ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ ಶಿಕ್ಷಕಿಗೆ ₹6 ಕೋಟಿಯ ಪ್ರಶಸ್ತಿ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಅಹಿಂಸೆಯ ಕುರಿತು ಮಕ್ಕಳಲ್ಲಿ  ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಪ್ಯಾಲೆಸ್ಟೀನ್‌ನ ನಿರಾಶ್ರಿತರ ಶಿಬಿರದ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ₹6.70 ಕೋಟಿ ಮೊತ್ತದ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂಬೈನ ವೇಶ್ಯಾವಾಟಿಕೆಯ ಕೇಂದ್ರ ಕಾಮಾಟಿಪುರದಲ್ಲಿ ಲಾಭ ರಹಿತ ಶಾಲೆ ನಡೆಸುತ್ತಿರುವ ರಾಬಿನ್‌ ಚೌರಾಸಿಯಾ ಸೇರಿದಂತೆ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದ ವಿವಿಧ ದೇಶಗಳ ಒಂಬತ್ತು ಶಿಕ್ಷಕರನ್ನು ಹಿಂದಿಕ್ಕಿ,  ಪ್ಯಾಲೆಸ್ಟೀನ್‌ನ  ಹನನ್‌ ಅಲ್‌ ಹ್ರೌಬ್‌ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಉಳಿದ ಒಂಬತ್ತು ಶಿಕ್ಷಕರಿಗೆ   ವರ್ಕಿ ಪ್ರತಿಷ್ಠಾನದ ಗೌರವ ದೊರೆಯಿತು.

‘ನಾನು ಸಾಧಿಸಿದೆ, ನಾನು ಗೆದ್ದೆ. ಪ್ಯಾಲೆಸ್ಟೀನ್‌ ಗೆದ್ದಿತು. ನಾವು ಹತ್ತೂ ಮಂದಿ ಜಗತ್ತನ್ನು ಬದಲಿಸುವ ಶಕ್ತಿ ಹೊಂದಿದ್ದೇವೆ’ ಎಂದು 40 ವರ್ಷದ ಹ್ರೌಬ್‌ ಹೇಳಿದರು. ಪ್ಯಾಲೆಸ್ಟೀನ್‌ನ ಅಲ್‌ ಬಿರೆಹ್‌ನಲ್ಲಿ ಸಮೀಹಾ ಖಲೀಲ್‌ ಪ್ರೌಢಶಾಲೆ ನಡೆಸುತ್ತಿರುವ ಹ್ರೌಬ್‌ ಅವರು, ಇಸ್ರೇಲ್‌–ಪ್ಯಾಲೆಸ್ಟೀನ್‌ ಸಂಘರ್ಷದ ನೆರಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪ್ರಭಾವವನ್ನು ತಗ್ಗಿಸಲು ‘ನಾವು ಆಡುತ್ತೇವೆ ಮತ್ತು ಕಲಿಯುತ್ತೇವೆ’ ಎಂಬ ಪುಸ್ತಕವನ್ನು ರಚಿಸಿದ್ದಾರೆ.

ಮಕ್ಕಳಲ್ಲಿನ ಹಿಂಸಾ ಮನೋಭಾವವನ್ನು ತಗ್ಗಿಸಿ, ಅಹಿಂಸಾ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಬೋಧನೆಯ  ಶೈಲಿ  ಮತ್ತು ತರಗತಿ ನಿರ್ವಹಣೆ ಕುರಿತು ಅವರು ಅಲ್ಲಿನ ಶಿಕ್ಷಕರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೇರಳ ಮೂಲದ ಸಾಹಸೋದ್ಯಮಿ ಮತ್ತು ಶಿಕ್ಷಣತಜ್ಞ ಸನ್ನಿ ವರ್ಕಿ  ಎರಡು ವರ್ಷದ ಹಿಂದೆ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನು ಪ್ರಾರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT