ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಗೆ ಸಕಾಲ

ಐಪಿಸಿ ಸೆಕ್ಷನ್‌ 124 (ಎ) ವಿವಾದ
Last Updated 12 ಮಾರ್ಚ್ 2016, 4:32 IST
ಅಕ್ಷರ ಗಾತ್ರ

ಡು ಇಲ್ಲವೇ ಮಡಿ ಎಂಬಂಥ ಒಂದು ಪ್ರಶ್ನೆ ಇಲ್ಲಿದೆ. ಸಮುದ್ರ ತಟದಲ್ಲಿ ಬದುಕು ಕಟ್ಟಿಕೊಂಡಿರುವ ಹಲವರು ಇಂದು ತಮಗೆ ಬೇಕಾದಷ್ಟು ಉಪ್ಪನ್ನು ತಾವೇ ತಯಾರಿಸಿಕೊಳ್ಳುತ್ತಿದ್ದಾರೆ ಎಂದು ಭಾವಿಸಿ. ಹೀಗಿರುವಾಗ ಸರ್ಕಾರ, ಜನ ತಮಗೆ ಅಗತ್ಯವಿರುವಷ್ಟು ಉಪ್ಪು ತಯಾರಿಸುವುದು ಅಪರಾಧ ಎನ್ನುವ ಕಾನೂನು ಜಾರಿ ಮಾಡುತ್ತದೆ. ಜನರೆಲ್ಲ ಸರ್ಕಾರ ತಯಾರಿಸಿದ, ದುಬಾರಿ ಉಪ್ಪನ್ನೇ ಖರೀದಿಸಬೇಕು ಎಂದು ಆ ಕಾನೂನು ಹೇಳುತ್ತದೆ.
ಆಗ ನೀವು ಒಂದು ಸಾರ್ವಜನಿಕ ಸಮಾವೇಶ ಆಯೋಜಿಸಿ, ‘ಸಮುದ್ರದ ದಂಡೆ ಬಳಿ ತೆರಳಿ, ಅಲ್ಲಿ ನಾವೇ ತಯಾರಿಸುವ ಉಪ್ಪನ್ನು ಬಳಸೋಣ. ಸರ್ಕಾರಿ ಉಪ್ಪನ್ನು ಮಾತ್ರ ಬಳಸಬೇಕು ಎಂಬ ಕಾನೂನು ಉಲ್ಲಂಘಿಸೋಣ’ ಎಂದು ಕರೆ ನೀಡುತ್ತೀರಿ.

‘ಈ ಸರ್ಕಾರ ಜನವಿರೋಧಿ, ಘನತೆ ಕಳೆದುಕೊಂಡಿದೆ, ಇಂಥ ಸರ್ಕಾರದ ಆದೇಶಗಳನ್ನು ಪಾಲಿಸಬೇಕಿಲ್ಲ. ಸರ್ಕಾರಕ್ಕೆ ಗೌರವ ನೀಡಬೇಕಾದ ಅವಶ್ಯಕತೆಯೂ ಇಲ್ಲ’ ಎಂದು ನೀವು ಸಾರ್ವಜನಿಕವಾಗಿ ಹೇಳುತ್ತೀರಿ. ಆದರೆ, ‘ಯಾವ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳಬಾರದು, ಶಾಂತಿಗೆ ಭಂಗ ತರಬಾರದು, ಹಿಂಸಾಚಾರಕ್ಕೆ ಮುಂದಾಗಬಾರದು’ ಎಂಬ ಸೂಚನೆಯನ್ನೂ ನೀಡುತ್ತೀರಿ. ಇಷ್ಟು ಮಾಡಿದ ನೀವು ದೇಶದ್ರೋಹಿ ಆಗುತ್ತೀರಾ?
ಈ ಪ್ರಶ್ನೆಯನ್ನು ದೇಶದ ಯಾವುದೇ ಭಾಗದಲ್ಲಿರುವ ಪೊಲೀಸರ ಬಳಿ ಕೇಳಿದರೆ, ‘ಭಾರತೀಯ ದಂಡ ಸಂಹಿತೆಯ (ಐಪಿಸಿ) 124(ಎ) ಸೆಕ್ಷನ್‌ ಅನ್ವಯ ಶಿಕ್ಷೆಗೆ ಒಳಪಡಿಸಬಹುದಾದ, ದೇಶದ್ರೋಹಕ್ಕೆ ಸಮನಾದ ಅಪರಾಧವನ್ನು ನೀವು ಎಸಗಿದ್ದೀರಿ’ ಎಂದು ಅವರು ಉತ್ತರಿಸುತ್ತಾರೆ. ಇದಕ್ಕೆ ಜೀವಾವಧಿ ಶಿಕ್ಷೆ ನಿಗದಿಪಡಿಸಲಾಗಿದೆ. ಗಾಂಧೀಜಿ ಎಸಗಿದ್ದು ಇದೇ ಅಪರಾಧವನ್ನು!

1930ರ ಮೇ ತಿಂಗಳ ನಾಲ್ಕನೆಯ ತಾರೀಕಿನ ಮಧ್ಯರಾತ್ರಿ ಪೊಲೀಸರು ಗಾಂಧೀಜಿಯವರ ಆಶ್ರಮಕ್ಕೆ ಹೋದರು, ಅವರನ್ನು ಬಂಧಿಸಲು. ಗಾಂಧೀಜಿ ಆಗತಾನೇ ಜಗತ್ತಿನ ಗಮನ ಸೆಳೆದಿದ್ದರು. ಬ್ರಿಟಿಷರು ಭಾರತ ತೊರೆಯುವತನಕ ಅವರ ವಿರುದ್ಧ ಶಾಂತಿಯುತವಾಗಿ ಹೋರಾಟ ನಡೆಸಬೇಕು ಎಂದು ಹೇಳಿ ಭಾರತೀಯರಲ್ಲಿ ವಿದ್ಯುತ್ ಸಂಚಾರ ಮೂಡಿಸಿದ್ದರು. ಪೊಲೀಸರನ್ನು  ಗಾಂಧೀಜಿ ಕೇಳಿದ ಮೊದಲ ಪ್ರಶ್ನೆ, ‘ನನ್ನ ವಿರುದ್ಧ ದೇಶದ್ರೋಹದ ಅಡಿ ಆರೋಪ ಹೊರಿಸಲಾಗಿದೆಯೇ?’ ಈ ಪ್ರಶ್ನೆಗೆ ‘ಇಲ್ಲ’ ಎಂದು ಪೊಲೀಸರು ಉತ್ತರಿಸಿದ್ದರು.
ಗಾಂಧೀಜಿ ವಿರುದ್ಧ ಆಗ ದೇಶದ್ರೋಹದ ಆರೋಪ ಹೊರಿಸಿರಲಿಲ್ಲ. ಅದು ಬ್ರಿಟಿಷರ ಆಳ್ವಿಕೆಯ ಕಾಲ. ಅವರು ಕೂಡ ಗಾಂಧೀಜಿ ಕೃತ್ಯ ದೇಶದ್ರೋಹಕ್ಕೆ ಸಮ ಎಂದು ಭಾವಿಸಲಿಲ್ಲ. ಆದರೆ ನಮ್ಮ ಇಂದಿನ ಪೊಲೀಸರು, ಇಂಥ ಕೆಲಸ ಮಾಡಿದವರ ವಿರುದ್ಧ ಅರೆಕ್ಷಣವೂ ಯೋಚಿಸದೆ ದೇಶದ್ರೋಹದ ಆರೋಪ ಹೊರಿಸಿ, ಬಂಧಿಸುತ್ತಾರೆ.

ಸರ್ಕಾರದ ವಿರುದ್ಧ ದ್ವೇಷ ಮೂಡಿಸಿದರೆ ಅಥವಾ ದ್ವೇಷ ಮೂಡಿಸಲು ಯತ್ನಿಸಿದರೆ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು 124(ಎ) ಸೆಕ್ಷನ್‌ ಹೇಳುತ್ತದೆ. ಈ ಕಾನೂನಿಗೆ ಸೂಕ್ತವಾದ ಅರ್ಥ ವಿವರಣೆ ನೀಡಲು ನಮ್ಮ ನ್ಯಾಯಾಲಯಗಳು, ಪೊಲೀಸ್ ವ್ಯವಸ್ಥೆ ಕಳೆದ ಮೂರು ದಶಕಗಳ ಅವಧಿಯಲ್ಲಿ ಸಾಕಷ್ಟು ಹೆಣಗಾಟ ನಡೆಸಿವೆ. ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಿದವರ ವಿರುದ್ಧ ಈ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಲಾಗಿದೆ. ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವುದು ದೇಶದ್ರೋಹ ಆಗುತ್ತದೆಯೇ ಎಂಬುದನ್ನು ತೀರ್ಮಾನಿಸಲು ನಮ್ಮ ನ್ಯಾಯಾಲಯಗಳು ವಾರಗಳ ಕಾಲ, ತಿಂಗಳುಗಳ ಕಾಲ ಚಿಂತನ-ಮಂಥನ ನಡೆಸಿವೆ. ಚುಟುಕಾಗಿ ಹೇಳುವುದಾದರೆ, ಈ ಕಾನೂನಿನ ವಿಚಾರದಲ್ಲಿ ನಮ್ಮದು ಗೊಂದಲಗಳ ದೇಶ.

ಆದರೆ, ಇದು ನೈಜ ಸಮಸ್ಯೆ ಅಲ್ಲ. ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನಿನ ವಿಚಾರದಲ್ಲಿ ನಮ್ಮ ದೇಶದಲ್ಲಿ ಗೊಂದಲಗಳು ಇವೆ ಎಂಬುದು ನಮಗೆ ಇನ್ನೂ ಅರಿವಾಗಿಲ್ಲ. ನೈಜ ಸಮಸ್ಯೆ ಇರುವುದು ಇಲ್ಲಿ. 1962ರಲ್ಲಿ ಕೇದಾರನಾಥ್ ಪ್ರಕರಣದಲ್ಲಿ ತಾನು ನೀಡಿದ ತೀರ್ಪಿನ ಕಾರಣದಿಂದಾಗಿ ಈ ಕಲಮಿನ ಅರ್ಥೈಸುವಿಕೆಯಲ್ಲಿ ಗೊಂದಲಗಳು ಇಲ್ಲ ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಹೇಳುತ್ತಿದೆ. ಆದರೆ ವಾಸ್ತವದಲ್ಲಿ, ರಾಜಕೀಯ ಅಭಿಪ್ರಾಯ ಹೇಳಿದವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ ಸಂದರ್ಭಗಳನ್ನು ಸುಲಭವಾಗಿ ನಿರ್ವಹಿಸಲು ವಿಚಾರಣಾ ನ್ಯಾಯಾಲಯ, ಪೊಲೀಸರು, ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್‌ಗೆ ಕೂಡ ಆಗುತ್ತಿಲ್ಲ.

ಕಾಶ್ಮೀರದ ಸ್ಥಿತಿಯನ್ನು ಉದಾಹರಣೆಯಾಗಿ ನೋಡೋಣ. ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಅಲ್ಲಿ ಪ್ರತಿದಿನ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ, ‘ಕಾಶ್ಮೀರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದನ್ನು ಭಾರತದ ಜೊತೆಯಲ್ಲೇ ಉಳಿಸಿಕೊಳ್ಳಬೇಕಿಲ್ಲ’ ಎಂದು ಹೇಳಿದರೆ ಆತನ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಬಹುದು. ಹಾಗೆ ಪ್ರಕರಣ ದಾಖಲಿಸುವುದಕ್ಕೆ, ‘ಆತನ ಈ ಹೇಳಿಕೆ ಕಾಶ್ಮೀರದಲ್ಲಿ ಈಗಾಗಲೇ ನಡೆಯುತ್ತಿರುವ ಹಿಂಸಾತ್ಮಕ ಹೋರಾಟಕ್ಕೆ ಮತ್ತಷ್ಟು ಶಕ್ತಿ ತಂದುಕೊಡುವ ತಾಕತ್ತು ಹೊಂದಿದೆ’ ಎಂಬ ಕಾರಣ ನೀಡಬಹುದು. ಅಂಥ ಹೇಳಿಕೆ ನೀಡಿದ ವ್ಯಕ್ತಿ ಜಾಮೀನು ಪಡೆಯುವ ಮೊದಲು ವಾರಗಳ ಕಾಲ ಅಥವಾ ತಿಂಗಳುಗಳ ಕಾಲ ಜೈಲಿನ ಕಂಬಿ ಎಣಿಸಬೇಕಾಗುತ್ತದೆ. ಆದರೆ, ಆತ ನೀಡಿದ್ದು ಒಂದು ರಾಜಕೀಯ ಹೇಳಿಕೆ ಮಾತ್ರ. ನಮ್ಮ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವುದು ನಿಜವಾಗಿದ್ದಲ್ಲಿ, ಆತನ ಹೇಳಿಕೆಯನ್ನು ಅಪರಾಧ ಎಂದು ಪರಿಗಣಿಸಬಾರದಿತ್ತು. ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವುದು ನಿಜ. ಅದರಲ್ಲಿ ಅನುಮಾನ ಇಲ್ಲ. ಆದರೆ, 124(ಎ) ಕಲಂನ ಭಾಷೆ ತೀರಾ ಅಸ್ಪಷ್ಟ ಆಗಿರುವ ಕಾರಣ ಇಂಥ ಹೇಳಿಕೆಗಳನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದೆ.

1962ರಲ್ಲಿ ತಾನು ನೀಡಿದ ತೀರ್ಪು ಈ ಸೆಕ್ಷನ್‌ ಬಗ್ಗೆ ಸ್ಪಷ್ಟತೆ ನೀಡಲಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಅರ್ಥ ಮಾಡಿಕೊಂಡಿರದ ಕಾರಣ, 124(ಎ) ಸೆಕ್ಷನ್‌ ಈಗ ಸಮಸ್ಯೆಯಾಗಿದೆ. ಹಾಗಾಗಿ ಈಗ ಅದು ಈ ಸೆಕ್ಷನ್‌ ಅನ್ನು ಅಸಾಂವಿಧಾನಿಕ ಎಂದು ಘೋಷಿಸುವ ಮೂಲಕವೇ ಸ್ಪಷ್ಟನೆ ನೀಡಬೇಕು.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಈ ಕಾನೂನು ಅಕಾರಣ ನಿರ್ಬಂಧ ಹೇರುತ್ತದೆ ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಅದನ್ನು ಕಿತ್ತೆಸೆಯಬೇಕು. ನಿಜ ಹೇಳಬೇಕೆಂದರೆ, 1958ರಲ್ಲಿ ರಾಮನಂದನ್ ಪ್ರಕರಣದಲ್ಲಿ ನೀಡಿದ ಆದೇಶದಲ್ಲಿ ಅಲಹಾಬಾದ್ ಹೈಕೋರ್ಟ್ ಈ ಕಲಮನ್ನು ಅಸಾಂವಿಧಾನಿಕ ಎಂದು ಹೇಳಿತ್ತು. ಹಾಗೆ ಹೇಳಿದ್ದಕ್ಕೆ ಆ ಆದೇಶದಲ್ಲಿ ಸೂಕ್ತ ಕಾರಣಗಳನ್ನೂ ನೀಡಲಾಗಿತ್ತು. ವ್ಯಕ್ತಿ ಹಿಂಸೆಗೆ ಪ್ರಚೋದನೆ ನೀಡಿದರೆ ಆತನ ವಿರುದ್ಧ ಪ್ರಕರಣ ದಾಖಲಿಸಲು ಸಾಕಷ್ಟು ಕಾನೂನುಗಳಿವೆ. ಸಾಮೂಹಿಕ ಹಿಂಸಾಚಾರ, ಸಮಾಜದಲ್ಲಿ ಅಶಾಂತಿಯನ್ನು ತಡೆಯಲು ನಮ್ಮಲ್ಲಿ ಸಾಕಷ್ಟು ಕಾನೂನುಗಳು ಇವೆ. ಅದಕ್ಕೆ ಐಪಿಸಿಯ 124(ಎ) ಕಲಮಿನ ಅಗತ್ಯ ಇಲ್ಲ.

ಅಗೌರವ ತರುವ ನಡವಳಿಕೆ ಮತ್ತು ಕಾನೂನಿನ ಉಲ್ಲಂಘನೆಯ ನಡುವೆ ವ್ಯತ್ಯಾಸ ಇದೆ. ಕಾನೂನು ಮತ್ತು ನೈತಿಕತೆಯ ನಡುವೆ ವ್ಯತ್ಯಾಸ ಇದೆ. ಶಾಂತಿಗೆ ಭಂಗ ತರುವುದು ಮತ್ತು ರಾಜಕೀಯ ಹೇಳಿಕೆ ನಡುವೆ ಕೂಡ ವ್ಯತ್ಯಾಸ ಇದೆ. ಆದರೆ ಈ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಸರ್ಕಾರ ಮತ್ತು ಪೊಲೀಸರಿಗೆ ಆಸಕ್ತಿ ಇಲ್ಲ. ಅವು ತಮ್ಮ ಪ್ರಜೆಗಳ ಮೇಲೆ ಅವಿವೇಕದಿಂದ ದೇಶದ್ರೋಹದ ಆರೋಪ ಹೊರಿಸಿ, ಕ್ರಮ ಜರುಗಿಸುತ್ತವೆ.
‘ನಾನು ಈ ದೇಶವನ್ನು ಪ್ರೀತಿಸುವುದಿಲ್ಲ’ ಎಂಬ ಮಾತನ್ನು ಬಹಿರಂಗವಾಗಿ ಹೇಳುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಅಂತಹ ಮಾತು ಹೇಳುವ ವ್ಯಕ್ತಿಯನ್ನು ನೋಡಿ ನಕ್ಕುಬಿಡುವ ಸ್ವಾತಂತ್ರ್ಯ ಕೂಡ ಇತರರಿಗೆ, ಅಂದರೆ ತಾಯ್ನಾಡನ್ನು ಪ್ರೀತಿಸುವವರಿಗೆ ಇದೆ.

ಅಂತಹವರನ್ನು ಗೌರವಿಸದಿರುವ ಸ್ವಾತಂತ್ರ್ಯ ಖಂಡಿತ ಇದೆ. ಆದರೆ, ಹಾಗೆ ಹೇಳಿಕೆ ನೀಡಿದವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತಿಲ್ಲ. ಏಕೆಂದರೆ, ದೇಶವನ್ನು ಪ್ರೀತಿಸದೆ ಇರುವುದು ಅಪರಾಧ ಅಲ್ಲ. ‘ದೇಶವನ್ನು ಪ್ರೀತಿಸಲಾರೆ’ ಎಂದು ಹೇಳುವವರ ಮನದಲ್ಲಿ ಇರುವ ಬೇಗುದಿ ವಿವೇಕಯುತ ಅಲ್ಲ ಎಂದು ಹೇಳುವ ಅಧಿಕಾರ ಇತರರಿಗೆ ಇಲ್ಲ. ಸಂವಿಧಾನ, ಕೇಂದ್ರ ಸರ್ಕಾರ ಕೂಡ, ‘ನೀವು ಈ ದೇಶವನ್ನು ಪ್ರೀತಿಸದಿರಲು ನೀಡುವ ಕಾರಣಗಟ್ಟಿಯಾಗಿಲ್ಲ’ ಎನ್ನುವಂತಿಲ್ಲ. ಅಭಿಪ್ರಾಯ ಹೊಂದಿರಲು, ವ್ಯಕ್ತಪಡಿಸಲು ಅಧಿಕಾರ ಎಲ್ಲರಿಗೂ ಇದೆ.

‘ಈ ದೇಶವನ್ನು ಪ್ರೀತಿಸಲಾಗದು’ ಎಂದು ಒಬ್ಬ ವ್ಯಕ್ತಿ ಆಡುವ ಮಾತಿನಿಂದ ಇನ್ನೊಬ್ಬನ ದೇಶಪ್ರೇಮ ದುರ್ಬಲ ಆಗುತ್ತದೆ ಎಂದಾದರೆ, ಮೊದಲ ವ್ಯಕ್ತಿಗೆ ಧನ್ಯವಾದ ಸಮರ್ಪಿಸಬೇಕು. ಏಕೆಂದರೆ, ಇನ್ನೊಬ್ಬನ ದೇಶಪ್ರೇಮ ಅದೆಷ್ಟು ದುರ್ಬಲ ಎಂಬುದನ್ನು ಆತ ತೋರಿಸಿಕೊಟ್ಟಿರುತ್ತಾನೆ! ಹಾಗಾಗಿ, ವ್ಯಕ್ತಿಯೊಬ್ಬ ‘ನಾನು ದೇಶವನ್ನು ಪ್ರೀತಿಸಲಾರೆ’ ಎಂದು ಹೇಳುವುದನ್ನು, ‘ನನ್ನ ದೇಶಪ್ರೇಮ ಅದೆಷ್ಟು ದುರ್ಬಲ ಎನ್ನುವುದನ್ನು ಗುರುತಿಸಿ, ಅದನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಇರುವ ಅವಕಾಶ’ ಎಂದು ನಾನು ಭಾವಿಸುವೆ.

ಪ್ರಜಾತಾಂತ್ರಿಕ ವ್ಯವಸ್ಥೆ ಇರುವ ಜಗತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುರುತಿಸುವಾಗ ಈ ಮಾದರಿಯ ವಾದವನ್ನು ಒಪ್ಪಿಕೊಂಡಿದೆ. ಇದಕ್ಕೆ ನಮ್ಮ ಸಂವಿಧಾನವೂ ಹೊರತಲ್ಲ. 124(ಎ) ಸೆಕ್ಷನ್‌ ಹೊರತುಪಡಿಸಿದರೆ ಐಪಿಸಿಯ ಉಳಿದ ಕಲಮುಗಳು ಸರಿಯಾಗಿಯೇ ಇವೆ. ನಿಜ ಹೇಳಬೇಕೆಂದರೆ, ಐಪಿಸಿಯನ್ನು ಜಗತ್ತಿನ ಅತ್ಯುತ್ತಮ ಕಾನೂನು ಎಂದು ಗುರುತಿಸಲಾಗಿದೆ. ಬ್ರಿಟನ್ನಿನಲ್ಲಿ ಇರುವುದಕ್ಕಿಂತ ಉತ್ತಮ ಎನ್ನಬಹುದಾದ ಕಾನೂನು ವ್ಯವಸ್ಥೆಯನ್ನು ಬ್ರಿಟಿಷರು ನಮಗೆ ಕೊಟ್ಟಿದ್ದಾರೆ.

1947ರ ಆಗಸ್ಟ್‌ನಲ್ಲಿ ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆಯಿತು. ಇದನ್ನು ಕಾನೂನಿನ ಕಣ್ಣಿನಿಂದ ನೋಡುವುದಾದರೆ, ಅಂದು ಭಾರತ ಸರ್ಕಾರದ ಮೇಲಿನ ನಿಯಂತ್ರಣವನ್ನು ಕೈಬಿಡುವ ಒಂದು ಹೊಸ ಕಾನೂನನ್ನು ಬ್ರಿಟಿಷ್ ಸಂಸತ್ತು ಅನುಮೋದಿಸಿತು. ಭಾರತದ ಆಡಳಿತವನ್ನು ಇಲ್ಲಿನ ಜನಪ್ರತಿನಿಧಿಗಳು, ಇಲ್ಲಿನ ಚುನಾಯಿತ ಸರ್ಕಾರ ನಡೆಸಬೇಕು ಎಂದು ಹೇಳುವ ‘ಭಾರತೀಯ ಸ್ವಾತಂತ್ರ್ಯ ಕಾಯ್ದೆ – 1947’ಕ್ಕೆ ಬ್ರಿಟಿಷ್ ಸಂಸತ್ತು ಅನುಮೋದನೆ ನೀಡಿತು.

ನಾವು ಈಗ ಅನುಸರಿಸುತ್ತಿರುವ ಕಾನೂನು ವ್ಯವಸ್ಥೆ ಆರಂಭವಾಗಿದ್ದು 1773ರಲ್ಲಿ ಬ್ರಿಟಿಷ್ ಸಂಸತ್ತು ರೆಗ್ಯುಲೇಟಿಂಗ್ ಕಾಯ್ದೆ ಅನುಮೋದಿಸಿದ ನಂತರ. 1860ರ ಐಪಿಸಿ ಕಾನೂನಿನಲ್ಲಿ ಕೆಲವೇ ಬದಲಾವಣೆಗಳನ್ನು ತರಲಾಗಿದೆ. ಇದು ಐಪಿಸಿ ಮಟ್ಟಿಗೆ ಒಂದು ಹೆಗ್ಗಳಿಕೆ. ಈಗ ಐಪಿಸಿ 124(ಎ) ಕಲಂನಲ್ಲಿ ಬದಲಾವಣೆ ಆಗಬೇಕಿದೆ.

ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಅವರನ್ನು ಬಂಧಿಸಿದ ಕಾರಣಕ್ಕೆ ಈಗ ದೇಶದ್ರೋಹ ಕುರಿತ ಚರ್ಚೆ ನಡೆದಿದೆ. ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯ ಶಿಕ್ಷಣಕ್ಕೆ ₹ 100 ವಿನಿಯೋಗ ಆದರೆ, ಅದರಲ್ಲಿ ₹ 3ನ್ನು ಮಾತ್ರ ವಿದ್ಯಾರ್ಥಿಯಿಂದ ಪಡೆಯಲಾಗುತ್ತದೆ. ಅಂದರೆ, ಉಳಿದ ಶೇಕಡ 97ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಪರಿಸ್ಥಿತಿ ಹೀಗಿರುವಾಗ, ಅಲ್ಲಿನ ಕೆಲವು ವಿದ್ಯಾರ್ಥಿಗಳು ಸರ್ಕಾರವನ್ನು ಬೈಯಲು, ನಮ್ಮ ಸಂಸತ್ತಿನ ಮೇಲೆ ದಾಳಿ ನಡೆಸಿದವರನ್ನು ಹೊಗಳಲು ಅಭಿವ್ಯಕ್ತಿ ಸ್ವಾತಂತ್ರ್ಯ ಬಯಸುತ್ತಿದ್ದಾರೆ.

ಅಮೆರಿಕದ ಮಟ್ಟಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶ್ನಾತೀತ. ಅಲ್ಲಿ ನೀವು ಸಾರ್ವಜನಿಕವಾಗಿ ಏನು ಬೇಕಿದ್ದರೂ ಹೇಳಬಹುದು. ನಿಮ್ಮ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವುದಿಲ್ಲ. ಆದರೆ, ಜೆಎನ್‌ಯು ಅಮೆರಿಕದಲ್ಲಿ ಇದ್ದಿದ್ದರೆ, ಅಲ್ಲಿನ ರಿಜಿಸ್ಟ್ರಾರ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಅಂಥ ಮಾತುಗಳನ್ನು ಹೇಳಲು ವಿದ್ಯಾರ್ಥಿಗಳಿಗೆ ಅವಕಾಶ ಕೊಡುತ್ತಿರಲಿಲ್ಲ. ಅಂಥ ಮಾತುಗಳನ್ನು ಆಡುವ ವಿದ್ಯಾರ್ಥಿಗಳಿಗೆ ನೀಡುವ ಸಬ್ಸಿಡಿಯನ್ನು ಸರ್ಕಾರ ಹಿಂಪಡೆಯುತ್ತಿತ್ತು. ಅಲ್ಲಿನ ವಿದ್ಯಾರ್ಥಿ, ವಿಶ್ವವಿದ್ಯಾಲಯದ ಆವರಣದ ಹೊರಗೆ ಮಾತ್ರ ತನಗೆ ಅನಿಸಿದ್ದನ್ನು ಹೇಳಬಹುದು. ಇಂಥ ವ್ಯವಸ್ಥೆ ಭಾರತದಲ್ಲೂ ಇರಬೇಕಿತ್ತು. ಅಂಥದ್ದೊಂದು ವ್ಯವಸ್ಥೆಯನ್ನು ಇಲ್ಲಿ ರೂಪಿಸಲು ಈಗಲೂ ಕಾಲ ಮಿಂಚಿಲ್ಲ.

ಐಪಿಸಿಯ 124(ಎ) ಕಲಮನ್ನು ಕಿತ್ತೆಸೆಯಲು ಇದು ಸಕಾಲ. ಆದರೆ, ಸೂಕ್ತ ಮಾರ್ಗದರ್ಶನ ಸಿಗದ, ಯಾವುದಕ್ಕೂ ಲಾಯಕ್ಕಲ್ಲದ ಕೆಲವು ವಿದ್ಯಾರ್ಥಿಗಳು ಕೂಗುವ ಘೋಷಣೆಗಳಿಂದ ದೇಶಕ್ಕೆ ರಕ್ಷಣೆ ಬೇಕು ಎಂದು ಭಾವಿಸುವುದೇ ದೇಶಕ್ಕೊಂದು ಅಪಮಾನ. ತಮಗೆ ಅನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ಕನ್ಹಯ್ಯಾ ಮತ್ತು ಅವರ ಬಳಗಕ್ಕಿದೆ. ಅವರನ್ನು ನೋಡಿ ನಗುವ ಸ್ವಾತಂತ್ರ್ಯ ಇತರರಿಗೂ ಇದೆ. ಹಾಗೆಯೇ, ಮುಂದಿನ ವಿದ್ಯಾರ್ಥಿಗಳು ಸರಿಯಾಗಿ ವರ್ತಿಸುವುದನ್ನು ಕಲಿಯಲಿ ಎಂಬ ಉದ್ದೇಶದಿಂದ, ಇಂಥ ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ ಉದ್ಯೋಗ ನಿರಾಕರಿಸುವ ಸ್ವಾತಂತ್ರ್ಯ ಖಾಸಗಿ ವಲಯಕ್ಕೂ ಇದೆ.
*
ಗಾಂಧೀಜಿ ಗೌರವ ಹೆಚ್ಚಾಯ್ತು
ಗಾಂಧೀಜಿ ದೊಡ್ಡ ವಕೀಲರೂ ಆಗಿದ್ದರು. ತಮ್ಮ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿ, ತಮ್ಮನ್ನು ಕೋರ್ಟಿಗೆ ಎಳೆದಾಗ ಅಲ್ಲಿನ ನ್ಯಾಯಾಧೀಶರಿಗೆ ತಮ್ಮ ಬಗ್ಗೆ ಅಪಾರ ಗೌರವ ಇದೆ ಎಂಬುದು ಮಹಾತ್ಮನಿಗೆ ಗೊತ್ತಾಯಿತು. ಗಾಂಧೀಜಿ ವಾದ ಮಂಡಿಸಲಿ ಎಂದು ನ್ಯಾಯಾಧೀಶರು ಬಯಸಿದರು. ಆದರೆ ತಮಗೆ ನೀಡಬಹುದಾದ ಶಿಕ್ಷೆ ಕಡಿಮೆ ಮಾಡಿ ಎಂದು ಗಾಂಧೀಜಿ ಕೋರಲಿಲ್ಲ. ‘ನಿಮಗೆ ಬೇರೆ ಆಯ್ಕೆ ಇಲ್ಲ. ನನ್ನನ್ನು ಶಿಕ್ಷಿಸಿ. ಕಾನೂನನ್ನು ಎತ್ತಿಹಿಡಿಯುವುದಾಗಿ ನೀವು ಪ್ರಮಾಣ ವಚನ ಸ್ವೀಕರಿಸಿದ್ದೀರಿ’ ಎಂದು ಗಾಂಧೀಜಿ ನ್ಯಾಯಾಧೀಶರಿಗೆ ಹೇಳಿದರು. ಆ ನ್ಯಾಯಾಧೀಶರು ಗಾಂಧೀಜಿಗೆ ಶಿಕ್ಷೆ ವಿಧಿಸಿದರು. ಆದರೆ ಗಾಂಧೀಜಿ ಕುರಿತ ತಮ್ಮ ಗೌರವ ಇನ್ನಷ್ಟು ಹೆಚ್ಚಿತು ಎಂದರು.

‘ಗಾಂಧೀಜಿ ಅವರ ತಪ್ಪನ್ನು ಸರ್ಕಾರ ಮನ್ನಿಸಿ, ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ನನಗೆ ಸಂತೋಷವಾಗುತ್ತದೆ’ ಎಂದು ಬಹಿರಂಗವಾಗಿಯೇ ಹೇಳಿದರು. ನಿಜ ಅರ್ಥದಲ್ಲಿ 124(ಎ) ಸೆಕ್ಷನ್‌ ಒಂದು ಕಾನೂನೇ ಅಲ್ಲ ಎಂದು ಮಹಾತ್ಮ ಹೇಳಿದ್ದರು. ತಮ್ಮ ಸರ್ಕಾರವನ್ನು ಪ್ರೀತಿಸುವಂತೆ ಜನರ ಮೇಲೆ ಒತ್ತಾಯ ಹೇರಲು ಯಾರಿಂದಲೂ ಸಾಧ್ಯವಿಲ್ಲ. ತನ್ನನ್ನು ಪ್ರೀತಿಯಿಂದ ಕಾಣದಿದ್ದರೆ ಶಿಕ್ಷೆ ವಿಧಿಸುತ್ತೇನೆ ಎನ್ನುವ ಮಾತನ್ನು ಸರ್ಕಾರ ಕೂಡ ಹೇಳಬಾರದು. ಈ ಕಾನೂನು ಒಂದು ರಾಜಕೀಯ ಅಸ್ತ್ರ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT