ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಶರಾವತಿ ನೀರು ಪರಿಶೀಲನೆಗೆ ತಜ್ಞ ರ ಸಮಿತಿ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಮತ್ತು ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಶರಾವತಿ (ಲಿಂಗನಮಕ್ಕಿ ಜಲಾಶಯ) ಸೇರಿದಂತೆ ಇತರ ನದಿ ಮೂಲಗಳ ಬಗ್ಗೆ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲಾಗುವುದು. ಅದು ಕೊಡುವ ವರದಿ ಆಧಾರದ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು  ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಸೋಮವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಬೆಂಗಳೂರು ಜಲಮಂಡಲಿ ರಚಿಸಿದ್ದ ಬಿ.ಎನ್‌. ತ್ಯಾಗರಾಜ ನೇತೃತ್ವದ ಸಮಿತಿ ಶರಾವತಿ ನದಿ ನೀರನ್ನು ಬೆಂಗಳೂರು ನಗರಕ್ಕೆ ತರಬಹುದು ಎಂದು ವರದಿ ಕೊಟ್ಟಿದೆ. ಇದನ್ನೂ ಸೇರಿಸಿಕೊಂಡು, ಮೇಕೆದಾಟು, ಎತ್ತಿನಹೊಳೆ ಯೋಜನೆಗಳಿಂದಲೂ ಎಷ್ಟೆಷ್ಟು ನೀರು ಲಭ್ಯ ಆಗುತ್ತದೆ ಎಂಬುದನ್ನು ಸಮಿತಿ ಪರಿಶೀಲಿಸಲಿದೆ’ ಎಂದು ಹೇಳಿದರು.

‘ಶರಾವತಿ ನಮ್ಮಲ್ಲೇ ಹುಟ್ಟಿ, ನಮ್ಮಲೇ ಸಮುದ್ರ ಸೇರುತ್ತದೆ. ಹೀಗಾಗಿ ಇದಕ್ಕೆ ಯಾವ ವಿವಾದವೂ ಇಲ್ಲ. ವಿದ್ಯುತ್‌ ಉತ್ಪಾದನೆಗಷ್ಟೇ ಸೀಮಿತವಾಗಿರುವ ಈ ನೀರನ್ನು ಕುಡಿಯುವುದಕ್ಕೂ ಬಳಸುವ ಉದ್ದೇಶ ಇದೆ. ಕನಿಷ್ಠ 10 ಟಿಎಂಸಿ ಅಡಿ ನೀರನ್ನು ಮಳೆ ಬಂದಾಗ ಲಿಫ್ಟ್‌ ಮಾಡಿದರೂ ಎಷ್ಟೊ ಅನುಕೂಲ ಆಗುತ್ತದೆ. ಇದರ ಸಾಧಕ– ಬಾಧಕಗಳ ಬಗ್ಗೆ ತಜ್ಞರು ಪರಿಶೀಲಿಸಲಿದ್ದಾರೆ. ಅದರ ನಂತರವೇ ಅಂತಿಮ ತೀರ್ಮಾನ’ ಎಂದು ಅವರು ಹೇಳಿದರು.

ಪರಿಹಾರ: ಲಿಂಗನಮಕ್ಕಿ ಜಲಾಶಯದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎನ್ನುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗುವುದು ಎಂದರು.

ತ್ಯಾಗರಾಜ ಸಮಿತಿ ಹೇಳಿದ್ದೇನು?
ಪಶ್ಚಿಮಘಟ್ಟದಲ್ಲಿ ಬರುವ ಲಿಂಗನಮಕ್ಕಿ ಅತಿದೊಡ್ಡ ಜಲಾಶಯವಾಗಿದ್ದು, 151 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಪ್ರತಿ ವರ್ಷ 181 ಟಿಎಂಸಿಯಷ್ಟು ಒಳಹರಿವು ಇರುತ್ತದೆ.  ಲಿಂಗನಮಕ್ಕಿ ನೀರನ್ನು ತಂದರೆ ಸಂಪೂರ್ಣ ಬಿಬಿಎಂಪಿ ಪ್ರದೇಶ ಸೇರಿ ಚಿತ್ರದುರ್ಗ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ನೀರು ಒದಗಿಸಬಹುದು.

ತುಂಗಭದ್ರಾ: ತಿಂಗಳಲ್ಲಿ ವರದಿ
ತುಂಗಭದ್ರಾ ಜಲಾಶಯದಲ್ಲಿ ವಿಪರೀತ ಹೂಳು ತುಂಬಿರುವ ಕಾರಣ ನೀರು ಶೇಖರಣೆ ಸಾಮರ್ಥ್ಯ ಕಡಿಮೆ ಆಗಿದೆ. ಹೀಗಾಗಿ ನೀರು ಶೇಖರಣೆಯ ಪರ್ಯಾಯ ಮಾರ್ಗಗಳ ಬಗ್ಗೆ ಅಧ್ಯಯನ ನಡೆಸಲು ನೇಮಿಸಿದ್ದ ಸಮಿತಿ ಏಪ್ರಿಲ್‌ನಲ್ಲಿ ವರದಿ ನೀಡಲಿದೆ  ಸಚಿವ ಪಾಟೀಲ ತಿಳಿಸಿದರು.

‘ಎಲ್ಲವೂ ತಜ್ಞರ ಸಮಿತಿ ಕೊಡುವ ವರದಿ ಮೇಲೆ ನಿಂತಿದೆ. ನದಿ ಕೊಳ್ಳದ ವ್ಯಾಪ್ತಿಯ ಹೊರಗೆ ಸಮತೋಲನ ಜಲಾಶಯಗಳನ್ನು ನಿರ್ಮಾಣ ಮಾಡಲು ಸಾಧ್ಯವೇ ಎಂಬುದರ ಬಗ್ಗೆಯೂ ತಜ್ಞರ ಸಮಿತಿ ವರದಿ ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT