆ. 1025ರ ಕಾಲದ ‘ನಾಕೋ ಮಾನೆಸ್ಟ್ರಿ’ ಇಂದಿಗೂ ಚಟುವಟಿಕೆಗಳಿಂದ ಕೂಡಿದೆ. ಬೌದ್ಧ ಸನ್ಯಾಸಿಗಳು ಇಲ್ಲಿಂದ ಹೊರಟು ದೇಶದುದ್ದಗಲಕ್ಕೂ ಸಂಚರಿಸಿ ವಾಪಸ್ಸು ಇಲ್ಲಿಗೇ ಬರುತ್ತಾರೆ. ‘ಟಾಬೋ ಮಾನೆಸ್ಟ್ರಿ’ ಎಂದೂ ಇದು ಪ್ರಸಿದ್ಧಿ ಪಡೆದಿದೆ. 1975ರಲ್ಲಿ ಸಂಭವಿಸಿದ ಭೂಕಂಪಕ್ಕೆ ಸಿಲುಕಿ ಇದು ಧರಾಶಾಯಿಯಾಗಿತ್ತು. ಅದಕ್ಕೆ ಮೊದಲು ಕೂಡಾ ‘ಟಾಬೋ’ ನೆಲಕ್ಕುರುಳಿದೆ. ಪ್ರತಿಸಲವೂ, ಮೂಲ ವಾಸ್ತುಶೈಲಿ ಉಳಿಸಿಕೊಂಡು, ಆ ಕಟ್ಟಡದ ಸಾಮಗ್ರಿಗಳನ್ನು ಬಳಸಿಯೇ ‘ಟಾಬೋ’ವನ್ನು ಪುನರ್‌ ರೂಪಿಸಲಾಗಿದೆ ಎನ್ನುವುದು ವಿಶೇಷ.

ಇಲ್ಲಿಂದ ಮೂರೂವರೆ ಕಿ.ಮೀ. ದೂರದ ‘ಚಾಂಗೊಗೊಂಪಾ’ ಇನ್ನೊಂದು ಪರ್ವತದ ಸೆರಗಿನಲ್ಲಿ ನಡೆದು ಪೂರೈಸಬಹುದಾದ ಕಾಲ್ದಾರಿ. ಹೆಚ್ಚಿನಂಶ ನಾಕೋದ ಪ್ರವಾಸಿಗರು ಮರುದಿನದ ಬೆಳಿಗ್ಗೆ ಈ ದಾರಿಯನ್ನು ಚಾರಣಕ್ಕಾಗಿ ಆರಿಸಿಕೊಳ್ಳುತ್ತಾರೆ. ಬೆಳಗಿನ ಮೋಡಗಳು ಇಲ್ಲಿ ನಮ್ಮನ್ನು ಸುತ್ತುವರೆದು ಉಸಿರುಗಟ್ಟಿಸುತ್ತವೆ. ಚಳಿಗಾಲದಲ್ಲಿ ಈ ಸರೋವರ ಸಂಪೂರ್ಣ ಹೆಪ್ಪುಗಟ್ಟುತ್ತದೆ. ಇದರ ಮೇಲೆ ಐಸ್ ಸ್ಕೇಟಿಂಗ್ ಆಟ ನಡೆಯುತ್ತದೆ.

ನವೆಂಬರ್‌ನಿಂದ ಫೆಬ್ರುವರಿಯವರೆಗೆ ಹೊರ ಜಗತ್ತಿನಿಂದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಯ ಜನರು ಬದುಕುವ ಪರಿ ಅನನ್ಯ. ಮಾರ್ಚ್ ಕೊನೆಯ ವಾರದಿಂದ ಸೆಪ್ಟಂಬರ್ ಕೊನೆಯವರೆಗೆ ಪ್ರವಾಸಿಗರಿಗೂ ಚಾರಣಿಗರಿಗೂ ಸಕಾಲ. ನಾಕೋದಲ್ಲಿನ ಜನರ ಸಂಖ್ಯೆ ಒಂದು ಸಾವಿರವನ್ನೂ ದಾಟುವುದಿಲ್ಲ. ಆದರೆ, ಹೆಚ್ಚಿನವರ ಮನೆಗಳೆಲ್ಲ ‘ಪೇಯಿಂಗ್ ಗೆಸ್ಟ್ ಹೌಸು’ಗಳಾಗಿ ಅತಿಥಿಗಳ ನಿರೀಕ್ಷೆಯಲ್ಲಿರುತ್ತವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಕಲ್ಲಿನ ಮನೆಗಳು ಇಲ್ಲಿ ಹೆಚ್ಚು.

ಹೆಚ್ಚಾಗಿ ಇಸ್ರೇಲ್ ಮತ್ತು ಇಟಲಿ ಪ್ರವಾಸಿಗರಿಗೆ ಮನೆಗಳಲ್ಲಿ ಆಶ್ರಯ ಕಲ್ಪಿಸಿ ವೃತ್ತಿ ಮತ್ತು ಬದುಕು ಎರಡನ್ನೂ ನಡೆಸುತ್ತಿರುವ ನಾಕೋ ನಾಗರಿಕರಿಗೆ ಹಸಿರು ಬಟಾಣಿ ಮತ್ತು ಬಟಾಟೆ ಪ್ರಮುಖ ಬೆಳೆಗಳು. ಎರಡು ವರ್ಷದ ಹಿಂದೆ ಬಂದ ಮೊದಲ ಪೆಟ್ರೋಲ್ ಬಂಕ್ ಇಲ್ಲಿನ ಅತಿ ದೊಡ್ಡ ಸುಧಾರಣೆ. ಉಳಿದಂತೆ ದೂರದ ಕಾಝಾ ಪಟ್ಟಣವನ್ನು ಇಲ್ಲಿನ ಜನರು ಪ್ರತಿಯೊಂದಕ್ಕೂ ಅವಲಂಬಿಸಬೇಕು.

ಹಿಮಾಚಲದ ಕಾಝಾದಿಂದ ಸ್ವಂತ ವಾಹನದ ಬಲವಿಲ್ಲದಿದ್ದರೆ ನಾಲೋ ತಲುಪಲೇ ದಿನಗಟ್ಟಲೇ ವ್ಯಯಿಸಬೇಕಾಗುತ್ತದೆ. ಆಗೀಗ ಮಾತ್ರ ಸಿಕ್ಕುವ ‘ಹಿಮಾಚಲ ಪರಿವಾಹನ’ ನಂಬಿಕೊಂಡರೆ ಸಮಯ ಸರಿದುಹೋಗುತ್ತಿರುತ್ತದೆ. ಅತ್ಯಂತ ಶಾಂತ ಮತ್ತು ಚಿಕ್ಕ ಊರಾದ ನಾಕೋಗೆ ಭೇಟಿ ಕೊಡುವುದು ಜೀವನದ ಒಂದು ಅವಿಸ್ಮರಣೀಯ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT