ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಕನಸಿದೆ, ಕನವರಿಕೆಯೂ ಇದೆ!

Last Updated 26 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಸಿದ್ದರಾಮಯ್ಯ ಸಾವಿರ ದಿನಗಳ ಕುರಿತ ಲೇಖನ ಸರಣಿಯಲ್ಲಿ ಪ್ರಕಟವಾದ  ‘ನೀರಾವರಿ ಕನಸೂ ಇಲ್ಲ, ಕನವರಿಕೆಯೂ ಇಲ್ಲ’ ಎಂಬ ಲೇಖನಕ್ಕೆ ಸಂಬಂಧಿಸಿದಂತೆ ಕೆಲವು ವಸ್ತುಸ್ಥಿತಿ ಹೀಗಿವೆ.

‘ಆಲಮಟ್ಟಿಯಲ್ಲಿ ನೀರು ಸಂಗ್ರಹಿಸಿ 15 ವರ್ಷವಾದರೂ ವಿಜಯಪುರ–ಬಾಗಲಕೋಟೆ ಜಿಲ್ಲೆಗಳಿಗೆ ಇನ್ನೂ ಗಣನೀಯವಾಗಿ ಲಾಭ ಆಗಿಲ್ಲ’ ಎಂದು ಲೇಖಕರು ಹೇಳಿದ್ದಾರೆ. ಆಲಮಟ್ಟಿ ಮತ್ತು ನಾರಾಯಣಪುರ ಅನೆಕಟ್ಟುಗಳಿಂದ ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಹಂಚಿಕೆಯಾದ ಒಟ್ಟು 173 ಟಿಎಂಸಿ ಪೂರ್ಣ ಪ್ರಮಾಣದ ನೀರನ್ನು ಬಲಸಿಕೊಳ್ಳಲಾಗುತ್ತಿದೆ.

ಕೃಷ್ಣ ಮೇಲ್ದಂಡೆ ಯೋಜನೆ ಹಂತ–1 ಮತ್ತು 2ರ ಅಡಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮುಳವಾಡ ಏತ ನೀರಾವರಿ ಯೋಜನೆ ಹಂತ–2, ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಇಂಡಿ ಶಾಖಾ ಕಾಲುವೆ, ಇಂಡಿ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು 1.95 ಲಕ್ಷ ಹೆಕ್ಟೇರ್ ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

‘ಮುಳವಾಡ ಯೋಜನೆಗೆ ಮುಹೂರ್ತವೇ ಬಂದಿಲ್ಲ’ ಎಂದು ಲೇಖಕರು ಹೇಳುತ್ತಾರೆ.  ಆದರೆ ಮುಳವಾಡ ಏತ ನೀರಾವರಿ ಯೋಜನೆಯಡಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 4 ಹಂತಗಳಲ್ಲಿ ನೀರನ್ನು ಎತ್ತಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರ, ಸಿಂಧಗಿ ಮತ್ತು ಇಂಡಿ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಮೂರನೇ ಹಂತದ ಯೋಜನೆಯ ಅಂದಾಜು ವೆಚ್ಚ ₹ 4610.89 ಕೋಟಿಯಾಗಿದ್ದು ಈಗಾಗಲೇ ₹ 1031.50 ಕೋಟಿ ವೆಚ್ಚ ಮಾಡಲಾಗಿದೆ.

‘ಆಲಮಟ್ಟಿ ಎಡದಂಡೆ ಕಾಲುವೆ ಎಲ್ಲಿದೆ ಎಂದು ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ’ ಎಂದು ಲೇಖಕರು ಹೇಳುತ್ತಾರೆ. ಆದರೆ ನಿಜ ಸ್ಥಿತಿ ಏನೆಂದರೆ ಆಲಮಟ್ಟಿ ಎಡದಂಡೆ ಕಾಲುವೆ ಜಾಲದ ಮೂಲಕ 4.60 ಟಿಎಂಸಿ ನೀರನ್ನು ಮುದ್ದೇಬಿಹಾಳ ಮತ್ತು ಬಸವನಬಾಗೇವಾಡಿ ತಾಲ್ಲೂಕಿನ 20,235 ಹೆಕ್ಟೇರ್‌ ಪ್ರದೇಶಕ್ಕೆ ಒದಗಿಸಲಾಗುತ್ತಿದೆ. ಇದಕ್ಕಾಗಿ ₹232.67 ಕೋಟಿ ಖರ್ಚು ಮಾಡಲಾಗಿದೆ. ಇದಲ್ಲದೆ ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೂ ಕ್ರಮ ಕೈಗೊಳ್ಳಲಾಗಿದೆ.

‘ಆಲಮಟ್ಟಿ ಅನೆಕಟ್ಟೆಯ ಎತ್ತರ ಹೆಚ್ಚಿಸುವುದು ಹಾಗೂ ಮುಳುಗಡೆ ಪ್ರದೇಶಗಳ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು, ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಜರೂರಾಗಿ ಮಾಡಬೇಕಾದ ಕೆಲಸಗಳು. ಈ ಕಡೆಗೆ ಸಚಿವರ ಲಕ್ಷ್ಯ ಇಲ್ಲ’ ಎಂದು ಲೇಖಕರು ದೂರುತ್ತಾರೆ. ಈ ಬಗ್ಗೆ ನಾನು ಏನೂ ಮಾಡುತ್ತಿಲ್ಲ ಎನ್ನುವುದು ಸುಳ್ಳು. ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಭೂಸ್ವಾಧೀನ, ಪುನರ್ವಸತಿ ಬಹುದೊಡ್ಡ ಸವಾಲು.

ಭೂಸ್ವಾಧೀನ ಪಡಿಸಿಕೊಳ್ಳಬೇಕಾದ 1,34,107 ಎಕರೆ ಪೈಕಿ 60 ಸಾವಿರ ಎಕರೆ ಪ್ರದೇಶದ ಭೂಸ್ವಾಧೀಣಕ್ಕೆ 11(1) ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ತಗಲುವ ವೆಚ್ಚ ₹ 31,894 ಕೋಟಿ ಎಂದೂ ಅಂದಾಜಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕ್ರಿಯಾ ಯೋಜನೆ ಪರಿಶೀಲನಾ ಸಮಿತಿ ರಚಿಸಲಾಗಿದೆ. ಮುಳುಗಡೆ ಹೊಂದುವ 20 ಗ್ರಾಮಗಳ ಪೈಕಿ 11 ಗ್ರಾಮಗಳ ಮುಳುಗಡೆ ತಡೆಯಲು ವಿನೂತನ ತಾಂತ್ರಿಕ ಪರಿಹಾರ ಕಂಡುಕೊಳ್ಳಲೂ ಯತ್ನಿಸಲಾಗುತ್ತಿದೆ.

‘ಯಾವ ಅಣೆಕಟ್ಟು ಪ್ರದೇಶಕ್ಕೂ ನೀರಾವರಿ ಸಚಿವರಾಗಲಿ, ಮುಖ್ಯಮಂತ್ರಿಯಾಗಲೀ ಭೇಟಿ ನೀಡಿಲ್ಲ’ ಎಂಬ ಆರೋಪವನ್ನು ಮಾಡಲಾಗಿದೆ. ಆದರೆ ನಾನು ಎಲ್ಲ ಅಣೆಕಟ್ಟೆಗಳಿಗೂ ಭೇಟಿ ನೀಡಿದ್ದೇನೆ. ಜೊತೆಗೆ ಮುಖ್ಯಮಂತ್ರಿ ಅವರು ಹಲವಾರು ಬಾರಿ ಉನ್ನತ ಮಟ್ಟದ ಸಮಿತಿ ಸಭೆ ಮಾಡಿ ಪ್ರಗತಿ ಪರಿಶೀಲನೆ
ಮಾಡಿದ್ದಾರೆ. ಒಟ್ಟಾರೆಯಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ತೀವ್ರ ಗಮನ ನೀಡುತ್ತಿದೆ.
-ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT