ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಾಯದ ಬದುಕೇ ಚೆಂದ ಎಂದ ಇಂದಿರಮ್ಮ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

‘ಈಗ ಅಣಬೆ ಬೇಸಾಯ ಒಂದು ಕಲಿಯೋದೈತೆ ನೋಡಿ. ಇಲಾಖೆಯೋರು ಎರಡು ಬಾರಿ ಬಂದ್‌ ಹೋದ್ರು. ಉಳಿದವರ್‌್ಯಾರೂ ಕಲೀಲಿಕ್ಕೆ ಬರ್ತಿಲ್ಲ... ಹಿಂಗಾಗಿ ಅದೊಂದು ಮಾಡಕ್ಕೆ ಆಗ್ತಾ ಇಲ್ಲ’ ಹೀಗೆಂದು ವ್ಯಥೆ ಪಡುತ್ತಿದ್ದರು ಇಂದಿರಮ್ಮ. 63 ವರ್ಷ ವಯಸ್ಸಿನ ರೈತ ಮಹಿಳೆ ಇಂದಿರಮ್ಮ ಅವರಿಗೆ ಇನ್ನೂ ಕೃಷಿ ಕಲಿಕೆಯ ಉತ್ಸಾಹ.

ಕಳೆದ 35 ವರ್ಷಗಳಿಂದ ಹೊಲ–ತೋಟದಲ್ಲಿ ದುಡಿದು ಹಣ್ಣಾದ ಅವರು ಇನ್ನೂ ಹೊಸದನ್ನು ಕಲಿತು ಪ್ರಯೋಗಿಸುವ ತವಕದಲ್ಲಿದ್ದಾರೆ. ಅವರ ಕ್ರಿಯಾಶೀಲ ಮನಸ್ಸು, ಚಟುವಟಿಕೆಯ ಕಾಯಕದಿಂದಾಗಿ ಅವರ ನಾಲ್ಕೆಕರೆಯ ಹೊಲ ಹಸಿರಿನಿಂದ ನಳನಳಿಸುತ್ತಿದೆ. ಈ ಹಸಿರಿನಲ್ಲೂ ರಾಸಾಯನಿಕದ ಘಾಟು ಇಲ್ಲ. ನೈಸರ್ಗಿಕ ಕೃಷಿಯ ಸೊಗಡು ಅರಳಿದೆ.

ಕೆ.ಆರ್‌. ನಗರ ತಾಲ್ಲೂಕಿನ ಹನುಮನಹಳ್ಳಿಯ ಇಂದಿರಮ್ಮ ಅವರು ‘ಉತ್ತಮ ಕೃಷಿ ಮಹಿಳೆ’ ಎಂಬ ಅಭಿದಾನ ಗಳಿಸಲು ಸಾಗಿ ಬಂದ ದಾರಿ ಸುಲಭದ್ದಲ್ಲ. ಇದೇ ತಾಲ್ಲೂಕಿನ ಕರ್ತಾಳುವಿನಲ್ಲಿ ಜನಿಸಿದ ಅವರಲ್ಲಿ ಕೃಷಿ ಆಸಕ್ತಿ ಮೊಳೆತಿದ್ದು ಬಾಲ್ಯದಿಂದಲೇ. ಸಾಮಾನ್ಯವಾಗಿ ಹಳ್ಳಿ ಹುಡುಗಿಯರಿಗೆ ಹೊಲ–ತೋಟಗಳಿಗೆ ಹೋಗಿ ಕೆಲಸ ಮಾಡುವುದು ಹೊಸದೇನೂ ಅಲ್ಲ. ಆದರೆ, ಇಂದಿರಮ್ಮ ಅವರ ತಂದೆ ಸೋಮಾರಾಧ್ಯ ಅವರೊಂದಿಗೆ ಅಡಿಕೆ ಕೃಷಿ ಹಾಗೂ ಮಾರಾಟ ಎರಡೂ ಪ್ರಕ್ರಿಯೆಗಳನ್ನೂ ಹತ್ತಿರದಿಂದ ಕಲಿತರು.

ಅಡಿಕೆ ಮಾರಾಟದ ಲೆಕ್ಕವನ್ನೂ ಬರೆದು ತಂದೆಗೆ ಸಹಾಯ ಮಾಡಿದವರು. ರೈತ ನಾಗಭೂಷಣ ಆರಾಧ್ಯ ಅವರೊಂದಿಗೆ ವಿವಾಹವಾದ ನಂತರ ಕೃಷಿಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಅನುವಾಯಿತು.

ಇವರ ಉಳಿದ ಸಹೋದರ ಸಹೋದರಿಯರೆಲ್ಲ ಬೇರೆ, ಬೇರೆ ಕೆಲಸಗಳಿಗೆ ಹೋಗಿ ಜೀವನ ಕಟ್ಟಿಕೊಂಡಿದ್ದರೆ, ಇಂದಿರಮ್ಮ ಮಾತ್ರ ಕೃಷಿ ಬದುಕನ್ನು ಪ್ರವೇಶಿಸುವಂತಾಯಿತು. ‘ಈ ಬಗ್ಗೆ ನನಗೇನೂ ಬೇಸರವಿಲ್ಲ. ಇದು ನನ್ನ ಆಸಕ್ತಿಯ ಕ್ಷೇತ್ರ. ಇದರಲ್ಲೇ ನನಗೆ ಪ್ರಶಸ್ತಿಗಳು ಬಂದಾಗ ನನ್ನ ತಮ್ಮ ಬಂದು ಅಪ್ಪಿಕೊಂಡು, ಈಗ  ತಂದೆ ಇರಬೇಕಿತ್ತು ಎಂದು ಹೇಳಿ ಹರ್ಷದ ಕಣ್ಣೀರು ಸುರಿಸಿದ್ದ. ಆಗ ಧನ್ಯತಾ ಭಾವ ಮೂಡಿತ್ತು’ ಎಂದು ಅವರು ಹೇಳಿದರು. ಈಗ ಸಂಬಂಧಿಕರೆಲ್ಲರೂ ‘ಇಂದಿರಮ್ಮ ನೀವು ಕೃಷಿ ಮಾಡಿದ್ದೂ ಸಾರ್ಥಕ ಎನ್ನುತ್ತಾರೆ’ ಎಂದು ಹೇಳಿ ಹರ್ಷಿಸಿದರು.

ಮದುವೆ ನಂತರ ಹೊಲದ ಕೆಲಸಗಳಲ್ಲಿ ಕೈಗೂಡಿಸುತ್ತಿದ್ದರಾದರೂ, ಅವರು ಸಾವಯವ ಕೃಷಿಯತ್ತ ಆಕರ್ಷಿತವಾದದ್ದು 2003ರಲ್ಲಿ. ಆ ವರ್ಷ ಹಳ್ಳಿಯಲ್ಲಿ ಆರಂಭಗೊಂಡ ಮಹಿಳಾ ಸ್ವಸಹಾಯ ಸಂಘಕ್ಕೆ ಸೇರಿದರು. ಸುತ್ತೂರು ಜೆಎಸ್‌ಎಸ್‌ನ ಕೃಷಿ ವಿಜ್ಞಾನ ಕೇಂದ್ರದವರು ಈ ಸಂಘದ ಮಹಿಳೆಯರಿಗೆ  ಸಾವಯವ ಕೃಷಿ ಹಾಗೂ ಎರೆಹುಳು ಗೊಬ್ಬರ ತಯಾರಿಸುವ ಬಗ್ಗೆ ತರಬೇತಿ ನೀಡಿದಾಗ ಇಂದಿರಮ್ಮ ತಕ್ಷಣ ಕಾರ್ಯಪ್ರವೃತ್ತರಾದರು.

ತಮ್ಮ ಜಮೀನನ್ನು ಸಂಪೂರ್ಣ ರಾಸಾಯನಿಕ ಮುಕ್ತ ಮಾಡಲು ಪಣ ತೊಟ್ಟರು. 12 ಅಡಿ ಉದ್ದ 5.5 ಅಡಿ ಅಗಲದ ನಾಲ್ಕು ಎರೆಹುಳು ಗೊಬ್ಬರ ತೊಟ್ಟಿಯನ್ನು ಹೊಲದ ಬಳಿ ನಿರ್ಮಿಸಿಕೊಂಡರು. 2004ರಲ್ಲಿ ಇದಕ್ಕಾಗಿ ಅವರಿಗೆ ಕೃಷಿ ಇಲಾಖೆಯಿಂದ ₹25 ಸಾವಿರ ಸಹಾಯಧನ ಮಂಜೂರಾಯಿತು. ಆ ತೊಟ್ಟಿಗಳಲ್ಲಿ ಅವರೀಗ ಒಂದು ಬಾರಿಗೆ 6–8 ಟನ್‌ಗಳಷ್ಟು ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. ತಮ್ಮ ಹೊಲಕ್ಕೆ ಹಾಕುವುದಲ್ಲದೇ, ಇತರರಿಗೂ ಮಾರುತ್ತಾರೆ. ಎಲ್ಲ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳಿಗೆ ವಿದಾಯ ಹೇಳಿಬಿಟ್ಟಿದ್ದಾರೆ ಇಂದಿರಮ್ಮ.

ಇಂಥ ನಿರ್ಧಾರ ಕೈಗೊಳ್ಳಲೂ ಗಟ್ಟಿ ಮನಸ್ಸು ಬೇಕು. ರಾಸಾಯನಿಕದಿಂದ ಸಾವಯವಕ್ಕೆ ಬದಲಾಯಿಸಿದಾಗ ತಕ್ಷಣ ಒಳ್ಳೆಯ ಪರಿಣಾಮ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ತಾಳ್ಮೆ ಬೇಕು ಎನ್ನುವುದು ಅವರ ಕಿವಿಮಾತು.

ಮದುವೆಯಾಗಿ ಬಂದಾಗ ಕುಡಿಯುವ ನೀರು ತರುವುದಕ್ಕೆ ಬೆಳಿಗ್ಗೆ 4ಕ್ಕೆ ಎದ್ದು 2 ಕಿ.ಮೀ. ದೂರ ನಡೆದು ಹೋಗಬೇಕಿತ್ತು. ಅಲ್ಲಿಯೂ ಬಟ್ಟಲಿನಿಂದ ನೀರು ತೋಡಿಕೊಳ್ಳುವ ಪರಿಸ್ಥಿತಿ. ಮೊದಲು ಯಾರು ಹೋಗಿರುತ್ತಾರೋ ಅವರಿಗೆ ನೀರು ಸಿಗುತ್ತಿತ್ತು. ಭತ್ತ, ರಾಗಿ, ಹುರುಳಿ ಕಾಳುಗಳನ್ನು ಒಡ್ಡನಕೋಲಿನಲ್ಲಿ (ಬೆತ್ತದ ಕೋಲು) ಕುಟ್ಟಿಕೊಳ್ಳಬೇಕಿತ್ತು.

ಇಂಥ ಕಷ್ಟಗಳು ಇಂದಿರಮ್ಮ ಅವರ ಕೃಷಿ ಬದುಕಿನಲ್ಲಿ ಮುಳ್ಳಾಗಲಿಲ್ಲ. ಬದಲಾಗಿ ಪರಿಸ್ಥಿತಿ ಸುಧಾರಿಸಲು ಪ್ರೇರಣೆ ಒದಗಿಸಿದವು. ‘ಸಾವಯವ ಕೃಷಿ ತರಬೇತಿ ಪಡೆದ ನಂತರ ಮೊದಲ ಬಾರಿ ಒಂದು ಎಕರೆಯಲ್ಲಿ ರಾಗಿ ಹಾಗೂ ಇನ್ನೊಂದು ಎಕರೆಯಲ್ಲಿ ಮುಸುಕಿನ ಜೋಳ ಬೆಳೆದೆ. 15 ಕ್ವಿಂಟಾಲ್‌ ರಾಗಿ, 10 ಕ್ವಿಂಟಾಲ್‌ ಮುಸುಕಿನ ಜೋಳದ ಬೆಳೆ ಬಂದಿತ್ತು. ಹಿಂತಿರುಗಿ ನೋಡುವ ಪರಿಸ್ಥಿತಿಯೇ ಬರಲಿಲ್ಲ’ ಎಂದು ಹೇಳುವಾಗ ಹೆಮ್ಮೆ ಇತ್ತು. ಎರೆಹುಳು ಗೊಬ್ಬರ ಘಟಕ ಯಶಸ್ವಿಯಾದ ನಂತರ ಆಕಾಶವಾಣಿಯ ಹಸಿರುಸಿರಿಯಲ್ಲಿ ಇತರ ರೈತರಿಗೂ ಮಾರ್ಗದರ್ಶನ ಮಾಡಿದರು. ‘ಬಾನುಲಿ ಕೃಷಿ ರತ್ನ’ ಪ್ರಶಸ್ತಿಯೂ ಬಂತು. ತರಕಾರಿಗೆ ಒಳ್ಳೆಯ ಬೆಲೆ ಇದ್ದುದರಿಂದ ತರಕಾರಿ ಕೃಷಿ ಆರಂಭಿಸಿದರು.

ಅಡಿಕೆ, ತೆಂಗು, ಬಾಳೆ, ತರಕಾರಿ, ಬದನೆ, ಕೋಸು, ಟೊಮೆಟೊ, ಮೆಣಸು, ಹಾಗಲಕಾಯಿ ಮೊದಲಾದ ತರಕಾರಿಗಳನ್ನು ಬೆಳೆದು ಸೈ ಎನ್ನಿಸಿಕೊಂಡರು. ಮೈಸೂರು ಹಾಪ್‌ಕಾಮ್ಸ್‌ಗೆ ತರಕಾರಿಗಳನ್ನು ನೀಡುತ್ತಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನ ಸಾವಯವ ಕೃಷಿ ಮಳಿಗೆಗೆ ತರಕಾರಿಗಳನ್ನು ನೀಡುತ್ತಿದ್ದು ಅಲ್ಲಿ ಉತ್ತಮ ದರವೂ ಲಭಿಸುತ್ತಿದೆ, ಬಹುಬೇಡಿಕೆಯೂ ಇದೆ ಎಂದು ಅವರು ವಿವರಿಸಿದರು.

ಭತ್ತ, ರಾಗಿ, ಅವರೆಕಾಳು, ಹುರುಳಿ, ಅಲಸಂದೆಗಳನ್ನು ಮನೆಗೆ ಬೇಕಾದಷ್ಟು ಮಾತ್ರ ಬೆಳೆಯುತ್ತಿದ್ದಾರೆ. ಈಚೆಗೆ ಅವರ ಹೊಸ ಸಾಧನೆ ಎಂದರೆ, 500ರಷ್ಟು ಅರಣ್ಯ ಸಸಿಗಳನ್ನು ಗದ್ದೆಯ ಬದುಗಳಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. ವಿವಿಧ ಔಷಧೀಯ ಸಸಿಗಳನ್ನು ಸಂಗ್ರಹಿಸಿ ತಂದು ನೆಡುತ್ತಿದ್ದಾರೆ. ಪೇರಲ, ಚಿಕ್ಕು, ಪಪ್ಪಾಯಿ ಮೊದಲಾದ ಹಣ್ಣುಗಳ ಗಿಡಗಳನ್ನೂ ಬೆಳೆಸಿದ್ದಾರೆ.

ಇವರ ಕೊಟ್ಟಿಗೆಯ ಹಿಂಭಾಗದಲ್ಲಿ ಹಸುವಿನ ಗಂಜಲವನ್ನು ಸಂಗ್ರಹಿಸಿ ತೋಟಕ್ಕೆ ಬಳಸುವ ಯೂರಿಯಾ ಘಟಕ ಇದೆ. ಅದರ ಸಮೀಪದಲ್ಲೇ ಚಪ್ಪಡಿ ಕಲ್ಲುಗಳ ಬೇಲಿಯೊಳಗೆ ಜೈವಿಕ ಗೊಬ್ಬರ ಘಟಕ ಗಮನ ಸೆಳೆಯುತ್ತದೆ. ಇದು ಕೃಷಿ ಇಲಾಖೆ ವತಿಯಿಂದ ಮಾಡಲಾದ ಯೋಜನೆ. ಇನ್ನು ‘ಜೀವರಸ ಸಾರ ಘಟಕ’ವೂ ಇದೆ. ಈಚೆಗೆ ಇದನ್ನು ಬಳಸಿ ಮಾಡಿದ ಬೇಸಾಯದಿಂದ 100 ಅಡಿ ಅಗಲ 50 ಅಡಿ ಉದ್ದದ ಭೂಮಿಯಲ್ಲಿ 12 ಸೇರು ಅವರೆಕಾಳು ಫಸಲು ಬಂದಿದೆ.

ಬೇವಿನ ಬೀಜವನ್ನು ಸಂಗ್ರಹಿಸಿ ಕುಟ್ಟಿ ಪುಡಿ ಮಾಡಿ ಅದರ ಕಷಾಯ ತಯಾರಿಸಿ ಕೀಟನಾಶಕವಾಗಿ ಬಳಸುವ ಇಂದಿರಮ್ಮ ‘ಇದರಿಂದ ಕೃಷಿಯ ಮಿತ್ರ ಕೀಟಗಳು ಉಳಿದುಕೊಳ್ಳುತ್ತವೆ. ಬೇಡದ ಕೀಟಗಳು ಮಾತ್ರ ನಾಶವಾಗುತ್ತವೆ’ ಎಂದು ವಿವರಿಸಿದರು.

ಎಸ್ಸೆಸ್ಸೆಲ್ಸಿವರೆಗೆ ಓದಿರುವ ಇಂದಿರಮ್ಮ ಅವರು ಕೃಷಿಯ ಹೊಸ ಜ್ಞಾನ ಕಲಿಯಲು ಈಗಲೂ ತುದಿಗಾಲಿನಲ್ಲಿ ನಿಂತಿದ್ದಾರೆ. ಕೃಷಿ ಇಲಾಖೆಯಿಂದ ರೈತರಿಗಾಗಿ ಹಾಕಿಕೊಳ್ಳುವ ಕಾರ್ಯಕ್ರಮಗಳನ್ನು ಅರಿತು ಅವುಗಳನ್ನು ತಕ್ಷಣ ಜಾರಿಗೆ ತರುವುದು ಅವರ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿದ್ದರೆ. ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ನಿರಂತರ ಸಂಪರ್ಕದಲ್ಲಿದ್ದು, ಅವರಿಂದ ಮಾಹಿತಿ ಪಡೆಯುತ್ತಾರೆ. ಗ್ರಾಮಸ್ಥರಲ್ಲೂ ಪ್ರೋತ್ಸಾಹ ತುಂಬುತ್ತಾರೆ. ಬಾನುಲಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಇತರ ರೈತರಿಗೆ ಸಲಹೆಗಳನ್ನು ನೀಡುತ್ತಾರೆ.

ಗ್ರಾಮದ ವಯಸ್ಕರಿಗೆ ಅಕ್ಷರ ಕಲಿಸಿದ್ದು ಇವರ ಇನ್ನೊಂದು ಸಾಧನೆಯಾದರೆ, ಮಹಿಳಾ ಸ್ವಸಹಾಯ ಸಂಘದ ಮೂಲಕ ಗೃಹೋದ್ಯಮವನ್ನು ನಡೆಸುತ್ತಿರುವುದು ಇನ್ನೊಂದು ಗಾಥೆಯಾಗಬಹುದು.

ನಮ್ಮ ಗ್ರಾಮದ ತೋಪಿನಕೆರೆ ಒಣಗಿ ಹೋಗಿದೆ. ನೀರು ತುಂಬಿಸದೇ 5 ವರ್ಷಗಳು ಕಳೆದಿವೆ. ಹೀಗಾಗಿ ಇಲ್ಲಿಯ ರೈತರಿಗೆ ಕೃಷಿಗೆ ನೀರು ಒದಗಿಸುವುದೇ ಸಮಸ್ಯೆಯಾಗಿದೆ. ನೀರಿಗಾಗಿ ನಮ್ಮ ಹೊಲದಲ್ಲೇ ಕೊರೆಸಿದ 5 ಕೊಳವೆ ಬಾವಿ ನೀರಿಲ್ಲದೇ ವ್ಯರ್ಥವಾಯಿತು.

ಇದು ಗ್ರಾಮದ ಎಲ್ಲ ರೈತರ ಪಾಡು. ಆದ್ದರಿಂದ ಆಡಳಿತದ ಚುಕ್ಕಾಣಿ ಹಿಡಿದವರು ಮೊದಲು ಕೆರೆ ತುಂಬಿಸುವ ವ್ಯವಸ್ಥೆ ಮಾಡಬೇಕು ಎನ್ನುವುದು ಇಂದಿರಮ್ಮ ಅವರ ಅಳಲು. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಕೃಷಿಯತ್ತ ಈಗಾಗಲೇ ಆಸಕ್ತಿ ತೋರಿರುವುದು ಈ ಹಿರಿಯ ಕೃಷಿ ಮಹಿಳೆಯಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ.

*****
ಪ್ರಶಸ್ತಿಗಳು
ಸಾವಯವ ಕೃಷಿಯಲ್ಲಿ ತೊಡಗಿರುವ ಇವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 2005ರಲ್ಲಿ ‘ಜಿಲ್ಲಾಮಟ್ಟದ ಅತ್ಯುತ್ತಮ ರೈತ ಮಹಿಳೆ’, 2009ರಲ್ಲಿ ‘ಬಾನುಲಿ ಕೃಷಿ ರತ್ನ’, 2011ರಲ್ಲಿ ಮೈಸೂರು ಜಿಲ್ಲಾಡಳಿತದಿಂದ ‘ಕನ್ನಡ ರಾಜ್ಯೋತ್ಸವ’, 2015ರಲ್ಲಿ  ‘ದಿ ಆರ್ಟ್‌ ಆಫ್‌ ಲಿವಿಂಗ್‌’ ನಿಂದ ರಾಜ್ಯಮಟ್ಟದ ಸಾವಯವ ಕೃಷಿ ಸಮಾವೇಶದಲ್ಲಿ ‘ಉತ್ತಮ ಕೃಷಿ ಮಹಿಳೆ’ ಪ್ರಶಸ್ತಿ ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT