ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲಗಾಮು ಹಿಡಿದ ಮಹಿಳೆಯರು

ಸಾಧಕಿ
Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ಐಪಿಎಲ್‌ ಕ್ರಿಕೆಟ್‌ ರೀತಿಯಲ್ಲಿ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಜನರ ಗಮನ ಹಿಡಿದಿಟ್ಟ ಮತ್ತೊಂದು ಲೀಗ್‌; ಪ್ರೊ ಕಬಡ್ಡಿ. ಮಹಿಳೆಯರ ಪ್ರೊ ಕಬಡ್ಡಿ ಲೀಗ್‌ ಆಡಿಸುವುದಕ್ಕೂ ಈಗ ಸಂಘಟಕರು ಮುಂದಾಗಿದ್ದಾರೆ. ಆದರೆ ಇದಕ್ಕೂ ಮುನ್ನ ಪುರುಷರ ಲೀಗ್‌ನಲ್ಲಿ ಮಹಿಳೆಯರು ಗಮನ ಸೆಳೆದಿದ್ದಾರೆ...ಪಂದ್ಯಗಳನ್ನು ನಿಯಂತ್ರಿಸುವ ಅಧಿಕಾರಿಗಳಾಗಿ; ಅರ್ಥಾತ್‌ ಅಂಗಣದಲ್ಲಿ ಪುರುಷಮಣಿಗಳಿಗೆ ಕಡಿವಾಣ ಹಾಕುವುದರ ಮೂಲಕ..

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸಸ್ಮಿತಾ ದಾಸ್‌ ಹೈಜಂಪ್‌ನಲ್ಲಿ ‘ಎತ್ತರ’ದ ಸಾಧನೆ ಮಾಡಿದರು; ರಾಜ್ಯಕ್ಕೆ ದಾಖಲೆಯ ಒಡತಿಯಾದರು. ಆದರೆ ಕ್ರೀಡಾ ಕೋಟಾದಲ್ಲಿ ಉದ್ಯೋಗ ಗಿಟ್ಟಿಸಿ ಸಾಧನೆಯ ಹಾದಿಯನ್ನು ಸುಗಮಗೊಳಿಸುವ ಅವರ ಕನಸು ನನಸಾಗಲಿಲ್ಲ. ಜೀವನ ನಿರ್ವಹಣೆಗಾಗಿ ಕೊನೆಗೆ ಕಂಡುಕೊಂಡದ್ದು ಎಲ್ಐಸಿ ಪ್ರತಿನಿಧಿ ಎಂಬ ಉದ್ಯೋಗವನ್ನು.

ಆದರೆ ಒಡಿಶಾ ರಾಜ್ಯದ ಈ ಛಲಗಾತಿಯ ಅದೃಷ್ಟ ಪ್ರೊ ಕಬಡ್ಡಿ ರೂಪದಲ್ಲಿ ಕಾದು ಕುಳಿತಿತ್ತು. ಪುರುಷರ ಪಂದ್ಯಗಳ್ನು ನಿಯಂತ್ರಿಸುವ ಅಧಿಕಾರಿಯ ರೂಪದಲ್ಲಿ ಅವರು ಪ್ರೊ ಕಬಡ್ಡಿಯ ಅಂಗವಾದರು. ಈಗ ಹೆಸರು, ಹಣ ಗಳಿಸುವುದರ ಜೊತೆಗೆ ಸಮೃದ್ಧ ಜೀವನ ನಡೆಸಲು ಅವರಿಗೆ ಸಾಧ್ಯವಾಗಿದೆ.

ಪ್ರೊ ಕಬಡ್ಡಿ ಪುರುಷ ಆಟಗಾರರಿಗೆ ಖ್ಯಾತಿ ತಂದುಕೊಟ್ಟರೆ, ಪಂದ್ಯಗಳನ್ನು ನಿಯಂತ್ರಿಸುವ ಅವಕಾಶ ಸಿಗುವುದರಿಂದ ಮಹಿಳೆಯರು ಕೂಡ ಪುಳಕಗೊಳ್ಳಲು ಕಾರಣವಾಗಿದೆ. ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ಪುರುಷರ ಆಟವನ್ನು ನಿಯಂತ್ರಿಸಲು ಮಹಿಳೆಯರು ಅಂಗಣಕ್ಕೆ ಇಳಿಯುತ್ತಿರುವುದು ಅಪರೂಪದ ಪ್ರಸಂಗ!

ಪ್ರೊ ಕಬಡ್ಡಿಯ ವಿವಿಧ ಹಂತಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಪೈಕಿ ಒಬ್ಬೊಬ್ಬರದು ಒಂದೊಂದು ಕಥೆ. ಪಶ್ಚಿಮ ಬಂಗಾಳದ ಪಪ್ಪಿ ದಲಾಲ್‌ ಮೂಲತಃ ಕಬಡ್ಡಿ ಆಟಗಾರ್ತಿ. ದಾರ್ಜಿಲಿಂಗ್‌ ವಲಯದ ಆಟಗಾರ್ತಿಯಾದ ಅವರಿಗೆ ಈ ಕ್ರೀಡೆಯಲ್ಲಿ ಹೆಚ್ಚು ಹೆಸರು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಶಾಲಾ ಶಿಕ್ಷಕಿ ವೃತ್ತಿಯನ್ನು ಆಯ್ದುಕೊಂಡರು. ಪ್ರೊ ಕಬಡ್ಡಿಯಿಂದಾಗಿ ಅವರು ಕೂಡ ಈಗ ಜಗಮಗಿಸುವ ಅಂಗಣಕ್ಕೆ ಇಳಿಯಲು ಸಾಧ್ಯವಾಗಿದೆ.

ಮುಂಬೈಯ ಶುಭಾಂಗಿ ಪೂಜಾರ ಕಬಡ್ಡಿ ಮನೆತನದಲ್ಲೇ ಹುಟ್ಟಿ, ಕಬಡ್ಡಿ ಆಟಗಾರನ ಕೈ ಹಿಡಿದವರು. ಅವರಿಗೂ ಪ್ರೊ ಕಬಡ್ಡಿ ಹೆಸರು ತಂದುಕೊಟ್ಟಿದೆ. ಈ ಮೂವರ ಪೈಕಿ ಸಸ್ಮಿತಾ ಮತ್ತು ಶುಭಾಂಗಿ ರೆಫರಿಯಾಗಿ ಕಾರ್ಯನಿರ್ವಹಿಸಿದವರು; ಪಪ್ಪಿ ದಲಾಲ್‌ ಅಂಗಣದ ಹಿನ್ನೆಲೆಯಲ್ಲಿ ಕೆಲಸ ಮಾಡಿದವರು. ಇವರೆಲ್ಲರಿಗೂ ಅಧಿಕಾರಿಗಳಾಗಿ ಅಂಗಣಕ್ಕೆ ಇಳಿಯಲು ಪ್ರೇರಣೆಯಾದದ್ದು ಕನ್ನಡಿಗತಿ ಜಮುನಾ ವೆಂಕಟೇಶ ಎಂಬುದು ಕರ್ನಾಟಕದ ಮಹಿಳೆಯರು ಹೆಮ್ಮೆಪಡಬೇಕಾದ ಅಂಶ.

‘ಪ್ರೊ ಕಬಡ್ಡಿಯ ಮೊದಲ ಆವೃತ್ತಿಯಿಂದಲೇ ಕೇರಳದ ಓಮನಾ ಅವರೊಂದಿಗೆ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಮುನಾ ಅವರೇ ನಮ್ಮೆಲ್ಲರ ಪ್ರೇರಣೆ’ ಎಂದು ಮಹಿಳಾ ಅಧಿಕಾರಿಗಳು  ಹೇಳುವಾಗ ಸರಳ ಸ್ವಭಾವದ ಜಮುನಾ ಎಲ್ಲದಕ್ಕೂ ಪ್ರೊ ಕಬಡ್ಡಿಯೇ ಮೂಲ ಎಂದು ಮುಗುಳುನಗೆಯೊಂದಿಗೆ ಹೇಳಿ ವಿನಯ ಪ್ರದರ್ಶಿಸುತ್ತಾರೆ.

ನಾಲ್ಕು ಇದ್ದದ್ದು 10 ಆದಾಗ...
ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ಇದ್ದ ಮಹಿಳಾ ಅಧಿಕಾರಿಗಳ ಸಂಖ್ಯೆ ಕೇವಲ ನಾಲ್ಕು. ಎರಡನೇ ಆವೃತ್ತಿಯ ವೇಳೆಗೆ ಈ ಸಂಖ್ಯೆ ಏಳಕ್ಕೆ ಏರಿತು. ಈಗ ಇದು ಎರಡಂಕಿಗೆ ತಲುಪಿದೆ. ಕೈಯಲ್ಲಿ ಸೀಟಿ ಹಿಡಿದುಕೊಂಡು ಆಟವನ್ನು ನೇರವಾಗಿ ನಿಯಂತ್ರಿಸುವುದರಿಂದ ಹಿಡಿದು ಕಂಪ್ಯೂಟರ್‌ನಲ್ಲಿ ಸ್ಕೋರಿಂಗ್‌ ಮಾಡುವ ವರೆಗೂ ಮಹಿಳೆಯರು ವಿಭಿನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

ಈ ಬಾರಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಒಟ್ಟು 24 ಮಂದಿ ಅಧಿಕಾರಿಗಳು ಇದ್ದರು. ಇವರ ಪೈಕಿ 10 ಮಂದಿ ಮಹಿಳೆಯರು. ರೆಫರಿ, ಲೈನ್‌ ಅಂಪೈರ್‌, ಸ್ಕೋರರ್‌, ಸಹಾಯಕ ಸ್ಕೋರರ್‌, ಕಂಪ್ಯೂಟರ್ ಸ್ಕೋರರ್‌, ಕಂಪ್ಯೂಟರ್‌ ಟೈಮರ್‌, ಡು ಆರ್‌ ಡೈ ರೈಡ್‌ ಉಸ್ತುವಾರಿ, ಕೊನೆಯ ಐದು ನಿಮಿಷ ನಿಯಂತ್ರಣದ ಉಸ್ತುವಾರಿ ಮುಂತಾದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಗಮನ ಸೆಳೆದಿದ್ದಾರೆ.

‘ಟೇಬಲ್‌ ಅಫೀಸಿಯೇಟ್ ಮಾಡುವುದು, ಎಲೆಕ್ಟ್ರಾನಿಕ್ ಸ್ಕೋರಿಂಗ್ ಮಾಡುವುದು ಮತ್ತು ಸ್ಟಾಪ್ ವಾಚ್ ನಿರ್ವಹಿಸುವುದು ಅತ್ಯಂತ ಕಠಿಣ ಕೆಲಸ. ಅದನ್ನು ಕೂಡ ಮಹಿಳೆಯರು ಚೆನ್ನಾಗಿ ನಿರ್ವಹಿಸಿರುವುದು ಭರವಸೆ ಮೂಡಿಸಿರುವ ಅಂಶ’ ಎಂದು ಈ ಬಾರಿ ಮೂರನೇ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಕರ್ನಾಟಕದ ನಟನಾಜ ಅಭಿಪ್ರಾಯಪಟ್ಟರು.

ಹೆಣ್ಣೆಂಬ ಬೇಧವಿಲ್ಲ...
ರೆಫರಿಯಾಗಿ ಕಾರ್ಯನಿರ್ವಹಿಸಿದವರ ಪೈಕಿ ಹೆಚ್ಚಿನವರು ಪುರುಷರ ಆಟವನ್ನು ನಿಯಂತ್ರಿಸುವುದು ಹೇಗೆ ಎಂಬ ಆತಂಕದೊಂದಿಗೇ ಅಂಗಣಕ್ಕೆ ಇಳಿದಿದ್ದಾರೆ. ಆದರೆ ನಂತರ ಸುಸೂತ್ರವಾಗಿ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಆಟಗಾರರು ರೆಫರಿಗಳನ್ನು ಮಹಿಳೆ ಎಂದು ನೋಡದೇ, ಪುರುಷ ಅಧಿಕಾರಿಗಳು ಹೆಣ್ಣು ಎಂಬ ಬೇಧ ಮಾಡದೇ ಇರುವುದು ಎಂಬುದು ಮಹಿಳಾ ಅಧಿಕಾರಿಗಳ ಅನಿಸಿಕೆ.

‘ಮೈಯೆಲ್ಲ ನಡುಗುತ್ತಿತ್ತು. ಗಂಟಲು ಒಣಗಿತ್ತು. ಆದರೂ ಧೈರ್ಯ ಮಾಡಿ ಅಂಗಣಕ್ಕೆ ಇಳಿದೆ. ಹಿರಿಯರು ಬೆಂಬಲಕ್ಕೆ ನಿಂತಿದ್ದರು. ಪಂದ್ಯದ ಮೊದಲ ಅರ್ಧ ಮುಗಿಯುತ್ತಿದ್ದಂತೆ ಭರವಸೆಯ ಅಲೆಯಲ್ಲಿ ತೇಲುತ್ತಿದ್ದೆ. ಬಲಿಷ್ಠ ಆಟಗಾರರು ನನ್ನ ತೀರ್ಪನ್ನು ಒಪ್ಪಿಕೊಳ್ಳುತ್ತಿದ್ದಂತೆ ಧನ್ಯತಾ ಭಾವ ಮೂಡಿತು’ ಎಂದು ಈ ಬಾರಿ ಮುಂಬೈ ಚರಣದ ಮೂರನೇ ದಿನ ಮೊದಲ ಬಾರಿ ರೆಫರಿಯಾಗಿ ಕಾರ್ಯನಿರ್ವಹಿಸಿದ ಶುಭಾಂಗಿ ಪೂಜಾರ ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ಹೇಳಿದರು.

‘ಪ್ರೊ ಕಬಡ್ಡಿಯಿಂದಾಗಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಹತ್ತು ವರ್ಷಗಳಿಂದ ಬೇರೆ ಬೇರೆ ಟೂರ್ನಿಗೆ ಹೋಗಿ ಹೋಟೆಲ್ ಕೊಠಡಿಯಲ್ಲಿ ಒಬ್ಬಳೇ ಕೂರುತ್ತಿದ್ದೆ. ಈಗ ಐದು–ಆರು ಕೊಠಡಿಗಳಲ್ಲಿ ಮಹಿಳೆಯರು ಸಿಗುವಂಥ ಪರಿಸ್ಥಿತಿ ಇದೆ. ಇದು ಸಂತಸ ತಂದಿದೆ’ ಎಂದು ಪ್ರೊ ಕಬಡ್ಡಿಯಲ್ಲಿ ಸೆಮಿಫೈನಲ್ ವರೆಗೂ ರೆಫರಿಯಾಗಿ ಕಾರ್ಯನಿರ್ವಹಿಸಿದ ಖ್ಯಾತಿಯ ಜಮುನಾ ಹೇಳಿದರು.

ಮಹಿಳೆಯರಿಗೆ ಬಾಗಿಲು ತೆರೆದ ಬಗೆ
ಕಬಡ್ಡಿಯಲ್ಲಿ ಮಹಿಳಾ ರೆಫರಿಗಳು ಸಾಕಷ್ಟು ಮಂದಿ ಇದ್ದಾರೆ. ಆದರೆ ಪ್ರೊ ಕಬಡ್ಡಿಯಂಥ ಅದ್ದೂರಿ ಕ್ರೀಡೆಯಲ್ಲಿ ಅವರಿಗೆ ಅವಕಾಶ ಒದಗಲು ಕಾರಣ ಅಖಿಲ ಭಾರತ ಕಬಡ್ಡಿ ಫೆಡರೇಷನ್‌ನ ಅಧ್ಯಕ್ಷ ಡಾ,ಮೃದುಲಾ ಬಡೋರಿಯಾ. ಅವರ ಶಿಫಾರಸು ಮಹಿಳೆಯರು ಪ್ರೊ ಕಬಡ್ಡಿಗೆ ಪ್ರವೇಶಿಸಲು ಕಾರಣ ಎಂಬುದು ಎಲ್ಲರ ಅಭಿಪ್ರಾಯ.

ಎರಡು ಆವೃತ್ತಿಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಮಹಿಳೆಯರ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದ ಮೃದುಲಾ ಕಳೆದ ಬಾರಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳು ಪ್ರದರ್ಶಿಸಿದ ಕ್ರಿಯಾಶೀಲತೆಯನ್ನು ಕಂಡು ಮೆಚ್ಚಿ ಈ ಬಾರಿ ಹೆಚ್ಚು ಮಂದಿಗೆ ಅವಕಾಶ ಒದಗುವಂತೆ ಮಾಡಿದ್ದಾರೆ ಎಂದು ಶುಭಾಂಗಿ ಪೂಜಾರ ಹೇಳಿದರು.

‘ಮೃದುಲಾ ಅವರಿಂದಾಗಿ ಲಭಿಸಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬದ್ಧರಾಗಿದ್ದೇವೆ. ನಮ್ಮ ಪ್ರತಿಯೊಂದು ನಿರ್ಣಯವೂ ಆಟಗಾರನ ಕ್ರೀಡಾ ಜೀವನದ ಮೇಲೆ ಪರಿಣಾಮ ಬೀರಬಲ್ಲುದು. ಆದ್ದರಿಂದ ಪ್ರತಿ ಕ್ಷಣವೂ ಮೈಯೆಲ್ಲ ಕಣ್ಣಾಗಿರುತ್ತೇವೆ. ಕಬಡ್ಡಿಯನ್ನು ಮತ್ತು ಕ್ರೀಡೆಯನ್ನು ಉಳಿಸುತ್ತೇವೆ’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT